Friday, February 11, 2022

ಒಲವ ಕವಿತೆ

ಒಲವಿನ ಪೂಜೆಗೆ ದಿನವೇಕೆ
ಕ್ಷಣ ಒಂದಾದರೂ ಸಾಕು ಪ್ರೀತಿಸೋಕೆ

ಪ್ರೀತಿಯ ಪ್ರತಿಪಾದನೆಯೇ ಬದುಕು
ಪ್ರೀತಿಸುವ ಹೃದಯದ ಇರದು ಕೆಡುಕು 
ಇಡುವ ಹೆಜ್ಜೆಯ ಅಡಿ ಮೆತ್ತೆ ಈ ಪ್ರೀತಿ
ಜಗವ ಸಲಹುವ ಸಮಭಾವ ಅದರ ನೀತಿ

ಹೆಣ್ಣು-ಗಂಡುಗಳ ಎದೆ ಭಾವದ ಕವಿತೆ
ಕತ್ತಲು ಹೊಳೆಯುವುದು ಕಣ್ಣ ಹಣತೆ
ಮೇಲು ಕೀಳುಗಳ ಛಾಯೆ ಇರದ
ಮೇರು ವ್ಯಕ್ತಿತ್ವ ಅದರದು

ಕುರೂಪವನೂ ಅಂದಗಾಣಿಸುವ
ಅಪರೂಪದ ಅನುಬಂಧ ಪ್ರೀತಿ
ಬಡತನದಲ್ಲೂ ಸಿರಿತನ ಕಾಣುವ
ಶ್ರೀಮಂತ ಭಾವಗೀತೆ ಈ ಪ್ರೀತಿ

ದೂರುವವರನ್ನು ಆರಾಧಿಸುವ
ದ್ವೇಷ ದಳ್ಳುರಿಯನ್ನು ಆರಿಸುವ
ಸೋತ ಬದುಕಿಗೆ ಸಂಜೀವಿನಿಯಾಗಿ
ಸಮೃದ್ಧಿಯ ನೆಮ್ಮದಿ ತರುವುದು ಪ್ರೀತಿ

ಪಡೆದುಕೊಳ್ಳುವುದಕ್ಕಿಂತ ಕೊಡುವ ತೃಪ್ತಿ
ನೀಡುವುದು ಈ ಒಲವಿನ ಸಂದೀಪ್ತಿ
ಕಳೆದು ಹೋಗುವುದರಲ್ಲೂ ಗೆಲುವು ತರುವ
ಅಭಿಮಾನದ ಅಶರೀರವೀ ಪ್ರೀತಿ

ಅನುಭವಿಸೋಣ ಸದಾ ಅದನ್ನು
ಅವಮಾನಿಸಿದಂತೆ ಕಾಯೋಣ ಇನ್ನು
ಬದುಕಿನ ಘನತೆಯೇ ಪ್ರೀತಿ
ಅದರ ಅಂತಃಸತ್ವವೇ ಈ ಧರಿತ್ರಿ

0659ಎಎಂ11022022
ಅಮುಭಾವಜೀವಿ ಮುಸ್ಟೂರು

No comments:

Post a Comment