ನೀ ಬಂದು ಹೋದದ್ದು ನಿಜವೇ?
ನೀ ಹಾಗೆ ಮಾಡಿದ್ದು ತರವೇ?
ಹಗಲೆಲ್ಲಾ ಕಾತರಿಸಿ ಕಣ್ದಣಿದು
ಇರುಳ ನಿದ್ರೆಗೆ ಜಾರಿರಲು
ಅರಿಯದ ಕನಸಲ್ಲಿ ನೀನು
ಹೀಗೆ ಬಂದು ಹಾಗೆ ಹೋದೆ ಏಕೆ?
ಮುಂಜಾವದಲಿ ಮೈಮುರಿದೆದ್ದು
ಕಣ್ಬಿಡುವ ಮುಂಚೆ ಇಬ್ಬನಿಯಾಗ್ಹೊಳೆದು
ಮುಟ್ಟಲು ನೀ ಮರೀಚಿಕೆಯಂತೆ
ಅಲ್ಲೇ ಇದ್ದು ನೀ ಕರಗಿದೆ ಏಕೆ?
ಹೂವಾಗಿ ನೀನರಳಿ ಸೆಳೆದು
ಭೃಂಗದ ಮೈದಡವಿದೆ ಇಂದು
ಮಧು ಹೀರುವಾ ಮುಂಚೆಯೇ
ಉದುರಿ ಮರೆಯಾದೆ ಏಕೆ?
ವಿರಹ ಬೇಗೆಯಲಿ ಬಾಯಾರಿ ನಡೆದು
ನಿನ್ನೊಲವ ಒರತೇಲಿ ಮುಳುಗೆದ್ದು
ಹಿತವೆಂದು ಬಗೆವ ಮುನ್ನವೇ
ಬರಿದಾಗಿ ಹರಿದು ಹೋದೆ ಏಕೆ?
ಹಿಡಿ ಅನ್ನವ ಕಾಲಲ್ಲಿ ಒದ್ದು
ಅಗುಳಗುಳಿಗೆ ಹಲುಬುತಲಿದ್ದು
ಈ ಜೀವಕೆ ನಿನ್ನೊಲವ ಅನ್ನದಾನ
ಮಾಡಲಾಗದೆ ಕುಂತೆ ನೀ ಏಕೆ?
ಬಂದು ಬಿಡು ಒಲವೇ
ನೀನಿಲ್ಲದೊಲಿಯದಾ ಗೆಲುವೇ
ನಿನ್ನೊಂದು ನಗೆ ಸ್ಪೂರ್ತಿ ನನಗೆ
ನಿನ್ನ ಜೊತೆಯೊಂದು ಸಾಕೆನಗೆ.
####ಅಮು ಭಾವಜೀವಿ####
No comments:
Post a Comment