*ಸಂಜೆ ಎಂಬ ವಿಸ್ಮಯ*
ಈ ಸಂಜೆ ಪ್ರಕೃತಿಯ ಒಂದು ವಿಸ್ಮಯ. ಹಗಲೆಲ್ಲ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ದಣಿದು ತಮ್ಮ ತಮ್ಮ ಗೂಡುಗಳನ್ನು ಸೇರುವ ಧಾವಂತದಲ್ಲಿದ್ದರೆ, ಧನ್ಯವಾದಗಳಿಗೆ ಭಾಜನನಾದ ಸೂರ್ಯನೂ ಕೂಡ ತನ್ನ ಕೆಲಸ ಮುಗಿಸಿ ಹೊರಡುವ ವೇಳೆ.
ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ಹೊಂಬಣ್ಣದ ಆಗಸದ ರಂಗೆಲ್ಲ ಮರೆಯಾಗಿ ಕತ್ತಲೆಯು ಆವರಿಸಿ ಎಲ್ಲ ಜೀವಿಗಳು ವಿಶ್ರಾಂತಿ ಪಡೆಯುವ ಸಲುವಾಗಿ ವಿರಮಿಸುತ್ತವೆ. ಈ ಸಂಜೆ ಇರುವುದು ಕೇವಲ ಸ್ವಲ್ಪ ಹೊತ್ತು ಮಾತ್ರ. ಅಷ್ಟರಲ್ಲಿ ಇಡೀ ಆಕಾಶ ಹರೆಯದ ಪೋರಿ ನಾಚುವಂತೆ ಕೆಂಪಾಗಿ, ಹಕ್ಕಿಗಳ ಕಲರವ ಮುಗಿಲು ಮುಟ್ಟಿ, ತಾಯಿಯನರಸುತ್ತ ಕರು ಓಡೋಡಿ ಬಂದು ಕೆಚ್ಚಲಿಗೆ ಬಾಯಿ ಹಾಕಿ ನೊರೆಯುಕ್ಕುವಂತೆ ಹಾಲು ಕುಡಿವಾಗ ಸಂಭ್ರಮಕೆ ಎಣೆಯುಂಟೇ?!. ಹಿಂಡಿನಲಿ ಹೋಗಿದ್ದ ಕುರಿಯ ದಂಡು ಹಟ್ಟಿಯ ಬಳಿ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಹಟ್ಟಿಯಲೇ ಇದ್ದ ಮರಿಗಳೆಲ್ಲ ತನ್ನ ತಾಯಿಯ ಹುಡುಕಲೂ ಅರಚುತ್ತ ಬರುವಾಗ ಅಷ್ಟೊಂದು ಮರಿಗಳಲ್ಲಿ ತನ್ನ ಮರಿಯನ್ನು ಹುಡುಕಿಕೊಳ್ಳಲು ತಾಯಿ ಪರದಾಡುವ ರೀತಿ , ತನ್ನ ಮರಿ ಸಿಕ್ಕ ಸಂಭ್ರಮದಲ್ಲಿ ಸಂತೃಪ್ತಿಯಿಂದ ಹಾಲನುಣಿಸುವ ಪರಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೊಟ್ಟೆ ತುಂಬಿದ ಖುಷಿಯಲ್ಲಿ ಕಿವಿನಿಮಿರಿಸಿ ಚಂಗನೆ ನೆಗೆದು ಹಾರಿ ಕುಣಿದು ಕುಪ್ಪಳಿಸುತ್ತಾ ಖುಷಿ ಪಡುವ ಸನ್ನಿವೇಶ ಮನುಜನಿಗಿಲ್ಲ.
ಇಂದು ಮನುಷ್ಯ ಪ್ರಕೃತಿಯಿಂದ ದೂರವಾಗಿ ತನ್ನದೇ ಕೃತಕ ವರ್ತುಲಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಇಲ್ಲಿ ಅವನಿಗೆ ಸಂಪಾದನೆಯ ಆಮಿಷ ಸಂತೋಷ, ಸಂಭ್ರಮಗಳನ್ನು ಅನೂಭವಿಸಲೂ ಆಗದಷ್ಟು ತೊಡಗಿಸಿಬಿಟ್ಟಿದೆ. ಹಗಲು ರಾತ್ರಿಗಳ ಪರಿವೇ ಇಲ್ಲದಂತೆ ದೂಡಿಯುತ್ತಿದ್ದಾನೆ. ಮುಂಜಾನೆ ಮುಸ್ಸಂಜೆಗಳ ಚೆಲುವನ್ನು ಆಸ್ವಾದಿಸಲಾಗದಷ್ಟು ಬಿಜಿಯಾಗಿಬಿಟ್ಟಿದ್ದಾನೆ. ತನ್ನವರಿಗಾಗಿ ಸಮಯ ಮೀಸಲಿಡಲಾಗದೆ ಏಕಾಂಗಿಯಗಿ ದುಡಿಮೆಯ ದಾಸನಾಗಿಬಿಟ್ಟಿದ್ದಾನೆ. ಮನುಷ ತಾಂತ್ರಿಕವಾಗಿ ಮುಂದುವರೆದಂತೆಲ್ಲ ಪ್ರಕೃತಿಯಿಂದ ತನ್ನ ಸಂಬಂಧವನ್ನು ಕಳಚಿಕೊಂಡು ಯಂತ್ರಗಳ ಗುಲಾಮನಾಗಿ ಭಾವನಗಳೇ ಇಲ್ಲದಂತೆ ಬದುಕುತ್ತಿದ್ದಾನೆ.
ಈ ಸಂಜೆಯಾಗುತ್ತಲೇ ಮರಗಿಡಬಳ್ಳಿಯ ಎಲೆಗಳು ಮುದುಡಿ ಮರಳುತ್ತವೆ. ಚಂದ್ರನ ಬೆಳದಿಂಗಳಲಿ ತಾರೆಗಳ ಹೊಳಪಿನಲಿ ಇರುಳೆಂಬುದು ವಿಶ್ರಾಂತಿಯ ಜೊತೆಗೆ ಜೀವಚೈತನ್ಯವನ್ನು ನೀಡುತ್ತದೆ. ದಣಿದ ಶ್ರಮವೆಲ್ಲವೂ ಮುಂಜಾನೆ ವೇಳೆಗೆ ಕಳೆದು ಮತ್ತೊಂದು ಹೊಸತನದ ಮಹಾ ಸಂಭ್ರಮಕೆ ನಾಂದಿ ಹಾಕುತ್ತದೆ. ಪ್ರಕೃತಿಯ ಈ ಗಡಿಯಾರ ಕ್ಷಣವೂ ಏರುಪೇರಾಗಂತೆ ನಡೆದುಕೊಂಡು ಬರುತ್ತದೆ. ಅದರೊಂದಿಗೆ ನೆಡೆಯುವ ಪ್ರತಿಯೊಂದು ಜೀವವೂ ಸಂತೃಪ್ತಿಯಿಂದ ಬದುಕುತ್ತವೆ. ಮಾನವ ಮಾತ್ರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ದುಡಿಮೆ ಮತ್ತು ವಿಶ್ರಾಂತಿಗಳ ಅಸಮತೋಲನದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಅನುಭವಿಸಿ ಅನೇಕ ಖಾಯಿಲೆಗಳಿಗೆ ತುತ್ತಾಗಿ ನರಳುತಿದ್ದಾನೆ. ಯಾಂತ್ರಿಕ ಗಡಿಯಾರದ ನಾಗಾಲೋಟದಲ್ಲಿ ಜೈವಿಕ ಗಡಿಯಾರದ ದಿಕ್ಕು ತಪ್ಪಿಸಿ ಅನೇಕ ಅನರ್ಥಗಳಿಗೆ ಎಡೆಮಾಡಿಕೊಟ್ಟಿದ್ದಾನೆ. ಅವನ ಜೀವನ ಶೈಲಿ ಪ್ರಕೃತಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಮನುಜ ಮತ್ತು ಇತರೆ ಜೀವಸಂಕುಲದ ನಡುವೆ ಅಂತರ ಸೃಷ್ಟಿಯಾಗಿ ನಿತ್ಯ ಸಂಘರ್ಷ ಏರ್ಪಡುತ್ತಿದೆ. ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಎರಡೂ ಇಲ್ಲದೆ ಪರಿತಪಿಸುತ್ತಿದ್ದಾನೆ.
ಒಟ್ಟಿನಲ್ಲಿ ಪ್ರಕೃತಿಯ ಸಹಜ ಬೆಳವಣಿಗೆಯೊಂದಿಗೆ ಬದುಕುತ್ತ ಅದು ನೀಡುವ ಆಹ್ಲಾದಕರ ವಾತಾವರಣದಲ್ಲಿ ತನ್ಮಯನಾಗಿ ಭಾಗಿಯಾಗಿ ಬದುಕನ್ನು ನಿಜಕ್ಕೂ ಅರ್ಥಪೂರ್ಣ ಸಂತೃಪ್ತ ಭಾವದಲ್ಲಿ ಆಸ್ವಾದಿಸಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ.
0624ಪಿಎಂ01122018
*ಅಮುಭಾವಜೀವಿ ಮುಸ್ಟೂರು*