ಮರುಹುಟ್ಟಿಗಾಗಿ
ಪ್ರತಿಕ್ಷಣವೂ ಕಾದು
ಬೇಯುತಿದೆ ಬದುಕು
ಮತ್ತೆ ಮತ್ತೆ ಎಡವಿ ಬಿದ್ದು
ಎದ್ದು ನಿಲ್ಲುವ ಆತ್ಮವಿಶ್ವಾಸಕ್ಕೆ
ಎದುರಾಯ್ತು ಚುಚ್ಚುಮಾತುಗಳ ತೊಡಕು
ಜೀವನದ ಹೋರಾಟದಲ್ಲಿ
ಹಂಬಲಿಸಿದೆ ಬೆಂಬಲಿಸುವವರ
ಆದರೆ ಯಾರೂ ಕೈ ನೀಡರಿಲ್ಲಿ
ಜೊತೆ ನಡೆಯುವ ನಂಬಿಕಸ್ಥರೇ
ತೊಡರುಗಾಲುನಿಕ್ಕಿ ಬೀಳಿಸಿ
ತುಳಿದು ಮೇಲೇರುವರು ನಮ್ಮನಿಲ್ಲಿ
ಹುಲ್ಲುಕಡ್ಡಿಯ ಆಸರೆಗೂ
ನೂರು ಕಟ್ಟು ಕಥೆಗಳುಟ್ಟಿಕೊಂಡು
ಕಷ್ಟಗಳ ಹೊತ್ತುತರುವವು
ಹಲ್ಲುಕಚ್ಚಿ ಗೆಲ್ಲ ಹೊರಟರೆ
ಅಲ್ಲೂ ತಮ್ಮ ಪ್ರಭಾವ ಬೀರಿ
ಸೋಲುಣಿಸಿ ಮೆರೆಯುವರು
ಹೇಗಿದ್ದರೂ ಕಷ್ಟ ಜೀವನದಲ್ಲಿ
ಮೇಲೇರಲು ಬೀಳಿಸುವರು
ಕೆಳಗಿಳಿಯಲು ತುಳಿಯುವರು
ಇಷ್ಟೊಂದು ಹೋರಾಟದಲ್ಲಿ
ಕೆಚ್ಚೆದೆಯ ತೋರಿದರೂ
ಕೊಚ್ಚೆ ಎಂದು ಮೆಚ್ಚದೇ ಹೋಗುವರು
೧೦೩೯ಪಿಎಂ೨೧೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
#ಅಮುಭಾವದೂಟ ೧೯೩
ಜಗದ ಜೀವಜಾತಕೆಲ್ಲ
ಅನ್ನ ನೀಡುವ ಅನ್ನದಾತ
ನೇಗಿಲ ಹಿಡಿದು ಉಳುವ
ಅವನೇ ಪರಿಶ್ರಮದ ರೈತ
ಬಿಸಿಲು ಮಳೆ ಚಳಿಗೆ ಅಂಜದೆ
ಹಗಲು ಇರುಳು ಎಂದು ನೋಡದೆ
ಬೆವರು ಸುರಿಸಿ ದುಡಿಯುವನೊಬ್ಬ ಜೀವ
ಬೆಳೆಯ ಬೆಳೆದು ನೀಗಿಸುವನು ಹಸಿವ
ಬೆಳೆ ಬಂದರೆ ಬೆಲೆ ಇಲ್ಲ
ಬೆಲೆ ಇದ್ದರೆ ಬೆಳೆ ಇಲ್ಲ
ಹವಾಮಾನದ ವೈಪರೀತ್ಯಕ್ಕೆ ಸಿಲುಕಿ
ನಲುಗಿದರೂ ದುಡಿಮೆಯನೆಂದು ಬಿಡದವನು
ದೇಶದ ಬೆನ್ನೆಲುಬು ಬಳಲಿ ಬೆಂಡಾಗದಂತೆ
ಆಳುವವರು ಆಸರೆಯಾಗಬೇಕು ಅನಿವಾರ್ಯ
ಶ್ರಮಕ್ಕೆ ತಕ್ಕ ಫಲವೂ ಸಿಕ್ಕರೆ
ಅವನೆಂದೂ ಬಿಡನು ಉಳುವ ಕಾರ್ಯ
ಅವನ ಬೆವರಿನಿಂದ ಋಣ ನಮ್ಮ ಮೇಲೆ
ನಾವು ನೀಡುವ ಹಣ ಅವನ ಬೆವರಿನ ಬೆಲೆ
ಸಾಲ ಮಾಡಿ ಸಲಹುತಿಹನು ನಮ್ಮನ್ನೆಲ್ಲಾ
ಆತ್ಮಹತ್ಯೆಗೆ ಶರಣಾಗದಂತೆ ತಡೆಯಬೇಕು ನಾವೆಲ್ಲ
ರೈತನೊಲುಮೆ ಉಳುಮೆಯೊಂದೇ
ನಮ್ಮ ಕಾಯುವ ನೆರಳು
ಅನ್ನದಾತನ ದಾರಿದ್ರ್ಯ ನೀಗಲು
ಬೆಂಬಲಿಸೋಣ ಅವನು ಸ್ವಾಭಿಮಾನದಿ ಬದುಕಲು
೧೧೦೮ಎಎಂ೨೩೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*
*ಶ್ರಮಜೀವಿ ಅನ್ನದಾತನಿಗೆ ರೈತ ದಿನದ ಶುಭಾಶಯಗಳು
ಒಂದೊಂದು ಪದದಲ್ಲೂ
ಭಾವನೆಗಳ ತುಂಬಿರುವೆ
ಸಾವದಾನದಿ ಓದಿ ತಿಳಿ
ಅರಿವಾಗುವುದೆನ್ನ ಮನಸು
ಪ್ರತಿ ಪದದ ಅರ್ಥ ಹುಡುಕದೆ
ಸ್ವಾರ್ಥ ತೊರೆದು ನೋಡು
ಅವೆಲ್ಲ ಹೃದಯದ ಮಾತು
ಹೃದಯ ತೆರೆದು ನೋಡು ಅವೆಷ್ಟು ಸೊಗಸು
ಎದೆಗಿರಿದು ನೋವ ನೀಡದಿರು
ಅವೆಲ್ಲಾ ನನ್ನೊಲವ ಕುಸುಮಗಳು
೦೫೫೪ಪಿಎಂ೨೪೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ನೋವಿರುವ ಜಾಗಕ್ಕೇನೇ
ಚುಚ್ಚುವವರು ಜಾಸ್ತಿ
ಅಮಾಯಕರ ಕಂಡರೆ
ತುಳಿಯುವವರು ಜಾಸ್ತಿ
ಆದರ್ಶಗಳ ನಂಬಿದವರಿಗೆ
ಸಂಕಷ್ಟಗಳು ಜಾಸ್ತಿ
ನೆರಳಿಗಂಜುವವರಿಗೇನೇ
ಬೆರಳು ಮಾಡಿ ತೋರುವವರು ಜಾಸ್ತಿ
ದುಷ್ಟ ದುರುಳರನ್ನೇ
ಈ ಜಗವು ನಂಬಿ ಆರಾಧಿಸುವುದು ಜಾಸ್ತಿ
ನೆಟ್ಟಗಿರುವವರನ್ನೇ ಇಲ್ಲಿ
ಬೆಟ್ಟು ಮಾಡುವವರು ಜಾಸ್ತಿ
ಕಪಟಿಗಳ ದಂಡಿಸಲಾಗದಿದ್ದರೂ
ಸತ್ಯವಂತರ ನಿಂದಿಸುವುದೇ ಜಾಸ್ತಿ
ಜೀವವಿರುವತನಕೆ ಒಳ್ಳೆಯವರಿಗೆ ಬೆಲೆಯಿಲ್ಲ
ಜೀವ ಹೋದ ಮೇಲೆ ಕೊಂಡಾಡುವರೆಲ್ಲಾ
೧೧೨೦ಪಿಎಂ೨೪೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ನಿನ್ನ ಅನುರಾಗದ ತಾಳಕೆ
ಮಿಡಿಯಿತೆನ್ನ ಹೃದಯ
ನಿನ್ನೊಳು ನಾ ಬೆರೆತೆ
ಅದೊಂದು ವಿಸ್ಮಯ
ನಿನ್ನ ತೋಳೊಳಗೆ
ಬಂಧಿಯಾಗಿರಲು ಇಲ್ಲ ಭಯ
೦೭೩೦ಎಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ಬಾಳ ಗೀತೆಗೆ ನೀನೆ ಸಾಹಿತ್ಯ
ಒಲವ ಹಾದಿಗೆ ನಿನ್ನ ಸಾಂಗತ್ಯ
ನೀ ಜೊತೆಯಿರೆ ಬದುಕೇ ಸುಖಾಂತ್ಯ
ಸುಖ ಜೀವನಕ್ಕೆ ನಾಂದಿಯಾಡಲಿ ದಾಂಪತ್ಯ
ನೆಮ್ಮದಿ ಬದುಕಿಗೆ ಇರಲಿ ನಿನ್ನ ಸಾರಥ್ಯ
೧೧೦೭ಎಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ಅವಳ ಆ ಮೋಸ
ಬದುಕಿಗೊಂದು ಪಾಠವಾಯ್ತು
ಅತಿಯಾದುದೆಲ್ಲ ವಿಷವಾಗುವುದು
ಎಂಬುದು ದಿಟವಾಯಿತು
ನೊಂದ ಜೀವವೆಂದು ತಂಪೆರೆಯಲು
ಹೋಗಿ ಸಂಕಷ್ಟಕ್ಕೆ ಸಿಲುಕಿಯಾಯ್ತು
No comments:
Post a Comment