ಬದುಕು ಕಲಿಸಿದ ಪಾಠ ನೂರಾರು
ಬದುಕು ನಿತ್ಯ ಹೋರಾಟ
ಎಂದಿಗೂ ಮುಗಿಯದ ಸಂಪುಟ
ಪದೇ ಪದೇ ಎದುರಾಗುವುದು ಸಂಕಷ್ಟ
ಅದುವೇ ಬದುಕು ಆಡುವ ಚೆಲ್ಲಾಟ
ಹೆಜ್ಜೆ ಹೆಜ್ಜೆಗೂ ಇಲ್ಲಿ ತಿರುವು ಹತ್ತಾರು
ಗೆಲ್ಲದೇ ಸೋತವರು ಹಲವರು
ಬಾಣಲೆಯಿಂದ ಬೆಂಕಿಗೆ ಬೀಳಿಸುವ ಬದುಕು
ಸನಿಹ ನೀನಿರೆ ಸಾಕು
ಬಾಳು ಬಲು ಸುಂದರ
ಹೃದಯ ಹೃದಯ ಬೆಸೆದ ಮೇಲೆ
ಕಂಗೆಡಿಸದು ತುಸು ಅಂತರ
ನಿನ್ನ ಪ್ರತಿರೂಪವಿದೆ
ನನ್ನೆದೆಯ ಗುಡಿಯಲಿ
ರವಿಗಿಂತಲೂ ಶಶಿಯೇ ಬಲು
ಚೆಲುವ ತಾರೆಗಳೆದೆಯಲಿ
ಈ ಸುರಿಯುವ ಬೆಳದಿಂಗಳಲ್ಲಿ
ಒಂಟಿತನಕೆ ನೀ ಜೊತೆಯಾದ ಅನುಭವ
ಮನದ ಮುಗಿಲಲಿ ಕಾಣದಿರೆ ಚಂದ್ರಮ
ಕನಸಿನ ಲೋಕದಲಿ ಬಿಗಿದಪ್ಪಿದ ಭಾವ
ನೋವಿಗಿಲ್ಲಿ ಜಾಗವಿಲ್ಲ
ನೀನಿರಲು ನನ್ನ ಈ ಸನಿಹ
ಬಳಿ ಬಂದು ನನ್ನ ಸೇರು
ಬೇರೆಬೇಕಿಲ್ಲ ನಿನ್ನ ವಿನಹ
ಓಡೋಡಿ ಬಾ ಚಂದಿರ
ಕಾದಿದೆ ಎನ್ನ ಹೃನ್ಮಂದಿರ
ನೀ ಸುರಿವ ಚಂದ್ರಿಕೆಯ ವಿಸ್ತಾರ
ಅದು ನಮ್ಮೊಲವಿನ ವಿಶಾಲ ಸಾಗರ
೦೬೫೩ಎಂ೧೬೧೧೨೦೨೩
ಅಮುಭಾವಜೀವಿ ಮುಸ್ಟೂರು
ಕಾದು ಕೆಂಡವಾದ ಇಳೆಗೆ
ಮುಂಗಾರು ಮಳೆ ಸಿಂಚನ ಸಂಭ್ರಮ
ಬಳಲಿದ ನೈದಿಲೆಯೆಗೆ
ಚಂದ್ರಿಕೆ ಸುರಿದ ಪ್ರೇಮಚಂದ್ರಮ
ಒಂಟಿತನದ ದಣಿವ ನೀಗಲು
ನೀ ಬಂದೆ ನಲ್ಲ ಸನಿಹಕೆ
ಎದೆಯ ಹೊಲವ ನಾ ಉತ್ತಿದೆ
ಒಲವ ಬೀಜವನಲ್ಲಿ ನೀ ಬಿತ್ತಿದೆ
ಬಿಸಿಯಪ್ಪುಗೆಯ ಬಾಹು ಬಂಧನ
ಬಂಧಿಯಾಗಿ ಕರಗಿ ನೀರಾದೆ ನಾ
ನನಗಾಗಿ ಮುಡುಪಿಟ್ಟೆ ಹೃದಯ ಸಿಂಹಾಸನ
ಸುಖದ ಖುಷಿಯಲಿ ತೇಲಿದೆ ಅಲ್ಲಿ ನಾ
ನೀಗಿಸಿದೆ ಬಡತನದ ಎಲ್ಲ ನೋವ
ಈ ಒಡಲಿಗೆ ನೀ ತುಂಬಿದೆ ಜೀವ
ಬೇರೆಯಾಗದ ನಮ್ಮೀ ಸಂಬಂಧ
ಕೊರತೆಯಿರದ ಪ್ರೇಮಾನುಬಂಧ
ನನ್ನಲ್ಲಿ ನೀನೊಂದಾದೆ ಎಂಥಾ ಸುಯೋಗ
ನನ್ನೊಲವ ಗೀತೆಗೆ ನೀ ಬೆರೆತ ರಾಗ
ಬಾಳ ಪಯಣದಿ ಇನ್ನಿಲ್ಲ ಚಿಂತೆ
ನೀ ಬಂದೆ ನೀಗಿತೆಲ್ಲ ಆ ಕೊರತೆ
೦೧೩೩ಪಿಎಂ೧೬೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಬರೀ ಹೆಣ್ಣಿಗಲ್ಲ ಗಂಡಿಗೂ ಒಂದು ಮನಸಿದೆ
ಯಾರು ಇಲ್ಲಿ ಹೆಚ್ಚು ಅಲ್ಲ
ಯಾರು ಇಲ್ಲಿ ಕಡಿಮೆ ಅಲ್ಲ
ಬಾಳ ನದಿಗೆ ಎರಡು ತೀರ
ಬಾನ ಬೆಳಗಲು ಸೂರ್ಯ ಚಂದಿರ
ಹೆಣ್ಣು ಗಂಡು ಇಬ್ಬರು
ಸೃಷ್ಟಿಯಲ್ಲಿ ಸಮಾನರು
ತಾಳ್ಮೆ ಅವಳ ಸ್ವತ್ತು ಅಲ್ಲ
ಮುಂಗೋಪ ಇವನ ಆಸ್ತಿಯಲ್ಲ
ಅವಳು ಮೃದುವೆಂದೆಲ್ಲ ಬಲ್ಲರು
ಇವನು ಒರಟನೆಂದುಕೊಂಡಿಹರು
ಬರೀ ಹೆಣ್ಣಿಗಲ್ಲ ಗಂಡಿಗೂ ಒಂದು ಮನಸಿದೆ
ಕರುಣೆ ಪ್ರೀತಿ ತಾಳ್ಮೆ ಸಹನೆ ಅವನಿಗೂ ಇದೆ
ಹೊಗಳಿ ಹೊಗಳಿ ಹೆಣ್ಣು ಮೆತ್ತೆಯಾದಳು
ತೆಗಳಿ ತೆಗಳಿ ಗಂಡು ಕಠಿಣ ಶಿಲೆಯಂತಾದನು
ಪ್ರೀತಿಗವನು ಕರಗದಿರನು ತೋರುವವರಿಲ್ಲ
ಕನಿಕರಿಸೊ ಮಾತೃ ಹೃದಯವುಂಟು ಬಲ್ಲವರಿಲ್ಲ
ಹೆಣ್ಣು ಅತ್ತು ಹಗುರಾಗುವಳು
ಗಂಡು ನೋವ ನುಂಗಿ ಕೊರಗುವನು
ಹೆಣ್ಣ ಪರವಾಗಿ ಎಲ್ಲ ನಿಲ್ಲುವರು
ಗಂಡಿನ ಮೇಲೆಯೆಲ್ಲರು ದಂಡೆತ್ತಿ ಬರುವರು
ಪುರುಷ ಪ್ರಧಾನ ಸಮಾಜವಾದರೂ
ಹೆಣ್ಣಿಗಿರುವ ಸೌಮ್ಯತೆ ಮಾನ್ಯತೆ ಅವನಿಗಿಲ್ಲ
ಎಲ್ಲಾ ಅನಿಷ್ಟಕೂ ಅವನ ಹೊಣೆಯಾಗಿಸಿ
ದಂಡಿಸುವರು ಇದು ಹೊಸದೇನಲ್ಲ
೦೯೪೫ಪಿಎಂ೧೬೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಓಂ ಕಾವೇರಿ ಸಾಹಿತ್ಯ ಬಳಗದ ಸ್ಪರ್ಧೆಗಾಗಿ
ಪ್ರಕಾರ :- *ರುಬಾಯಿ*
ದತ್ತ ಪದ:- *ಛೀಮಾರಿ*
ನಾಯಿ ಬಾಲ ಎಂದಿದ್ದರೂ ಡೊಂಕು
ಛೀಮಾರಿ ಹಾಕಿದರೂ ವಾಸಿಯಾಗದ ಸೋಂಕು
ತಿದ್ದಿದರೆ ಅದು ಎಂದು ಶುದ್ಧವಾಗದಂತೆ
ಬುದ್ಧಿ ಹೇಳುವಂತೆ ನುಡಿಯುವರು ಕೊಂಕು
೧೧೫೯ಪಿಎಂ೧೭೧೧೨೦೨೩
*ಅಮುಭಾವಜೀವಿ ಮುಸ್ಟೂರು*
*ಪೋಷಿಸುವ ನೆಪದಲ್ಲಿ*
ಬೆಳೆವ ಸಿರಿ ಮೊಳಕೆಯಲ್ಲಿ
ಆದರೆ ಚಿವುಟೋ ನೂರು ಕೈಗಳಿವೆ ಇಲ್ಲಿ
ಪ್ರತಿಭೆಯ ಗುರುತಿಸುವರಿಲ್ಲ
ತುಳಿಯಲು ಹವಣಿಸುವರೇ ಇಲ್ಲೆಲ್ಲ
ಸಮರ್ಥರೇ ಇಲ್ಲಿ ಉಳಿಯುವುದು
ಸ್ವಾರ್ಥಿಗಳೇ ಎಲ್ಲರ ತುಳಿಯುವುದು
ಬೆಳೆಸುವವರು ಒಬ್ಬರು ಇಲ್ಲಿಲ್ಲ
ಬೇಳೆ ಬೇಯಿಸಿಕೊಳ್ಳುವವರೇ ಎಲ್ಲ
ಅವರವರ ಮೂಗಿನ ನೇರಕ್ಕೆ ಮಾತು
ಎಲ್ಲರ ಮನೆ ದೋಸೆಯೊಳಗೂ ತೂತು
ಪೋಷಿಸುವ ನೆಪದಲ್ಲಿ ಆಪೋಷನಗೈವರು
ಅಸಹಾಯಕರ ತೇಜೋವಧೆ ಮಾಡುವರು
ಎಲ್ಲರೂ ದೊಡ್ಡವರೇ ಬೆಳೆದ ಮೇಲೆ
ಸಣ್ಣತನ ತೋರುವರು ಆಮೇಲೆ
ಎಕ್ಕಡ ನೆಕ್ಕುವವರ ಉಡುದಾರಕೆ ಕಟ್ಟಿಕೊಳ್ಳುವರು
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಮೆತ್ತಿ ಮೆರೆವರು
ಉಳಿವಿಗಾಗಿ ಹೋರಾಟ ಇಲ್ಲಿ ನಿರಂತರ
ಬೆಳೆವ ಪೈರಿಗೆ ಪೀಡೆಯಾಗಿ ಕಾಡುವರು
ಅಳಿಯದೆ ಉಳಿದರೇನೆ ಬಹುಮಾನ
ಅದಕಾಗಿ ಸಹಿಸಬೇಕು ಸಹಸ್ರ ಅವಮಾನ
ವ್ಯಕ್ತಿತ್ವಕ್ಕೆ ಮಸಿ ಬಳಿಯುವರು
ಅಸ್ತಿತ್ವಕ್ಕೆ ಬಾರಿ ಪೆಟ್ಟು ಕೊಡುವರು
ಅಂಜದೆ ನಂಜುಂಡು ಜಯಿಸಬೇಕು
ಅವಮಾನಿಸುವವರೆದುರು ಅಭಿಮಾನ ಗಳಿಸಬೇಕು
೦೯೦೬ಪಿಎಂ೧೭೧೧೨೦೨೩
*😘ಅಮುಭಾವಜೀವಿ ಮುಸ್ಟೂರು*
ಸತ್ಯದ ಅರಿವಿಲ್ಲದವರು ಮಿಥ್ಯವರು ನಂಬುವರು
ಬರಿದಾಗಿಲ್ಲ ಇನ್ನು ನನ್ನ
ಬತ್ತಳಿಕೆಯಲ್ಲಿ ಬಾಣ
ಬಡಬಡಿಸುವುದಿಲ್ಲ
ನನ್ನ ಭಾವಗಳು ಗೌಣ
ಕವಿ ಸಾಯುವ ತನಕ
ಅವನ ಕಲ್ಪನೆಗೆ ಸಾವಿಲ್ಲ
ಬೆಲೆ ಸಿಗದೆ ಹೋದರು
ಕವಿಯ ಭಾವಗಳಿಗೆ ನೋವಿಲ್ಲ
ಕವಿತ್ವಕ್ಕೆಲ್ಲ ಖಾಲಿ ತನ
ಕದ್ದು ಬರೆದದ್ದಲ್ಲ ಕವನ
ಮುದ್ದು ಮಾಡಿ ಎದೆಗೆ ಬಿದ್ದ
ಸುಂದರಾಕ್ಷರಗಳ ಬಾಗಿನ
ಟೀಕಿಸುವವರು ಟೀಕಿಸಿಕೊಳ್ಳಲಿ
ಹುರುಳಿಲ್ಲವೆನ್ನುವವರ ತಿರುಳು ಬೇಕಿಲ್ಲ
ಹೃದಯ ಹಾಡಿದ ಮಾತು ಅಕ್ಷರ ರೂಪ
ಮನದಿ ಬೆಳಗುವುದು ನಿತ್ಯ ಭಾವದೀಪ
ಬೆನ್ತಟ್ಟದವರ ಅಟ್ಟಹಾಸದ ಮುಂದೆ
ಮುದುರಿ ಮಲಗಿಕೊಂಡಿದೆ ಕವಿತೆ
ಬಾಯಿ ಬಿಟ್ಟು ಆಡಬೇಕಿಲ್ಲ
ಮೌನ ತಳೆಯುವುದೇ ಘನತೆ
೦೩೧೦ಪಿಎಂ೧೮೧೧೨೦೨೩
ಅಮುಭಾವಜೀವಿ ಮುಸ್ಟೂರು
ಜಾಣ್ಮೆಯಿಂದ ಸಂಬಾಳಿಸಬೇಕು
ಯಾವುದೇ ವಿಷಯವನ್ನು
ತುಸು ಮೈಮರೆತರೆ ಸಾಕು
ಮುಕ್ಕಿ ತಿನ್ನುವರು ನಿನ್ನನ್ನು
ನೀ ಬೀಳುವುದನ್ನೇ ಕಾಯುತ್ತಾರೆ ಜನ
ಆಳಿಗೊಂದು ಕಲ್ಲೆಸೆದು ನಾಶಗೈಯಲು
ಜೋರಿಗಿಂತ ಜಾಣ್ಮೆ ಮುಖ್ಯ
ಮಾತಿಗಿಂತ ನಡೆಯು ಮುಖ್ಯ
ಜಯದ ಗುಂಗು ಬಿಡು
ಚಾತುರ್ಯದಿ ಅಡಿ ಇಡು
೦೩೪೮ಪಿಎಂ೧೮೧೧೨೦೨೩
ಅಪ್ಪಾಜಿ ಎ ಮುಸ್ಟೂರು
ನಿಮ್ಮ ಸಂತೋಷಕ್ಕಾಗಿ ಜೀವಿಸಿ
ಕಾಲೆಳೆಯುವರನ್ನು ನಿರ್ಲಕ್ಷಿಸಿ
ಬೆಳೆಯುವವರ ಬೆಳೆಸುವುದಿಲ್ಲ ಜಗತ್ತು
ಬೇಯಿಸಿಕೊಳ್ಳುವ ಕಾಯುತ್ತಿರುವುದು ಯಾವತ್ತು
ನಂಬಿದವರೆ ಎಳೆದೊಯ್ದು ಕತ್ತು ಕೊಯ್ಯುವರು
ಕೊಂದ ಪಾಪದ ಹಂಗಿಲ್ಲದೆ ತಿಂದು ಮುಕ್ಕುವರು
ಸಿಕ್ಕವರ ಸಕ್ಕರೆ ಮಾತಿಗೆ ಮರುಳಾಗದಿರು
ಅಕ್ಕರೆ ತೋರುವ ಠಕ್ಕರನೆಂದು ನಂಬದಿರು
ಖುಷಿಯ ಕಸಿಯುವವರಿಂದ ದೂರವಿರು
ಹುಸಿ ಪ್ರೀತಿಯ ನಂಬಿ ಮೋಸ ಹೋಗದಿರು
ನಿನ್ನ ನಂಬಿಕೆ ನಿನ್ನ ಕಾಯುವುದು
ಬೇರೆಯವರ ಅಂಜಿಕೆ ನಿನ್ನ ಸಾಯಿಸುವುದು
ಹರ್ಷದ ಸಾಕ್ಷಾತ್ಕಾರ ನಿನಗೊಲಿಯಲಿ
ಮೋಹದ ಅಂಧಕಾರ ಕಳೆಯಲಿ
೦೪೦೪ಪಿಎಂ೧೮೧೧೨೦೨೩
ಅಪ್ಪಾಜಿ ಎ ಮುಸ್ಟೂರು
ಎಲ್ಲಾ ಆಸೆಗಳನೊಮ್ಮೆ ಬದಿಗೊತ್ತಿ ಬಿಡು
ಕೈ ಮೀರಿ ಹೋಗುವುದೇ
ಇಲ್ಲಿ ನಡೆಯುವುದು
ಬರಿ ನೋವುಗಳಷ್ಟೇ
ನಿನಗುಳಿಯುವುದು
ಎಲ್ಲಾ ಆಸೆಗಳನೊಮ್ಮೆ
ಬದಿಗೊತ್ತಿ ಬಿಡು
ಸಿಗುವ ಸಂತೃಪ್ತಿಯ
ಆಗ ನೀ ನೋಡು
ಜೀವನವಿದು ಹೋರಾಟ
ಪ್ರಾಬಲ್ಯವಿದ್ದವನೆ ಗೆಲ್ಲುವುದು
ಸೋತರೆ ಅವಮಾನ ಖಚಿತ
ನಿನ್ನಂತೆ ಇಲ್ಲಿ ಏನು ನಡೆಯದು
ಬೆಂಬಲಿಗರಿಲ್ಲದಿರೆ ನಂಬಿಕೆ ಇಲ್ಲ
ಹಂಬಲಿಸುವವರನಾರು ಬೆಂಬಲಿಸುವುದಿಲ್ಲ
ಬಿದ್ದ ನೀನು ಎದ್ದು ನಡೆ ಮುಂದೆ
ಆಗ ನಿನ್ಹಿಂದೆ ಬರುವುದು ಕುರಿಮಂದೆ
ನಿರೀಕ್ಷೆಗಳು ಸುಳ್ಳಾಗುವುದು
ಪರೀಕ್ಷೆಗಳೇ ಗೆಲ್ಲಿಸುವುದು
ಆಸೆಪಡದೆ ಬಂದಂತೆ ನಡೆ
ಆಗ ಜಯ ನಿಲ್ಲುವುದು ನಿನ್ನೆದುರುಗಡೆ
ಏರಬೇಕೆಂದರೆ ಇಲ್ಲಿ
ಕಾಲೆಳೆಯುವವರು ನೂರು ಮಂದಿ
ಹೆಜ್ಜೆ ಹೆಜ್ಜೆಗೂ ಎಡೆತಾಕುವರು
ಕಳೆಯಲು ನಿನ್ನ ನೆಮ್ಮದಿ
ಎಚ್ಚರಿಕೆಯಿಂದ ಸಾಗಲಿ ಪಯಣ
ನಿನಗೆ ನೀನೇ ನಿಜ ಪ್ರೇರಣ
ಬಯಕೆಗಳ ಬೇಲಿ ದಾಟದಿರು
ನಿಂದಿಸುವವರೆದುರೆಂದು ಸೋಲದಿರು
೦೪೪೪ಪಿಎಂ೧೮೧೧೨೦೨೩
ಅಮುಭಾವಜೀವಿ ಮುಸ್ಟೂರು
No comments:
Post a Comment