Monday, December 20, 2021

ಕವಿತೆ

ನನ್ನೊಳಗಿನ ಅನುಭೂತಿಗೆ
ಯಾವ ಸಂಕೋಲೆಗಳ ಬಂಧನವಿಲ್ಲ
ಮೇಲುಕೀಳುಗಳ ವಾದವಿವಾದಗಳಲಿ
ಯಾವ ಪ್ರಯೋಜನವೂ ಇಲ್ಲ.

ಮಗು ವಿಶ್ವ ಮಾನವತೆಯಿಂದ
ಮನಷ್ಯನ ಸಂಕುಚಿತತೆ ಹೊಂದಿದಾಗಲೇ
ಮನುಕುಲದ ಮೇಲ್ಛಾವಣಿ ಕುಸಿಯಿತು
ಮಾನವೀಯತೆಯು ಆಗಲೇ ಸತ್ತಿತು

ಯಾರ ಮನೆಯ  ಊಟ
ಯಾರು ತಿಂದರೋ ಗೊತ್ತಿಲ್ಲ
ಊರ ಮುಂದಿನ ಕಸ ಗುಡಿಸಿದ್ದು
ಮಾತ್ರ ಭಾರಿ ಸುದ್ದಿಯಾಗುವುದಲ್ಲ

ಜಾತಿಗಳ ಕೋತಿಗಳ ಕೈಯಲ್ಲಿ
ಮಾನವತೆಯ ಮಾಣಿಕ್ಯ ಸಿಕ್ಕು
ಬದುಕಿನ ಮೌಲ್ಯಗಳನೇ ಕಳೆಯುತಿದೆ
ಹೀಗಾದರೆ ಮುಂದಿನ ಪೀಳಿಗೆಗೆ  ಯಾರು ದಿಕ್ಕು

ಪ್ರೀತಿಯ ಪರಿಶುದ್ದತೆಯಲ್ಲೂ
ಬಾಂಧವ್ಯದ ಜ್ಯೋತಿ ನಂದಿ
ಬವಣೆಗಳನ್ನು ಹೊತ್ತು ತಂದಿದೆ
ಮೇಲೆ ನಕ್ಕರೂ ಒಳಗಿನ್ನೂ ಇದೆ ಬೇಗುದಿ

ಮನುಕುಲೋದ್ದಾರಕ್ಕೆ
ಅಡ್ಡಿಯಾಗುವ ಕಾರಣಕ್ಕೆ
ಜಾತಿ ಮತ ಧರ್ಮ ಪಂಥಗಳ ಆಚೆ ನೂಕಿ
ಸಮಸಮಾಜದ ಕ್ರಾಂತಿ ಜ್ಯೋತಿ ಪ್ರಜ್ವಲಿಸಲಿ

1003ಪಿಎಂ16112021
ಅಪ್ಪಾಜಿ ಸುಧಾ ಮುಸ್ಟೂರು

ನೀ ಹಣೆಗಿಡುವ ಹೂಮುತ್ತಿನಲ್ಲಿ
ನಲ್ಲ ನನ್ನ ಬಾಳ ಬುತ್ತಿಯಿದೆ
ನೀ ತೋರುವ  ಈ ಪ್ರೀತಿಯಲಿ
ಎಲ್ಲಾ ನೋವ ಮರೆಸೋ ಶಕ್ತಿಯಿದೆ
ನಿನ್ನ  ಎದೆ ಮೇಲೆ ತಲೆಯಿಡಲು
ನನ್ನೆಲ್ಲ ಕಷ್ಟಗಳು ದೂರವಾಗಿವೆ
ನಿನ್ನ  ಒಲವಿನ ಬಿಸಿಯಪ್ಪುಗೆಯಲ್ಲಿ
ನಲ್ಲ ನಾ ಕರಗಿಹೋಗುವೆ
ನಿನ್ನ ಈ ಸಾಮಿಪ್ಯದ ನೆರಳಿನಲ್ಲಿ
ಬಾಳ ಚೆಲುವಾಗಿ ನಾ ಅರಳುವೆ

0345ಎಎಂ20112021
 *ಅಪ್ಪಾಜಿ ಸುಧಾ ಮುಸ್ಟೂರು



No comments:

Post a Comment