Friday, September 21, 2018

ನಿಲುವಿಗಿಲ್ಲ ಗೆಲುವು

*ನಿಲುವಿಗಿಲ್ಲ ಗೆಲುವು*

ದಿಟ್ಟ ತನವು ಕೆಟ್ಟುಕೂತಿದೆ
ಕಟ್ಟ ಕಡೆಗೆ ಕೈ ಕಟ್ಟಿ ನಿಂತಿದೆ

ಮೂಗಿನ ನೇರದ ನಿರ್ಧಾರ
ಅಸಹಾಯಕನನ್ನಾಗಿಸಿದೆ
ಹಾದಿ ತಪ್ಪುವ ಭೀತಿಯಲ್ಲಿ
ಹೌಹಾರಿ ಚೀರುತ ನಿಂತಿದೆ

ಪ್ರೀತಿಯ ಬಳಿಗೆ ಹೋಗಿ
ಜಾತಿಯ ಸುಳಿಗೆ ಸಿಕ್ಕು
ಬದಲಾವಣೆಯ ಹೆಜ್ಜೆ
ಬಲಹೀನವಾಗಿ ಸತ್ತು ಬಿದ್ದಿದೆ

ಲಜ್ಜೆಗೇಡಿ ಲಂಚಾವತಾರ
ಪ್ರತಿಭೆಯನು ತುಳಿದಿದೆ
ಅಪ್ಪ ಹಾಕಿದ ಆಲದ ಮರ
ನೇಣು ಬಿಗಿಯಲು ಗೋಣಿಗೆ ಹಗ್ಗ ಹಾಕಿದೆ

ಅಸತ್ಯದ ಅಲಂಕಾರದ ಮುಂದೆ
ಸತ್ಯವೆಂಬುದು ಕುರೂಪಿ
ಸಮತೆಯ ಸೋಗಿನಲ್ಲಿ ಸದ್ದು ಮಾಡಿದೆ
ಅಸಮಾನತೆಯ ಬಹುರೂಪಿ

ಗಾಂಧಿ ಎದೆಗೆ ಗುಂಡಿಟ್ಟು
ನಾಂದಿ ಹಾಡಿತು ಅಸಹನೆ
ಚಿಂತನೆಯನೇ ಅಂತ್ಯವಾಗಿಸಿತು
ಛದ್ಮವೇಷದವರ ವರ್ತನೆ

ಈ ನೆಲದಿ ಇನ್ನೆಲ್ಲಿ ಹೋರಾಟ
ಎಲ್ಲ ಬರೀ ಕೆಸರೆರಚಾಟ
ನಿಲುವಿಗಿಲ್ಲಿ ಗೆಲುವು ಕಷ್ಟ
ನಿಜವೆಲ್ಲ ಏರಿ ಕೂತಿದೆ ಚಟ್ಟ

0552ಎಎಂ17092018

ಅಮು ಭಾವಜೀವಿ
ಚಿತ್ರದುರ್ಗ

No comments:

Post a Comment