Friday, December 10, 2021

ಲೇಖನ ಮಾಲೆ

#ಅಮುಭಾವದೂಟ #ಮಾಲಿಕೆ ೦೪

ಜೀವನದ ಈ ಪಯಣದಲ್ಲಿ ನಗುನಗುತ್ತಾ ಸಾಗಬೇಕು ನಾವು .ಯಾರದೋ ಖುಷಿಗಾಗಿ ಇನ್ಯಾರದ್ದೋ ಮರ್ಜಿಗಾಗಿ  ನಮ್ಮ ಸಂತೋಷವನ್ನು ನಾವು ತ್ಯಾಗ ಮಾಡಬಾರದು . ನಾವು ಇಲ್ಲಿ ಬದುಕುತ್ತಿರುವುದು ನಮಗೋಸ್ಕರವೇ ಹೊರತು ಬೇರೆಯವರ ಮನಸ್ಸನ್ನು ಸಂತೋಷ ಪಡಿಸಲು  ಅಲ್ಲ . ಅವರ ಬದುಕು ಅವರಿಗೆ ಆದರೆ ನಮ್ಮ ಬದುಕು ನಮಗೆ ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು . ಇಲ್ಲಿ ಯಾರು ಯಾರನ್ನು ನಂಬಿ ಬದುಕುತ್ತಿಲ್ಲ ಆದರೆ ಪರಸ್ಪರ ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆಯಂತಹ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಅಷ್ಟೆ .ಆದರೆ ವೈಯಕ್ತಿಕ ವಿಚಾರಕ್ಕೆ ಬಂದಾಗ ನಮ್ಮ ಬದುಕು ನಮಗಷ್ಟೆ ಮುಖ್ಯವಾಗಬೇಕು . ಇತರರ ಕಷ್ಟಗಳಿಗೆ ಮಿಡಿಯುವ ಇತರರಿಗೆ ಸಹಾಯ ಮಾಡುವ ಮನೋಭಾವ ನಮ್ಮಲ್ಲಿದ್ದರೂ ಕೂಡ ಈ ಜಗತ್ತು ನಮ್ಮನ್ನು ಹೇಗೆ  ಸ್ವೀಕರಿಸಿದೆ ಎಂಬುದರ ಮೇಲೆ ಅದರ ಬೆಲೆ ನಿಂತಿದೆ .  ನಾವು ಎಷ್ಟೇ ಪ್ರಾಮಾಣಿಕವಾಗಿ ಬದುಕಿದರೂ ಕೂಡ ಈ ಜಗತ್ತು ನಮ್ಮಲ್ಲಿ ಏನಾದರೊಂದು ಕೆಟ್ಠ ತನವನ್ನು ಕಾಣುತ್ತಿರುತ್ತದೆ .ವಾಸ್ತವದಲ್ಲಿ  ನಮ್ಮಲ್ಲಿ ಅಂತಹ ಕೆಟ್ಟ ಗುಣಗಳು ಇರುವುದೇ ಇಲ್ಲ ಆದರೂ ಕೂಡ ಜಗತ್ತಿಗೆ ಅದು ಕಂಡಿರುತ್ತದೆ ನಮ್ಮನ್ನು ನಿಷ್ಟುರವಾಗಿ ನೋಡುತ್ತದೆ .ಅದು ನಮ್ಮ ತಪ್ಪಲ್ಲ ಅದು ನೋಡುವ ಜಗತ್ತಿನ ಕಣ್ಣಿನ ತಪ್ಪೇ ಹೊರತು ಅದಕ್ಕೆ ನಾವು ಎಂದಿಗೂ ತಲೆಕೆಡಿಸಿಕೊಳ್ಳಬಾರದು .ನಾವು ಏನು ಎಂಬುದು ನಮಗೆ ಗೊತ್ತಿರುತ್ತದೆ ನಾವು ಹೇಗೆ ಬದುಕಬೇಕು ಎಂಬುದು ನಮ್ಮದೇ ಆದಂತಹ ಆಲೋಚನೆಯಲ್ಲಿ ಅದು ಮೂಡಿಬರುತ್ತಿರುತ್ತದೆ .ನೀನು ಹೀಗೇ ಬದುಕಬೇಕೆಂದು ನಿರ್ದೇಶಿಸುವ ಹಕ್ಕು ಈ ಸಮಾಜಕ್ಕೂ ಇಲ್ಲ ಸಮಾಜದೊಳಗಿನ ಜನಗಳಿಗೂ ಇಲ್ಲ .ನಮ್ಮ ಬದುಕು ನಮ್ಮದೇ ಆದರ್ಶಗಳು ನಂಬಿಕೆಗಳು ವಿಶ್ವಾಸಗಳ ಮೇಲೆ ನಡೆಯುತ್ತಿರುತ್ತದೆ . ಅದರ ಫಲಾಫಲಗಳು ಕೂಡ ನಮ್ಮ ನಡೆ ನುಡಿಗಳನ್ನು ಅವಲಂಬಿಸಿರುತ್ತದೆ ಇಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು .

     ನಾವು ಸದಾ ಬೇರೆಯವರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಾನು ನನ್ನ ಸಂಸಾರ ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಜೊತೆಗೆ ನಾವು ಅನ್ಯೋನ್ಯವಾಗಿ ಬದುಕುತ್ತಾ ಇರಬೇಕು .ನಮಗಾಗಿ ಮಿಡಿಯುವ ಜೀವಗಳ ಜೊತೆ ನಾವೂ ಸಹ ಮಿಡಿಯಬೇಕು ದುಡಿಯಬೇಕು .ನಮ್ಮ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡುವಂತಹವರ ಮಾತುಗಳಿಗೆ ನಾವು ಕಿವಿಗೊಡದೆ ನಾವು ನಂಬಿದ ಹಾದಿಯಲ್ಲಿ ನಡೆಯುವುದೇ ಕ್ಷೇಮ . ನಾವು ಇತರರ ಬಗ್ಗೆ ಯೋಚಿಸಿದಷ್ಟೂ ನಮ್ಮ ಬಗ್ಗೆ ಕಾಳಜಿಯನ್ನು ಕಳೆದುಕೊಂಡುಬಿಡುತ್ತೇವೆ .ಅದರ ಬದಲು ಅವಶ್ಯಕತೆಯಿಲ್ಲದ ಅವರ ಬಗ್ಗೆ ಯೋಚಿಸುವ ಬದಲು ನಮ್ಮ ಬಗ್ಗೆ ನಾವು ಆಲೋಚನೆ ಮಾಡಿದ್ದೆ ಆದರೆ ನಮ್ಮ ಜೀವನದಲ್ಲಿ ನಾವು ಸುಖವನ್ನು ಅನುಭವಿಸಬಹುದು .  ನಾವು ಯಾರ ಬಗ್ಗೆ ಹೆಚ್ಚು ಚಿಂತಿಸುತ್ತೇವೆಯೋ ಅವರು ನಮ್ಮ ಬಗ್ಗೆ ಒಂದಿನಿತೂ ಯೋಚಿಸುವುದಿಲ್ಲ , ಅವರ ಪಾಡಿಗೆ ಅವರು ಅವರ ಜೀವನದ ಖುಷಿಗಳನ್ನು ಅನುಭವಿಸುತ್ತಿರುತ್ತಾರೆ .ಹೊರಜಗತ್ತಿಗೆ ಅವರು ಎಲ್ಲರಿಗೂ ಬೇಕಾದವರಾಗಿ ನಯವಾದ ಮಾತುಗಳನ್ನಾಡುತ್ತಾ ತಮ್ಮ ಬದುಕನ್ನು ಆನಂದಿಸುತ್ತಿರುತ್ತಾರೆ ತಮ್ಮ ಹಾದಿಯಲ್ಲಿ ಯಶಸ್ಸನ್ನು ಕಾಣುತ್ತಾರೆ . ಆದರೆ ಅವರ ಬಗ್ಗೆ ಚಿಂತಿಸುವ ನಾವುಗಳು ಮಾತ್ರ ದಿನದಿನಕ್ಕೂ ಕ್ಷೀಣವಾಗಿ ನಮ್ಮ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತೇವೆ .ಅವರು ಹಾಗೆ ಹೀಗೆ ಇದ್ದಾರೆ ಎಂದುಕೊಳ್ಳುತ್ತಾ ನಾವು ಇರಬೇಕಾದ ರೀತಿಯನ್ನು ಮರೆತುಬಿಡುತ್ತೇವೆ .ಅವರಂತೆ ನಾವು ಆಗುವ ಬದಲು ಅವರ ಪ್ರತಿಯೊಂದು ನಡೆಗೆ ನಾವು ನಮ್ಮದೇ ಆದ ರೀತಿಯಲ್ಲೇ ವಿಶ್ಲೇಷಣೆ ಮಾಡುತ್ತಾ ಅಂತಹ ಯಾವುದೇ ಅನುಕೂಲಗಳು ನಮಗಿಲ್ಲ ಎಂದು ಒಳಗೊಳಗೇ ಕರುಬುತ್ತೇವೆ,ಕೊರಗುತ್ತೇವೆ ಮನಸ್ಸಿನಲ್ಲೇ ಅವರಿಗೊಂದು ಹಿಡಿಶಾಪವನ್ನು ಹಾಕುತ್ತೇವೆ . ಇದಾವುದರಿಂದಲೂ ಅವರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ ಬದಲಾಗಿ ನಮ್ಮ ಖುಷಿ ಆನಂದ ನೆಮ್ಮದಿಗಳನ್ನು ನಾವು ಸ್ವಲ್ಪ ಸ್ವಲ್ಪವೇ ಕಳೆದುಕೊಂಡು  ದಿನನಿತ್ಯ ಅವರು ಮಾಡುವುದೆಲ್ಲವೂ ತಪ್ಪು ಎಂದು ನಾವು ಅವರನ್ನು ದೂರುತ್ತೇವೆ ದ್ವೇಷಿಸುತ್ತೇವೆ . ನಮ್ಮ ಬದುಕಿನೊಳಗಿನ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸಿ ಇತರರ ಬಹುದೊಡ್ಡ ಸಂತೋಷವನ್ನು ಕಂಡು ಮರುಗುತ್ತೇವೆ ಕೊರಗುತ್ತೇವೆ ಕಂಗೆಡುತ್ತೇವೆ . ಇದಾವುದೂ ನಮ್ಮೊಳಗಿನ ಆತ್ಮಕ್ಕೆ ಸುಖವನ್ನು ನೀಡುವ ಬದಲು  ಆತ್ಮಸಾಕ್ಷಿಯನ್ನು ನಿದ್ದೆಗೆಡಿಸಿ ನೆಮ್ಮದಿಯನ್ನು ಕದಡಿ ಬಿಡುತ್ತದೆ . ಮೂರುಹೊತ್ತು ಅವರನ್ನು ದ್ವೇಷಿಸುವುದರಲ್ಲಿಯೇ ನಮ್ಮ ಇಡೀ ಬದುಕನ್ನು ವ್ಯರ್ಥವಾಗಿ ಕಳೆದುಬಿಡುತ್ತೇವೆ .

         ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರವರ ಬದುಕಿನೊಂದಿಗೆ ಮಾತ್ರವೇ ಹೊಂದಾಣಿಕೆ ಮಾಡಿಕೊಂಡು ಸಾಗಬೇಕು .ಅಕ್ಕಪಕ್ಕ ಹಿಂದೆ ಮುಂದೆ ಮಾತನಾಡುವವರ ಮಾತುಗಳಿಗೆ ಕಿವಿಗೊಡದೆ ನಾವು ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಪರಿಶ್ರಮವನ್ನು ಪಡಬೇಕು . ನಮ್ಮ ಒಡನಾಡಿಗಳ ಪ್ರತಿಕ್ಷಣವನ್ನು ಸುಖಮಯವಾಗಿ ಸಂತೋಷ ಮಯವಾಗಿ ಇಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ . ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಾವು ಎಡವಿ ಬರೀ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಚಿಂತನೆ ಆಲೋಚನೆಗಳನ್ನು ಮಾಡುತ್ತ ಹೋದರೆ ನಮಗೆ ದಕ್ಕಿರುವ ಸಂಬಂಧಗಳನ್ನು ನಾವು ಕಳೆದುಕೊಂಡು ಬದುಕಿನಲ್ಲಿ ಒಬ್ಬಂಟಿಗರಾಗಿ ಬಿಡುತ್ತೇವೆ . ಕುದಿಯುವ ಮನಸ್ಸಿನಲ್ಲಿ ನಾವು ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ .ಕುಣಿಯಲು ಬಯಸುವ ಮನಸ್ಸನ್ನು ಹೀಗೆ ಕುದಿಯುವಿಕೆಯಲ್ಲಿ ಬೇಯಿಸಿ ಬಿಟ್ಟರೆ ನಮ್ಮ ಜೀವನ ನರಕವಾಗುತ್ತದೆ .ಬದುಕೇ ಬರಡು ಎನಿಸಿಬಿಡುತ್ತದೆ .ಆದ್ದರಿಂದ ನಾವುಗಳು ಎಂದಿಗೂ ಇನ್ನೊಬ್ಬರ ಬಗ್ಗೆ ಆಲೋಚನೆ ಮಾಡದೆ ನಮ್ಮಂತೆ ನಾವು ಬದುಕುತ್ತಾ ನಮ್ಮವರ ಜೊತೆ ಜೊತೆಯಲ್ಲಿ ಖುಷಿಖುಷಿಯಿಂದ ಬಾಳುವಂತಾಗಬೇಕು . ನಾವು ಬದುಕುವ ರೀತಿಯನ್ನು ಕಂಡು ನಮ್ಮನ್ನು ದ್ವೇಷಿಸುವವರೂ ಕೂಡ ಹೊಗಳುವಂತೆ ನಾವಿರಬೇಕು . ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿರಬಹುದು ಆದರೆ ನಮ್ಮವರಿಗೆ ನಮ್ಮ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ನಾವು ನಮ್ಮವರಿಗಾಗಿ ಬದುಕಬೇಕು .

    ನಮ್ಮೊಳಗಿನ ಅಸಹಾಯಕತೆ ಅಸಹನೀಯತೆಗಳುನಾವು ಇನ್ನೊಬ್ಬರನ್ನು ದ್ವೇಷಿಸುವಂತೆ ಮಾಡುತ್ತದೆ .ಆದ್ದರಿಂದ ಅಂತಹ ನಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನೊಳಗೆ ನುಸುಳದಂತೆ ನಾವು ತಡೆಯಬೇಕು .ಅದಕ್ಕಾಗಿ ನಾವು ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿಕೊಳ್ಳಬೇಕು . ಅಲ್ಲದೆ ನಾವು ಸದಾ ಚಟುವಟಿಕೆಯಿಂದ ಇದ್ದಾಗ ಬೇರೆಯವರ ಬಗ್ಗೆ ಚಿಂತಿಸುವ ಮನಸ್ಥಿತಿ ನಮ್ಮಲ್ಲಿ ಬರುವುದೇ ಇಲ್ಲ .ಆದ್ದರಿಂದ ನಾವು ನಮ್ಮವರ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ಬದುಕನ್ನು ಸುಖಮಯವಾಗಿ ಕಟ್ಟಿಕೊಳ್ಳುವ ಕಡೆಗೆ ನಾವು ಹೆಜ್ಜೆ ಇಡಬೇಕು . ಇಲ್ಲಿ ಯಾರು ಯಾರನ್ನು ಬೆಳೆಸುವುದಿಲ್ಲ ಬದಲಾಗಿ ಅಳಿಸುತ್ತಾರೆ ಹಾನಿಪಡಿಸುತ್ತಾರೆ ಕಾಲೆಳೆದು ಬೀಳಿಸುತ್ತಾರೆ .  ಅಂತಹ ಯಾವ ಅಚಾತುರ್ಯಗಳಿಗೂ ನಾವು ಒಳಗಾಗದಂತೆ  ಜಾಗೃತರಾಗಬೇಕು . ನಮ್ಮೊಳಗಿನ ಆತ್ಮವಿಶ್ವಾಸಕ್ಕೆ ಕುಂದುಂಟುಮಾಡಿಕೊಳ್ಳದಂತೆ ನಾವು ಸದಾ ಧನಾತ್ಮಕ ಚಿಂತನೆಯಿಂದ  ನಮ್ಮ ಬದುಕಿನ ಜತೆ ಸಂಧಾನ ಮಾಡಿಕೊಂಡು ಬದುಕಬೇಕು. ಸದೃಢ ಮನಸ್ಥಿತಿಯಿಂದ ನಮ್ಮ ಬದುಕನ್ನು  ದಡ ಸೇರಿಸ ಬೇಕು  . ಅಂತಹ ಸದ್ವಿಚಾರ ಸತ್ ಚಿಂತನೆಗಳ ಜತೆಜತೆಗೆ ನಾವು ಬದುಕುತ್ತಾ ಸಾಗೋಣ .

೦೭೪೫ಪಿಎಂ೧೦೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*

No comments:

Post a Comment