*ಸ್ನೇಹದಲ್ಲಿ ಸಲಿಗೆ ಇರಲಿ ಎಚ್ಚರ*
ಒಂದು ಕೊಚ್ಚೆಯ ಸಹವಾಸ ಇಡೀ ಬದುಕಿನ ದಿಕ್ಕನ್ನೆ ಬದಲಾಯಿಸಿತ್ತು.ಕೊಚ್ಚೆ ಏನೋ ನನ್ನಂಥ ಸುಸಂಸ್ಕೃತನ ಸ್ನೇಹಮಾಡಿ ಪಾವನವಾಯಿತೇನೋ ಆದರೆ ಸುಸಂಸ್ಕೃತ ನಾಗಿದ್ದ ನಾನು ಕೊಚ್ಚೆಯ ಜೊತೆ ಸಲಿಗೆ ತೋರಿದ ತಪ್ಪಿಗೆ ಆ ರಾಡಿ ಎಲ್ಲಾ ಮುಖಕ್ಕೆ ರಾಚಿ ವ್ಯಕ್ತಿತ್ವವೇ ದುರ್ನಾತ ಬೀರುವಂತಾಯಿತು.ಸಗಣಿಯೊಂದಿಗಿನ ಈ ಗುದ್ದಾಟದಲ್ಲಿ ಸಂಭಾವಿತನಿಗೂ ಕೂಡ ಕಳಂಕ ಮೆತ್ತಿಕೊಂಡಾಯ್ತು. ಬಯಸಿದಂತೆ ಬದುಕುತ್ತಿದ್ದವನಿಗೆ ಇಂಥದೊಂದು ಘಟನೆ ಬದುಕಿನಲ್ಲಿ ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಆಯಿತು . ಸ್ವಚ್ಛವಾಗಿದ್ದ ಸ್ಪಟಿಕದ ರೀತಿಯಲ್ಲಿದ್ದ ಜೀವನದಲ್ಲಿ ಈ ಕೊಚ್ಚೆಯ ಸಹವಾಸ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಬದುಕೇ ನಿರರ್ಥಕವೆನಿಸಿಬಿಟ್ಟಿತು.
ಸ್ನೇಹ ಎಂಬುದು ಒಂದು ಪವಿತ್ರವಾದ ಸಂಬಂಧ. ಅದು ಒಂದು ಚೌಕಟ್ಟಿನೊಳಗೆ ಇದ್ದಾಗ ಘನತೆ ಗೌರವಕ್ಕೆ ಯಾವ ಧಕ್ಕೆಯೂ ಇರುವುದಿಲ್ಲ . ಆದರೆ ಅದರೊಳಗೆ ಸಲಿಗೆ ಎಂಬ ಸಣ್ಣ ಕೀಟ ಹೊಕ್ಕಿತೆಂದರೆ ಇಡೀ ಬದುಕನ್ನೇ ಸರ್ವನಾಶ ಮಾಡಿ ಬಿಡುತ್ತದೆ. ಮೊದಮೊದಲು ಅದು ನೀಡುವ ಮಧುರವಾದ ಯಾತನೆ ಬರುಬರುತ್ತಾ ಕೊರಳ ಹಿಡಿದು ಕಂಗಾಲಾಗಿಸಿ ಬಿಡುತ್ತದೆ . ಅದರಲ್ಲೂ ಸಭ್ಯತನದಲ್ಲಿ ಬದುಕಿದವನಿಗೆ ಬೆಳ್ಳಗಿರುವುದೆಲ್ಲವೂ ಹಾಲೆಂದು ನಂಬಿದವನಿಗೆ ಇದೊಂದು ಆಘಾತವನ್ನೇ ಉಂಟು ಮಾಡುತ್ತದೆ .
ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆ ಇವುಗಳಿಗೆ ಬಹುದೊಡ್ಡ ಸ್ಥಾನವಿದೆ . ಇವೆಲ್ಲವೂ ಮನುಷ್ಯನ ಬದುಕಿಗೆ ಒಂದು ರೀತಿಯ ಆಸರೆಯಂತವುಗಳು . ಅವುಗಳನ್ನು ಇತಿಮಿತಿಯಲ್ಲಿ ಬಳಸಿಕೊಂಡರೆ ಬದುಕು ನಿಜಕ್ಕೂ ಪ್ರಕೃತಿಯ ಸೊಬಗಿನಿಂತಿರುತ್ತದೆ . ಅತಿಯಾದ ಸ್ನೇಹ ಪ್ರೀತಿ ನಂಬಿಕೆ ವಿಶ್ವಾಸಗಳು ಈ ನಡೆಯನ್ನು ಕುರುಡಾಗಿಸಿ ಸ್ವಲ್ಪ ಯಾಮಾರಿದರೂ ಬದುಕನ್ನು ಬರಡಾಗಿಸಿ ಬಿಡುತ್ತದೆ .
ಈ ಸಮಾಜದಲ್ಲಿ ನಾವು ಸೃಷ್ಟಿಸಿಕೊಂಡಿರುವ ವ್ಯಕ್ತಿತ್ವದ ಘನತೆ ಗೌರವಗಳೆಲ್ಲವೂ ಇಂಥ ಘಟನೆಗಳಿಂದ ಈ ಜಗತ್ತು ನಮ್ಮನ್ನು ಅನುಮಾನಿಸುವಂತೆ ಮಾಡುತ್ತದೆ . ನಮ್ಮ ಬಗ್ಗೆ ಎಷ್ಟೇ ನಂಬಿಕೆಯಿದ್ದರೂ ಕಣ್ಣೆದುರಿಗೆ ಕಂಡ ವಾಸ್ತವವೆಂಬಂತೆ ಬಿಂಬಿತವಾದ ಈ ಅಸತ್ಯದಿಂದಾಗಿ ನಾವು ನಮ್ಮ ಯೋಗ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ . ನಮ್ಮ ಸುತ್ತಮುತ್ತಲಿನಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮನ್ನು ಬಲಿ ಕೊಡುವ ಅದೆಷ್ಟೋ ಕೊಳಕು ಹುಳಗಳು ಇವೆ ಅದನ್ನು ಅರಿತು ಅವರ ಜತೆಗೆ ಅಂತರ ಕಾಯ್ದುಕೊಂಡಾಗ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ಅದು ಕಪ್ಪುಚುಕ್ಕೆ ಬರದಂತೆ ತಡೆಯುತ್ತದೆ . ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ನಮ್ಮ ಸ್ನೇಹದ ಪರಿಧಿ ಮೀರಿದ ಸಂಬಂಧಗಳು ನಮ್ಮ ಸಭ್ಯತನದಲ್ಲಿ ಅಸಭ್ಯತೆಯನ್ನಷ್ಟೇ ಜಗದೆದುರು ತೆರೆದಿಟ್ಟು ನಮ್ಮ ತನವನ್ನು ನಿಷ್ಕ್ರಿಯಗೊಳಿಸಿ ಬಿಡುತ್ತದೆ . ಸಭ್ಯರು ಅದೆಷ್ಟೇ ನಾನು ಅದಲ್ಲ ಎಂದು ಬಾಯಿ ಬಡಿದುಕೊಂಡರೂ ಈ ಜಗತ್ತು ನಂಬುವುದು ಅಂಥವರನ್ನೇ ಹೊರತು ಸಭ್ಯನ್ನರಲ್ಲ .
ಸ್ನೇಹದ ತನ್ನ ಪಾಡಿಗೆ ತಾನು ಅರಳಿ ತನ್ನ ಸೌಂದರ್ಯವನ್ನು ಜಗತ್ತಿಗೆ ತೋರುತ್ತಿರುತ್ತದೆ . ಆದರೆ ಆ ಸೌಂದರ್ಯಕ್ಕೆ ಮರುಳಾಗುವ ದುಂಬಿ ಪತಂಗಗಳಲ್ಲಿ ಅದೆಷ್ಟೋ ಕೆಟ್ಟವುಗಳ ದುರ್ಗಂಧ ಸುಮದ ಸೌಗಂಧದ ಜೊತೆ ಬೆರೆತು ಇಡೀ ವಾತಾವರಣವನ್ನೇ ಕಲುಷಿತಗೊಳಿಸಿದೆ ಬಿಡುತ್ತದೆ . ಅದೇನೋ ಹೀರಿ ಹಾರಿಹೋಗಿ ಬಿಡುತ್ತದೆ ಆದರೆ ಕಲುಷಿತಗೊಂಡ ಸುಮ ಅದನ್ನು ತೊಳೆದುಕೊಳ್ಳಲಾಗದೆ ಸಹಿಸಿಕೊಳ್ಳಲು ಆಗದೆ ನಿತ್ಯ ಸಂಕಷ್ಟಕ್ಕೆ ಸಿಲುಕಿ ನರಳಾಡುತ್ತಿದೆ .ನಂಬಿಕೆ ದ್ರೋಹದ ಪರಿಣಾಮವನ್ನು ಇಡೀ ಬದುಕಿನುದ್ದಕ್ಕೂ ಸಹಿಸಿ ಬಾಳುತ್ತದೆ . ತನಗೆರಚಿ ಹೋದ ಕೊಚ್ಚೆಯ ಕಾರಣದಿಂದಾಗಿ ಸ್ವಚ್ಚಂದದ ಬದುಕು ಭೀಕರತೆಯ ತಾಣವಾಗುತ್ತದೆ .
ಈ ಹೊಸ ತಲೆಮಾರಿನ ಜನರೊಂದಿಗೆ ಸಹವಾಸ ಬೆಳೆಸುವಾಗ ನೂರು ಸಾರಿ ಯೋಚಿಸಿ ಸ್ನೇಹ ಮಾಡಬೇಕು . ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಯಾವುದೂ ನಮ್ಮನ್ನು ಹೇಗೆ ಕಚ್ಚುವುದು ಯಾರಿಗೆ ಗೊತ್ತು ಆದ್ದರಿಂದ ನಮ್ಮ ಹುಷಾರಿನಲ್ಲಿ ನಾವು ಇರಬೇಕು . ಸಲಿಗೆ ಎಂಬುದು ಮೂಗಿನ ತುದಿಯವರೆಗೆ ಮಾತ್ರ ಇರಬೇಕು ಮೂಗನ್ನು ಹಿಡಿಯಲು ಬಿಟ್ಟರೆ ನಮ್ಮನ್ನೇ ಸರ್ವ ನಾಶ ಮಾಡಿಬಿಡುತ್ತದೆ . ಎಷ್ಟೇ ಆತ್ಮೀಯರಾಗಿದ್ದರೂ ತುಸು ಅಂತರವನ್ನು ಕಾಪಾಡಿಕೊಳ್ಳುವುದು ಕ್ಷೇಮ .
೦೩೪೪ಎಎಂ೩೦೦೧೨೦೨೨
ಅಮುಭಾವಜೀವಿ ಮುಸ್ಟೂರು