Wednesday, October 31, 2018

*ಕರ್ನಾಟಕ ರಾಜ್ಯೋತ್ಸವದ ಕವನ ಸ್ಪರ್ಧೆಗಾಗಿ*

*ಅಮರವಾಗಲಿ ಕನ್ನಡ*

ಕಲಿಯೋಣ ಬಾ ಕನ್ನಡ
ಕಲಿಸೋಣ ನಾವು ಕನ್ನಡ

ಜಗದೆಲ್ಲ ಭಾಷೆಗಳಲಿ
ಸುಂದರ ನಮ್ಮ ಈ ಕನ್ನಡ
ಹೇಳಿದುದನೇ ಬರೆಯಬಲ್ಲ
ಏಕೈಕ ಭಾಷೆ ನಮ್ಮ ಈ ಕನ್ನಡ

ಕಸ್ತೂರಿಯ ಕಂಪಿರುವ
ಕೋಗಿಲೆ ಪೆಂಪಿನ ಕನ್ನಡ
ಭಾಷೆಯಿಂದಲೇ ರಾಜ್ಯವಾದ
ಕರ್ನಾಟಕದ ಜೀವನುಡಿ ಕನ್ನಡ

ಪ್ರತ್ಯೇಕತೆಯ ಬಿಳಲಿದ್ದರೂ
ಆಳುವ ಭಾಷೆಯಿದು ಕನ್ನಡ
ಕವಿ ಪುಂಗವರ ಲೇಖನಿಯಲಿ
ಮೆರೆದ ಜ್ಞಾನ ಪೀಠ ಕನ್ನಡ

ವಚನ ಕೀರ್ತನೆ ಜನಪದ
ಅನುಭಾವದ ನುಡಿ ಕನ್ನಡ
ಸಹಸ್ರ ವರ್ಷಗಳ ಇತಿಹಾಸವಿದ್ದು
ಉಳಿವಿಗಾಗಿ ಹೋರಾಡುವ ಕನ್ನಡ

ನೆಲ ಜಲ ಜನರ ಬದುಕು
ಎಲ್ಲರ ಅಭಿಮಾನದ ಕನ್ನಡ
ಇವನಾರವನೆನ್ನದೆ ನಮ್ಮವನೆಂದು
ಕರೆದು ಸಲಹಿ ಬೆಳೆಸುವ ಕನ್ನಡ

ಅನ್ಯರ ಆಕ್ರಮಣಕ್ಕೆ ತುತ್ತಾಗಿಯೂ
ಅಕ್ಕರೆಯ ಸಕ್ಕರೆ ಮಾತಿನ ಕನ್ನಡ
ನಿತ್ಯ ನಿರಂತರ ಗ್ರಾಮ್ಯ ಸೊಗಡಿನ
ಸುಂದರ ಸಂಸ್ಕಾರದ ನುಡಿ ಕನ್ನಡ

ನಾಡಿನ ಸ್ವಾಭಿಮಾನ ಹೆಮ್ಮೆಯ
ಅರಿಶಿನ ಕುಂಕುಮ ಶೋಭಿತೆ ಕನ್ನಡ
ಶ್ರೀಗಂಧದ ಗುಣವನು ತಾ ತೊಟ್ಟು
ಜಗದ ಮನ್ನಣೆ ಪಡೆದ ಕನ್ನಡ

ಕಟ್ಟೋಣ ಕನ್ನಡದ ನಾಡನ್ನ
ಹಚ್ಚೋಣ ಕನ್ನಡ ದೀಪವನ್ನ
ಪ್ರಜ್ವಲಿಸಲಿ ಕನ್ನಡ ಜ್ಯೋತಿ
ಅಜರಾಮರವಾಗಲಿ ಕನ್ನಡ ಖ್ಯಾತಿ

0538ಎಎಂ01112018
*ಅಮು ಭಾವಜೀವಿ*
ಚಿತ್ರದುರ್ಗ

No comments:

Post a Comment