ನನ್ನ ನಾಳೆಯ ಭರವಸೆಯ ನೀನು
ನನ್ನ ಇಂದಿನ ಸ್ಫೂರ್ತಿ ನೀನು
ನನ್ನ ನಿನ್ನೆಯ ಅನುಭವ ನೀನು
ನನ್ನೊಳಗಿನ ಉಸಿರಾಗಿ ಬೆರೆತು
ನನ್ನ ಬೇಕು ಬೇಡಗಳನ್ನೆಲ್ಲ ಅರಿತು
ಬದುಕಿಗೊಂದು ಬೆಲೆ ತಂದೆ ಎಲ್ಲ ಮರೆತು
ಸೋತ ಹಾದಿಯಲ್ಲಿ ಚೇತನವಾಗಿ
ಗೆಲ್ಲುವ ಹಂಬಲಕ್ಕೆ ಬೆಂಬಲವಾಗಿ
ನನ್ನೊಡನೆ ಹೆಜ್ಜೆಯಿಟ್ಟೆ ಅರ್ಧಾಂಗಿಯಾಗಿ
೦೨೩೭ಎಎಂ೦೨೦೧೨೦೨೨
*ಅಮುಭಾವಜೀವಿ ಸುಧಾ*
ಸೋಲುಗಳ ಸರಮಾಲೆ
ಕಂಗೆಡಿಸಿದೆ ಬದುಕನು
ಅಸಹಾಯಕತೆಯ ಸಂಕೋಲೆ
ಆ ಸೋಲಿಗೆ ಬರೆದಿದೆ ಮುನ್ನುಡಿಯನ್ನು
ಪ್ರಾಮಾಣಿಕತೆಯ ಪಂದ್ಯದಲ್ಲಿ
ಗೆಲುವು ಸುಲಭವಿಲ್ಲ
ಏಟಿನ ಮೇಲೆ ಏಟು ಬೀಳಲು
ಗುರಿ ಮುಟ್ಟುವ ಭರವಸೆಯೇ ಉಳಿದಿಲ್ಲ
ನಂಬಿಕೆಯ ನೌಕೆಯೊಳಗೆ ತೂತುಬಿದ್ದು
ಹೂತು ಹೋಗುತ್ತಿದೆ
ವಿಶ್ವಾಸದ ಹಗ್ಗವೇ ನೇಣಿನ ಕುಣಿಕೆಯಾಗಿ
ಬದುಕನ್ನು ಕೊಲ್ಲುತ್ತಿದೆ
ದಾರಿ ತೋರುವ ಕೈಗಳೆಲ್ಲವೂ ಈಗ
ಹಾದಿ ತಪ್ಪಿಸಿ ಆಟ ನೋಡುತ್ತಿವೆ
ಪ್ರೀತಿಯ ನೆರಳು ನೀಡುವ ರೆಂಬೆಗಳು
ಮುರಿದು ನೋವ ನೀಡುತ್ತಿವೆ
ಎಲ್ಲೋ ಒಂದು ಸಣ್ಣ ಆಸೆ ಹುಲ್ಲು ಕಡ್ಡಿಯ
ಆಸರೆ ಸಿಗಬಹುದೆಂದು ಕಾಯುತ್ತಿದೆ
ಪರಾಜಯದ ಕೊಂಡಿ ಕಳಚಿ
ವಿಜಯದ ನಿರೀಕ್ಷೆಯಲ್ಲಿದೆ
೦೨೪೪ಪಿಎಂ೦೨೦೧೨೦೨೨
*ಅಮುಭಾವಜೀವಿ*
ಎತ್ತ ಸಾಗಲಿ ಹೇಳು
ಬದುಕಲ್ಲಿ ಬರೀ ಏಳುಬೀಳು
ಎಷ್ಟು ಸಹಿಸಿದರೂ ಈ ಬಾಳು
ಮುಗಿಯುತ್ತಿಲ್ಲ ಬರೀ ಗೋಳು
ಮುಟ್ಟಿದುದೆಲ್ಲ ಬಂಗಾರವಾಗಲಿ ಎಂಬಾಸೆ
ಎಲ್ಲ ಬರಿಗೈಯಾಯ್ತು ಅದಕೀ ನಿರಾಸೆ
ಸಾಧನೆಯ ಹಾದಿಯಲ್ಲಿ
ಸಹಿಸದವರ ಅಡ್ಡಗಾಲು
ನೋವುಗಳ ಸರಮಾಲೆಯಲ್ಲಿ
ಸೋಲುಗಳದ್ದೇ ಸಿಂಹಪಾಲು
ಬತ್ತಿಯೇ ಇಲ್ಲ ಬಾಳಲಿ ಭರವಸೆ
ಕಾದಿದೆ ಯಾವಾಗ ಬರುವುದೋ ಆ ಉಷೆ
ಪ್ರಾಮಾಣಿಕನೆಂದು ಹೇಳಿಕೊಳ್ಳುವುದು
ಕೂಡ ಇಲ್ಲಿ ಅಪರಾಧ
ಪ್ರತಿ ಹೆಜ್ಜೆಗೂ ಎದುರುಗೊಳ್ಳುವುದು
ಎಲ್ಲರ ಇಲ್ಲಿ ವಿರೋಧ
ಈ ಜಗದಿ ಇಲ್ಲ ಒಂದಿನಿತೂ ಪ್ರಶಂಸೆ
ಉಳಿದಿರುವುದೊಂದೇ ಬದುಕಿನ ಖುಲಾಸೆ
೧೦೩೫ಪಿಎಂ೦೨೦೧೨೦೨೧
*ಅಮುಭಾವಜೀವಿ*
ಮೂಡಣದ ಅಂದದ ಹಕ್ಕಿ
ಕಾಲದ ರೆಕ್ಕೆಯ ಬಿಚ್ಚಿ
ಹಾರುತ ಬರುತಲಿದೆ
ಬೆಳಕಿನ ಕಿರಣವು ಸೂಸಿ
ಜಗವನೆಲ್ಲ ಪ್ರಕಾಶಿಸಿ
ಮೇಲೇರುತ ಬರುತಲಿದೆ
ಖಗ ಮೃಗಗಳ ಎಚ್ಚರಿಸಿ
ಗಿಡಮರಗಳ ನೇವರಿಸಿ
ಮೌನ ಭಾಷೆಯ ಸಂದೇಶ ಹೊತ್ತು ತರುತ್ತಿದೆ
ಮಂಜಿನ ಹನಿಗಳಲಿ ಹೊಳೆದು
ಸುಮಗಳ ಚೆಲುವಲ್ಲಿ ನಲಿದು
ಸೌಂದರ್ಯಕೆ ಹೊಸ ಮೆರಗು ತಂದಿದೆ
ಬೆಳಗಿನ ಚುಮುಚುಮು ಚಳಿಗೆ
ಬಿಸಿಯನು ತಾಕಿಸೋ ಸುಂದರ ಘಳಿಗೆ
ಮನಮೋಹಕ ಮುಂಜಾನೆ ಈ ದೀವಿಗೆ
ನವನವೋನ್ಮೇಷಶಾಲಿನಿ
ಪ್ರಕೃತಿ ಇದು ಅಮೃತವರ್ಷಿಣಿ
ಹಕ್ಕಿ ಕೊರಳ ಮಧುರನಾದ ವಾಹಿನಿ
ಬೆಳಕಿದು ಬದುಕಿನ ಅವಕಾಶ
ಸಾರಿದೆ ನವಚೇತನ ಸಂದೇಶ
ಭಾಸ್ಕರನಾಗಮನ ನಿತ್ಯ ವಿಶೇಷ
ಕವಿಮನ ಹಾಡಿದೆ ಕವಿತೆ
ಮರೆತು ಎಲ್ಲ ಚಿಂತೆ
ತೊಡುತ ಕಾಯಕ ದೀಕ್ಷೆ
೦೭೫೭ಎಎಂ೦೩೦೧೨೦೨೨
*ಅಮುಭಾವಜೀವಿ*
#ಅಮುಭಾವದೂಟ ೨೧೨
*ರುಬಾಯಿ*
ಬದುಕನ್ನು ಸದಾ ಪ್ರೀತಿಸು
ಆಗಲೇ ಕಾಣುವೆ ಸೊಗಸು
ನಿರಾಸೆ ಬೇಡವೇ ಬೇಡ
ಸಮಚಿತ್ತದಿ ನೀ ಪರೀಕ್ಷೆ ಎದುರಿಸು
೦೨೨ಪಿಎಂ೦೩೦೧೨೦೨೨
*ಅಮುಭಾವಜೀವಿ ಮುಸ್ಟೂರು*
ಈ ಕತ್ತಲು ಪ್ರಪಂಚ ಕಂಡಷ್ಟೂ ಕೌತುಕ
ಬೆಳದಿಂಗಳ ತಂಗಾಳಿ ರಾತ್ರಿ ಮನಮೋಹಕ
ತಾರೆಗಳ ಹೊಳಪು ಈ ಇರುಳ ತಂಪು
ಮೈಮನಗಳಿಗೆ ಬಲು ಹಿತವಪ್ಪು
ನೀರವ ಮೌನಕ್ಕೆ ಶರಣಾದ ಪ್ರಕೃತಿಗೆ
ದಣಿವು ನೀಗಿಸಿಕೊಳ್ಳಲಿಷ್ಟು ವಿಶ್ರಾಂತಿ
ನಿದ್ರೆಗೆ ಜಾರುವ ಮುನ್ನ ರಸಿಕ ಮನಸ್ಸುಗಳಿಗೆ
ಪ್ರಶಸ್ತ ತಾಣ ಈ ಇರುಳ ಗಾನ
ಆಗಸಕ್ಕೂ ಮಿನುಗುವ ನಕ್ಷತ್ರಗಳ ಸಿಕ್ಕಿಸಿಕೊಂಡು
ತೇಲುತ ಬೀಗುವ ಮಹಾ ಸಂಭ್ರಮ
ಕರಿ ಛಾಯೆಯ ಒಡಲಲ್ಲಿ ತುಂಬಿಕೊಂಡಿದೆ
ಎಷ್ಟೊಂದು ಅದ್ಭುತಗಳ ಸಮಾಗಮ
೧೦೩೩ಪಿಎಂ೦೩೦೧೨೦೨೨
*ಅಮುಭಾವಜೀವಿ ಮುಸ್ಟೂರು*
#ಅಮುಭಾವದೂಟ ೨೧೪
ಸ್ವರದವ್ವ*
*ಅ* ಮ್ಮನ ಮಡಿಲಲಿ ಕೂತು
*ಆ* ನಂದದಿ ಕೈತುತ್ತು ತಿನ್ನುತ
*ಇ* ರುಳ ಬಾಂದಣದಿ ಮಿನುಗುವ
*ಈ* ತಾರೆಗಳ ಜೊತೆಗೂಡಿ
*ಉ* ತ್ಸಾಹದಿಂದ ನಲಿಯುತ
*ಊ* ಟ ಸವಿಯುವ ಆ
*ಋ* ಣಭಾರ ಹೊತ್ತ ತಾಯ
*ಎ* ದೆಯ ಹಾಲು ಕುಡಿದ ಕಂದನ
*ಏ* ಳಿಗೆಗಾಗಿ ದುಡಿವ ಜೀವ
*ಐ* ಕ್ಯತೆಯ ಸಂಸ್ಕಾರ ಕಲಿಸಿ
*ಒ* ಳ್ಳೆಯ ಹಾದಿಲಿ ನಡೆಸಿ
*ಓ* ದು ಬರಹದುಡುಗೊರೆ ನೀಡಿ
*ಔ* ನ್ನತ್ಯದ ಕನಸು ಬಿತ್ತಿ ಹೋದ
*ಅಂ* ತರಂಗದ ಸ್ಪೂರ್ತಿ ತಾಯಿ
*ಅ:* ಹಂಕಾರವಿಲ್ಲದಂತೆ ಬೆಳೆಸಿದ ದೈವ
೦೬೧೮ಪಿಎಂ೦೪೦೧೨೦೨೨
*ಅಮುಭಾವಜೀವಿ ಮುಸ್ಟೂರು*
No comments:
Post a Comment