Tuesday, February 15, 2022

ಕವಿತೆ

ಕಳೆದುಹೋದಳು ನಲ್ಲೆ
ಬಾಡಿದಂತೆ ಮೊಗ್ಗು ಮಲ್ಲೆ
ಏಕೆಂದು ಅರಿಯುವ ಮೊದಲೇ
ಮರೆಯಾದಳು ತಂದು ವಿರಹ ಜ್ವಾಲೆ

ಮೊದಲೆಲ್ಲ ಹೀಗಿರಲಿಲ್ಲ ಅವಳು
ಅದು ಏಕೆ ಹೀಗಾಗಿ ಹೋದಳು
ಪ್ರೀತಿಯ ಅಗಾಧ ದೇವತೆ
ಎಲ್ಲಿ ಕಳೆದುಹೋದಳು ಅದೇ ಚಿಂತೆ

ಒಲವ ಒಡನಾಡಿಯಾಗಿ ಬಂದು
ಒಡಲ ಕುಡಿಗಳ ತಂದು
ಒಂದು ಬೇಡಿಕೆ ಇಡದಂತೆ ಬಾಳಿದವಳು
ಇಂದೇಕೆ ಹೀಗೆ ಕಾಣೆಯಾದಳು

ನಂಬಿಕೆಯ ಮಹಾಮೇರು
ವಿಶ್ವಾಸದ ಅಂತಃಸತ್ವ ಬೇರು
ಪ್ರೀತಿಯ ಸೊಗಸಾದ ಸೂರು
ಸತಿ ಇವಳು ನನ್ನ ಬಾಳುಸಿರು

ಕಳೆದುಹೋಗದಿರು ಬಾಳ ಗೆಳತಿ
ನೀನಿರದೆ ನನಗಿರದು ಸದ್ಗತಿ
ಎಡವಿದವನ ಮೇಲೆ ಎದುರಿಸುವಸ್ತ್ರ ಬೇಡ
ನೀನಿರದ ಬದುಕು ನನಗೂ ಬೇಡ

ನಿನ್ನ ಮುಂದೆ ನನಗಿಲ್ಲ ಯಾವ ಘನತೆ
ನೀನಿರದೆ ಬೆಳಗದು ನನ್ನ ಬಾಳ ಹಣತೆ
ಈ ಪಾಪಿಯ ಮನ್ನಿಸಿ ತೋರು ಮಮತೆ
ನೀನೇ ನನ್ನ ಒಲವ ಬತ್ತದ ಒರತೆ

0758ಎಎಂ16022022
 *ಅಮುಭಾವಜೀವಿ ಮುಸ್ಟೂರು*

No comments:

Post a Comment