Monday, December 20, 2021

ಕವನಗಳು

ಬೆಳೆಯುವಾಗ ಬರಲೇ ಇಲ್ಲ 
ಈಗ ಭೋರ್ಗರೆಯುತಿಹ ವರುಣ
ಕೊಚ್ಚಿ ಹೋಗುತಿರುವ ಬದುಕು
ಕಂಡು ಕೇಳರಿಯದಷ್ಟು ದಾರುಣ

ಕಷ್ಟ ಪಟ್ಟು ಬೆಳೆಸಿದ ರೈತನಿಗೆ
ಹಿಡಿದಿತ್ತು ಒಂದಿಡೀ ವರ್ಷ
ಎಲ್ಲಾ ಮುಗಿದ ಮೇಲೆ ಬಂದ
ಮಳೆಗೆ ಹಾಳುಗೈಯಲು ಸಾಕು ನಿಮಿಷ

ಅವಶ್ಯಕತೆ ಮೀರಿ ಅಬ್ಬರಿಸುವ
ವರ್ಷಧಾರೆ ಬದುಕ ಮುಳುಗಿಸಿತು
ನೆಚ್ಚಿನ ಹೊಲಮನೆಯಲ್ಲ ಕೊಚ್ಚಿ ಹೋಗಿ
ಜೀವನವೀಗ ಬೀದಿಗೆ ಬಿದ್ದಿತು

ಯಾರ ದೂರುವುದಿಲ್ಲಿ
ಬಡಪಾಯಿ ಬದುಕಿನಲ್ಲಿ
ಕಣ್ಣೀರು ಕೂಡ ಕಾಣದಾಗಿದೆ
ಸುರಿವ  ಈ ಮಳೆಹನಿಯಲ್ಲಿ

ಹೊರೆಯೀಗ  ಅಧಿಕವಾಗುತಿದೆ
ನೆರೆ ಬಂದು ಬದುಕು ಸತ್ತಿದೆ
ಮತ್ತೆ ಕಟ್ಟಿಕೊಳ್ಳಲಿ ಹೇಗೆ
ಬೊಗಸೆಯಲ್ಲಿ ಬದುಕು ಸೋರುತಿದೆ

ಸರ್ಕಾರ ಕೊಡುವ ಪರಿಹಾರ
ಕೈಸೇರುವ ಖಾತರಿಯೇ ಇಲ್ಲ
ಹುದುಗಿರುವ ತಿಮಿಂಗಿಲಗಳೇ ನುಂಗಿ
ಕೊಡುವ ಬಿಡಿಗಾಸಿಗೆ ಬದುಕು ಕಟ್ಟಿಕೊಳ್ಳಲಾಗುತಿಲ್ಲ

0416ಎಎಂ20112021
*ಅಪ್ಪಾಜಿ ಸುಧಾ ಮುಸ್ಟೂರು*

ನೊಂದ ಕ್ಷಣವನ್ನೇ ನೆನೆಯಬಾರದು
ಮರೆತು ಮುನ್ನಡೆಯಬೇಕು
ನೋಯಿಸಿದವರನ್ನೇ ಶಪಿಸಬಾರದು
ತಿರಸ್ಕಾರದಿಂದ ದೂರವಿರಿಸಬೇಕು
ನೆಮ್ಮದಿಯ ಕದಡಿದವರ ಸಂಘ ಕೂಡದು
ಅಭಿನಂದಿಸುವಂತೆ ಬದುಕಬೇಕು
ದೂರುವವರನ್ನು ನಿಂದಿಸಬಾರದು
ದಂಡಿಸುವಂತೆ ಜೀವಿಸಬೇಕು
ಬದಲಾವಣೆ ಬಯಸುವವರು
ನಿನ್ನ ಬದಲಿಸಲು ಪ್ರಯತ್ನಿಸುವರು
ಯಾರೊಂದಿಗೂ ಹಗೆಯೂ ಬೇಡ
ಸ್ನೇಹದ ಬಗೆಯೂ ಬೇಡ
ಆನೆ ನಡೆಯುವ ಹಾದಿಯಲ್ಲಿ
ಶ್ವಾನ ರೋಧಸುವುದು ಸಹಜ
ಹಾಗೆಯೇ ನೀ ಬದುಕು ಮನುಜ

0809ಪಿಎಂ23112021
 *ಅಪ್ಪಾಜಿ ಸುಧಾ ಮುಸ್ಟೂರು


ನಿನ್ನ ಪ್ರೀತಿಯ ದಾಳಿ
ಮಿಂಚಿಗಿಂತಲೂ ತೀವ್ರವಾಗಿದೆ
ಅದು ಎದೆಗೆ ಸಿಡಿಲಾಗಿ
ಬಂದೆರಗಿ ಹತವಾದೆ
ಹಿತ ನೀಡಬೇಕಾದ ಪ್ರೀತಿ
ಹತವಾಗಿಸುವುದಾದರೆ
ಬದುಕಿಗೆ ಅದು ಮಾರಕ

1122ಪಿಎಂ25112021
*ಅಪ್ಪಾಜಿ ಸುಧಾ ಮುಸ್ಟೂರು*


ಕೂಗಿ ಕೂಗಿ ಹೇಳಬೇಕೆಂದಿರುವೆ
ನನ್ನಂತರಂಗದ ಸಿಹಿ ವಿಷಯಗಳನ್ನು
ನಲ್ಲೆ ನೀನಲ್ಲವೇ ನನ್ನ ಭಾವನೆಗಳ
ಅಂತರಂಗದ ಅಭಿಮಾನಿ
ಕೇಳಲೊಂದಿಷ್ಟು ಸಮಯ ಕೊಡು
ನಾವೆಲ್ಲಾ ನಿವೇದಿಸಿಕೊಳ್ಳುವೆ
ಒಲವಿನಲಿ ಒಳದನಿಯಲಿ
ಅದುಮಿಟ್ಟ ಹೃದಯದ ಮಾತುಗಳ
ದೂರದಿರು ದೂರಾಗದಿರು
ದಾರಿದ್ರ್ಯ ಬಂದೀತು ನನ್ನ ಬಾಳಿಗೆ
ಜೀವನ ಸಂಗಾತಿ ನೀನು
ಖುಷಿಯ ಸಂಗತಿ ಕೇಳಿನ್ನು
ಜೀವಕಿಂತ ಹೆಚ್ಚಾಗಿ ಪ್ರೀತಿಸುವೆ
ಜೀವವಿರುವ ತನಕ ಜೊತಿಯಿರುವೆ

0815 ಪಿಎಂ 26112021
*ಅಪ್ಪಾಜಿ ಸುಧಾ ಮುಸ್ಟೂರು

ಯಾರದ್ದೋ ತಪ್ಪಿಗೆ
ಇನ್ಯಾರಿಗೋ ಶಿಕ್ಷೆ
ತಪ್ಪಿತಸ್ಥ ತಪ್ಪಿಸಿಕೊಂಡ
ಅಮಾಯಕ ಸಿಕ್ಕಿಹಾಕಿಕೊಂಡ
ಇಲ್ಲಿ ಎಲ್ಲವೂ ಇನ್ನೊಬ್ಬರ ನಿರ್ಧಾರ
ಅಲ್ಲಗಳೆಯಲು ಇಲ್ಲ ಯಾರಿಗೂ ಅಧಿಕಾರ
ಸುಳ್ಳು ಇಲ್ಲಿ ದರ್ಬಾರು ಮಾಡುವಾಗ
ಸತ್ಯ ತಾನು ಮೂಲೆಗುಂಪಾಗಿಹುದು
ತಪ್ಪು ಮಾಡಿದವನಿಗಿಲ್ಲಿ ಸನ್ಮಾನ
ಒಪ್ಪಿಕೊಂಡವನಿಗಿಲ್ಲಿ ತಪ್ಪದು ಅವಮಾನ
ಬದುಕೇ ಹೀಗೆ ಗಾಳಿ ಬಂದ ಹಾಗೆ
ತೂರಿಕೊಂಡವನು ಜಾಣ
ಸಿಕ್ಕಿಹಾಕಿಕೊಂಡವನೇ ಕೋಣ

0902ಪಿಎಂ27112021
*ಅಪ್ಪಾಜಿ ಸುಧಾ ಮುಸ್ಟೂರು*

ಬದುಕು ಯಾರ
ಹಂಗಿಗೆ ಬೀಳದಂತೆ
ನಿನ್ನವರು ಯಾರಿಲ್ಲ
ಸಿರಿತನ ನಿನ್ನದಾಗದಾಗ
ಎಲ್ಲಾ ದೂರುವರು
ಬಡತನದ ಬದುಕು ನಿನ್ನದಿರುವಾಗ
ದುಡ್ಡು ಮಾಡುವ ತನಕ
ಸೆಡ್ಡು ಹೊಡೆದು ದುಡಿಯಬೇಕು
ಗೆದ್ದು ಬೀಗುವ ಛಲವಿರಲಿ
ಸೋಲುಗಳ ಸಹಿಸಿ ಮುನ್ನಡೆಯಬೇಕು
ಜೀವನದ ಪಾಠ ಬಲು ಶ್ರೇಷ್ಠ
ಅರಿತು ಹೆಜ್ಜೆ ಇಡಬೇಕು ಜಯ ಕಾಣಲು

0545ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ರುಬಾಯಿ*

ಪ್ರತಿ ಕ್ಷಣದ ಈ ಆರಾಧನೆ
ಪ್ರಕೃತಿ ಮಾತೆಯ ಉಪಾಸನೆ
ಹಸಿರ ಬಸಿರ ಹೊತ್ತು ಸಲಹುವ
ನಿಸರ್ಗದ ಚೆಲುವಿನ ಆಸ್ವಾದನೆ

0940ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಟೆಲಿಗ್ರಾಂಲ್ಲಿ ತಲೆ ಕಡಿಸಿ
ಇನ್ಷ್ಟಾಗ್ರಾಮಲ್ಲಿ ಇಷ್ಟಪಟ್ಟಂತೆ ನಟಿಸಿ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

*ಪ್ರೀತಿಯ ಹೂಮುತ್ತು
ಕಳೆಯಿತೆಲ್ಲ ಆಪತ್ತು
ಸಂಗಾತಿ ನೀನೇ ಸಂಪತ್ತು

*ಅಪ್ಪಾಜಿ ಸುಧಾ ಮುಸ್ಟೂರು

ನಿನ್ನ ಪ್ರೀತಿಯ ಪ್ರತಿಯಾಗಿ
ಕೊಡಲು ನನ್ನಲ್ಲೇನಿಲ್ಲ ಬಡವ ನಾನು.
ಅದು ಗೊತ್ತಿದ್ದೂ ನೀ ಹೇರಳವಾಗಿ
ಎಲ್ಲವನ್ನೂ ಕೊಟ್ಟೆ ಅದ ಸವಿದೆ ನಾನು
ನಿನ್ನೊಲುಮೆಯ ನಾವೆಯಲಿ
ಬಾಳದಡ ಸೇರುವೆನು
ನೀನೀ ಪಯಣವ ಗುರಿಸೇರಿಸುವ ನಾ(ಯ)ವಿಕಿ
ನಿನ್ನ ಮಡಿಲೊಂದೆ ನನ್ನ ಸೂರು
ನೀನಾದೆಯಿಂದು ನನ್ನ ತವರು
ಬದುಕಿನ ಏರಿಳಿತಗಳ ಸಹಿಸಿ
ಜೊತೆ ನಡೆಯುವ ನಿನಗೆ
ಚಿರಋಣಿಯಾಗಿರುವೆ ಕೊನೆವರೆಗೆ

0727ಎಎಂ03122021
*ಅಪ್ಪಾಜಿ ಸುಧಾ ಮುಸ್ಟೂರು*


No comments:

Post a Comment