Wednesday, October 31, 2018

*ಕರ್ನಾಟಕ ರಾಜ್ಯೋತ್ಸವದ ಕವನ ಸ್ಪರ್ಧೆಗಾಗಿ*

*ಅಮರವಾಗಲಿ ಕನ್ನಡ*

ಕಲಿಯೋಣ ಬಾ ಕನ್ನಡ
ಕಲಿಸೋಣ ನಾವು ಕನ್ನಡ

ಜಗದೆಲ್ಲ ಭಾಷೆಗಳಲಿ
ಸುಂದರ ನಮ್ಮ ಈ ಕನ್ನಡ
ಹೇಳಿದುದನೇ ಬರೆಯಬಲ್ಲ
ಏಕೈಕ ಭಾಷೆ ನಮ್ಮ ಈ ಕನ್ನಡ

ಕಸ್ತೂರಿಯ ಕಂಪಿರುವ
ಕೋಗಿಲೆ ಪೆಂಪಿನ ಕನ್ನಡ
ಭಾಷೆಯಿಂದಲೇ ರಾಜ್ಯವಾದ
ಕರ್ನಾಟಕದ ಜೀವನುಡಿ ಕನ್ನಡ

ಪ್ರತ್ಯೇಕತೆಯ ಬಿಳಲಿದ್ದರೂ
ಆಳುವ ಭಾಷೆಯಿದು ಕನ್ನಡ
ಕವಿ ಪುಂಗವರ ಲೇಖನಿಯಲಿ
ಮೆರೆದ ಜ್ಞಾನ ಪೀಠ ಕನ್ನಡ

ವಚನ ಕೀರ್ತನೆ ಜನಪದ
ಅನುಭಾವದ ನುಡಿ ಕನ್ನಡ
ಸಹಸ್ರ ವರ್ಷಗಳ ಇತಿಹಾಸವಿದ್ದು
ಉಳಿವಿಗಾಗಿ ಹೋರಾಡುವ ಕನ್ನಡ

ನೆಲ ಜಲ ಜನರ ಬದುಕು
ಎಲ್ಲರ ಅಭಿಮಾನದ ಕನ್ನಡ
ಇವನಾರವನೆನ್ನದೆ ನಮ್ಮವನೆಂದು
ಕರೆದು ಸಲಹಿ ಬೆಳೆಸುವ ಕನ್ನಡ

ಅನ್ಯರ ಆಕ್ರಮಣಕ್ಕೆ ತುತ್ತಾಗಿಯೂ
ಅಕ್ಕರೆಯ ಸಕ್ಕರೆ ಮಾತಿನ ಕನ್ನಡ
ನಿತ್ಯ ನಿರಂತರ ಗ್ರಾಮ್ಯ ಸೊಗಡಿನ
ಸುಂದರ ಸಂಸ್ಕಾರದ ನುಡಿ ಕನ್ನಡ

ನಾಡಿನ ಸ್ವಾಭಿಮಾನ ಹೆಮ್ಮೆಯ
ಅರಿಶಿನ ಕುಂಕುಮ ಶೋಭಿತೆ ಕನ್ನಡ
ಶ್ರೀಗಂಧದ ಗುಣವನು ತಾ ತೊಟ್ಟು
ಜಗದ ಮನ್ನಣೆ ಪಡೆದ ಕನ್ನಡ

ಕಟ್ಟೋಣ ಕನ್ನಡದ ನಾಡನ್ನ
ಹಚ್ಚೋಣ ಕನ್ನಡ ದೀಪವನ್ನ
ಪ್ರಜ್ವಲಿಸಲಿ ಕನ್ನಡ ಜ್ಯೋತಿ
ಅಜರಾಮರವಾಗಲಿ ಕನ್ನಡ ಖ್ಯಾತಿ

0538ಎಎಂ01112018
*ಅಮು ಭಾವಜೀವಿ*
ಚಿತ್ರದುರ್ಗ

Sunday, October 21, 2018

*ಸಾಕು ಈ ದೂರ*

ದೂರ ನೀನು ಉಳಿದರೆ
ನಿನ್ನ ನೆನಪು ಕಾಡುತಿರೆ
ಭಾವ ಉಕ್ಕಿ ಬರುವಾಗ
ಅರಿಯದೇ ನಾ ಕವಿಯಾದೆ

ಬರೆದು ಬರೆದು ಖಾಲಿಯಾದೆ
ಮತ್ತೆ ಮತ್ತೆ ನೆನಪು ಚಿಮ್ಮಿ ಬಂದಿದೆ
ಅಕ್ಷಯ ನೆನಪುಗಳ ಕೊಟ್ಟು
ನನ್ನ ನೀ ಕವಿಯಾಗಿ ಮಾಡಿದೆ

ನೀನಿರದ ಪ್ರತಿ ಕ್ಷಣ
ಎದೆಯೊಳಗೇನೋ ತಲ್ಲಣ
ಹೇಳಿ ಹೋಗದ ಕಾರಣ
ಕಾಣೆ ನಾನು ಉಪಶಮನ

ಎಲ್ಲೆಲ್ಲಿ ನೋಡಿದರೂ ನಿನ್ನ ಮುಖ
ಅದರಿಂದ ನನಗಿಲ್ಲ ಯಾವ ಸುಖ
ಸಖಿ ನೀನು ಸಂಹಾರ ಮಾಡು ಬಂದು
ವಿರಹದೆದೆಯ ಈ ಬಾಧೆಯ

ಪ್ರೇಮಿಯೊಳಗೆ ಮಿಳಿತವಾಗಿ
ಸಂಭ್ರಮವ ತಾ ಪ್ರಕೃತಿಯ ಹಾಗೆ
ಸುಮವಾಗಿ ಅರಳಲಿ ಪ್ರೀತಿ
ಸಹಯಾನ ಖುಷಿತರಲಿ ದುಂಬಿಯ ರೀತಿ

ಸಾಕು ಈ ದೂರ ಇನಿಯ
ಕಳೆದು ಹೋಗುತಿದೆ ಹರೆಯ
ಮತ್ತೆ ಬರದಿರಲಿ ಇಂಥ ಸಮಯ
ಬದುಕಾಗಲಿ ನಿತ್ಯ ಸರಸಮಯ

0832ಎಎಂ22102018

*ಅಮು ಭಾವಜೀವಿ*
ಚಿತ್ರದುರ್ಗ

Friday, October 19, 2018

ನೆನಪಿನ ಹನಿಗಳು

*ನೆನಪಿನ ಹನಿಗಳು*

ಬರುವ ನಾಳೆಗಳಿಗೆ
ತೆರೆದ ದಾರಿಗಳು
ನಿನ್ನ ನೆನಪಿನ ಹನಿಗಳು

ಇರುವ ಮೂರು ದಿನಗಳಿಗೆ
ನೆಮ್ಮದಿಯ ಪ್ರತಿ ಘಳಿಗೆ
ನಿನ್ನ ನೆನಪೇ ಸ್ಪೂರ್ತಿಯು

ಕಣ್ಣ ಕಂಬನಿ ನಿಂತು
ಆನಂದಭಾಷ್ಪ ತಂತು
ನಿನ್ನ ನೆನಪೇ ನನ್ನ ಆಸ್ತಿ

ನಾಸ್ತಿಕ ನಾನು ಜಗದೊಳಗೆ
ಆಸ್ತಿಕನಾದೆ ನಿನ್ನೊಲವಿಗೆ
ನಿನ್ನ ನೆನಪೇ ನನಗೀಗ ಪ್ರಶಸ್ತಿ

ಮನದ ಹಕ್ಕಿಯು ಈಗ
ಭಾವಗಳ ರೆಕ್ಕೆ ಬಿಚ್ಚಿ ಹಾರಲು
ನಿನ್ನ ನೆನಪೇ ಗಮ್ಯವು

ಹೃದಯದಿ ಹಾಡು ಹುಟ್ಟಿ
ನಿನ್ನ ಹೃದಯವ ಮುಟ್ಟಿ
ನೆನಪಾದ ರೀತಿಯೇ ಅನನ್ಯವು

ಎದೆಯ ಮಿಡಿತ ಬದುಕಾಗುವ
ಮೊದಲು ಒಲಿದ ನಿನ್ನ ಪ್ರೀತಿಯ
ನೆನಪೇ ಜೀವಚೇತನ

ಕಣ್ಣ ಗೂಡಿನಲಿ ನಿನ್ನ
ಕನಸ ದೀಪವು ಬೆಳಗುವ
ನೆನಪ ಜ್ಯೋತಿ ನನ್ನೀ ಕವನ

0901ಪಿಎಂ17102018
*ಅಮು ಭಾವಜೀವಿ*
ಮುಸ್ಟೂರು

Monday, October 15, 2018

ಸಂಸಾರದ ಮಹತ್ವ

ಭಾರತೀಯ ಸಂಸ್ಕೃತಿಯಲ್ಲಿ ಸಂಸಾರದ ಅರ್ಥ ಮತ್ತು ಜವಾಬ್ದಾರಿ ತುಂಬಾ ವಿಶಿಷ್ಟವಾಗಿದೆ. ಸಂಸಾರ ಎಂದರೆ ಕೇವಲ ಗಂಡು ಹೆಣ್ಣುಗಳ ಮಿಲನಕ್ಕಾಗಿ ಹಾಕಿಕೊಟ್ಟ ಚೌಕಟ್ಟಲ್ಲ. ಅದು ಅದರಾಚೆಗೂ ಮಕ್ಕಳ ಲಾಲನೆ ಪಾಲನೆ ಮಾಡುವುದು, ಹಿರಿಯರೊಡನೆ ಕಿರಿಯರೂ ಕೂಡ ಬದುಕುವುದು, ತನ್ನದೆಂಬ ಜವಾಬ್ದಾರಿ ಹೊತ್ತು ನಡೆಯುವುದನ್ನು ಕಲಿಸುತ್ತದೆ. ಅವಿಭಕ್ತ ಕುಟುಂಬಗಳ ಕಾಲದಲ್ಲಿ ಮನೆಯ ಯಜಮಾನ/ತಿಯೇ ಎಲ್ಲಾ ತೀರ್ಮಾನ ಹಾಗೂ ಜವಾಬ್ದಾರಿಗಳನ್ನು ಹೋಗುತ್ತಿದ್ದರು. ಆಗ ಯಾರೊಬ್ಬರೂ ದಾರಿ ತಪ್ಪಿದೆ ತನ್ನ ಬೇಕು ಬೇಡಗಳನ್ನು ಸಂಸಾರದೊಳಗೆ ಈಡೇರಿಸಿಕೊಳ್ಳಬೇಕಿತ್ತು. ಅಂದು ಕುಟುಂಬ ಒಂದು ಪ್ರತಿಷ್ಟೆಯಾಗಿತ್ತು. ಅದರ ಘನತೆಗೆ ಎಂದೂ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿತ್ತು. ಅಲ್ಲಿ ಏನೇ ನಡೆದರೂ ಮೊದಲು ಸಂಸಾರದೊಳಗೆ ತೀರ್ಮಾನ ಆಗುತ್ತಿತ್ತು. ಸಂಸಾರದ ಗುಟ್ಟು ಎಂದೂ ಬೀದಿಗೆ ಬಂದು ಬೀಳುತ್ತಿರಲಿಲ್ಲ.

      ಸಂಸಾರವೆಂಬುದು ಅದರ ಪ್ರತಿ ಸದಸ್ಯನಿಗೂ ಸಮಾನತೆ, ಹೊಣೆಗಾರಿಕೆ, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಸಹಕಾರ ಸಹಬಾಳ್ವೆಯ ಮಹತ್ವವನ್ನು ಒಳಗೊಂಡಿತ್ತು. ಅಲ್ಲಿ  ಗಂಡು ದುಡಿಯುವ, ಸಂಸಾರಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವ ಜವಾಬ್ದಾರಿ ಹೊತ್ತಿದ್ದರೆ ಹೆಣ್ಣು ಮನೆಯೊಳಗಿದ್ದು ಅವನು ದುಡಿದು ತಂದುದನ್ನು ಸಂಸಾರದ ಪ್ರತಿಯೊಬ್ಬರಿಗೂ ಹಂಚುವ,ಅವಶ್ಯಕತೆಗಳಿಗೆ ಮೊದಲಾದ್ಯತೆಯಾಗಿ ವಿನಿಯೋಗಿಸುವ ಜಾಣ್ಮೆಯನ್ನು ತೋರುತ್ತಿದ್ದಳು. ಸಂಸಾರದಲ್ಲಿ ಬಾಂಧವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಸಂಬಂಧಗಳ ಬಂಧನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಆಸೆ ಆಕಾಂಕ್ಷೆಗಳನ್ನು ಕಟ್ಟಿ ಹಾಕಲಾಗುತ್ತಿತ್ತು. ಒಂದೊಮ್ಮೆ ಅದನ್ನು ದಿಕ್ಕರಿಸಿ ಹೋದವನಿಗೆ ಕುಟುಂಬವೇ ಶಿಕ್ಷೆ ಕೊಡುತ್ತಿತ್ತು. ಹಾದಿ ತಪ್ಪಿದವರನ್ನು ಸರಿದಾರಿಗೆ ತರುವ ಹೊಣೆಯನ್ನು ಕುಟುಂಬದ ಹಿರಿಯರು ಹೋಗುತ್ತಿದ್ದರು. ಏನೇ ಕಷ್ಟ ನಷ್ಟ ಬಂದರೂ ಇಡೀ ಕುಟುಂಬ ಎದುರಿಸಿ ನಿಲ್ಲುತ್ತಿತ್ತು. ವೈಯಕ್ತಿಕ ಭಿನ್ನತೆಗಳಿಗಿಂತಲೂ ಸಾಮೂಹಿಕ ಜೀವನದಲ್ಲಿ ನಂಬಿಕೆ ಇಟ್ಟು ಸಂಸಾರ ನಡೆಯುತ್ತಿತ್ತು.

      ಆದರೆ ಇಂದು ಸಂಸಾರ ತನ್ನ ಅರ್ಥ ಮತ್ತು ವ್ಯಾಪ್ತಿಯನ್ನು ಸಂಕುಚಿತಗೊಳಿಸಿಕೊಂಡಿದೆ. ಇಲ್ಲಿ ಗಂಡ ಹೆಂಡತಿ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಹಿರಿಯ ತಲೆಮಾರು ಮೂಲೆಗುಂಪಾಗಿದೆ. ಅದರ ಬದಲು ಸಂಸಾರ ನಿರ್ವಹಣೆಗೆ ಗಂಡ ಹೆಂಡತಿ ಇಬ್ಬರೂ ದುಡಿಯುವ ಅನಿವಾರ್ಯತೆ ಅವರಿಬ್ಬರ ಸಾಮಾಜಿಕ ಆರ್ಥಿಕ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಅನೇಕ ಸಂಘರ್ಷಗಳನ್ನು ತಂದೊಡ್ಡುತ್ತಿದೆ. ಇಲ್ಲಿ ತಿದ್ದಿ ಬುದ್ಧಿ ಹೇಳಲು ನ್ಯಾಯಲಯಗಳೇ ಬರಬೇಕು. ಸಂಸಾರದ ಸೂಕ್ಷ್ಮಗಳು ಆ ಚೌಕಟ್ಟನ್ನು ಮೀರಿ ಬೀದಿಗೆ ಬಂದು ನಿಲ್ಲುತ್ತವೆ. ಇಲ್ಲಿ ಇಬ್ಬರೂ ದುಡಿಯುವುದರಿಂದ ಆರ್ಥಿಕ ಸಮಾನತೆಗಾಗಿ ಸಂಸಾರದ ಸ್ವಾಸ್ಥ್ಯವನ್ನು ಬಲ ಕೊಡಲಾಗುತ್ತದೆ. ದುಡಿಯುವ ರಂಗಗಳಲ್ಲಿ ಸಂಸಾರದ ಇಬ್ಬರು ವ್ಯಕ್ತಿಗಳಿಗಿಂತ ನಾನಾ ರೀತಿಯ ಜನರೊಂದಿಗೆ ಬೆರೆತು, ಪರಸ್ಪರ ನಂಬಿಕೆ ಗೌರವ ಪ್ರತಿಷ್ಠೆಗಳಿಗಾಗಿ ಎಷ್ಟೋ ಸಂಸಾರಗಳು ಹಾಳಾಗುತ್ತಿವೆ . ಗಂಡ ಹೆಂಡತಿ ಸಂಸಾರದಾಚೆಗಿನ ಸಂಬಂಧಗಳಿಗಾಗಿ ನಿತ್ಯ ಜಗಳವಾಡುವ ಪರಸ್ಪರ ನಿಂದಿಸಿಕೊಳ್ಳುವ ಮೂಲಕ ಮಾನಸಿಕ ಸ್ಥಿಮಿತ ಕಳೆದುಕೊಂಡು ಅನಾಹುತಗಳಿಗೆಡೆ ಮಾಡಿಕೊಡುತ್ತದೆ. ಮತ್ತೆ ಮುಂದೆ ಅದು ಪೋಲೀಸು, ನ್ಯಾಯಾಲಯಗಳ ಮೆಟ್ಟಿಲೇರಿ ಸಂಬಂಧಗಳನ್ನು ಕಾನೂನಿನ ಮೂಲಕ ಕಡಿದುಕೊಳ್ಳುತ್ತಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ಮಕ್ಕಳು ತಂದೆ ಇದ್ದೂ ಇಲ್ಲದಂತೆ, ತಾಯಿ ಇದ್ದೂ ಇಲ್ಲದಂತೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

       ಸಂಸಾರ ತನ್ನ ಬಿಗಿ ಹಿತವನ್ನು ಸಡಿಲಿಸಿದುದರ ಪರಿಣಾಮವಾಗಿ ಆಂತರಿಕ ಸಂಘರ್ಷಗಳು ವಿಕೋಪಕ್ಕೆ ಹೋಗಿ ನಿಲ್ಲುತ್ತವೆ. ಇಲ್ಲಿ ಬುದ್ಧಿ ಮಾತುಗಳಿಗೆ ಜಾಗವಿಲ್ಲ. ಪರಸ್ಪರರಲ್ಲಿ ನಂಬಿಕೆ ಇಲ್ಲ. ಪ್ರೀತಿ ವಿಶ್ವಾಸ ಎಂದೊ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಗದೆ ಕೈಚೆಲ್ಲಿ ಕೂತಿವೆ. ಸಂಸಾರದಾಚೆಗಿನ ಸಂಬಂಧಗಳು ಅನೈತಿಕ ಕಳಂಕವನ್ನು ಹೊತ್ತು ಅದೇ ಸತ್ಯ ಎಂದು ಪ್ರತಿಪಾದಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಎತ್ತು ಏರಿಗೆ ಕೋಣ ನೀರಿಗೆ ಎಳೆದಾಡಿದಾಗ ಸಂಸಾರನೌಕೆ ಚೂರು ಚೂರಾಗಿ ತಳ ಸೇರುತ್ತದೆ. ನೆಮ್ಮದಿ ಹಾಳಾಗುತ್ತದೆ. ಪ್ರೀತಿ ಗೌರವದ ಸ್ಥಾನವನ್ನು ದ್ವೇಷ ಅಸೂಯೆಗಳು ಆಕ್ರಮಿಸಿಕೊಂಡು ಕ್ರೌರ್ಯ ದಾಳಿ ಮಾಡಿ ಸಂಸಾರವನ್ನು ಸರ್ವನಾಶ ಮಾಡುತ್ತದೆ.

         ಇಂದು ಸಂಸಾರ ಎಂಬುದು ಇನ್ನಷ್ಟು ವಿಘಟನೆ ಹೊಂದಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಆಗಿ ಬದಲಾಗಿದೆ. ವೈವಾಹಿಕ ಸಂಬಂಧ ಇಲ್ಲದೆಯೂ ಗಂಡು ಹೆಣ್ಣು ಒಟ್ಟಿಗೆ ಇದ್ದು ತಮ್ಮ ತಮ್ಮ ದಾರಿಯನ್ನು ತಾವೆ ಹುಡುಕಿಕೊಂಡು ಪ್ರೀತಿ ವಿಶ್ವಾಸಗಳಿಲ್ಲದೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಎರಡು ಕೋಣೆಗಳಾಗಿ ನಾನೊಂದು ತೀರ ನೀನೊಂದು ತೀರ ಎಂದು ಬಾಳುತ್ತಿದ್ದಾರೆ. ಲೈಂಗಿಕತೆ ಎಂಬುದು ಸಂಸಾರದ ಸುಸ್ಥಿರತೆಗೆ ಅವಶ್ಯಕವಾಗಿರದೆ, ಅದನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಪಡೆಯುವ, ಸ್ವಾಭಿಮಾನದ ಹೆಸರಿನಲ್ಲಿ ಸ್ವೇಚ್ಚಾಚಾರಕ್ಕೆ ಎಡೆಮಾಡಿಕೊಟ್ಟಿದೆ.

    ಒಟ್ಟಿನಲ್ಲಿ ಹೇಳುವುದಾದರೆ ಸಂಸಾರ ನಮ್ಮ ಭಾರತೀಯ ಸಂಸ್ಕೃತಿಯ ಚೌಕಟ್ಟು. ಇಲ್ಲಿ ಎಲ್ಲವೂ ಒಂದೇ ಸೂರಿನಡಿ ಲಭ್ಯವಿರುತ್ತಿತ್ತು. ಅದಕ್ಕೆ ಪ್ರೀತಿ ವಾತ್ಸಲ್ಯ ವಿಶ್ವಾಸ ಗೌರವ ಎಂಬ ನಾಲ್ಕು ಆಧಾರಗಳಿಗೆ ನಂಬಿಕೆಯ ನೆರಳಿರುತ್ತಿತ್ತು. ಇಲ್ಲಿ ಆರ್ಥಿಕತೆಗಿಂತಲೂ ಕೌಟುಂಬಿಕ ಹಿತಾಸಕ್ತಿ ಮುಖ್ಯವಾಗಿರುತ್ತಿತ್ತು. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಮಾತ್ರ ಇರುತ್ತಿತ್ತು. ಆದರಿಂದು ಅದು ಅದರಾಚೆಗೂ ಉಳಿದ ಪರಿಣಾಮ ವಿವಾಹ ವಿಚ್ಛೇದನಗಳ ಸಂಖ್ಯೆ ಅಧಿಕವಾಯ್ತು. ಅನೈತಿಕ ಸಂಬಂಧದ ಕಮಟು ವಾಸನೆ ಬೀದಿರಂಪವಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಸಂಪೂರ್ಣ ನಶಿಸಿ ಹೋಗುತ್ತಿವೆ. ಧನ್ಯವಾದಗಳು ನೆಮ್ಮದಿ ಇಲ್ಲದ ಮನಸ್ಸು ಅಡ್ಡ ಹಾದಿ ಹಿಡಿದು ದುಶ್ಚಟಗಳ ದಾಸ್ಯಕ್ಕೆ ಸಿಲುಕಿ ಕ್ರೌರ್ಯದ ಮುಖವಾಡ ಧರಿಸಿ ಅಪರಾಧಕ್ಕೆ ಅವಕಾಶ ನೀಡಿ ಕಾನೂನಿನ ಸರಳುಗಳ ಹಿಂದೆ ಬಂಧಿಯಾಗುತ್ತಿದೆ. ತಲೆಮಾರುಗಳಿಂದ ಉಳಿದು ಬಂದ ಸಂಸಾರವೆಂಬ ಸಂಸ್ಥೆ ಅಳಿವಿನಂಚಿಗೆ ಬಂದು ನಿಂತಿದೆ. ನಗರೀಕರಣ ವ್ಯವಸ್ಥೆ ಇದನೆಲ್ಲವನ್ನು ತನ್ನ ಏಳಿಗೆಯ ಮಾನದಂಡವಾಗಿಸಿಕೊಂಡಿರುವುದೂ ಕೂಡ ಇದು ಇನ್ನಷ್ಟು ವಿಘಟಿಸಲು ಅನುವುಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಂಸಾರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದು ಇಲ್ಲೂ ಅದು ತನ್ನ ಕಬಂಧಬಾಹುಗಳನ್ನು ಚಾಚಿ ಆಕ್ರಮಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ಎಂಬ ಪದ ಇನ್ನಿಲ್ಲದಂತೆ ಆಗುವ ಕಾಲ ದೂರವಿಲ್ಲ.

0504ಎಎಂ16102018

ಅಮು ಭಾವಜೀವಿ

Sunday, October 14, 2018

*ದಕ್ಕಿಬಿಡು*

ಯಾರ ಕರವ ಹಿಡಿದು ನೀನು
ಹೋದೆ  ಓ ಭಾವಗೀತೆ
ನೀನು ಇರದೆ ನಾನು ಬರಿದೆ
ಶೂನ್ಯದಲ್ಲಿ ಅವಿತು ಕುಳಿತೆ

ಭಾವದಲ್ಲಿ ನಾನು ಮಿಂದೆ
ಪ್ರೀತಿಯಿಂದ ನಿನ್ನ ಕರೆದೆ
ನನ್ನ ವ್ಯಥೆಗೆ ಜೀವ ತಂದೆ
ಬದುಕ ಬೆಂಬಲದ ಭಾವಗೀತೆಯಾದೆ

ಎದೆಗೆ ತಿವಿದ ಕೋವಿಯಲ್ಲಿ
ಜನಿಗೋ ರಕ್ತದ ಒರತೆಯಲ್ಲಿ.
ನೋವಿನ ಅಲೆಯಂತೆ ತೇಲಿ ತೇಲಿ
ಕವಿತೆಯಾಗಿ ಮಿಡಿದು ಬಂದೆ ನೀನು

ಹಸಿರ ಪೈರ ತಲೆಯ ಮೇಲೆ
ತಂಗಾಳಿ ತೊನೆವ ಹಾಗೆ
ಮಂದಹಾಸ ತಂದೆ ನೀನು
ಓ ಬಾಳ ಭಾವಗೀತೆಯೇ

ನನ್ನ ತೊರೆದು ಹೋಗಬೇಡ
ನೀನಿರದೆ ಮಂಕಾಗಿದೆ ಮೊಗವು ಕೂಡ
ಹಕ್ಕಿ ಉಲಿವ ಗಾನವಾಗಿ
ದಕ್ಕಿಬಿಡು ನನ್ನ ನಾಳೆಗಾಗಿ

0219ಪಿಎಂ27012018

ಅಮುಭಾವಜೀವಿ

Wednesday, October 10, 2018

ಬಂದ ದಿನರಾಯ


*ಹಳೆಯ ಮೆಲುಕು*

*ಬಂದ ದಿನರಾಯ*

ಫಳ ಫಳ ಹೊಳೆಯುತ ನಭದಲಿ
ನಲಿಯುತ ಬರುತಿಹ ದಿನಕರನು
ಮರಗಿಡಗಳನು ಬಡಿದೆಬ್ಬಿಸುತ
ಗಿರಿಪರ್ವತಗಳ ತಲೆ ನೇವರಿಸುತ ಬರುತಿಹನು

ಹಕ್ಕಿಗಳಿಂಚರ ಮಂಗಳಗಾನಕೆ
ನದಿಗಳ ಜುಳುಜುಳು ಮಂತ್ರದ ಘೋಷಕೆ
ತೆರೆಗಳ ಅಬ್ಬರದ ಸ್ವಾಗತಕೆ
ಹೊನ್ನತೇರನೇರಿ ಬರುತಿಹನು

ಮಲ್ಲಿಗೆ ಸಂಪಿಗೆ ಸುಮಗಳ ಕರೆಗೆ
ತಾವರೆ ಅರಳುವ ಸುಂದರ ಸಮಯಕೆ
ಸ್ವಾಗತ ಕೋರುತಿಹ ಜಾಜಿ ಸೇವಂತಿಗೆ
ನಗುವ ಬೀರಿ ವಂದನೆ ತೋರಿ ಬರುತಿಹನು

ಕೋಗಿಲೆ ಗಾನಕೆ ಮೈಮರೆತು
ನವಿಲಿನ ನಾಟ್ಯಕೆ ಕಣ್ಮನ ಸೋತು
ಅರಗಿಣಿಯ ಮುದ್ದಿನ ಮಾತನು ಕೇಳುತ
ಬಾನವಿಸ್ತಾರದಿ ಹೊಳೆಯುತ ಬರುತಿಹನು

ಮಲಗಿದ್ದ ಭುವಿಯ ಎಬ್ಬಿಸುತ್ತ
ಹೊನ್ನ ಬೆಳಕಲಿ ಭುವಿಯ ಬೆಳಗುತ
ಕಾಯಕ ನಿಷ್ಟೆಯನು ಜಗಕೆ ತೋರುತ
ಸೇರಿಹನು ಭುವಿಯ ಒಡಲನು ನಲಿಯುತ

0650ಎಎಂ22071998

ಅಮು ಭಾವಜೀವಿ