Saturday, February 11, 2023

ಕವನ

ಬಿಡು ನಿರಾಸೆ
ಇರಲಿ ಚೂರು ಭರವಸೆ
ಬದುಕಲು ಬಂದವರು ನಾವು
ಬಿಸಿಲಾದರೇನು 
ಚಳಿ ಮಳೆಯಾದರೇನು
ಜೀವನೋತ್ಸಾಹ ಕಳೆದುಕೊಳುವುದೇ ಹೂವು

ಎಷ್ಟೇ ತುಳಿದರೂ
ಅಳಿಯದುಳಿದು ಮತ್ತೆ
ಚಿಗುರುವ ಗರಿಕೆಯ ಛಲವಿರಲಿ
ಕಾಡ್ಗಿಚ್ಚು ಸುಟ್ಟರೂ
ರೆಂಬೆ ಕೊಂಬೆ ಬೂದಿಯಾದರೂ
ಹಸಿ ಬೇರು ಹೊಸ ಚಿಗುರು ತರುವ ನಂಬಿಕೆಯಿರಲಿ

ಜ್ವಾಲಾಮುಖಿ ಒಡಲೊಳಗಿದ್ದರೂ
ನೋಯದ ಭೂತಾಯೊಡಲಲಿ
ಚೆಲುವು ನಳನಳಿಸುವುದು ಸತ್ಯ
ಸೋಲುಗಳ ಸರಮಾಲೆ ಎದುರಾಗಲಿ
ನೋವಿನ ಸುನಾಮಿಯೆ ಬರಲಿ
ಅಂಜದ ಮನಸ್ಥಿತಯಿರಲಿ ನಿತ್ಯ

ಇರುವುದೊಂದೇ ಜನುಮವಿದು
ಎಂದೂ ಸೋಲೊಪ್ಪಬಾರದು
ಬರಲಿ ಏರಿಳಿತ ನೂರು
ನಾಳೆಯೆಂಬ ಭರವಸೆಯಿರಲಿ
ಗೆದ್ದೇ ಗೆಲ್ಲುವ ವಿಶ್ವಾಸವಿರಲಿ
ಯಾರಿಲ್ಲ ಇಲ್ಲಿ ಸೋಲದೆ ಗೆದ್ದವರು

೧೦೫೨ಪಿಎಂ೧೧೦೨೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment