Thursday, December 28, 2023

ಕವನ

ಬಂತು ಬಂತು ರಾಜ್ಯೋತ್ಸವ
ಬಡಿದೆಬ್ಬಿಸಲು ಸ್ವಾಭಿಮಾನವ

ಹೆಮ್ಮೆಯ ನಾಡಿನ
ನಲ್ಮೆಯ ನುಡಿಯ
ಎಲ್ಲೆಡೆ ಸಾರುವ
ಅಭಿಮಾನದ ಉತ್ಸವ

ಸಾಹಿತ್ಯದ ಕುಸುರಿಯಲಿ
ಕಲೆಯ ಬಸಿರಿನಿಂದ
ಹುಟ್ಟಿದ ಸಂಸ್ಕೃತಿಗೆ
ಹಬ್ಬದ ಕಳೆ ಬಂದಿದೆ

ಜನಪದದ ಗೂಡಿನಲ್ಲಿ
ವಚನಗಳ ಹಾಡಿನಲ್ಲಿ
ನವ್ಯನವೋದಯ ದಲಿತ
ಬಂಡಾಯ ಸಾಹಿತ್ಯಗಳ ಕುಣಿತ

ಮಲೆನಾಡ ಹಚ್ಚ ಹಸಿರಿನಲಿ
ಬಯಲು ಸೀಮೆಯ ಕರಿ ಮಣ್ಣಲಿ
ಅನ್ಯರ ದಾಳಿಗೂ ಜಗ್ಗದೆ
ಕನ್ನಡ ನುಡಿ ತೇರು ಮುನ್ನುಗ್ಗಿದೆ

ನಗರ ಸಂಸ್ಕೃತಿಯ ಆಕ್ರಮಣಕ್ಕೆ 
ಗ್ರಾಮೀಣ ಸೊಗಡಿನ ಸಂಕ್ರಮಣ
ಎಲ್ಲ ಸಹಿಸಿ ಭರವಸೆ ಮೂಡಿಸಿ
ಶತಶತಮಾನದಿ ಉಳಿದು ಬಂದಿದೆ

ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷ
ಕನ್ನಡದಿ ಬದುಕ ಕಟ್ಟಿಕೊಂಡವನೇ ದಕ್ಷ
ಬನ್ನಿರಿ ಬನ್ನಿರಿ ಎಲ್ಲರೂ ಸೇರಿರಿ
ಕನ್ನಡ ತಾಯಿಗೆ ಜೈ ಎನ್ನಿರಿ

10 56 ಎಎಂ 31 10 2014
*ಅಮುಭಾವಜೀವಿ ಮುಸ್ಟೂರು*

ನನ್ನ ನಾಡು ನನ್ನ ನುಡಿ
ನನ್ನ ಬಾಳ ಮುನ್ನುಡಿ
ಭಾಷೆ ಕೊಟ್ಟ ಭರವಸೆ
ನನಗೆ ತೋರಿತು ಹೊಸ ದಿಸೆ

ಕಬ್ಬಿಗರ ನುಡಿಗಳೆ ದಾರಿದೀಪ
ಕನ್ನಡಮ್ಮನೊಲವೇ ದಿವ್ಯ ರೂಪ
ನದಿ ಕಾನನ ಗುಡಿ ಗೋಪುರ
ಹೆಸರ ಪಡೆದಿವೆ ಶಿಖರದೆತ್ತರ

ಮಣ್ಣ ಕಂಪು ನುಡಿಯ ಇಂಪು
ನಾಡಿನಲ್ಲಡೆ ತುಂಬಿದೆ
ಕಪ್ಪು ಮಣ್ಣು ಬಗೆಬಗೆ ಹಣ್ಣ
ಈ ತಾಯಿ ತನ್ನ ಮಕ್ಕಳಿಗೆಲ್ಲ ನೀಡಿದೆ

11 50 ಪಿಎಂ 31.10.2014


#ಅಮುಭಾವದೂಟ 152

ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು 
ಈ ನಮ್ಮ ಕನ್ನಡನಾಡು 

 ರಾಜ ಮಹಾರಾಜರು ಕಟ್ಟಿದ
ಅಭಿಮಾನದ  ಕರುನಾಡು 
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು 

ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ 
ಕಲೆಸಾಹಿತ್ಯ ಸಮೃದ್ಧಿಯ ಬೀಡು

ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ  ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು

ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
 ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು

ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ 
ಪರಂಪರೆಯ ಶ್ರೀಗಂಧದ ಬೀಡು 

ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ 
ವಿಜ್ಞಾನ ಸುಜ್ಞಾನದ ಸವಿನಾಡು

ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು

0400ಎಎಂ01112021
 *ಅಪ್ಪಾಜಿ ಸುಧಾ ಮುಸ್ಟೂರು*
ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ
 
    

No comments:

Post a Comment