Wednesday, December 6, 2023

ಲೇಖನ

#ಅಮುಭಾವದೂಟ 02

#ಜೀವನ #ಹೂವಿನ #ಹಾಸಿಗೆಯಲ್ಲ #ಸಾಧಿಸಿ   #ಸುಖಮಯವಾಗಿಸಿಕೊಳ್ಳಬೇಕು

ಜೀವನ ಎಂಬುದು ಹೂವಿನ ಹಾಸಿಗೆಯಲ್ಲ.ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ ಎಂಬಂತೆ ಅವರವರ ಪಾಲಿಗೆ ಅವರದೇ ಆದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗಿರುತ್ತದೆ. ನಮ್ಮ ಕಷ್ಟ ನಮಗೆ ದೊಡ್ಡದಾಗಿದ್ದರೆ ಇತರರಿಗೆ  ಅದು ಏನೂ ಅಲ್ಲದಿರಬಹುದು. ಇತರರಿಗೆ ಬಂದೊದಗಿರುವ ಸಂಕಷ್ಟ ನಮಗೆ  ಚಿಕ್ಕ ವಿಷಯವಾಗಿರಬಹುದು . ಆದರೆ ಅವರವರ ಪಾಲಿಗೆ ಅದು ಒಂದು ಪಾಠ ಕಲಿಸಿ  ಅನುಭವದ ಮೂಟೆಯನ್ನು ಹೊರಿಸಿಹೋಗಿರುತ್ತದೆ.ಅದಕ್ಕೆ ಹಿರಿಯರು ಹೇಳುವುದು ಜೀವನ ಒಂದು ಪಾಠಶಾಲೆ ಇಲ್ಲಿ ಕಲಿತ  ಅನುಭವ ಎಂದಿಗೂ ನಮ್ಮನ್ನು ಹಾದಿ ತಪ್ಪದಂತೆ ಸರಿದಾರಿಯಲ್ಲಿ ಕರೆದೊಯ್ಯಲು ಸಹಾಯಕವಾಗುವುದೆಂಬುದು ವಾಸ್ತವ ಸತ್ಯವಾಗಿದೆ.

              ಇತರೆ ಪ್ರಾಣಿಗಳು ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು  ತಾವೇ ನಿಭಾಯಿಸುತ್ತವೆ.ಇಲ್ಲಿ ಬಲಾಢ್ಯವಾದದ್ದು ಗೆದ್ದರೆ ಬಲಹೀನವಾದದ್ದು ಸೋತು ಶರಣಾಗಬಹುದು ಅಥವಾ ಸತ್ತುಹೋಗಬಹುದು. ಆದರೆ ಮನುಷ್ಯರ ವಿಚಾರದಲ್ಲಿ ಹಾಗಾದಿರಬಹುದು.ಏಕೆಂದರೆ ಇಲ್ಲಿ ದೈಹಿಕವಾಗಿ ಬಲಾಢ್ಯನಾಗಿದ್ದರೂ ಬೌದ್ಧಿಕವಾಗಿ ಬಲಹೀನನಾಗಿರುವ ಹಾಗೂ ದೈಹಿಕವಾಗಿ ಬಲಹೀನನಾದವನು ಬೌದ್ಧಿಕವಾಗಿ ಬಲಾಢ್ಯನಾಗಿದ್ದು ಪರಿಸ್ಥಿತಿಯನ್ನು ತನ್ನದೇ ಆದ ಚಾಣಾಕ್ಷತೆಯಲ್ಲಿ ನಿಭಾಯಿಸಬಹುದು ಅಥವಾ  ಇತರರ ಸಹಾಯ ಸಹಕಾರದೊಂದಿಗೆ ನಿವಾರಿಸಿಕೊಳ್ಳಲು ಅವಕಾಶವಿದ್ದಾಗ್ಯೂ ಕೆಲವೊಮ್ಮೆ  ಅಸಹಾಯಕನಾಗಿ ಅಪಾಯ ತಂದೊಡ್ಡಿಕೊಳ್ಳವ ಅವಿವೇಕಿಗಳನ್ನೂ ಕಾಣುತ್ತೇವೆ. ಅಂತವರ ಪಾಲಿಗೆ ಕಷ್ಟವೆಂಬುದು ಅನುಭವಿಸಲಾಗದ ಹೊರೆಯಾಗಿರುತ್ತದೆ.ಅದರೊಂದಿಗೆ ಸಮಾಜದಿಂದ   ಉಂಟಾಗಬಹುದಾದ ಪರಿಣಾಮಗಳಿಗೆ ಹೆದರಿ ಬದಕನ್ನು ಕೈಚೆಲ್ಲಿರವರನ್ನು ನಾವು ಕಾಣಬಹುದು. ಆದ್ದರಿಂದ ಕಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೇ ಎಂಬ ಹಿರಿಯರ ಅನುಭವಾಮೃತದ ಬೆಂಬಲದಿಂದ ಎದುರಿಸುವ ಆತ್ಮವಿಶ್ವಾಸ ಮೂಡಿಸಿಕೊಂಡು ಇರುವುದೊಂದೇ ಜೀವನದಲ್ಲಿ ಪ್ರಾಮಾಣಿಕವಾಗಿ ಖುಷಿಯಿಂದ  ಸಂತೃಪ್ತಿಯಿಂದ ಇತರರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ಕಾರಣಕ್ಕೂ  ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಬದಲು ನಮ್ಮ ಜೀವನ ನಮ್ಮದೇ ಪಯಣ  ಎಂದುಕೊಂಡು ಸಾಗಿದರೆ ಗುರಿಮುಟ್ಟುವುದು ಕಷ್ಟವೇನಲ್ಲ. 

1105ಪಿಎಂ07122021
ಅಮುಭಾವಜೀವಿ ಸುಧಾ ಮುಷ್ಟೂರು

No comments:

Post a Comment