Saturday, November 25, 2023

ಕವನ

ಮಂಜಿನ ತೆರೆ ಸರಿಸಿ
ಹೊಂಗಿರಣಗಳ ಹರಿಸಿ
ಮುಂಜಾನೆಯ ಮುಖ ಒರೆಸಿ
ಶುಭೋದಯ ಮೂಡಿ ಬಂತು

ಕತ್ತಲ ಮೆಲ್ಲ ಕರಗಿಸಿ
ಜಗವ ಜಾಗೃತಗೊಳಿಸಿ
ಖಗಮೃಗಾದಿಗಳ ದಿಗ್ದರ್ಶಿಸಿ
ಕಾಯಕ್ಕಣಿಗೊಳಿಸಿದ ಮುಂಜಾವು

ಹರಿವ ನೀರನಾದಕೆ ತಲೆ ತೂಗಿ
ಸಾಗರದಲೆಗಳಿಗೆ ಹೊಂಬಣ್ಣ ಹಚ್ಚಿ
ಸುಮರಾಶಿಗಳಿಗೆ ಮೆರುಗು ತಂದು
ದುಂಬಿಗಳ ಗಾನಕ್ಕೆ ಮಾರುಹೋದ ಬೆಳಗು

ಸಣ್ಣ ತನದವರನ್ನು ಕ್ಷಮಿಸಿ
ಹಿರಿತನದವರ ಪ್ರಶಂಸಿಸಿ
ಸಂಭಾವಿತ್ಯಕ್ಕೆ ಸಂಸ್ಕಾರ ನೀಡಿ
ಸಮಾನತೆಯ ಸದ್ಭಾವ ಮೂಡಿಸಿದ ಬೆಳಗು

ಕವಿ ಭಾವಕ್ಕೆ ಹೊಸತನ ನೀಡಿ
ಚಿತ್ರಕಾರನ ಕುಂಚದಿಂದ ತೀಡಿ
ಗಾನ ಕೋಗಿಲೆಯ ಕಂಠದೊಳು ಹಾಡಿ
ದಿನವ ಸ್ವಾಗತಿಸಿದ ಮಧುರ ಮುಂಜಾವು

0823ಎಎಂ23112023
ಅಮುಭಾವಜೀವಿ ಮುಸ್ಟೂರು

ಬೆಳ್ಳಿ ಮೋಡದ ಮರೆಯಿಂದ
ಹೊನ್ನ ಕಿರಣಗಳ ಏರಿ ಬಂದ
ಇನಾಗಮನಕೆ ದಿನೋದಯ
ಕವಿಭಾವದ ಶುಭೋದಯ

ಮಂಜಿನ ಮುಸುಕೊದ್ದ ಧರೆಗೆ
ತಂದ ಸುಮರಾಜಿಯ ಒಸಗೆ
ಕಣ್ಣು ಕೋರೈಸುವ ಬೆಳಕಿಗೆ
ಬಿಸಿಲಿನ ಶಾಖ ನೀಡಿದ ಜಗದ ಮೈಗೆ

ಹಕ್ಕಿ ಹಾಡಿನ ದನಿಯೊಂದಿಗೆ ಬೆರೆತು
ಅಂಧಕಾರ ನೀಗಿ ತಂದ ಹೊಸತು
ದಿನದ ಆರಂಭವೇ ಮನಮೋಹಕ
ಅದಕ್ಕೆ ಸ್ಪೂರ್ತಿ ಬಾಲ ಭಾಸ್ಕರನ ಕಾಯಕ

ಹರಿವ ನೀರಿನ ಜುಳುಜುಳು ನಾದ
ಮೊರೆವ ಅಲೆಗಳ ಸ್ನೇಹ ಸಂವಾದ
ನಿಸರ್ಗದ ರಮಣೀಯತೆಗೆ ವಶವಾಗಿ
ರವಿ ಕಾಣದ್ದನ್ನು ಕವಿ ಕಂಡು ಬರೆದ

ಇನ್ನೇಕೆ ಈ ಸೋಮಾರಿತನ
ಬೇಗ ಎದ್ದು ಆಸ್ವಾದಿಸಿ ಚೇತನ
ದಿನವೊಂದು ರವಿ ಬರೆದ ಚಂದ ಕವನ
ನಮಗೆಲ್ಲ ಬದುಕು ನೀಡಿದವನಿಗೊಂದು ನಮನ

07:38ಎಎಂ24112023
*ಅಮುಭಾವಜೀವಿ ಮುಷ್ಟೂರು*

* ಬರೀ ಬಡಾಯಿ ಜನ*

ಎಲ್ಲರೂ ಸುಳ್ಳರು ಎಲ್ಲರೂ ಕಳ್ಳರು
ತಮ್ಮ ಬೇಳೆ ಬೇಯಿಸಿಕೊಳ್ಳಲು
ಎಲ್ಲರೂ ಸಾಚಾಗಳು ಅವರಿಗೊಂದಿಷ್ಟು ಚಮಚಗಳು
ಆಡಿ ಹೊಗಳಿಸಿಕೊಳ್ಳಲು

ಒಂದಷ್ಟು ಒಳ್ಳೆಯ ಮಾತುಗಳು ಬರುವವು
ವೇದಿಕೆಯ ಮೇಲೆ ನಿಂತು ನೋಡಿವಾಗ
ಕೆಳಗಿಳಿದ ಮರುಕ್ಷಣವೇ ಬಣ್ಣ ಬಯಲು
ತಮ್ಮ ಹಳೆ ವರಸೆ ತೆಗೆಯುವರು ಆಗ

ಪ್ರಬಲರ ಚೋರತನ ಮರೆಯಾಗುವುದು
ಅವನ ಹಣ ಅಧಿಕಾರಗಳ ದರ್ಬಾರಿನ ಹಿಂದೆ
ಅವಲರ ಸಣ್ಣ ತಪ್ಪು ಬೆಟ್ಟವಾಗುವುದು
ಎಲ್ಲ ಮುಗಿಬಿದ್ದು ತುಳಿಯುವ ಕುರಿಮಂದೆ

ಅವರವರ ಮೂಗಿನ ನೇರಕ್ಕೆ 
ಇಲ್ಲಿ ನ್ಯಾಯ ತೀರ್ಮಾನ
ಒಮ್ಮೆ ಸರಿ ಕಂಡರೆ ಮುಗಿಯಿತು
ಎಲ್ಲೆಲ್ಲೂ ಹಾರ ತುರಾಯಿ ಸನ್ಮಾನ

ತೋರಿಕೆಗೆಂದು ಬರುವುದಿಲ್ಲ ಒಳ್ಳೆತನ
ಅದು ನಿತ್ಯ ಕರ್ಮದ ಸಹಜ ಗುಣ
ಇಕಿಲ್ಲ ಯಾರಿಗೂ ಅಂತಹ ಒಳ್ಳೆತನ
ಎಲ್ಲರದು ಮುಖವಾಡ ಕಳಚಿದ ಬಣ್ಣ

ಮಹೋನ್ನತ ಕಾರ್ಯ ಮಾಡಿದವರಲ್ಲಿ
ಎಂದೆಂದಿಗೂ ಆಗಿರುವರು ಎಲೆ ಮರೆಯ ಕಾಯಿ
ಉಗುರ ಮಣ್ಣಷ್ಟು ಚಿಗುರಿ ಮೆರೆವರು
ಜಗದಲಿ ಕೊಚ್ಚಿಕೊಂಡು ಬಡಾಯಿ

6:40 ಎಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ದೂರುವವರ ದಾರಿ ತೊರೆ*

ಕಾಣದ್ದನ್ನು ನಂಬುವ ಜನ
ಸತ್ಯವನ್ನು ಅರಿಯುವುದಾದರೂ ಹೇಗೆ
ಕೇಳಿದ್ದೇ ಸರಿಯನ್ನುವ ಜನ
ನಂಬಿದ್ದೆಲ್ಲ ಸತ್ಯ ಎಂದು ತಿಳಿಯುವುದು ಹೇಗೆ

ಗಂಡಿನ ಪ್ರಾಮಾಣಿಕತೆಗಿಂತ
ಹೆಣ್ಣಿನ ಕಣ್ಣೀರಿಗೆ ಕರಗುವರು ಜನ
ಕುಣಿಸಿದವರನ್ನು ಬಿಟ್ಟು
ಕುಣಿಯುವವನ ಹಣಿಯುವರು ಜನ

ಪ್ರೀತಿಯ ಆಟವಾಡಿದವಳ 
ಖ್ಯಾತಿಯ ಕೊಂಡಾಡುವ ಜನ
ಪ್ರೀತಿಯಲ್ಲಿ ಮೋಸ ಹೋದವನ 
ಹಿಡಿದು ಬಡಿಯವರು ಜನ

ಕದ್ದವನ ಎಡೆಮುರಿ ಕಟ್ಟಿ
ಅವಮಾನಿಸಿ ದಂಡಿಸುವ ಜನ
ಕದಿಯಲು ಪ್ರೇರಣೆಯಾದವಳ 
ಆರಾಧಿವೇ ಬಹುಮಾನಿಸುವುದು ಜನ

ಗಂಡನ ತೊರೆದು ಪ್ರಿಯಕರನ
ತೆಕ್ಕೆಯೊಳಗಿರುವವಳ ಸೌಖ್ಯ ಕೇಳುವ ಜನ
ಗರತಿಯ ಕಂಡು ಗಹಸಿ ನಕ್ಕು
ಆಡಿಕೊಂಡು ದಿನ ದೂಡುವರು ಜನ

ನಂಬಲಾಗದು ದರೆಯ ಜನರನ್ನು
ಹೇಗಿದ್ದರೂ ಕಷ್ಟ ಮುಚ್ಚಲಾಗದು ಬಾಯನ್ನು
ದೂರುವವರ ದಾರಿ ತೊರೆದು
ಗೌರವಿಸುವವರ ಗರಡಿ ಸೇರಬೇಕೆನ್ನು

0151 ಪಿಎಂ 25.11.2023
ಅಮುಭಾವಜೀವಿ ಮುಸ್ಟೂರು



*'ತನಗ' ಜೀವನ ಯಾನ*

ಜೀವನದ ಯಾನವು
ನಗುತಿರೆ ಚೆನ್ನವು
ನೋವಿನ ಬಿಸಿಲಾರಿ
ನಲಿವ ಸಹಚಾರಿ

ಕಷ್ಟಗಳು ಬಂದಾಗ
ಕುಗ್ಗದೆ ಮುನ್ನಡೆಯೆ
ಸುಖವು ಜೊತೆಯಾಗಿ
ಬದುಕು ಸಹಜವು

ಅಂದವರು ನಿನ್ನೋರು
ತಪ್ಪುಗಳ ತಿದ್ದೋರು
ಒಪ್ಪದಿ ಕಾಯ್ದುಕೊಂಡು
ಬಾಳ ದೋಣಿ ಸಾಗಿಸು

ಸ್ನೇಹ ಜೊತೆಗಿರಲಿ
ಪ್ರೀತಿ ಸ್ಪೂರ್ತಿಯಾಗಲಿ 
ಬಾಳ ರಥ ಸಾರಥಿ
ಒಲವಿನ ಸಂಗಾತಿ

ಎದೆಗುಂದದೆ ಸಾಗು
ಎದುರೀಜಿ ದಡಸೇರು
ಎಂದೆಂದೂ ನಿನಗಾಗಿ
ಎದೆ ಭಾವ ಹಾಡಲಿ

0306ಪಿಎಂ25112023
*ಅಮುಭಾವಜೀವಿ ಮುಸ್ಟೂರು*

ಅವಳ ನೋವಿನ ವಿಸ್ತಾರ
ಅಳಿಸಿ ಹಾಕಿದೆ ಸಂಸಾರ
ಏನೇ ಬಂದರೂ ನುಂಗಿ ಕೊಂಡಳು
ತನ್ನವರಿಗಾಗಿ ತಾನೇ ಸಹಿಸಿಕೊಂಡಳು

ದುಡಿದು ದುಡಿದು ದಣಿದ ಜೀವಕ್ಕೆ
ಕುಗ್ಗಿ ಹೋದಳು ಕೂಡಿದ ಗಂಡನ ಹೊಡೆತಕ್ಕೆ
ಮಕ್ಕಳಿಗಾಗಿ ಜೀವ ಬಿಗಿ ಹಿಡಿದಳು
ಎಲ್ಲ ಹಿಂಸೆ ಅವಮಾನಗಳಿಗೆ ಬಂಡೆಯಾದಳು

ಅಮ್ಮನಾಗದ  ಅತ್ತೆಯ ಕಿರುಕುಳ
ವಾರಗಿತ್ತಿಯರ ಅಸಹನೆ ಉಪಟಳ
ಬೇಸತ್ತು ಸುಸ್ತಾಗಿ ಕುಳಿತಳು
ಹಸಿದ ಹೊಟ್ಟೆಗಾಗಿ ಮತ್ತೆ ದುಡಿಯ ಹೊರಟಳು

ಕೂಲಿಯಿಂದ ಮನೆಗೆ ಬರುವ ಮುಂಚೆ
ಕುಡುಕ ಗಂಡನ ಕೈ ಸೇರಿ ಖಾಲಿಯಾಗಿತ್ತು
ಹರಿದ ರವಿಕೆ ಗಂಟು ಸೀರೆ
ಎಣ್ಣೆ ಕಾಣದ ಕೂದಲು ಅವಳ ಸ್ಥಿತಿಗೆ ಸಾಕ್ಷಿಯಾಗಿತ್ತು

ತಾಯಿಲ್ಲದ ತವರಿನ ತಬ್ಬಲಿ ಈಕೆ
ಎಷ್ಟೇ ದುಡಿದರು ಕೈ ಸೇರದ ಸಿರಿವಂತಿಕೆ
ಬಡತನ ಹೆಣ್ಣಿಗೊಂದು ಶಾಪ
ತನ್ನ ದಂಡನೆಗೆ ಸೀಮಿತ ಅವಳ ಕೋಪ

ಬೇಡದ ಬದುಕಲಿ ಸಾಯಲು ಇಷ್ಟವಿಲ್ಲ
ಏನೇ ಆದರೂ ಗೆಲ್ಲಬೇಕೆಂಬ ಹಂಬಲ ಕಮ್ಮಿಯಾಗಿಲ್ಲ
ಬಡ ಹೆಂಗಳೆಯರ ಅಂತ‌ಸತ್ವವಿದು
ಅದಾವ ದೈವ ಶಕ್ತಿ ಅವರ ಸಲಹುವುದೋ

431 ಪಿಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ಬೆಳಗಿಗೆ 'ತನಗೋ"ಪಾಸನೆ*

ಇನನ ಆಗಮನ
ದಿನದ ಆರಂಭವು
ಮುಂಜಾನೆಯ ಬೆಳಕು
ಅರಳಿದವು ಹೂವು

ಮಂಜಿನ ಹನಿ ಸಾಲು
ಕಣ್ತೆರೆದ ಹಗಲು
ದಿನಪೂರ್ತಿ ಚೇತನ
ಕಾಯಕ ದೀಕ್ಷೆ ತೊಡು

ಇರುಳು ಕಳೆಯಿತು
ಬೆಳಕು ತಾ ಮೂಡಿತು
ದಣಿವೆಲ್ಲ ನೀಡಿತು
ಭರವಸೆಯ ತಂತು

ಹಕ್ಕಿ ಹಾಡಲು ಗಾನ
ನಕ್ಕು ನಲಿಯೆ ಬನ
ಹೊಳೆವ ಹೊಂಗಿರಣ
ದುಡಿಮೆಯ ಪ್ರೇರಣ

ಎದ್ದೇಳು ಅಣಿಯಾಗು
ದುಡಿಯಲು ಸಜ್ಜಾಗು
ಮಡಿ ಮೈಲಿಗೆ ಬಿಡು
ಶುದ್ಧ ಮನದಿ ನಡೆ

೦೬೫೬ಎಎಂ೨೬೧೧೨೦೨೩
*ಅಮುಭಾವಜೀವಿ ಮುಷ್ಟೂರು*

ಅದೇಕೋ ಗೊತ್ತಿಲ್ಲ
ಎಲ್ಲರಿಂದಲೂ ತಿರಸ್ಕೃತಗೊಂಡು
ಎಲ್ಲರ ಮಾತಿಗೂ ಆಹಾರವಾಗಿ
ಮೆಲ್ಲಿದವರೆಲ್ಲ ಉಗಿದು ಹೋದರು

ಅದೇಕೋ ಗೊತ್ತಿಲ್ಲ
ನಿನ್ನೆಗಳು ಓಡುತಿದೆ ದೂರ
ನಾಳೆಗಳ ನೆನೆದರೆ ಘೋರ
ಇಂದೆಂಬುದು ತಡೆಯಲು ಬಲು ಬಾರ

ಅದೇಕೋ ಗೊತ್ತಿಲ್ಲ
ಸ್ನೇಹ ಬಲು ದುಬಾರಿ
ಪ್ರೀತಿ ಅಲೆಮಾರಿ
ಸಂಬಂಧಗಳು ಭದ್ರ ತಿಜೋರಿ

ಅದೇಕೋ ಗೊತ್ತಿಲ್ಲ
ಶುದ್ಧ ಹಸ್ತರು ಯಾರಿಲ್ಲ
ಕದ್ದು ಗೆದ್ದವರೇ ಎಲ್ಲ
ನಂಬಿಕೆಗೆ ಅರ್ಹರು ಇಲ್ಲಿ ಯಾರಿಲ್ಲ

ಅದೇಕೋ ಗೊತ್ತಿಲ್ಲ
ಅವಳ ಮಾತು ನಂಬಿದರು
ಇವನ ಮಾತ ಅಲ್ಲಗಳೆದರು
ಇಬ್ಬರ ಮಧ್ಯೆ ಮೂರನೆಯವರೇಕೆ ಬಂದರು

ಅದೇಕೋ ಗೊತ್ತಿಲ್ಲ
ಎಲ್ಲ ನನ್ನ ಮರೆತರು
ಯಾರು ನನ್ನ ಕರೆಯದಾದರೂ
ಮುಗಿದುಹೋಯಿತೇ ನನ್ನ ಖದರು

೦1೦2 ಪಿಎಂ 26.11.2023
*ಅಮುಭಾವಜೀವಿ ಮುಷ್ಟೂರು*

No comments:

Post a Comment