*ಲೇಖನ ಮಾಲೆ ೦೫*
*ಸಾಮಾಜಿಕ #ಜಾಲತಾಣದ #ಸ್ನೇಹಸಂಕೋಲೆ # #ಸುರಕ್ಷಿತವಲ್ಲ*
ಮನುಷ್ಯನ ಬದುಕಿನಲ್ಲಿ ಸ್ನೇಹ ಎನ್ನುವುದೊಂದು ನೆರಳಿನ ಮರವಿದ್ದಂತೆ .ಇಲ್ಲಿ ನಮ್ಮ ನೋವು ನಲಿವುಗಳನ್ನು ಹಂಚಿಕೊಂಡು ಹಗುರಾಗಲು ಸಾಧ್ಯವಿದೆ .ಸ್ನೇಹಿತರಿಲ್ಲದ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ . ಅದರಲ್ಲೂ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಇನ್ಸ್ ಟಾಗ್ರಾಂ ಮುಂತಾದ ಮಾಧ್ಯಮಗಳಲ್ಲಿ ಸ್ನೇಹಿತರ ದಂಡೆ ಸಿಕ್ಕಿ ಬಿಡುವುದು .ಒಬ್ಬರಿಗೊಬ್ಬರು ನೋಡಿಕೊಳ್ಳದೆ ಕೇವಲ ಅವರ ರೆಸ್ಯೂಮ್ ಗಳನ್ನು ನೋಡಿ ಅವರ ಸ್ನೇಹ ಸಂಘವನ್ನ ಒಪ್ಪಿ ಅಪ್ಪಿ ಮೈಮರೆಯುತ್ತೇವೆ .ಅಭಿರುಚಿ ಆಸಕ್ತಿ ಅನುಕೂಲ ಅನಾನುಕೂಲ ಇವೆಲ್ಲವುಗಳ ಆಚೆ ಕೇವಲ ಸ್ನೇಹದ ಕೋರಿಕೆ ಬಂದ ಕೂಡಲೇ ಅವರ ಸ್ನೇಹ ಕೋರಿಕೆಯನ್ನು ಸ್ವೀಕರಿಸಿ ಏನನ್ನೋ ಸಾಧಿಸಿದಂತೆ ಬೀಗುತ್ತೇವೆ ಗರ್ವ ಪಡುತ್ತೇವೆ ಹೆಮ್ಮೆ ಪಡುತ್ತೇವೆ ಆದರೆ ಅವರ ಸ್ನೇಹ ಎಂತಹದ್ದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ ಬಿಡುತ್ತೇವೆ. ಅವರುಗಳ ಪ್ರೊಫೈಲ್ ಗಳನ್ನು ಜಾಲಾಡಿ ದಾಗಲೂ ಅವರು ಎಂಥವರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಕೆಲವು ಸಂದರ್ಭದಲ್ಲಿ . ಕೇವಲ ಆಕರ್ಷಣೆಗೋಸ್ಕರ ಅವರ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿ ನಾವು ಅವರು ಮಾಡುವ ಅನ್ಯಾಯಗಳಿಗೆ ಬಲಿಯಾಗುತ್ತೇವೆ . ಸ್ನೇಹ ಸಿಕ್ಕಾಗೆ ಎಷ್ಟು ಸಂಭ್ರಮಿಸುತ್ತೇವೆಯೋ 1ಕ್ಷಣ ಅವರು ನಮಗೆ ಪ್ರತಿಕ್ರಿಯಿಸದೇ ಹೋದ ನಮ್ಮ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಣ್ಣ ಅನುಮಾನ ಬಂದಾಗ ಜಗತ್ತೇ ಕಳಚಿ ತಲೆ ಮೇಲೆ ಬಿದ್ದಂತೆ ಆಡುತ್ತೇವೆ .ಇದ್ದಬದ್ದ ದಾರಿಗಳನ್ನೆಲ್ಲ ಬಳಸಿ ನಮ್ಮ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳಲು ಪರದಾಡುತ್ತೇವೆ .ಒಮ್ಮೆ ನಾವು ಅವರಿಗೆ ನಮ್ಮ ಬದುಕು ವ್ಯಕ್ತಿತ್ವ ನಮ್ಮ ಆಸೆ ಆಕಾಂಕ್ಷೆಗಳನ್ನು ತಿಳಿಸಿದವೆಂದುಕೊಂಡರೆ ಸಾಕು ನಂತರ ಅವರು ನಮ್ಮನ್ನು ಆಳಲು ಶುರು ಮಾಡುತ್ತಾರೆ.
ಈ ಸಾಮಾಜಿಕ ಜಾಲತಾಣಗಳಲ್ಲಿರುವ ಸ್ನೇಹಿತರು ಯಾರು ನಮ್ಮ ಕಷ್ಟ ಸುಖಗಳಿಗೆ ಆಗುವುದಿಲ್ಲ .ನಮ್ಮ ಪೋಸ್ಟ್ ಗಳಿಗೆ ಕೇವಲ ಲೈಕು ಡಿಸ್ ಲೈಕ್ ಕಾಮೆಂಟ್ ಅಷ್ಟಕ್ಕೆ ಅವರು ಸೀಮಿತರಾಗಿರುತ್ತಾರೆ . ಅದರಾಚೆ ಒಂದು ಸಣ್ಣ ಸಹಾಯವನ್ನು ಯಾಚಿಸಿದರೂ ಅವರು ಅದನ್ನು ಈಡೇರಿಸುವಲ್ಲಿ ಅಶಕ್ತರಾಗುತ್ತಾರೆ.ಕಷ್ಟಕ್ಕಾಗದ ಇಂತಹ ಸಾವಿರ ಸಾವಿರ ಸ್ನೇಹಿತರುಗಳನ್ನಿಟ್ಟುಕೊಂಡು ನಾವು ಸಾಧಿಸುವುದಾದರೂ ಏನು? ಇಲ್ಲಿನ ಸ್ಪಂದನೆಗಳು ಕೇವಲ ಬೂಟಾಟಿಕೆಗಷ್ಟೇ ಸೀಮಿತವಾಗಿರುತ್ತವೆ . ಇಲ್ಲಿ ಕೊಡುವುದಕ್ಕಿಂತ ಪಡೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ .
ಇನ್ನು ಈ ಸ್ನೇಹದ ನೆವಮಾಡಿಕೊಂಡುನಮ್ಮ ಸಲಿಗೆ ಬಯಸುತ್ತಾರೆ, ಸಲಿಗೆಯನ್ನು ಕೊಟ್ಟುಬಿಟ್ಟೆವು ಎಂದರೆ ಇಡೀ ನಮ್ಮ ಬದುಕಿನಲ್ಲಿ ಆಡಬಾರದ ಆಟಗಳನ್ನೆಲ್ಲಾ ಆಡಿ ನಮ್ಮ ಬದುಕನ್ನೇ ನಿಸ್ಸಾರವಾಗಿ ಸುತ್ತಾರೆ . ಪ್ರೀತಿ ಪ್ರೇಮಗಳ ಬಲೆಬೀಸುತ್ತಾರೆ ಹಣ ಗಿಫ್ಟ್ ಗಳ ಆಮಿಷ ಒಡ್ಡುತ್ತಾರೆ ಕೊನೆಗೆ ನಮ್ಮನ್ನೇ ಕೆಟ್ಟವರನ್ನಾಗಿ ಬಿಂಬಿಸಿಬಿಡುತ್ತಾರೆ . ನಮ್ಮ ಹೊರಜಗತ್ತನ್ನೇ ಮರೆಯುವಷ್ಟು ನಾವು ಈ ಜಗತ್ತಿನಲ್ಲಿ ಕಳೆದುಹೋಗಿಬಿಡುತ್ತೇವೆ . ಕಳೆದುಹೋದದ್ದು ಕೇವಲ ನಾವಲ್ಲ ನಮ್ಮ ವ್ಯಕ್ತಿತ್ವ ನಮ್ಮ ನಂಬಿಕೆ ನಮ್ಮ ಭರವಸೆ ನಮ್ಮ ಆಸೆ ಆಕಾಂಕ್ಷೆ ನಮ್ಮ ಹಣ ಸಮಯ ಎಲ್ಲವನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳ ಬಾಯಿಬಡುಕ ಕಾಮೆಂಟ್ಸ್ ಗಳಿಗೆ ಬಲಿಯಾಗಿ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಣ ಮುಂದೆ ಇದೆ .
ಇಲ್ಲಿ ಅಮಾಯಕರೆಂದು ಗೊತ್ತಾದ ತಕ್ಷಣ ನಮ್ಮನ್ನು ಅವರ ಹಿಡಿತಕ್ಕೆ ತೆಗೆದುಕೊಂಡು ಬಿಡುತ್ತಾರೆ .ನಮ್ಮೆಲ್ಲ ರಹಸ್ಯಗಳನ್ನು ಬಲು ಜಾಣ್ಮೆಯಿಂದ ಹೊರಗೆ ತೆಗೆದುಕೊಂಡು ಬಿಡುತ್ತಾರೆ . ಅದರಲ್ಲೂ ಪ್ರೀತಿ ಪ್ರೇಮದ ಬಲೆಗೆ ಸಿಕ್ಕೆವೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ . ನಮ್ಮನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಅಕ್ಷರಶ: ಸಾಮಾಜಿಕ ಜಾಲತಾಣಗಳ ಬೀದಿಗೆ ಎಸೆದು ಬಿಡುತ್ತಾರೆ .ಅಂತಹ ಸಂದರ್ಭದಲ್ಲಿ ನಾವು ಮಾತ್ರ ಕೊರಗಿ ಸೊರಗಿ ಬದುಕೇ ಬೇಡವೆಂದು ಬೆಂಡಾಗಿ ಹೋಗಿಬಿಡುತ್ತೇವೆ . ಆದರೆ ನಮ್ಮನ್ನು ಈ ಸ್ಥಿತಿಗೆ ತಂದ ಆ ಮಹಾನುಭಾವರು ಖುಷಿಯಿಂದ ಏನೂ ಆಗಿಲ್ಲವೇನೋ ಎಂಬಂತೆ ಹಾಡುತ್ತಾ ಕುಣಿಯುತ್ತಾ ನಲಿಯುತ್ತಾ ಬದುಕುತ್ತಿರುತ್ತಾರೆ .ತನ್ನ ಕುಟುಂಬದ ಜತೆ ಒಳ್ಳೆಯ ಒಡನಾಟವಿಲ್ಲ ಎಂದು ಹೇಳಿಕೊಂಡಿದ್ದ ಅವರು ಇದಾದ ಮೇಲೆ ಅದೇ ಕುಟುಂಬದ ಜೊತೆ ತುಂಬಾ ಅನ್ಯೋನ್ಯವಾಗಿ ಬದುಕುತ್ತಾ ಇರುತ್ತಾರೆ . ಆದರೆ ನಮ್ಮ ವೈಯಕ್ತಿಕ ವೈವಾಹಿಕ ಬದುಕಿನಲ್ಲಿ ಸುನಾಮಿಯನ್ನು ಎಬ್ಬಿಸಿ ಬಿರುಗಾಳಿಯಲ್ಲಿ ನಮ್ಮನ್ನು ತರಗೆಲೆಗಳನ್ನಾಗಿಸಿ ಬಿಡುತ್ತಾರೆ . ಆ ಪ್ರವಾಹದಲ್ಲಿ ನಮ್ಮ ವೈಯಕ್ತಿಕ ಬದುಕಿನ ನೆಮ್ಮದಿಯೇ ಕೊಚ್ಚಿ ಹೋಗಿ ಬಿಡುತ್ತದೆ . ಅಷ್ಟು ದಿನಗಳವರೆಗೆ ಸಂಪಾದಿಸಿಕೊಂಡು ಬಂದಿದ್ದ ಒಳ್ಳೆಯತನ ಆದರ್ಶಗಳು ನಮ್ಮ ಸೃಜನಶೀಲತೆ ನಮ್ಮ ಬದುಕಿನ ಗುರಿ ಎಲ್ಲವೂ ನಮ್ಮ ಕೈತಪ್ಪಿ ಹೋಗಿ ಅಕ್ಷರಶಃ ನಾವು ಒಬ್ಬಂಟಿಯಾಗಿ ಬಿಡುತ್ತೇವೆ.ಇಂತಹ ಸಂದರ್ಭದಲ್ಲಿಯೇ ಈ ಆತ್ಮಹತ್ಯೆಯಂತಹ ಮಹಾ ಪಾಪಕ್ಕೆ ಕೈಹಾಕಲು ಮನಸ್ಸು ಹಾತೊರೆಯುತ್ತಿರುತ್ತದೆ .ಕೆಲವರು ಅದರಲ್ಲಿ ಯಶಸ್ವಿಯಾದರು ಇನ್ನು ಕೆಲವರು ಸಮಾಜಕ್ಕೆ ಮಾನ ಮರ್ಯಾದೆಗೆ ಅಂಜಿ ಹೇಗೋ ಅದೃಶ್ಯವಾಗಿ ಕಳೆದು ಹೋಗಿಬಿಡುತ್ತಾರೆ .ಆದರೆ ನಮ್ಮಿಂದ ಬೇಕಾದುದನ್ನೆಲ್ಲ ಪಡೆದುಕೊಂಡ ಮೇಲೆ ನಮ್ಮನ್ನು ಎತ್ತಿ ಬಿಸಾಡಿ ಇನ್ನೊಂದು ಮಿಕವನ್ನು ಹುಡುಕುವುದರತ್ತ ತಮ್ಮ ಗಮನವನ್ನು ಹರಿಸುತ್ತಿರುತ್ತಾರೆ . ನಮಗಾದ ಅನ್ಯಾಯದ ಬಗ್ಗೆ ನಾವೆಲ್ಲರೂ ಬಾಯಿಬಿಡದೆ ಕೊರಗುತ್ತೇವೆ ಆದರೆ ಅವರು ಅದನ್ನೇ ಬಂಡವಾಳ ಮಾಡಿಕೊಂಡು ಜಗದೆದುರು ತಾವು ಸಾಚಾ ಎಂದು ಬೀಗುತ್ತಿರುತ್ತಾರೆ . ಅದಲ್ಲದೆ ನಾವೇನಾದರೂ ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ನಮ್ಮನ್ನು ಹೆದರಿಸಿ ಬೆದರಿಸುವ ಕರೆಗಳನ್ನು ಮಾಡಿ ನಮ್ಮನ್ನು ಇನ್ನಷ್ಟು ಹೈರಾಣು ಮಾಡಿಬಿಡುತ್ತಾರೆ . ಇವರ ಸಹವಾಸವೇ ಸಾಕು ಎಂದು ನಾವು ಮೌನಕ್ಕೆ ಶರಣಾಗಿ ಬಿಡಬೇಕಾಗುತ್ತದೆ .
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಸ್ನೇಹಿತರ ದಂಡು ಎಂದೂ ನಮ್ಮ ಶ್ರೇಯಸ್ಸನ್ನು ಬಯಸುವುದಿಲ್ಲ. ಆ ಸ್ನೇಹದಿಂದ ನಮಗೆ ಒಂದು ನಯಾಪೈಸೆಯ ಅನುಕೂಲ ಆಗುವುದಿಲ್ಲ .ಇಂತಹ ಸಾವಿರ ಸಾವಿರ ಸಂಖ್ಯೆಯ ಸ್ನೇಹಿತರನ್ನಿಟ್ಟುಕೊಂಡು ನಾವು ಜೀವನದಲ್ಲಿ ಏನು ಸಾಧಿಸುತ್ತೇವೆ.ವಾಸ್ತವ ಜಗತ್ತಿನಲ್ಲಿ ನಾವು ನಮ್ಮವರಿಗಾಗಿಯೂ ಬದುಕುವುದಿಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ .
ಇಂತಹ ಕಪಿಮುಷ್ಟಿಯ ಕಬಂಧಬಾಹು ಹಿಡಿತಕ್ಕೆ ಸಿಕ್ಕಿ ಅದೆಷ್ಟು ಗಂಡುಗಳು ಹೆಣ್ಣುಗಳು ನಿತ್ಯ ನರಳುತ್ತಿದ್ದಾರೆ .ಹೇಳಿಕೊಳ್ಳಲು ಆಗದೆ ಸಹಿಸಿಕೊಳ್ಳಲು ಆಗದೆ ಬಿಸಿತುಪ್ಪವಾಗಿ ನುಂಗಲಾಗದೆ ಸಹಿಸಿ ಪರಿತಪಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಕೆಲವರ ಬೆಂಬಲ ಸಿಕ್ಕರೂ ಸಹ ಅವರು ಅದರಲ್ಲಿ ಸಿಕ್ಕಿ ಹೈರಾಣಾಗಿ ಹೋಗಿದ್ದಾರೆ .ಇನ್ನೂ ಅದೆಷ್ಟೋ ಪುರುಷರು ಹೇಳಿಕೊಳ್ಳಲಾಗದೆ ಮುಚ್ಚಿಟ್ಟುಕೊಳ್ಳಲಾಗದಂತೆ ಬಾಣಲೆಯಿಂದ ಬೆಂಕಿಗೆ ಬಿದ್ದು ಒದ್ದಾಡುತ್ತಿದ್ದಾರೆ .ಇಷ್ಟೆಲ್ಲ ಸಂಕಷ್ಟಗಳನ್ನು ತಂದೊಡ್ಡುವ ಈ ಸಾಮಾಜಿಕ ಜಾಲತಾಣಗಳ ಸ್ನೇಹ ಸಂಕೋಲೆ ನಮಗೆ ಬೇಕಾ ಎನ್ನುವ ದೊಡ್ಡ ಪ್ರಶ್ನೆ ನಮ್ಮೆದುರು ಬಂದು ನಿಲ್ಲುತ್ತದೆ . ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿದಾಗ ಸಾಧನೆಗಿಂತ ಬಾಧೆಗಳೇ ಹೆಚ್ಚು ಬದುಕನ್ನು ಕಂಗೆಡಿಸಿಬಿಡುತ್ತವೆ. ತುಂಬಾ ಆಕರ್ಷಣೀಯವಾಗಿರುವ ಈ ಕೆಟ್ಟ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿ ಹೊರಬಂದಾಗ ಗೊತ್ತಾಗುತ್ತದೆ ಅದು ಎಷ್ಟು ಕ್ರೂರ ಎಂಬುದು .ಆದ್ದರಿಂದ ದಯವಿಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಮಧ್ಯವಯಸ್ಸಿನ ಸ್ತ್ರೀ ಪುರುಷರಲ್ಲಿ ನನ್ನ ವಿನಮ್ರ ಮನವಿ ಇಷ್ಟೇ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ . ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಆಕರ್ಷಣೆಗಳಿಗೆ ಒಳಗಾಗದೆ ತುಂಬಾ ವಿವೇಚನೆಯಿಂದ ಈ ಜಗತ್ತಿನಲ್ಲಿ ಬೆಣ್ಣೆಯೊಳಗಿನ ಕೂದಲನ್ನೆತ್ತಿಕೊಳ್ಳುವಂತೆ ಕೆಸರೊಳಗಿರುವ ಕಮಲದಂತೆ ನಾವು ಇದ್ದು ಬಿಡಬೇಕಲ್ಲವೇ ?!
೦೬೫೦ಪಿಎಂ೨೧೧೨೨೦೨೧
*ಅಮುಭಾವಜೀವಿ ಮುಷ್ಟೂರು*