Monday, January 23, 2023

ಕವನ

ಅವಳು ನೇಯ್ದ ಮೋ(ಸ)ಹದ
ಬಲೆಗೆ ಸಿಕ್ಕಿದ ಪತಂಗವಾದೆ
ಸ್ನೇಹದ ಮಧುವಲಿ ಪ್ರೀತಿಯ
ವಿಷ ಬೆರೆಸಿ ನಂಬಿಕೆ ಕೊಂದಳು

ಮನೆ ಮಕ್ಕಳು ಸಂಸಾರವಿದ್ದರೂ
ಮೋಹಿಸಿದಳು ಬೇಡವೆಂದರೂ
ಜಗದೆದುರು ಬಲು ಅಮಾಯಕಿ
ಪ್ರೀತಿಯ ವಿಷಯದಿ ಸಮಯಸಾಧಕಿ

ವಿಶ್ವಾಸದ ಚಿನ್ನದ ಸೂಜಿಯ
ಚುಚ್ಚಿದಳು ನಂಬಿಕೆಯ ಕಂಗಳಿಗೆ
ಬಲು ಘಾತುಕ ಹೆಣ್ಣಿವಳು
ಮನವ ಘಾಸಿಗೊಳಿಸಿ ಹೋದಳು

ಎಚ್ಚರವಿರಬೇಕಿತ್ತಿಂತವಳ
ಸಹವಾಸವ ಒಪ್ಪಿಕೊಳುವಾಗ
ಮುಗ್ಧ ಮನಸಿನ ಶುದ್ಧತೆಗೆ
ಮಸಿ ಮಳಿಯಿತವಳ ದುಷ್ಟಸಂಗ

ಅಪಾಯವಾಗುವ ಮೊದಲೇ
ಹೊರಬಂದದ್ದೇ ಒಳಿತಾಯ್ತು
ಜೀವನದಲ್ಲಿ ಒಂದು ಅನುಭವ
ನಂಬುವ ಮೊದಲು ಯೋಚಿಸಬೇಕಿತ್ತು

೧೨೫೪ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು*


ನಿನ್ನೊಲವ ಪೂಜೆಗಾಗಿ
ಹೂ ಬುಟ್ಟಿಯ ತಂದೆ
ನಿನ್ನೊಂದಿಗೆ ಬಾಳುವಾಸೆಯಿಂದ
ನಗುಮೊಗದಿ ಕಾದು ಕುಳಿತೆ
ನಲ್ಲ ನೀನಿರುವ ನಂಬಿಕೆ
ಏಕಾಂತದಲೂ ಇಲ್ಲ ಅಂಜಿಕೆ
ಪ್ರೀತಿಯ ದೇಗುಲದ ಮುಂದೆ
ನಿನ್ನ ಸೇರಲು ನಾನು ಬಂದೆ
ಬಾರೋ ಬೇಗ ಜೊತೆಗಾರ
ನಿನಗಾಗಿ ಕಾದಿದೆ ಹೂಹಾರ
ಕಾಯುವ ಕಷ್ಟ ಕೊಡದಿರು
ಸೇರುವ ಬಯಕೆಗೆ ಒತ್ತಾಸೆಯಾಗಿರು

೦೧೩೫ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು* 

No comments:

Post a Comment