Tuesday, November 14, 2023

ಮಕ್ಕಳ ದಿನಾಚರಣೆಯ ವಿಶೇಷ ಲೇಖನ

*ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಭಾಗಿದಾರರ ಪಾತ್ರ*

ಮಕ್ಕಳು ಮನುಕುಲದ ಕುಸುಮಗಳು, ಅವುಗಳನ್ನು ಪ್ರೀತಿಯಿಂದ ಪೋಷಿಸಬೇಕು, ಮನಸ್ಸು ನಿಷ್ಕಲ್ಮಶ ಬಿಳಿ ವಸ್ತ್ರದಂತೆ ಅಲ್ಲಿ ನಕಾರಾತ್ಮಕತೆಯ ಕರಿ ಛಾಯೆ ಮೂಡದಂತೆ ಎಚ್ಚರ ವಹಿಸಬೇಕು. ಮಕ್ಕಳ ವ್ಯಕ್ತಿತ್ವ ಗೋಡೆಗೆ ಎಸೆದ ಚಂಡಿನಂತೆ. ಅದಕ್ಕೆ ನಾವೇನನ್ನು ತುಂಬುತ್ತೇವೆಯೋ ಪಲಿತಾಂಶವನ್ನು ಕೊಡುತ್ತದೆ. ಯಾವ ಮಗು ಬಲಹೀನವಲ್ಲ ಯಾವ ಮಗು ನಿಷ್ಪ್ರಯೋಜಕವಲ್ಲ. ಹಿರಿಯರ ನಡೆ ನುಡಿಗಳು ಮಗುವಿನ ಮನಸ್ಸಿನಲ್ಲಿ ಪ್ರತಿಫಲನಗೊಂಡು ಸಾಕ್ಷಾತ್ಕಾರಗೊಳ್ಳುತ್ತದೆ. ಹಾಗಾಗಿ ನಾವು ಮಕ್ಕಳ ಮುಂದೆ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನ ಮಕ್ಕಳಿಗೆ ಅತಿ ಅವಶ್ಯಕ. ಈ ಮೂರು ಸ್ಥರಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಹಾದಿ ತಪ್ಪುತ್ತದೆ. ತಂದೆ ತಾಯಿ ಮತ್ತು ಗುರುಗಳನ್ನು ಹಿಂಬಾಲಿಸುತ್ತದೆ. ಮಗುವಿಗೆ ಈ ಮೂವರ ಮಾತು ಭೇದ ವಾಕ್ಯ.

ಮಗು ಗೆಳೆಯರೊಂದಿಗೆ ಆಟಿಕೆಗಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಬೆರೆಯುತ್ತಾರೆ ಯಾವ ವಸ್ತುಗಳೊಂದಿಗೆ ಆಡುತ್ತಾರೆ ಎಂಬುದನ್ನು ಗಮನಿಸಬೇಕು. ವ್ಯಕ್ತಿ ಮತ್ತು ಒಳ್ಳೆಯ ವಸ್ತುಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತವೆ. ಹಂತದಲ್ಲಿ ಮಕ್ಕಳಿಗೆ ಒತ್ತಾಯದ ಓದಿಗಿಂತ ಆಸಕ್ತಿಯನ್ನು ಕೆರಳಿಸುವಂತಹ ವಿಚಾರಗಳ ಪುಸ್ತಕಗಳನ್ನು ಓದಲು ಮಾರ್ಗದರ್ಶನ ಮಾಡಬೇಕು ಹಾಗೂ ಕಲಿತದ್ದನ್ನು ಓದಿದ್ದನ್ನು ಗೆಳೆಯರೊಂದಿಗೆ ಹಂಚಿಕೊಂಡು ಅವರನ್ನು ಸಹ ತನ್ನ ಓದಿನ ಅನುಭವವನ್ನು ಇಮ್ಮಡಿಗೊಳಿಸುವಂತಹ ವಾತಾವರಣವನ್ನು ಮಗು ಸೃಷ್ಟಿ ಮಾಡಿಕೊಳ್ಳಲು ಪ್ರೇರೇಪಿಸಬೇಕು. ಮಗು ಕೇಳುತ್ತದೆ ಎಂದು ಎಲ್ಲವನ್ನೂ ಖರೀದಿಸಿ ಕೊಡುವ ಗೀಳಿಗೆ ಬೀಳಬಾರದು. ಆ ವಸ್ತುವಿನ ಮೌಲ್ಯ ಗೊತ್ತಾಗಬೇಕೆಂದರೆ ಅದನ್ನು ಪಡೆಯುವ ಕಷ್ಟವೂ ಆ ಮಗುವಿಗೆ ಗೊತ್ತಿರಬೇಕು ಆಗ ಆ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಅಷ್ಟೇ ಆಸ್ತೆಯಿಂದ ಕಾಪಾಡಿಕೊಂಡು ಬರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಬದಲು ಅವಶ್ಯಕತೆ ವಾಗಿರುವುದನ್ನು ಮಾತ್ರ ಮಕ್ಕಳಿಗೆ ಕೊಡಿಸಬೇಕು.

   ಮಕ್ಕಳಿಗೆ ಮೌಲ್ಯಗಳ ಪರಿಚಯವಾಗಬೇಕು. ನೈತಿಕ ಮೌಲ್ಯಗಳನ್ನು ಎಳವೆಯಿಂದಲೇ ಅದರ ಮನಸ್ಸಿನೊಳಗೆ ಬಿತ್ತಬೇಕು. ಮೌಲ್ಯಗಳನ್ನು ಬಿತ್ತುವ ಜನರ ವ್ಯಕ್ತಿತ್ವ ಸಹ ಮೌಲ್ಯಯುತವಾಗಿರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಆದರೆ ಮಗುವಿನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅದು ಬೇರೊಂದು ಹಾದಿ ಹಿಡಿಯುವ ಪ್ರಮೇಯ ಬರುತ್ತದೆ. ಅದನ್ನೇ ಆದರೂ ಮಕ್ಕಳಿಗೆ ಒತ್ತಾಯ ಪೂರಕವಾಗಿ ತುರುಕುವ ಬದಲು ಮಗುವಿನ ಆಸಕ್ತಿಗನುಗುಣವಾದ ಮೌಲ್ಯಗಳನ್ನು ತಿಳಿಸುತ್ತಾ ಹೋಗಬೇಕು. ಕೆಲವು ಮಕ್ಕಳು ಸೌಮ್ಯವಾಗಿರುತ್ತವೆ ಇನ್ನೂ ಕೆಲವು ಮಕ್ಕಳು ಅಸಹಜವಾಗಿ ವರ್ತಿಸುತ್ತಿರುತ್ತವೆ. ಸಂದರ್ಭದಲ್ಲಿ ಮಕ್ಕಳನ್ನು ತಾರತಮ್ಯ ಮಾಡದೆ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಮಕ್ಕಳು ಕೆಟ್ಟ ಮಕ್ಕಳು ಎಂದು ಬೇರ್ಪಡಿಸಿ ಆ ಕೀಳರಿಮೆ ಮನಸ್ಸಿನಲ್ಲಿ ಬೇರೂರುವಂತೆ ಮಾಡುವ ಬದಲು ಒಳ್ಳೆಯವರನ್ನು ಹೊಗಳದೇ ಕೆಟ್ಟವರನ್ನು ತೆಗಳದೇ ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳಲ್ಲಿ ನೈತಿಕ ಮೌಲ್ಯಗಳ ತಿಳುವಳಿಕೆ ನೀಡುವ ಮೂಲಕ ಅವರ ವ್ಯಕ್ತಿತ್ವದಲ್ಲಿ ಆಗಬಹುದಾದ ಆ ಬದಲಾವಣೆಗಳನ್ನು ಸರಿದಾರಿಯಲ್ಲಿ ಮುನ್ನಡೆಸುವ ಚಾಣಾಕ್ಷತೆ ಅವರನ್ನು ಮಾರ್ಗದರ್ಶಿಸುವವರಲ್ಲಿ ಇರಬೇಕಾಗುತ್ತದೆ.

ಮನೆಯಲ್ಲಿ ತಂದೆ ತಾಯಿಗಳು ಶಾಲೆಯಲ್ಲಿ ಶಿಕ್ಷಕರು ಸಮಾಜದಲ್ಲಿ ಹಿರಿಯರು ಪ್ರತಿಯೊಂದು ಮಗುವಿನ ಚಲನವಲನಗಳ ಬಗ್ಗೆ ಗಮನಹರಿಸಿ ಯಾವ ಮಗುವಿಗೆ ಯಾವ ರೀತಿಯ ಮಾರ್ಗದರ್ಶನ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಅದನ್ನು ಪೂರೈಸಲು ಆಗುತ್ತದೆ ಶ್ರಮಿಸಬೇಕಾಗುತ್ತದೆ. ನಮ್ಮಗಳ ಕಾರ್ಯದೊತ್ತಡದಿಂದಾಗಿ ಮಕ್ಕಳನ್ನು ನಿರ್ಲಕ್ಷಿಸುವ ಅವರಿಗಾಗಿ ಸಮಯ ಮೀಸಲಿಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಇದರಿಂದ ಮಗು ತನಗೆ ಅವಶ್ಯಕತೆ ಇರುವಾಗ ಅದನ್ನು ಕೇಳುವವರಿಲ್ಲ ಎಂಬ ಕಾರಣಕ್ಕೆ ತನಗೆ ತೋಚಿದಂತೆ ಬೆಳೆಯುತ್ತೆ. ಅದಕ್ಕಾಗಿ ಪ್ರತಿಯೊಬ್ಬರೂ ಮಗು ನಮ್ಮ ಬಳಿ ಬಂದಾಗ ನಮ್ಮ ಎಲ್ಲ ಒತ್ತಡಗಳನ್ನು ಬದುಕಿಟ್ಟು ಅದರ ಮಾತುಗಳನ್ನು ಕೇಳಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಮಗು ಸಚ್ಚಾರಿತ್ರ್ಯವಂತನಾಗುತ್ತಾನೆ ಅಲ್ಲದೆ ಅವನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತಾನೆ. ನಮ್ಮ ಕನಸುಗಳು ಮಗುವಿನ ಮೇಲೆ ಹೇರಿಕೆಯಾಗದಂತೆ ಎಚ್ಚರಿಕೆವಹಿಸಿ, ಹೇಳುವುದನ್ನೇ ಪ್ರೀತಿಯಿಂದ ಸ್ನೇಹಪರತೆಯಿಂದ ಮಗುವಿಗೆ ಹತ್ತಿರವಾಗುವ ಮೂಲಕ ಅವರಲ್ಲಿ ನಮ್ಮ ಅಪೇಕ್ಷಿತ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು.

   ಹುಟ್ಟಿದ ಪ್ರತಿಯೊಂದು ಮಗು ತನ್ನೊಳಗೆ ಅಸಾಮಾನ್ಯವಾಗಿರುವ ಪ್ರತಿಭೆಯನ್ನು ಪಡೆದುಕೊಂಡೆ ಬಂದಿರುತ್ತದೆ. ಅದನ್ನು ಗುರುತಿಸುವ ಪರೀಕ್ಷಿಸುವ ಪ್ರಶಂಶಿಸುವ ತಾಳ್ಮೆ ಗುರು ಹಿರಿಯರಲ್ಲಿ ಇರಬೇಕಾಗುತ್ತದೆ. ಯಾವ ಮಗು ವ್ಯರ್ಥ ಕಾಲ ಕಳೆಯಲು ಇಲ್ಲಿಗೆ ಬಂದಿಲ್ಲ. ಪ್ರಕೃತಿಗೆ ಸಮಾಜಕ್ಕೆ ಅನುಕೂಲವಾಗುವ ಯಾವುದೋ ಒಂದು ಗುಣವನ್ನು ಅದರೊಳಗೆ ತುಂಬಿ ಕಳಿಸಿರುತ್ತದೆ. ಅದನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವುದು ಮಾತ್ರ ಶಿಕ್ಷಣದ ಕರ್ತವ್ಯವಾಗಿದೆ.ಆದರೆ ಇಂದಿನ ಶಿಕ್ಷಣ ಮಕ್ಕಳಲ್ಲಿ ಮೌಲ್ಯಗಳನ್ನು ಬಿಟ್ಟು ಬರಿ ಅಂಕಗಳು ಗ್ರೇಡ್ ಗಳಿಗೆ ಮಹತ್ವ ನೀಡಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ನೀಡದಿರುವುದು ದುರಂತವೇ ಸರಿ. ಯಾವುದೋ ಒಂದು ಸರ್ಕಾರಿ ಹುದ್ದೆ ಪಡೆಯುವುದಕ್ಕೋಸ್ಕರ ಹತ್ತಾರು ವರ್ಷಗಳಿಂದ ಒಂದೇ ರೀತಿಯ ಪಠ್ಯಕ್ರಮವನ್ನು ಓದಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಅವನೊಳಗಿನ ಪ್ರತಿಭೆಯನ್ನು ಪ್ರೇರೇಪಿಸುವ ,ಪುರಸ್ಕರಿಸುವ ಅದಕ್ಕೆ ಇನ್ನಷ್ಟು ಹೆಚ್ಚಿನ ಅನುಭವಗಳನ್ನು ನೀಡುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಇಂದು ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತಿದೆ. ಮಗು ತನ್ನ ಕಲಿಕೆಯ ಮತ್ತು ಪ್ರತಿಭೆಯ ಸಮ್ಮೇಳತದಿಂದ ಬದುಕು ಉಪವಾಸ ಅನ್ವೇಷಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಪರಿಸರವನ್ನು ಶಾಲಾ ಶಿಕ್ಷಣ ಕೊಡಬೇಕಾಗಿರೋದು ಇಂದಿನ ಅಗತ್ಯ. ಮಗು ಮಗುವಿನ ಬದುಕಿಗೆ ಹತ್ತಿರವಿರದ ಪಾಠಗಳು, ಜೀವನದ ಸಮಸ್ಯೆಗಳನ್ನು ಬಗೆಹರಿರಿಸಲಾಗದ ಸಮೀಕರಣಗಳು, ವಾಸ್ತವಕ್ಕೆ ಹತ್ತಿರವಿರದ ಪ್ರಯೋಗಗಳನ್ನು ಓದಿ ಕಲಿಯುವುದರಿಂದ ಮಗುವಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮಗುವಿಗೆ ಸೂಕ್ತ ಮಾರ್ಗಗಳನ್ನು ಹುಡುಕಿ ಕೊಡುವ ವ್ಯವಸ್ಥೆ ಬೇಕಾಗಿದೆ. ಇಲಾಖೆಗಳು ನಿಗದಿಪಡಿಸುವ ಪಠ್ಯಕ್ರಮ, ಸರ್ಕಾರಗಳು ನಿಗದಿಪಡಿಸುವ ನೀತಿ ನಿಯಮಗಳು, ಅಕರ್ಷಣೀಯವಾಗಿಲ್ಲದ ಮತ್ತು ಸುಸಜ್ಜಿತವಲ್ಲದ ಶಾಲಾ ಕೊಠಡಿಗಳು, ಸಂಬಳಕ್ಕಾಗಿ ಬಂದು ಸಹಿ ಮಾಡಿ ಹೋಗುವ ಶಿಕ್ಷಕರು, ಕಲಿಸುವವರ ಮೇಲೆ ಸರ್ಕಾರ ಇಲಾಖೆ ಸಮುದಾಯಗಳ ಒತ್ತಡಗಳು ಮಗುವಿನ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿವೆ. ದೋಣಿ ಒಳಗಿನ ಶಿಕ್ಷಣಕ್ಕಿಂತ ಬಯಲಿನಲ್ಲಿ ದೊರೆಯುವ ಶಿಕ್ಷಣ ಹೆಚ್ಚು ಮೂರ್ತ ಸ್ವರೂಪವಾಗಿರುತ್ತದೆ. ಅಂತಹ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮೇಲಿನ ಎಲ್ಲ ಹೊಣೆಗಾರರು ಚಿಂತಿಸಿ ಸನ್ನಿವೇಶಗಳನ್ನು ಒದಗಿಸಿಕೊಡಬೇಕು. ಮಕ್ಕಳು ಬಯಸಿದ್ದನ್ನು ಕೊಡುವ ಬದಲು ಅದನ್ನೇ ಬಯಸಬೇಕು ಎಂಬ ಬೇಲಿ ಹಾಕಿ ಅವರ ಪ್ರತಿಭೆಯನ್ನು ಮೊಟಕುಗೊಳಿಸಲಾಗುತ್ತಿದೆ.
ಕಟ್ಟು ನಿಟ್ಟಿನ ವಾತಾವರಣದಿಂದ ಮಕ್ಕಳ ಮನಸ್ಸಿನಲ್ಲಿ ಘಾತುಕತೆ ಹೆಚ್ಚಾಗುತ್ತದೆ. ನನಗೆ ಬೇಕಾದನ್ನು ಕೊಡದ ಸಮಾಜದ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ಬಲಗೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾರು ಯಾರು ಬಾಗಿದಾರರು ಇರುತ್ತಾರೆಯೋ ಅವರೆಲ್ಲರ ವಿರುದ್ಧವಾಗಿ ಮಗು ತನ್ನೊಳಗೆ ರೂಪಿತಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಎಲ್ಲಾ ಭಾಗಿದಾರರು ಕೃತ್ರಿಮವಾದ ಬುದ್ಧಿ ಮತ್ತೆ ಬೆಳೆಸುವ ಬದಲು ಸ್ವಂತಿಕೆಯ ಕೌಶಲ್ಯ ಅಭಿವೃದ್ಧಿ ಹಾಗೂ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಾಗ ಮಾತ್ರ ಇಂದಿನ ಮಗು ನಾಡಿನ ದೇಶದ ಭವಿಷ್ಯವಾಗಿ ಹೊರಹೊಮ್ಮುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಮ್ಮ ಎಲ್ಲ ಭಿನ್ನತೆಗಳನ್ನು ಬದುಕಿಟ್ಟು ಬೇಕಾದನ್ನು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು.

    ಆಧುನಿಕ ಜಗತ್ತು ಮಕ್ಕಳ ಮೇಲೆ ತುಂಬಾ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಿಗಬೇಕಾಗಿದ್ದ ವಸ್ತುಗಳು ತಂತ್ರಜ್ಞಾನಗಳು ಇಂದು ಮಕ್ಕಳ ಕೈಗೆ ಲೀಲಾಜಾಲವಾಗಿ ಸಿಗುತ್ತಿವೆ. ಮಕ್ಕಳು ಅಡ್ಡ ದಾರಿ ಹಿಡಿಯುವ ಸುಲಭ ಮಾರ್ಗಗಳು ಅರಿವಿಗೆ ಬಾರದೆ ತೆರೆದುಕೊಂಡು ಮಕ್ಕಳ ಮನಸ್ಸಿನಲ್ಲಿ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸುತ್ತಿವೆ. ತಂತ್ರಜ್ಞಾನದ ಬಳಕೆಯಲ್ಲಿ ಒಳಿತು ಕೆಡುಕುಗಳೆರಡು ಇವೆಯಾದರೂ ಕೆಡುಕು ಅತಿ ಶೀಘ್ರವಾಗಿ ಮಕ್ಕಳನ್ನು ಆಕರ್ಷಿಸಿ ಆವರಿಸಿಬಿಡುತ್ತದೆ. ಇದರ ಹಿಡಿತಕ್ಕೆ ಸಿಕ್ಕ ಮಕ್ಕಳು ಒಂಟಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸಲು ಬಯಸುತ್ತಾರೆ. ಹಾಗಾಗಿ ಮಕ್ಕಳು ಬಳಸುವ ತಂತ್ರಜ್ಞಾನಗಳು ಅವರ ಎಂತಹ ಉದ್ದೇಶಗಳನ್ನು ಈಡೇರಿಸುತ್ತದೆ ಎಂಬುದನ್ನು ಹಿರಿಯರಾದ ನಾವು ಮನಗಂಡು ಅದರ ಒಳಿತು ಕೆಡುಕುಗಳ ಬಗ್ಗೆ ಅದು ಬಳಸಿ ಹಾಳಾಗುವ ಮೊದಲೇ ನಾವು ಅದಕ್ಕೆ ಮಾರ್ಗದರ್ಶನ ನೀಡಿರಬೇಕು. ಆಗ ಮಾತ್ರ ಮಗು ಅಂತಹ ಅಪಾಯಗಳನ್ನು ದೂರವಿಟ್ಟು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತನ್ನ ಪ್ರತಿಭೆಯನ್ನು ಹೊಂದಿಸಿ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡುವುದರಲ್ಲಿ ಸಂಶಯವಿಲ್ಲ. ವಿಶ್ವೇಶ್ವರಯ್ಯ ಅಬ್ದುಲ್ ಕಲಾಂ ರಂತಹವರು ಬಾಲ್ಯದಲ್ಲಿ ಕಂಡ ಕನಸುಗಳನ್ನು ತಮ್ಮ ಅಗಾಧ ಪ್ರತಿಭೆಯ ಸಹಾಯದಿಂದ ಇಡೀ ಸಮಾಜಕ್ಕೆ ದೇಶಕ್ಕೆ ಸದುಪಯೋಗವಾಗುವಂತಹ ತಂತ್ರಜ್ಞಾನಗಳನ್ನು ವಸ್ತುಗಳನ್ನು ನೀಡಿದ ಹಾಗೆ ಈಗಿನ ಮಕ್ಕಳು ಕೂಡ ಅಂತಹದ್ದೇ ದಾರಿಯಲ್ಲಿ ಸಾಗುವಂತೆ ನಾವು ಅವರಿಗೆ ದಾರಿ ತೋರಿಸಬೇಕು. ಕೀಳು ಅಭಿವ್ಯಕ್ತಿ ಅಭಿರುಚಿ ಹೊಂದಿರುವ ಮಾಧ್ಯಮಗಳಿಂದ ಮಕ್ಕಳನ್ನು ದೂರವಿಟ್ಟು ಸಬ್ಯ ನಾಗರೀಕನನ್ನು ಸೃಷ್ಟಿ ಮಾಡುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಗು ಸಮಾಜಕ್ಕೆ ಹೆಮ್ಮೆ ತರುವಂತಾಗಬೇಕೆ ಹೊರತು ಹೊರೆಯಾಗುವಂತಹ ವ್ಯಕ್ತಿ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು.


      ಮಗುವಿನ ಮನಸ್ಸು ತುಂಬಾ ಮೃದು ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಅಷ್ಟೇ ನಾಜೂಕಾಗಿ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸನ್ನಿವೇಶವನ್ನು ಎದುರಿಸಿ ಮಗು ಗೆದ್ದು ಬರಬೇಕು ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂಬ ಕಲ್ಪನೆ ಮಗುವಿನಲ್ಲಿರಬೇಕು. ದಿನಾಚರಣೆ ಈ ಸಂದರ್ಭದಲ್ಲಿ ಎಲ್ಲಾ ಭಾಗಿದಾರರು ತಮ್ಮ ಜವಾಬ್ದಾರಿಗಳನ್ನು ಅರಿತು ಮುಂದಿನ ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ಸಮರ್ಥರನ್ನಾಗಿಸಿ ಅವರನ್ನು ಸಮಾಜ ಸದ್ವಿನಿಯೋಗಪಡಿಕೊಳ್ಳುವಂತಾಗಬೇಕು. ಮಕ್ಕಳನ್ನು ದ್ವೇಷಿಸುವ ಹಿಂಸಿಸುವ ಸಮಾಜಘಾತುಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಬೇಕು. ಸ್ವಾಸ್ಥ್ಯ ಸಮಾಜಕ್ಕೆ ಮಕ್ಕಳು ಉತ್ಕೃಷ್ಟ ಫಸಲಾಗಬೇಕು. ಹುಟ್ಟಿದ ಪ್ರತಿ ಮಗು ಸಮಾಜದ ಆಸ್ತಿಯಾಗಬೇಕು ಎಂಬ ಆಶಯದೊಂದಿಗೆ ಈ ಬಾರಿಯ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಲಿ.

೦೧೫೪ಪಿಎಂ೧೪೧೧೨೦೨೩
ಅಮುಭಾವಜೀವಿ ಮುಸ್ಟೂರು 

No comments:

Post a Comment