ಬೆಳದಿಂಗಳು ಚೆಲ್ಲಿದ ಈ ಇರುಳು ಬೆಳಗುವಂತೆ ನನ್ನ ಹೊಂಗನಸುಗಳು
ಅದಕ್ಕೆಲ್ಲ ಸ್ಪೂರ್ತಿ ನಿನ್ನೀ ಹೊಳೆವ ಕಂಗಳು
ನೀನಿರದೆ ಬರಿದು ನನ್ನ ಈ ಬಾಳು
ಅಂತರಂಗದ ಭಾವನೆಗಳಿಗೆಲ್ಲ
ಜೀವತುಂಬಿದ ಅಕ್ಷರವಾದವಳು
ನೋವಿಗೆ ಮಿಡಿದು ನಲಿವನ್ನು ತಂದ
ಸಂಗಾತಿ ನೀ ನನ್ನ ಬಾಳಿಗೆ ಬೆಳಕಾದವಳು
ಎದೆ ಚಿಪ್ಪಲಿ ಹದವಾಗಿದ್ದ
ಪ್ರೀತಿಯ ಮುತ್ತಿನ ಹಾರವ ಪೋಣಿಸಿ
ಕೊರಳಲ್ಲಿ ಧರಿಸಿ ಹಗಲಿರುಳು ಕಾಯ್ವಳು
ಆಪ್ತರಕ್ಷಕಿ ಅಭಿಸಾರಿಕೆ ಇವಳು
ಪ್ರಕೃತಿ ಗುಣದ ಬಲು ಸಂಪನ್ನೆ
ಮನದಿಚ್ಛೆ ಅರಿಯುವ ಮನದನ್ನೆ
ಬಾಳಿನ ರಥಕೆ ಸಾರಥಿ ಇವಳು
ಒಲವಿನ ಮೊಗದಲ್ಲಿ ಹೊಳೆವ ಕಂಗಳು
ಷರತ್ತುಗಳಿಲ್ಲದೆ ಒಲಿದು ಬಂದವಳು
ಕಷ್ಟ ಸುಖದಲ್ಲೂ ಹೆಜ್ಜೆಗೆ ಹೆಜ್ಜೆ ಇಟ್ಟವಳು
ತಾಯಿಲ್ಲದಿದ್ದರೂ ನನಗೆ ತಾಯೊಲವ ಕೊಟ್ಟವಳು
ತಬ್ಬಲಿ ಭಾವದಿಂದ ಹೊರತಂದ ದೇವತೆಯಿವಳು
ಸೋಲನ್ನು ಗೆಲುವಾಗಿಸಿದ ಸಾಧಕಿ ನನ್ನವಳು
ಸಾವನ್ನು ಗೆಲ್ಲುವ ಆತ್ಮವಿಶ್ವಾಸ ತುಂಬಿದವಳು
ಬಡತನದಲ್ಲೂ ನಗುವ ಕಲೆ ಕಲಿಸಿದವಳು
ಈ ಬಡವನಲ್ಲ ಸಿರಿವಂತನ ಹುಟ್ಟುಹಾಕಿದಳು
ಜೀವ ಜೀವನವೆಲ್ಲ ಮೀಸಲು ಅವಳಿಗೆ
ಬೊಗಸೆ ತುಂಬ ಒಲವ ನೀಡುವೆ ಕೊನೆವರೆಗೆ
1041ಪಿಎಂ17022022
*ಅಮುಭಾವಜೀವಿ ಮುಸ್ಟೂರು*