ಕಥೆ
ಬೇಕಿಲ್ಲದೊಲವು
##########
ಬದುಕಿನ ಕಟು ಸತ್ಯಗಳ ಹುಟ್ಟು ಹಾಕಿ ದಡ ಸೇರಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೊರಟ ಭಾವನೆಗಳ ಹೋರಾಟದಲ್ಲಿ ಅತ್ತ ಧರಿ ಇತ್ತ ಪುಲಿ ಎಂಬ ಹೊಯ್ದಾಟದಲ್ಲಿ ಇದ್ದ ನೆಮ್ಮದಿಯನ್ನು ಕಳೆದುಕೊಂಡು ಜೀವಿಸಬೇಕಾದ ಅನಿವಾರ್ಯದಲ್ಲಿ ತನ್ನತನವನ್ನು ಬಿಟ್ಟುಕೊಡಲಾಗದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲಾಗದೆ ಬಾಳು ಸವೆಯುತಿದೆ. ಬದುಕಿನ ಆಸ್ಥಾನದಲ್ಲಿ ರಾಜನಾಗಿ ವಿರಾಜಮಾನವಾಗಿ ಮೆರೆಯಬಹುದಿತ್ತು ಆದರೂ ಅಷ್ಟಾವಕ್ರತನದ ಮೋಹಕ್ಕೆ ಬಲಿಯಾಗಿ ಇದ್ದ ಮೈಯ ವಾಂಛೆಗಳಿಗೆ ರಾಜ್ಯ ಪಟ್ಟವ ತೊರೆದು ವ್ಯಕ್ತಿತ್ವದ ಹರಣದಲ್ಲಿ ಸುಂದರ ಬದುಕನ್ನು ತನ್ನ ಕೈಯಾರ ಹಾಳುಮಾಡಿಕೊಂಡು ನರಕ ಸದೃಶ್ಯ ಸಂಕಷ್ಟಗಳನ್ನು ಎದುರಿಸಿ ಸೋತ ಕಥೆಯಿದು.
ಸುಂದರ ಬದುಕಿನ ರೂವಾರಿ ಕನಸುಕಂಗಳ ಸಂಸಾರಿ ಹೆಂಡತಿ ಮಕ್ಕಳ ಜೊತೆಜೊತೆಗೆ ಸುಖದಿ ಬಾಳುವಾಗ ಅದಾವ ವಕ್ರದೃಷ್ಟಿಯು ಬಿತ್ತೋ ಅಲ್ಲಿಂದಲೇ ಬದುಕಿನ ಅವನತಿ ಶುರುವಾದ ಅನುಭವ. ಬದುಕನ್ನು ದಿಗ್ಧದರ್ಶಿಸುವವನ ಬದುಕೇ ಹಳ್ಳದಲ್ಲಿ ಬಿದ್ದು ಒದ್ದಾಡುವಂತಹ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ.
ಸೌಂದರ್ಯದ ದೃಷ್ಟಿಯಿಂದ ಅವಿನಾಶ್ ಹೇಳಿಕೊಳ್ಳುವಂತಹ ಸ್ಪುರದ್ರೂಪಿ ಯುವಕನೇನಲ್ಲ. ಆದರೆ ಅವನ ಬರಹಗಳಲ್ಲಿ ಪ್ರೀತಿಯ ಭಾವ , ಪ್ರಕೃತಿಯ ಸೌಂದರ್ಯೋಪಾಸನೆ, ಜೀವನಾನುಭವ ಹೇರಳವಾಗಿರುತ್ತಿತ್ತು. ಪದಗಳಿಗೆ ಪದ್ಯದ ರೂಪ ಕೊಟ್ಟು ಕನಸುಗಳಿಗೆ ಕವನಗಳಲ್ಲಿ ಜಾಗವಿತ್ತು ತನ್ನ ಪಾಡಿಗೆ ತಾನು ಭಾವವಿಹಾರಿಯಾಗಿ ಜೀವನಾನಂದದಲ್ಲಿ ಮಿಂದು ಹೋಗಿದ್ದ. ಅಲ್ಲಿ ಇಲ್ಲಿ ನಡೆಯುತ್ತಿದ್ದ ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸುತ್ತಾ ತನ್ನ ವೃತ್ತಿ ಪ್ರವೃತ್ತಿಗಳನ್ನು ಸರಿದೂಗಿಸಿಕೊಂಡು ಸಂಸಾರದೊಳಗೆ ಬಡವನಾದರೆ ಕೈ ತುತ್ತು ತಿನ್ನಿಸುವಷ್ಟು ಪ್ರೀತಿಯ ಪುಟ್ಟ ಗೂಡಿನಲ್ಲಿ ಬಾಳು ಸಾಗುತ್ತಿತ್ತು.
ಬೆಚ್ಚನೆಯ ಗೂಡಿತ್ತು ವೆಚ್ಚಕ್ಕೆ ಬೇಕಾಗುವಷ್ಟು ಹೊನ್ನಿತ್ತು ಇಚ್ಛೆಯನ್ನು ಅರಿಯುವ ಸತಿಸುತೆಯರ ಪ್ರೀತಿ ಇತ್ತು. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಭಾವಾಭಿವ್ಯಕ್ತಿಯ ನಂಟಿತ್ತು. ಇಂಥ ಸುಖಸಂಸಾರದ ನೇತೃತ್ವ ವಹಿಸಿದ ಅವನಿಗೆ ಅಭಿಮಾನಿಗಳ ಬೆಂಬಲಿಗರ ಸಣ್ಣದೊಂದು ಹಿನ್ನೆಲೆಯಿತ್ತು. ಯಾರೊಂದಿಗೂ ಸಂಘರ್ಷಕ್ಕಿಳಿಯದ ಯಾವುದಕ್ಕೂ ವಿವೇಚನೆ ಕಳೆದುಕೊಳ್ಳದ ತನ್ನ ಜೊತೆಗಾರರೊಂದಿಗೆ ಸ್ನೇಹಜೀವಿಯಾಗಿ ಬದುಕಿದ ಭಾವಜೀವಿಯಾಗಿದ್ದ ಅವಿನಾಶ್. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವನ ಬರಹಗಳನ್ನು ಮೆಚ್ಚುವ ಸ್ನೇಹಿತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರಲ್ಲಿ ಅವನ ವಿದ್ಯಾರ್ಥಿಗಳು, ಸಹ ಯಾನಿಗಳು, ಹಿರಿಯರು ಕಿರಿಯರೆನ್ನದೆ ಎಲ್ಲರೊಂದಿಗೂ ಒಳ್ಳೆಯ ಒಡನಾಟ ಹೊಂದಿದ್ದ. ಇಂತಹ ಸ್ವಚ್ಛ ವ್ಯಕ್ತಿತ್ವದ ಅವಿನಾಶನ ಭಾವ ಪಯಣದಲ್ಲಿ ಅವಳ ಸ್ನೇಹದ ಪ್ರವೇಶವಾಯಿತು. ಎಲ್ಲರ ಹಾಗೆ ಅವಳಿಂದಲೇ ಲೈಕು ಕಾಮೆಂಟು ಬರತೊಡಗಿದವು. ಅವು ಕೇವಲ ಅವನ ಬರಹಗಳಿಗೆ ಸೀಮಿತವಾಗಿರಬೇಕಾಗಿತ್ತು. ಆದರೆ ಬರು ಬರುತ್ತಾ ಸ್ನೇಹವೆಂಬುದು ಆತ್ಮೀಯತೆಯಾಗಿ ವೈಯಕ್ತಿಕ ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಅವಳಿಗೂ ಬರಹದ ನಂಟು ಇದ್ದುದರಿಂದ ಆ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿದ್ದವು. ಅವಳು ಅವನ ಬರಹದ ಹುಚ್ಚು ಅಭಿಮಾನಿಯಾಗಿದ್ದಳು. ಸ್ವಚ್ಛ ಸ್ನೇಹದ ಪ್ರತಿಪಾದನೆಯಲ್ಲಿ ಅವನು ಮುಂದೊದಗಬಹುದಾದ ಅಪಾಯವನ್ನು ಮನಗಂಡರು ಅದಕ್ಕೆ ಯಾವುದೇ ಕುಂದು ಬರದಂತೆ ನಡೆದುಕೊಳ್ಳುವ ಆತ್ಮವಿಶ್ವಾಸ ಅವನಲ್ಲಿ ಇತ್ತಾದರೂ ಅವನು ಅವಳಿಂದ ಅದನ್ನು ನಿರೀಕ್ಷಿಸಿರಲಿಲ್ಲ.
0530ಎಎಂ11022022
*ಅಮುಭಾವಜೀವಿ ಮುಸ್ಟೂರು*
No comments:
Post a Comment