Monday, October 15, 2018

ಸಂಸಾರದ ಮಹತ್ವ

ಭಾರತೀಯ ಸಂಸ್ಕೃತಿಯಲ್ಲಿ ಸಂಸಾರದ ಅರ್ಥ ಮತ್ತು ಜವಾಬ್ದಾರಿ ತುಂಬಾ ವಿಶಿಷ್ಟವಾಗಿದೆ. ಸಂಸಾರ ಎಂದರೆ ಕೇವಲ ಗಂಡು ಹೆಣ್ಣುಗಳ ಮಿಲನಕ್ಕಾಗಿ ಹಾಕಿಕೊಟ್ಟ ಚೌಕಟ್ಟಲ್ಲ. ಅದು ಅದರಾಚೆಗೂ ಮಕ್ಕಳ ಲಾಲನೆ ಪಾಲನೆ ಮಾಡುವುದು, ಹಿರಿಯರೊಡನೆ ಕಿರಿಯರೂ ಕೂಡ ಬದುಕುವುದು, ತನ್ನದೆಂಬ ಜವಾಬ್ದಾರಿ ಹೊತ್ತು ನಡೆಯುವುದನ್ನು ಕಲಿಸುತ್ತದೆ. ಅವಿಭಕ್ತ ಕುಟುಂಬಗಳ ಕಾಲದಲ್ಲಿ ಮನೆಯ ಯಜಮಾನ/ತಿಯೇ ಎಲ್ಲಾ ತೀರ್ಮಾನ ಹಾಗೂ ಜವಾಬ್ದಾರಿಗಳನ್ನು ಹೋಗುತ್ತಿದ್ದರು. ಆಗ ಯಾರೊಬ್ಬರೂ ದಾರಿ ತಪ್ಪಿದೆ ತನ್ನ ಬೇಕು ಬೇಡಗಳನ್ನು ಸಂಸಾರದೊಳಗೆ ಈಡೇರಿಸಿಕೊಳ್ಳಬೇಕಿತ್ತು. ಅಂದು ಕುಟುಂಬ ಒಂದು ಪ್ರತಿಷ್ಟೆಯಾಗಿತ್ತು. ಅದರ ಘನತೆಗೆ ಎಂದೂ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿತ್ತು. ಅಲ್ಲಿ ಏನೇ ನಡೆದರೂ ಮೊದಲು ಸಂಸಾರದೊಳಗೆ ತೀರ್ಮಾನ ಆಗುತ್ತಿತ್ತು. ಸಂಸಾರದ ಗುಟ್ಟು ಎಂದೂ ಬೀದಿಗೆ ಬಂದು ಬೀಳುತ್ತಿರಲಿಲ್ಲ.

      ಸಂಸಾರವೆಂಬುದು ಅದರ ಪ್ರತಿ ಸದಸ್ಯನಿಗೂ ಸಮಾನತೆ, ಹೊಣೆಗಾರಿಕೆ, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಸಹಕಾರ ಸಹಬಾಳ್ವೆಯ ಮಹತ್ವವನ್ನು ಒಳಗೊಂಡಿತ್ತು. ಅಲ್ಲಿ  ಗಂಡು ದುಡಿಯುವ, ಸಂಸಾರಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವ ಜವಾಬ್ದಾರಿ ಹೊತ್ತಿದ್ದರೆ ಹೆಣ್ಣು ಮನೆಯೊಳಗಿದ್ದು ಅವನು ದುಡಿದು ತಂದುದನ್ನು ಸಂಸಾರದ ಪ್ರತಿಯೊಬ್ಬರಿಗೂ ಹಂಚುವ,ಅವಶ್ಯಕತೆಗಳಿಗೆ ಮೊದಲಾದ್ಯತೆಯಾಗಿ ವಿನಿಯೋಗಿಸುವ ಜಾಣ್ಮೆಯನ್ನು ತೋರುತ್ತಿದ್ದಳು. ಸಂಸಾರದಲ್ಲಿ ಬಾಂಧವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಸಂಬಂಧಗಳ ಬಂಧನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಆಸೆ ಆಕಾಂಕ್ಷೆಗಳನ್ನು ಕಟ್ಟಿ ಹಾಕಲಾಗುತ್ತಿತ್ತು. ಒಂದೊಮ್ಮೆ ಅದನ್ನು ದಿಕ್ಕರಿಸಿ ಹೋದವನಿಗೆ ಕುಟುಂಬವೇ ಶಿಕ್ಷೆ ಕೊಡುತ್ತಿತ್ತು. ಹಾದಿ ತಪ್ಪಿದವರನ್ನು ಸರಿದಾರಿಗೆ ತರುವ ಹೊಣೆಯನ್ನು ಕುಟುಂಬದ ಹಿರಿಯರು ಹೋಗುತ್ತಿದ್ದರು. ಏನೇ ಕಷ್ಟ ನಷ್ಟ ಬಂದರೂ ಇಡೀ ಕುಟುಂಬ ಎದುರಿಸಿ ನಿಲ್ಲುತ್ತಿತ್ತು. ವೈಯಕ್ತಿಕ ಭಿನ್ನತೆಗಳಿಗಿಂತಲೂ ಸಾಮೂಹಿಕ ಜೀವನದಲ್ಲಿ ನಂಬಿಕೆ ಇಟ್ಟು ಸಂಸಾರ ನಡೆಯುತ್ತಿತ್ತು.

      ಆದರೆ ಇಂದು ಸಂಸಾರ ತನ್ನ ಅರ್ಥ ಮತ್ತು ವ್ಯಾಪ್ತಿಯನ್ನು ಸಂಕುಚಿತಗೊಳಿಸಿಕೊಂಡಿದೆ. ಇಲ್ಲಿ ಗಂಡ ಹೆಂಡತಿ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಹಿರಿಯ ತಲೆಮಾರು ಮೂಲೆಗುಂಪಾಗಿದೆ. ಅದರ ಬದಲು ಸಂಸಾರ ನಿರ್ವಹಣೆಗೆ ಗಂಡ ಹೆಂಡತಿ ಇಬ್ಬರೂ ದುಡಿಯುವ ಅನಿವಾರ್ಯತೆ ಅವರಿಬ್ಬರ ಸಾಮಾಜಿಕ ಆರ್ಥಿಕ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಅನೇಕ ಸಂಘರ್ಷಗಳನ್ನು ತಂದೊಡ್ಡುತ್ತಿದೆ. ಇಲ್ಲಿ ತಿದ್ದಿ ಬುದ್ಧಿ ಹೇಳಲು ನ್ಯಾಯಲಯಗಳೇ ಬರಬೇಕು. ಸಂಸಾರದ ಸೂಕ್ಷ್ಮಗಳು ಆ ಚೌಕಟ್ಟನ್ನು ಮೀರಿ ಬೀದಿಗೆ ಬಂದು ನಿಲ್ಲುತ್ತವೆ. ಇಲ್ಲಿ ಇಬ್ಬರೂ ದುಡಿಯುವುದರಿಂದ ಆರ್ಥಿಕ ಸಮಾನತೆಗಾಗಿ ಸಂಸಾರದ ಸ್ವಾಸ್ಥ್ಯವನ್ನು ಬಲ ಕೊಡಲಾಗುತ್ತದೆ. ದುಡಿಯುವ ರಂಗಗಳಲ್ಲಿ ಸಂಸಾರದ ಇಬ್ಬರು ವ್ಯಕ್ತಿಗಳಿಗಿಂತ ನಾನಾ ರೀತಿಯ ಜನರೊಂದಿಗೆ ಬೆರೆತು, ಪರಸ್ಪರ ನಂಬಿಕೆ ಗೌರವ ಪ್ರತಿಷ್ಠೆಗಳಿಗಾಗಿ ಎಷ್ಟೋ ಸಂಸಾರಗಳು ಹಾಳಾಗುತ್ತಿವೆ . ಗಂಡ ಹೆಂಡತಿ ಸಂಸಾರದಾಚೆಗಿನ ಸಂಬಂಧಗಳಿಗಾಗಿ ನಿತ್ಯ ಜಗಳವಾಡುವ ಪರಸ್ಪರ ನಿಂದಿಸಿಕೊಳ್ಳುವ ಮೂಲಕ ಮಾನಸಿಕ ಸ್ಥಿಮಿತ ಕಳೆದುಕೊಂಡು ಅನಾಹುತಗಳಿಗೆಡೆ ಮಾಡಿಕೊಡುತ್ತದೆ. ಮತ್ತೆ ಮುಂದೆ ಅದು ಪೋಲೀಸು, ನ್ಯಾಯಾಲಯಗಳ ಮೆಟ್ಟಿಲೇರಿ ಸಂಬಂಧಗಳನ್ನು ಕಾನೂನಿನ ಮೂಲಕ ಕಡಿದುಕೊಳ್ಳುತ್ತಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ಮಕ್ಕಳು ತಂದೆ ಇದ್ದೂ ಇಲ್ಲದಂತೆ, ತಾಯಿ ಇದ್ದೂ ಇಲ್ಲದಂತೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

       ಸಂಸಾರ ತನ್ನ ಬಿಗಿ ಹಿತವನ್ನು ಸಡಿಲಿಸಿದುದರ ಪರಿಣಾಮವಾಗಿ ಆಂತರಿಕ ಸಂಘರ್ಷಗಳು ವಿಕೋಪಕ್ಕೆ ಹೋಗಿ ನಿಲ್ಲುತ್ತವೆ. ಇಲ್ಲಿ ಬುದ್ಧಿ ಮಾತುಗಳಿಗೆ ಜಾಗವಿಲ್ಲ. ಪರಸ್ಪರರಲ್ಲಿ ನಂಬಿಕೆ ಇಲ್ಲ. ಪ್ರೀತಿ ವಿಶ್ವಾಸ ಎಂದೊ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಗದೆ ಕೈಚೆಲ್ಲಿ ಕೂತಿವೆ. ಸಂಸಾರದಾಚೆಗಿನ ಸಂಬಂಧಗಳು ಅನೈತಿಕ ಕಳಂಕವನ್ನು ಹೊತ್ತು ಅದೇ ಸತ್ಯ ಎಂದು ಪ್ರತಿಪಾದಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಎತ್ತು ಏರಿಗೆ ಕೋಣ ನೀರಿಗೆ ಎಳೆದಾಡಿದಾಗ ಸಂಸಾರನೌಕೆ ಚೂರು ಚೂರಾಗಿ ತಳ ಸೇರುತ್ತದೆ. ನೆಮ್ಮದಿ ಹಾಳಾಗುತ್ತದೆ. ಪ್ರೀತಿ ಗೌರವದ ಸ್ಥಾನವನ್ನು ದ್ವೇಷ ಅಸೂಯೆಗಳು ಆಕ್ರಮಿಸಿಕೊಂಡು ಕ್ರೌರ್ಯ ದಾಳಿ ಮಾಡಿ ಸಂಸಾರವನ್ನು ಸರ್ವನಾಶ ಮಾಡುತ್ತದೆ.

         ಇಂದು ಸಂಸಾರ ಎಂಬುದು ಇನ್ನಷ್ಟು ವಿಘಟನೆ ಹೊಂದಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಆಗಿ ಬದಲಾಗಿದೆ. ವೈವಾಹಿಕ ಸಂಬಂಧ ಇಲ್ಲದೆಯೂ ಗಂಡು ಹೆಣ್ಣು ಒಟ್ಟಿಗೆ ಇದ್ದು ತಮ್ಮ ತಮ್ಮ ದಾರಿಯನ್ನು ತಾವೆ ಹುಡುಕಿಕೊಂಡು ಪ್ರೀತಿ ವಿಶ್ವಾಸಗಳಿಲ್ಲದೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಎರಡು ಕೋಣೆಗಳಾಗಿ ನಾನೊಂದು ತೀರ ನೀನೊಂದು ತೀರ ಎಂದು ಬಾಳುತ್ತಿದ್ದಾರೆ. ಲೈಂಗಿಕತೆ ಎಂಬುದು ಸಂಸಾರದ ಸುಸ್ಥಿರತೆಗೆ ಅವಶ್ಯಕವಾಗಿರದೆ, ಅದನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಪಡೆಯುವ, ಸ್ವಾಭಿಮಾನದ ಹೆಸರಿನಲ್ಲಿ ಸ್ವೇಚ್ಚಾಚಾರಕ್ಕೆ ಎಡೆಮಾಡಿಕೊಟ್ಟಿದೆ.

    ಒಟ್ಟಿನಲ್ಲಿ ಹೇಳುವುದಾದರೆ ಸಂಸಾರ ನಮ್ಮ ಭಾರತೀಯ ಸಂಸ್ಕೃತಿಯ ಚೌಕಟ್ಟು. ಇಲ್ಲಿ ಎಲ್ಲವೂ ಒಂದೇ ಸೂರಿನಡಿ ಲಭ್ಯವಿರುತ್ತಿತ್ತು. ಅದಕ್ಕೆ ಪ್ರೀತಿ ವಾತ್ಸಲ್ಯ ವಿಶ್ವಾಸ ಗೌರವ ಎಂಬ ನಾಲ್ಕು ಆಧಾರಗಳಿಗೆ ನಂಬಿಕೆಯ ನೆರಳಿರುತ್ತಿತ್ತು. ಇಲ್ಲಿ ಆರ್ಥಿಕತೆಗಿಂತಲೂ ಕೌಟುಂಬಿಕ ಹಿತಾಸಕ್ತಿ ಮುಖ್ಯವಾಗಿರುತ್ತಿತ್ತು. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಮಾತ್ರ ಇರುತ್ತಿತ್ತು. ಆದರಿಂದು ಅದು ಅದರಾಚೆಗೂ ಉಳಿದ ಪರಿಣಾಮ ವಿವಾಹ ವಿಚ್ಛೇದನಗಳ ಸಂಖ್ಯೆ ಅಧಿಕವಾಯ್ತು. ಅನೈತಿಕ ಸಂಬಂಧದ ಕಮಟು ವಾಸನೆ ಬೀದಿರಂಪವಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಸಂಪೂರ್ಣ ನಶಿಸಿ ಹೋಗುತ್ತಿವೆ. ಧನ್ಯವಾದಗಳು ನೆಮ್ಮದಿ ಇಲ್ಲದ ಮನಸ್ಸು ಅಡ್ಡ ಹಾದಿ ಹಿಡಿದು ದುಶ್ಚಟಗಳ ದಾಸ್ಯಕ್ಕೆ ಸಿಲುಕಿ ಕ್ರೌರ್ಯದ ಮುಖವಾಡ ಧರಿಸಿ ಅಪರಾಧಕ್ಕೆ ಅವಕಾಶ ನೀಡಿ ಕಾನೂನಿನ ಸರಳುಗಳ ಹಿಂದೆ ಬಂಧಿಯಾಗುತ್ತಿದೆ. ತಲೆಮಾರುಗಳಿಂದ ಉಳಿದು ಬಂದ ಸಂಸಾರವೆಂಬ ಸಂಸ್ಥೆ ಅಳಿವಿನಂಚಿಗೆ ಬಂದು ನಿಂತಿದೆ. ನಗರೀಕರಣ ವ್ಯವಸ್ಥೆ ಇದನೆಲ್ಲವನ್ನು ತನ್ನ ಏಳಿಗೆಯ ಮಾನದಂಡವಾಗಿಸಿಕೊಂಡಿರುವುದೂ ಕೂಡ ಇದು ಇನ್ನಷ್ಟು ವಿಘಟಿಸಲು ಅನುವುಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಂಸಾರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದು ಇಲ್ಲೂ ಅದು ತನ್ನ ಕಬಂಧಬಾಹುಗಳನ್ನು ಚಾಚಿ ಆಕ್ರಮಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ಎಂಬ ಪದ ಇನ್ನಿಲ್ಲದಂತೆ ಆಗುವ ಕಾಲ ದೂರವಿಲ್ಲ.

0504ಎಎಂ16102018

ಅಮು ಭಾವಜೀವಿ

No comments:

Post a Comment