ನಮಗೇಕೆ ನಲ್ಲೆ ಬೇರೆಯವರ ಚಿಂತೆ
ನಮ್ಮಲ್ಲೇ ನಾವು ಹಚ್ಚಿಕೊಳ್ಳೋಣ ಒಲವ ಹಣತೆ
ಊರ ಮೇಲೆ ಊರು ಬಿದ್ದರೆ ಏನಂತೆ
ನಿತ್ಯವೂ ತಪ್ಪದ ರವಿಚಂದ್ರರ ಕಾಯಕದಂತೆ
ನಾವಿಬ್ಬರೂ ಸದಾ ಪ್ರೀತಿಸುತ್ತಲೇ ಇರೋಣ
ನಮಗಾಗಿ ನಾವಿಲ್ಲಿ ನಿತ್ಯ ಬದುಕೋಣ
ಹೇಳಿಕೆಯ ಕೇಳಿಕೆಯ ಮಾತುಗಳಿಗೆ
ಎಂದೂ ನಾವು ಕಿವಿಗೊಡುವುದು ಬೇಡ
ದಾರಿತಪ್ಪಿಸುವ ದೂರುಗಳ ದೂರವಿರಿಸಿ
ಧಮನಿ ಧಮನಿಯೊಳಗೂ ಪ್ರೀತಿ ಬೆಸೆಯೋಣ
ಹಮ್ಮು-ಬಿಮ್ಮುಗಳಿಲ್ಲದೊಲವ
ದೀಕ್ಷೆಯನ್ನು ಇಂದೇ ತೊಡೋಣ
ಅಂತರಂಗ ಬೆಸೆದ ಅನುಬಂಧವ
ಅನವರತ ನಾವು ಕಾಪಿಟ್ಟುಕೊಳ್ಳುವ
ಬಡತನದ ಬೇಗೆಯಲ್ಲಿ ಬೆಂದರೂ
ಕೈತುತ್ತನುಣುವ ಸಿರಿವಂತಿಕೆಯಲಿ ಬಾಳೋಣ
ನನಗಾಗಿ ನೀನು ನಿನಗಾಗಿ ನಾನೆನ್ನುವ
ಸಂಸ್ಕಾರವಂತ ಪ್ರೇಮಿಗಳಾಗೋಣ
ನಮ್ಮ ನಾಳೆಗಳು ಸುಂದರವಾಗಲು
ಇಂದು ನಾವು ಆನಂದದಿ ಬಾಳೋಣ
ವಸ್ತುಗಳ ಸಿರಿವಂತಿಕೆಗಿಂತ
ಹೃದಯ ಶ್ರೀಮಂತಿಕೆಯ ಹೊಂದೋಣ
0239ಎಎಂ27022022
*ಅಮುಭಾವಜೀವಿ ಮುಸ್ಟೂರು*
ಅವಳ ಮೋಸದ ಜಾಲಕೆ
ನಾ ಸುಲಭದ ತುತ್ತಾದೆ
ಅವಳ ಆ ಕಟ್ಟು ಕಥೆಯ
ನಂಬಿ ನಾ ಮೂರ್ಖನಾದೆ
ಪ್ರೀತಿಯ ಅವಳ ಆಟದಲಿ
ಅಮಾಯಕನಾಗಿ ಸಿಲುಕಿಕೊಂಡೆ
ಗಂಡನಿದ್ದೂ ಪ್ರಿಯಕರನಾಗಿ
ನನ್ನ ಬಯಸಿದ್ದುದರಲಿ ನನ್ನ ತಪ್ಪೇನಿದೆ
ಹಣ್ಣು ತಿಂದು ಬೀದಿಗೆಸೆದವನೊಬ್ಬ
ಜಾರಿಬಿದ್ದ ಸಿಪ್ಪೆಗೆ ಬದುಕು ಕೊಟ್ಟವನೊಬ್ಬ
ಇಬ್ಬರದೊಂದೊಂದು ಕುರುಹು ಇರುವಾಗ
ನೊಂದವಳೆಂದು ಅನುಕಂಪ ತೋರಿದ್ದು ತಪ್ಪೇನು
ಇಲ್ಲಸಲ್ಲದ ಆರೋಪ ಹೊರಿಸಿ
ನಂಬಿಕೆಗೆ ದ್ರೋಹ ಬಗೆದಳು
ಬಯಸದೆ ಬಂದವಳೆಂದು
ಕೊಟ್ಟ ಸಲಿಗೆ ನೆಮ್ಮದಿಯ ಸುಲಿಗೆಗೈದಿದೆ
ಅಲ್ಲೆಲ್ಲೋ ಅವಳು ಸಂತೋಷದಿಂದಿರೆ
ಬದುಕಿನ ಭೀಕರತೆಗೆ ಬಲಿಯಾದೆ
ಮೋಸಗಾತಿಯ ಸ್ನೇಹ ತ್ಯಜಿಸಿ
ಬದುಕ ಹೊರಟರೂ ಭೀತಿ ತಪ್ಪದು
ದೂರದ ಬೆಟ್ಟದ ನುಣುಪಿಗೆ
ಮರುಳಾದ ಆ ತಪ್ಪಿಗೆ
ಕಂದಕಕೆ ತಳ್ಳಿ ನುಣುಚಿಕೊಂಡಳು
ಈಗ ನೊಂದುಕೊಂಡಿವೆ ನನ್ನೊಲುಮೆಯ ಜೀವಗಳು
1044ಪಿಎಂ22022022
*ಅಮುಭಾವಜೀವಿ ಮುಸ್ಟೂರು*
ಚಂದಿರನಿಲ್ಲದ ಈ ಇರುಳು
ನೀನಿಲ್ಲದೆ ನಾನಾದಂತೆ ಮರುಳು
ಬರೀ ತಾರೆಗಳಿಂದ ಓಡದು ಕತ್ತಲು
ಬರೀ ಬೇಸರ ಕವಿದಿದೆ ಸುತ್ತಮುತ್ತಲು
ನೀರವ ಮೌನದ ಈ ರಾತ್ರಿ
ದಣಿದು ಮಲಗಿದೆ ಧರಿತ್ರಿ
ಏಕಾಂತಕ್ಕೆ ಭೂಷಣವಲ್ಲ ಈ ಸಮಯ
ನೈದಿಲೆ ಹೂ ಕಾಡಿದೆ ವಿರಹದ ಅಧ್ಯಾಯ
ದಾರಿಕಾಣದೆ ಮಂಕಾಗಿರುವೆ
ತಿಂಗಳ ದರ್ಶನವಿರದೇ ಕಂಗಾಲಾಗಿರುವೆ
ಕರೆತಂದು ಬಿಡು ಅವನನ್ನು ನಿನ್ನ ಜೊತೆಗೆ
ತಂಪಿರುಳ ಸವಿಯೋಣ ನಾವು ಒಟ್ಟಿಗೆ
ಏಕಾಂತ ಬಯಸುವ ಪ್ರತಿಜೀವಕೂ
ಸದಾ ಅವನ ಬೆಳದಿಂಗಳು ಇರಬೇಕು
ಒಲವಿನೋಲೆಯನೋದುವ ನಲ್ಲೆಯ ಮುಂಗುರುಳು
ತಂಗಾಳಿಗೆ ಹಾರುತ ಕಚಗುಳಿ ಇಡಬೇಕು
ಹುಣ್ಣಿಮೆ ಕಂಡ ಸಾಗರ ಉಕ್ಕುವ ರೀತಿ
ಪರಿಶುದ್ಧ ನಮ್ಮಿಬ್ಬರ ಈ ಪ್ರೀತಿ
ರೋಹಿಣಿ ಚಂದಿರನಂತೆ ನಾವು
ಜೊತೆ ಜೊತೆಯಲಿ ಸಾಗಬೇಕು ಜೀವನವು
ಅಮಾವಾಸ್ಯೆಗೆ ರಜೆಯನ್ನು ಹಾಕಿ
ಸ್ಪೂರ್ತಿಯ ತಾರೋ ಓ ಸುಂದರ
ನಿನ್ನ ಹಾಲ್ಬೆಳದಿಂಗಳಿನಂತೆಯೇ
ಬೆಳಗಲಿ ನಮ್ಮೀ ಹೃದಯ ಮಂದಿರ
1043ಪಿಎಂ28022022
*ಅಮುಭಾವಜೀವಿ ಮುಸ್ಟೂರು*
ಶಿವನೇ ನಿನ್ನ ರಾತ್ರಿಯಲ್ಲಿ
ನೆನ್ನೆ ನಮಗೆ ಪುಣ್ಯಪ್ರಾಪ್ತಿ ಖಾತ್ರಿಯೂ
ಶಂಕರ ನೀನು ಸುಂದರ ವದನನು
ಭಕ್ತರಿಗಾಗಿ ತನ್ನನ್ನೇ ತಾ ನೀಡುವವನು
ಶಂಕರಿಯ ಪ್ರಾಣ ವಲ್ಲಭ
ನಿನ್ನ ವಾಹನನೇ ವೃಷಭ
ಅರ್ಧನಾರೀಶ್ವರ ಈ ಅಭಯಂಕರ
ಶರಣರ ಪಾಲಿನ ಶಂಭೋ ಶಂಕರ
ಕಣ್ಣಪ್ಪನಿಂದ ಕಣ್ಣನ್ನು ಪಡೆದ
ಮುಕ್ಕಣ್ಣ ನೀನು ಆಪ್ತರಕ್ಷಕ
ಗಣಪನಿಗೆ ಆನೆಯ ಮೊಗವಿತ್ತ
ಕೃಷ್ಣನ ಆರಾಧ್ಯ ಈ ಲಿಂಗ ಸ್ವರೂಪ
ಪ್ರೀತಿಯಲ್ಲಿ ಕರೆದರೆ ಕ್ಷಣದಲ್ಲಿ ಬರುವ
ಬಂದೊಡನೆ ಕೋರಿಕೆಯನ್ನು ಈಡೇರಿಸುವ
ಬೂದಿ ಬಡುಕ ಈ ಸ್ಮಶಾನ ರುದ್ರ
ಅವನೊಲುಮೆಯ ಪಡೆದ ಬಾಳು ಸುಭದ್ರ
ನಾಟ್ಯ ಪ್ರವೀಣ ಈ ನಟರಾಜನು
ವಿಷವನ್ನು ಕುಡಿದ ವಿಷಕಂಠನೂ
ಲಯಕಾರಕ ಬಲು ವಿನಯವಂತನು
ಕೋಪಗೊಂಡರೆ ರುದ್ರತಾಂಡವನೀತನು
ನಿನ್ನ ಕೃಪೆ ಇರಲಿ ನಮ್ಮ ಮೇಲೆ
ನಮ್ಮ ಆರಾಧ್ಯ ದೈವ ಶಿವಶಂಕರ
ನೀ ನಡೆಸಿದಂತೆ ನಾ ನಡೆಯುವೆವು
ಸಲಹು ನಮ್ಮನು ಮುರುಡೇಶ್ವರ
1106ಪಿಎಂ01032022
*ಅಮುಭಾವಜೀವಿ ಮುಸ್ಟೂರು*
ಬೇಲಿಯ ಹಾಕಿದೆ ಬದುಕು
ಹಾರಲಾಗದ ಬಂಧನದಿ ಸಿಲುಕಿ
ಆನಂದವನ್ನೇ ಕಳೆದುಕೊಂಡಿದೆ
ಪಂಜರದೊಳಗಿನ ಬದುಕು
ಸವಿ ಭೋಜನದ ಸುಖ
ಎಷ್ಟಿದ್ದರೇನು ಹಿತ ಕೊಡಬಲ್ಲದೇ
ದಾಹ ನೀಗದವನ ಜೊತೆ
ಎಷ್ಟು ದಿನ ಕಳೆದರೆ ಏನಂತೆ
ಮರುಭೂಮಿಯಲ್ಲಿ ನೀರನರಸಿದಂತೆ
ನಾಯಿ ಮುಟ್ಟಿದ ಮಡಿಕೆ ಬಾಯಿ
ಮುಚ್ಚುವ ಅನುಕಂಪಕ್ಕೆ ಕಟ್ಟಿದ ತಾಳಿ
ನರಕ ತೋರುವುದಲ್ಲದೆ ನಾಕವಾಗದು
ಕೊಟ್ಟ ಕುದುರೆಯ ಕಟ್ಟಿಹಾಕದ ಹಮ್ಮೀರ
ಸಿಂಹಾಸನದ ಮೇಲೆ ಇದ್ದರೇನಂತೆ
ಪ್ರಾಯ ಲಾಯದ ಅಷ್ಟವಕ್ರನಿಗೆ ಸಮನಲ್ಲ
ಹುಟ್ಟ ಬಟ್ಟೆಯೊಳಗಿನ ಉರಿ ತಣಿಸಲು
ಬೆತ್ತಲೆ ತನುವನಪ್ಪಿ ಅಧರಚುಂಬನದಿ
ಕಾಮಕಟ್ಟೆಯನೊಡೆವ ಸರದಾರ ಬೇಕು
ದೇವರ ಹೆಸರಿನಲ್ಲಿ ದಾಸಿಯಾಗಿ
ಹೇಸಿಗೆ ಪಡದ ಊರವರಿಗೆ ಹಾಸಿಗೆಯಾಗಿ
ಸುಲಿದ ಹ(ಹೆ)ಣ್ಣಿನ ಸಿಪ್ಪೆಯಾಯಿತು ಬದುಕು
ವೇಷ್ಯೆಗದು ದುಡಿಯುವ ಮಾರ್ಗ
ಸಾರವಿದ ಸಂಸಾರದೊಳಗೆ ಈಗ
ಉಗುಳಲಾರದ ನುಂಗಲಾರದ ನರಕದ ಬದುಕು
1049ಪಿಎಂ03032022
*ಅಮುಭಾವಜೀವಿ ಮುಸ್ಟೂರು*
ಒಡಲೊಳಗೆ ಬೆಂಕಿ ಕುದಿಯುತಿದೆ
ಹರೆಯವದಕ್ಕೆ ತುಪ್ಪ ಸುರಿಯುತ್ತಿದೆ
ಬೇಯುವ ಭಯದಲ್ಲಿ ಕಾದಿದೆ ಹೃದಯ
ನಲ್ಲನ ಬಿಸಿ ಅಪ್ಪುಗೆಗಾಗಿ ಸಂಜೆ ಸಮಯ
ಬೇಡದ ಕೊರಳಿಗೆ ತಾಳಿಯ ಕಟ್ಟಿ
ನಾಳೆಯ ಭರವಸೆಗೆ ಕೊಳ್ಳಿಯನ್ನಿಟ್ಟು
ಮದ್ಯದ ದಾಸನಾಗಿ ಸದ್ದಡಗಿಹನು
ಇರುಳು ಜಾರುವ ಮುನ್ನ ಕರೆ ತರಬೇಕಿದೆ
ತನು ಶೃಂಗಾರವನ್ನು ಬಯಸಿದೆ
ಮನ ಇವನಿಂದ ನೊಂದು ಸೊರಗಿದೆ
ಆನಂದವೆಂಬುದು ನಂದಿ ಹೋಗಿದೆ
ಮೈ ಮಾಡಿಕೊಂಡಿಹೆ ವಿಧಿಯಿಲ್ಲದೆ
ಕೈಲಾಗದವನು ಕುಡಿತದ ಆಸೆಗೆ
ಉಳ್ಳವರ ಮಂಚಕ್ಕೆ ತಳ್ಳಿ ಮಲಗಿಹನು
ಕರುಳಿಂಡಿದರೂ ಕೊರಳೊಡ್ಡಿದ ತಪ್ಪಿಗಾಗಿ
ಕೈ ಚಾಚಿ ನಿಂತಿರುವೆ ಕದತೆರೆದು
ಕಂಡ ಕನಸುಗಳೆಲ್ಲ ಸೋತವು
ದಿನಕ್ಕೊಬ್ಬನ ತೃಷೆ ನೀಗುತ ತನುವು
ಮುಳ್ಳ ಮೇಲಿನ ವಸ್ತ್ರದಂತಾಗಿದೆ
ಮಿಸುಕಿದರು ಹರಿದು ವ್ರಣವಾಗುತ್ತಿದೆ
ಇಷ್ಟೇ ತಾನೇ ಹೆಣ್ಣಿನ ಬಾಳು
ಕೈ ಹಿಡಿದವನು ಕೈಬಿಟ್ಟರೆ ಗೋಳು
ಸತ್ತು ಸಾಧಿಸುವುದೇನಿದೆಂದುಕೊಂಡರೆ
ನಾನೀಗ ನಿತ್ಯ ನರಕ ಉಣ್ಣುವವಳು
1057ಪಿಎಂ04032022
*,.,
ಅಮುಭಾವಜೀವಿ ಮುಸ್ಟೂರು*
*ನಾಳೆಯ ಭರವಸೆಯೊಂದಿಗೆ ಇಂದು ಬಾಳಬೇಕು*
ಈ ಬದುಕು ಬಲು ಸ್ವಾರ್ಥಿ. ನಾವು ಎಷ್ಟೇ ಪ್ರಯತ್ನಪಟ್ಟರೂ ಅದು ತನಗೆ ಹೇಗೆ ಬೇಕೋ ಹಾಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಕೆಲವೊಂದು ಬಾರಿ ಬದುಕು ನಮ್ಮ ಹಿಡಿತಕ್ಕೆ ಸಿಕ್ಕರೂ ಕೂಡ ಹಲವು ಬಾರಿ ಅದು ನಮ್ಮನ್ನು ಹಲವಾರು ಬಿಕ್ಕಟ್ಟುಗಳಲ್ಲಿ ಸಿಲುಕಿಸಿ ನಾವು ಹಿಡಿದ ಹಿಡಿತವನ್ನು ಸಡಿಲಿಸಿಕೊಂಡು ಮುನ್ನಡೆಯುತ್ತ ನಮಗೆ ಹಲವಾರು ಸಂಕಷ್ಟಗಳನ್ನು ನೀಡುವ ಮೂಲಕ ಅನುಭವದ ಪಾಠಗಳನ್ನು ಹೇಳಿಕೊಡುತ್ತದೆ. ನಮ್ಮ ಬದುಕು ನಮ್ಮ ಹಿಡಿತವನ್ನು ತಪ್ಪದಂತೆ ತುಂಬಾ ಜಾಗರೂಕತೆಯಿಂದ ಅದನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಅಕ್ಕ-ಪಕ್ಕ ಹಿಂದೆ ಮುಂದೆ ನೆರೆಹೊರೆಯ ಯಾವ ಮಾತುಗಳಿಗೂ ನಾವು ಕಿವಿಗೊಡದೆ ನಡೆದಾಗ ಮಾತ್ರ ನಮ್ಮ ಬದುಕು ಸುಸೂತ್ರವಾಗಿ ಸಾಗುತ್ತಿರುತ್ತದೆ. ಅವರ ಆಡುವ ಮಾತುಗಳಿಗೆ ಕಿವಿಗೊಟ್ಟೆವೆಂದರೆ ನಮ್ಮ ಬದುಕಿನ ಅವನತಿಯ ಅಲ್ಲಿಂದಲೇ ಶುರುವಾಗುತ್ತದೆ. ನಮ್ಮ ಬದುಕನ್ನು ನಾವೇ ಮುನ್ನಡೆಸಬೇಕೇ ವಿನಃ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ನಾವು ಯಾವುದೋ ಒಂದು ಮಾತಿಗೆ ಕಟ್ಟುಬಿದ್ದು ನಮ್ಮ ಬದುಕಿನ ಹಿಡಿತವನ್ನು ಅವರ ಕೈಗೆ ನೀಡಿದೆವೆಂದರೆ ಮುಗಿಯಿತು ನಾವು ನಮ್ಮ ಜೀವನದ ಗುರಿಯನ್ನು ಕಳೆದುಕೊಂಡು ಯಾವುದೋ ಮೋರಿ ಸೇರಿ ಬಿಡುತ್ತೇವೆ. ಹಾಗಾಗಿ ಯಾರು ಏನೇ ಅಂದರೂ ಯಾವುದೇ ಸಲಹೆ ಸೂಚನೆ ನೀಡಿದರು ಅಂತಿಮವಾಗಿ ತೀರ್ಮಾನಿಸಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿರುತ್ತದೆ.
ಜೀವನದಲ್ಲಿ ಕಷ್ಟಗಳು ಬರುವುದು ಹಾದಿ ತಪ್ಪಿದ ಬದುಕನ್ನು ಸರಿದಾರಿಗೆ ತಂದುಕೊಳ್ಳಲು ಇರುವ ಒಂದು ಅವಕಾಶ. ನಡೆಯುವ ಮನುಷ್ಯ ಎಡವುವುದು ಸಹಜ. ಎಡವಿ ಬಿದ್ದ ಜಾಗದಲ್ಲಿ ಆದ ನೋವು ಇಡೀ ಬದುಕಿನುದ್ದಕ್ಕೂ ನಮ್ಮನ್ನು ಮತ್ತೆ ಬೀಳದಂತೆ ಊರುಗೋಲಾಗಿರುತ್ತದೆ. ಎಂತಹ ಮಹನೀಯರೇ ಆದರೂ ಸಾಧಕರೆನಿಸಿ ಕೊಂಡವರು ಒಮ್ಮೆ ಜೀವನದಲ್ಲಿ ಬಿದ್ದ ಮೇಲೆಯೇ ಎದ್ದು ನಿಂತು ಬದುಕನ್ನು ಉತ್ತುಂಗಕ್ಕೆ ಹೊಯ್ದು ಇತರರಿಗೆ ಮಾದರಿಯಾಗುತ್ತಾರೆ. ಹಾಗೆ ನಾವು ಕೂಡ ಬಾಳುವ ಭರದಲ್ಲಿ ಸೋತೆವೆಂದು ಹತಾಶರಾಗದೆ ಸಾಧಿಸುವ ಹೊಸ ಹುಮ್ಮಸ್ಸಿನೊಂದಿಗೆ ಮುನ್ನಡೆಯಬೇಕು. ನಾವು ಬಿದ್ದ ಸಮಯದಲ್ಲಿ ನಕ್ಕವರ ಎದುರು ಎದ್ದು ನಿಲ್ಲಬೇಕು. ಆ ಭರವಸೆಯ ಆತ್ಮವಿಶ್ವಾಸ ನಮ್ಮಲ್ಲಿ ಅಚಲವಾಗಿರಬೇಕು. ನಗುವ ತುಟಿಗಳು ಎಂದಿಗೂ ಮೇಲೆತ್ತುವ ಕೈಗಳಾದವು. ಕುಹಕವಾಡಿ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಮಾತುಗಳಿಗೆ ಎಂದು ಕಿವಿಗೊಡಬಾರದು. ಯಾರು ಏನೇ ಹೇಳಿದರೂ ನಾವು ನಂಬಿದ ತತ್ವ ಆದರ್ಶ ಬದುಕಿನ ಬಗೆಗಿನ ನಮ್ಮ ಗುರಿ ವಿಶ್ವಾಸ ನಂಬಿಕೆ ಇದೆಲ್ಲದಕ್ಕೂ ಮಿಗಿಲಾಗಿ ಎಂಥದ್ದೇ ಸಂದರ್ಭದಲ್ಲೂ ಹಿಂದೆ ಸರಿಯಾದ ಸಾಧಿಸಿಯೇ ತೀರುವ ಛಲ ನಮ್ಮಲ್ಲಿ ಅಚಲವಾಗಿರಬೇಕು.
ಜೀವನದಲ್ಲಿ ಸೋತವರು ಯಾರು ಸತ್ತಿಲ್ಲ, ಸೋಲು ಸಾಯುವುದಕ್ಕೆ ಅಲ್ಲ ಸಾಧಿಸುವುದಕ್ಕೆ ಎಂದುಕೊಂಡಾಗ ಯಾವ ಹತಾಶೆಯ ನಮ್ಮನ್ನು ಕುಗ್ಗಿಸುವುದಿಲ್ಲ. ಸಾಧಕರ ಹಾದಿಯು ಕೂಡ ಕಲ್ಲು ಮಣ್ಣಿನಿಂದ ಕೂಡಿದ್ದರು ಅವರು ಸಾಧಿಸಿದ ನಂತರ ಅದೇ ಹಾದಿ ಇತರರಿಗೆ ಉತ್ತಮ ಮಾರ್ಗವಾಗಿ ತೋರುತ್ತದೆ. ಆದರೆ ನಮ್ಮ ನಮ್ಮ ಹಾದಿಗಳು ಯಾವತ್ತಿಗೂ ಭಿನ್ನ ಭಿನ್ನವಾಗಿಯೇ ಇರುತ್ತವೆ. ಬದುಕನ್ನು ನಾವು ನೋಡುವ ರೀತಿಯಂತೆಯೇ ಮುನ್ನಡೆಸಿಕೊಂಡು ಹೋಗುವುದು ನಮ್ಮ ಗುರಿ ಸಾಧನೆಯ ಮೊದಲ ಮೆಟ್ಟಿಲಾಗಿ ಇರಬೇಕು. ಅವರು ಹೇಳಿದರು ಅವರು ಹೇಳಿದರು ಎಂದು ನಮ್ಮ ದಾರಿಯ ಮಧ್ಯೆ ಕವಲುಗಳೆದ್ದರೆ ನಾವು ಸಾಗುವ ದಾರಿಯ ಕ್ಷಮತೆ ಕಡಿಮೆಯಾಗುತ್ತದೆ. ನಮ್ಮ ಗುರಿ ಸಾಧನೆಯಲ್ಲಿ ಮೂರನೆಯವರ ಕಿವಿ ತುರಿಸುವಿಕೆಗೆ ಅವಕಾಶ ನೀಡಲೇಬಾರದು. ಆಗ ಮಾತ್ರ ನಾವು ಜಯದ ನಗೆ ಬೀರಬಹುದು.
ನಾವು ಜೀವನದಲ್ಲಿ ಅದೆಷ್ಟೇ ಬಾರಿ ಸೋತರೂ ಮರಳಿ ಯತ್ನವ ಮಾಡಿ ಜೇಡ ಮೇಲೇರುವಂತೆ ನಾವು ಕೂಡ ಸತತ ಪರಿಶ್ರಮದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇ ಬದುಕಿನಲ್ಲಿ ನಾವು ಶರಣಾಗುವ ಬದಲು ತುಸು ಸೈರಣೆಯಿಂದ ಯಶಸ್ಸಿನ ಪ್ರೇರಣೆಯೊಂದಿಗೆ ಗೆದ್ದೇ ಗೆಲ್ಲುವೆ ಎಂಬ ಭರವಸೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪರಿಪಾಠದ ಪುಟದಲ್ಲಿ ನಮ್ಮ ಸಾಧನೆಯು ದಾಖಲಾಗುತ್ತದೆ. ಅದು ಸಾಧ್ಯವಾಗಬೇಕೆಂದರೆ ಇಂದು ಇಂದಿಗೆ ಮುಗಿಯಿತು ಎಂದು ಕೊಳ್ಳುವುದಕ್ಕಿಂತ ಇಂದು ಸಾಧ್ಯವಾಗದ್ದು ನಾಳೆ ಸಾಧ್ಯವಾಗುವುದೆಂದುಕೊಂಡರೆ ಯಾವುದು ಅಸಾಧ್ಯವಾಗಿ ಉಳಿಯದು. ಪ್ರತಿ ಸೋಲಿನ ಕುರಿತಾದ ಇಂತಹ ಧನಾತ್ಮಕತೆ ಸಾಧಿಸುವ ಉದ್ದೇಶಕ್ಕ ಉತ್ಸುಕತೆಯನ್ನು ನೀಡುತ್ತದೆ. ಆ ಉತ್ಸಾಹವನ್ನು ನಾವು ಎಂದಿಗೂ ಕಳೆದುಕೊಳ್ಳದಂತೆ ಸಾಗುವ ಮೂಲಕ ಸಂತೃಪ್ತ ಬದುಕಿಗೆ ನಾವು ಆಪ್ತರಾಗೋಣ.
0439ಎಎಂ09032022
*ಅಮುಭಾವಜೀವಿ ಮುಸ್ಟೂರು*
ದಿನದಾರಂಭದ ಮುಂಜಾನೆ
ಹೊಸ ಭರವಸೆಯೀವ ಸೂಚನೆ
ತಂಪಾಗಿ ಶುರುವಾಯಿತು ದಿನ
ಸಜ್ಜಾಗಲಿ ಕಾರ್ಯಕೆ ಈ ಮನ
ಉಷೆಯ ಕಿರಣ ಮೆಲ್ಲ ತಾಕಲು
ಹೂ ಪಕಳೆ ತೆರೆದು ಅರಳಲು
ಮಧುರ ಗಾನದ ಹಕ್ಕಿ ಕೊರಳು
ಹೊಳೆವ ಆ ಮಂಜಿನ ಹನಿಗಳು
ಇರುಳ ಸಂಕಷ್ಟವ ದಾಟಿ
ಹೊಸ ಚೈತನ್ಯವ ತುಂಬಿ
ಬೆಳಗು ಮೂಡಿತು ಉಲ್ಲಾಸದಿ
ಬದುಕಿನ ಪುಟ ತೆರೆಯಲು
ಪ್ರಕೃತಿ ಮಾತೆಯು ಈಗ
ನವನವೋನ್ಮೇಷಶಾಲಿನಿ
ಪ್ರತಿ ಕ್ಷಣವೂ ಹೊಸತನದಿ
ಹರಿಯುತಿದೆ ಭಾವವಾಹಿನಿ
ಆಸ್ವಾದಿಸುತ ಅನುಭವ ಪಡೆದು
ಕಾಲದೊಂದಿಗೆ ಹೊಂದಿ ನಡೆದು
ಬಾಳ ಕಟ್ಟಿಕೊಳ್ಳೋಣ ನಿತ್ಯ
ನಿಸರ್ಗದ ಚೆಲುವಿದು ಸತ್ಯ
0710ಎಎಂ17022022
*ಅಮುಭಾವಜೀವಿ ಮುಸ್ಟೂರು*
ಸೋತವರ ಮೇಲೆ ಇಲ್ಲಿ
ನಿತ್ಯ ಆರೋಪದ ಸುರಿಮಳೆ
ಗೆದ್ದವನ ಹೊತ್ತು ಮೆರೆಸುವರು
ಗೆಲುವನ್ನೇ ಎಲ್ಲ ಸಂಭ್ರಮಿಸುವರು
ಜಯವು ಹೇಗೆ ಬಂದಿತೆಂದು
ಯಾರು ತಲೆಕೆಡಿಸಿಕೊಳ್ಳರು ಇಲ್ಲಿ
ಗೆಲುವೊಂದೇ ಮುಖ್ಯ ಹಾದಿಯಲ್ಲ
ಶರಣಾಗತಿಯ ಎಂದು ಸೋಲಲ್ಲ
ಗೆದ್ದೇ ಗೆಲ್ಲುವೆನೆಂದು ಹೊರಟವನಿಗೆ
ನೂರು ಜನ ಅಡ್ಡಗಾಲಾಗಿ ತಡೆಯುವರು
ಬೆಣ್ಣೆ ಮಾತು ಹಣದ ಗಮ್ಮತ್ತು ಇದ್ದರೆ ಸಾಕು
ಗೆದ್ದೆತ್ತಿನ ಬಾಲ ಹಿಡಿಯುವವರೇ ಎಲ್ಲ
ಸೋತವನ ಪ್ರಯತ್ನದ ಮುಂದೆ
ಗೆದ್ದವನು ಬಲಾಡ್ಯನಾಗಿರಬಹುದು
ಗೆಲ್ಲುವವನಿಗೆ ಎದುರಾಳಿಯಾಗಿ ನಿಂತವನು
ಎಂದಿಗೂ ಬಲಹೀನನಾಗಿರಲಾರ
ಶಕುನಿಯಂತ ಜನರ ಕುಬುದ್ಧಿಯಿಂದ
ಕೊಂಡಿಮಂಚಣ್ಣನಂತವರ ಕುತಂತ್ರದಿಂದ
ಕೈಕೆಯಂತ ಕೃಷಮತಿಯ ಸಹಾಯದಿಂದ
ಗೆದ್ದೆ ಗೆಲುವೆಂದಿಗೂ ಸಾರ್ಥಕತೆ ಪಡೆಯದು
ಸೋತವನು ಸತ್ತರೆ ಏನಂತೆ
ಪ್ರತಿಸ್ಪರ್ಧೆ ನೀಡಿದ ಹೆಮ್ಮೆಯದು
ಸ್ವಾರ್ಥವಿಲ್ಲದ ಗೆಲುವು ಶ್ರೇಷ್ಠ
ಆಗದಕ್ಕೆ ಜಗದೆಲ್ಲೆಡೆ ಮನ್ನಣೆ ಸಿಗುವುದು
1045ಪಿಎಂ02032022
*ಅಮುಭಾವಜೀವಿ ಮುಸ್ಟೂರು*
ಅವಳ ಒಪ್ಪಿಗೆಯಿಲ್ಲದೇ
ನನ್ನ ಯಾವ ಬರಹಕ್ಕೂ
ಜೀವ-ಜೀವನವೆರಡು ಇಲ್ಲ
ಅವಳ ಮೊಗದಿ ನಗು ತರಿಸಿ
ಅವಳ ಹೃದಯವನೊಮ್ಮೆ ಒಪ್ಪಿಸಿ
ಜೀವ ತುಂಬುವವರೆಗೂ ನಿಲ್ಲಿಸುವುದಿಲ್ಲ
ನಾ ಬರೆದುದೆಲ್ಲಾ ಅವಳ
ಒಲವಿನ ಪರಿಪರಿ ಬೇಡಿಕೆ
ನನ್ನ ಅವಳ ನಡುವಿನ ಒಡಂಬಡಿಕೆ
ಈ ಬರಹವೆಲ್ಲ ಅವಳ ಪೂಜೆಗೆ
ಪ್ರತಿ ಸಾಲು ಅವಳಿಗಾಗಿಯೇ ಕಾಣಿಕೆ
ಅವಳು ಓದುವವರೆಗೆ ನನ್ನೊಳಗೆ ಚಡಪಡಿಕೆ
ನಮ್ಮಿಬ್ಬರದು ಹಾಲುಜೇನು ಮಿಶ್ರಣ
ನಾವು ಸಂಧಿಸಲು ಒಲವೇ ಕಾರಣ
ಆ ಗೆಲುವಿಗೆ ನನ್ನದೊಂದು ಪ್ರಣಾಮ
ಜಗಳವಾಡಿದರು ಜೊತೆಜೊತೆಯಲಿರುವೆವು
ಜೀವನದ ಬಂಡಿಯನ್ನು ಸಮನಾಗಿ ಎಳೆವ ನಾವು
ಹೊಂದಿಕೊಂಡು ಬಾಳಲು ಕಡೆಗೀಲು ಈ ಪ್ರೇಮ
ದೂರುವ ಮಾತೆಲ್ಲಿದೆ ಪ್ರೀತಿಯೊಳಗೆ
ಸೇರುವ ತವಕವಿದೆ ಎದೆಯೊಳಗೆ
ಒಲವಿನ ಅಂಟು ನಂಟ ಬೆಸೆದಿದೆ
ಬದುಕಿರುವೆವು ಉಸಿರಿರುವವರೆಗೆ
ಹಮ್ಮು-ಬಿಮ್ಮುಗಳಿಲ್ಲ ನಮ್ಮೊಳಗೆ
ನಾನು ಪತಿ ಅವಳು ಸತಿ ಸುಖೀ ದಂಪತಿ
1115ಪಿಎಂ14032022
*ಅಮುಭಾವಜೀವಿ ಮುಸ್ಟೂರು*
ಚಂದಿರನಿಲ್ಲದ ಬಾನೊಳಗೆ
ಏನಿದೆ ಅಂದ
ನಲ್ಲೆ ನಿನ್ನ ನಗುವಿಲ್ಲಿದೆ
ಎಲ್ಲಿದೆ ಹೇಳು ಆನಂದ
ಪ್ರೀತಿಯ ಕೋರಿಕೆ ಇದು
ಪ್ರತಿ ಕ್ಷಣವು ಬೇಡಿಹುದು
ತಾರೆಗಳ ಜೊತೆ ಶಶಿ ಬಂದರೆ ತಾನೇ
ಇರುಳ ಈ ಬಾನೊಳಗೆ ಬೆಳಕು
ಫಳಫಳ ಹೊಳೆವ ನಯನಗಳ ಜೊತೆ
ನಿನ್ನೀ ನಗು ಬೆರೆತರೆ ಸುಂದರ ಬದುಕು
ತಂಗಾಳಿಯು ತೀಡಿದ ಹಾಗೆ
ನಲ್ಲೆ ನಿನ್ನೀ ಮುಗುಳ್ನಗೆ
ಅರಳಿದೆ ನೈದಿಲೆ ಬೆಳದಿಂಗಳ ಕಂಡು
ಕೆನ್ನೆಯ ಮುತ್ತಿದೆ ಮುಂಗುರುಳ ದಂಡು
ತಣ್ಣನೆ ಹೊತ್ತಲಿ ಬೆಚ್ಚನೆ ಅನುಭವ
ಪ್ರೀತಿ ಸಾಗರ ಒಮ್ಮೆಲೆ ಉಕ್ಕುವ ಸಂಭವ
ಈ ರಾತ್ರಿಯು ಸರಿಯದೆ ನಿಂತು ಬಿಡಲಿ
ಮಗುವಾಗಿ ಹೀಗೆ ಮಲಗುವೆ ನಿನ್ನ ಮಡಿಲಲಿ
ಆಹಾ ಎನಿಸುವ ಹಿತಕರ ರಾತ್ರಿ
ಬೆಚ್ಚಗೆ ಮಲಗಿದೆ ಧರಿತ್ರಿ
ನಲ್ಲೆ ನಿನ್ನ ಒಲವಿದು ಖಾತ್ರಿ
ಎಂದೆಂದಿಗೂ ಅಮರ ನಮ್ಮಿ ಮೈತ್ರಿ
ನಿಜವಾಯಿತು ಒಲವಿನ ಸಾಂಗತ್ಯ
ಖುಷಿಯ ಹಂಚಿತು ಈ ನಮ್ಮ ದಾಂಪತ್ಯ
0948ಪಿಎಂ15032022
*ಅಮುಭಾವಜೀವಿ ಮುಸ್ಟೂರು*
ಕನ್ನಡ ಉಳಿಸಲು
ನುಡಿಯ ಅಡಿಯಲ್ಲಿ
ನಾಡಿಗಾಗಿ ದುಡಿಯೋಣ
ಕನ್ನಡವ ಉಳಿಸಿ-ಬೆಳೆಸಲೆಂದೇ
ಪಣತೊಡೋಣ
ಪಂಪ-ರನ್ನರಲಿ ಕಾವ್ಯ ಕಟ್ಟಿಸಿ
ಮಯೂರ ಪುಲಕೇಶಿಯ ಪರಾಕ್ರಮದಿ
ಕಟ್ಟಿದ ನಾಡಿಗೆ ನಾವಿಂದು
ಅಭಿಮಾನದ ಜ್ಯೋತಿಯ ಬೆಳಗೋಣ
ಕುವೆಂಪು ಕಾರಂತ ಬೇಂದ್ರೆಯವರಿಗೆ
ಜ್ಞಾನಪೀಠದ ಮುಕುಟವಿರಿಸಿ
ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸಿದ
ಕರುಣೆಯ ನಾಡಿಗೆ ಒಡನಾಡಿ ಆಗೋಣ
ಕರಾವಳಿಯ ತೀರದಲ್ಲಿ
ನದಿಯು ಸೇರುವ ತವಕದಲ್ಲಿ
ಸಹ್ಯಾದ್ರಿಯ ಹಸಿರು ಸಿರಿಯ
ಸಂಪತ್ತಿಗೆ ಆಪತ್ತು ಬರದಂತೆ ಕಾಯೋಣ
ನಾಡು-ನುಡಿಗಾಗಿ ಟೊಂಕ ಕಟ್ಟಿದವರ
ಬಿಂಕಕೆ ಚ್ಯುತಿಬಾರದಂತೆ ಸಂಘಟಿಸೋಣ
ಈ ವರ್ಣಮಾಲೆಯ ಸುಸ್ವರ
ಕಿವಿಗಳ ತುಂಬಿ ರಿಂಗಣಿಸಲಿ
ಕನ್ನಡಕ್ಕಾಗಿ ಕೈ ಎತ್ತು
ಓ ಕನ್ನಡದ ಧೀರ
ನಾಡು-ನುಡಿಯ ಉಳಿವಿಗೆ
ನಿನ್ನ ಹೋರಾಟವಾಗಲಿ ಅಮರ
0239ಪಿಎಂ25112015
ಕನ್ನಡವೇ ತಾಯ್ನುಡಿಯು
ಕರುನಾಡೆ ತಾಯ್ನೆಲವು
ಲೋಪವಾಗದಂತೆ ದೀಪ
ಹಚ್ಚುವ ಬನ್ನಿ ನುಡಿ ಉಳಿಯಲು
ತಮಿಳು ತೆಲುಗೊಡನೆ ಸ್ಪರ್ಧಿಸಿ
ಮರಾಠಿ ಮಲೆಯಾಳಿಗಳ ಹಿಮ್ಮೆಟ್ಟಿಸಿ
ಆಂಗ್ಲಭಾಷೆಯ ಆಕ್ರಮಣವನ್ನು
ಪ್ರತಿರೋಧಿಸಿ ಉಳಿಸಿಕೊಳ್ಳುವ ನಮ್ಮತನ
ನೆಲ ಜಲ ಕಾಗಿ ನಿತ್ಯ ಉಪಟಳ
ಕೊಡುವವರಿಗೆರೆಗಿದೆ ಈಗ ಕಳವಳ
ಕೈಹಿಡಿದು ಮೇಲೆತ್ತೋಣ
ಕನ್ನಡಿಗರ ಸೌಹಾರ್ದತೆ ತೋರೋಣ
ಜ್ಞಾನಪೀಠದ ಅಧಿಪತಿಗಳಾಗಿ
ಕಲೆ-ಸಂಸ್ಕೃತಿಗಳ ಪೋಷಕರಾಗಿ
ಅನುಭಾವದ ವಚನಗಳ ಮಂತ್ರ ಹಾಡಿ
ಜಾನಪದ ತ್ರಿಪದಿಗಳ ವಂದಿಸೋಣ
ಪ್ರೀತಯಲಿ ನಾವೆಲ್ಲ ಗೆಲ್ಲೋಣ
ಶಾಂತಿಯಲಿ ಎಲ್ಲವನು ಪಡೆಯೋಣ
ರಕ್ತರಹಿತ ಕ್ರಾಂತಿ ಮಾಡಿ
ಈ ಗಂಧದಗುಡಿಯಲ್ಲಿ ಬಾಳೋಣ
ಕರುನಾಡಿಗೆ ಜಯವೆನ್ನಿರಿ
ಕನ್ನಡವನ್ನೇ ಉಸಿರಾಡಿರಿ
ಚಿರ ಉಳಿಯಲಿ ಈ ಭಾಷೆ
ಅದೇ ಕನ್ನಡಿಗರೆಲ್ಲರ ಅಭಿಲಾಷೆ
0254ಪಿಎಂ25112015
ಅಮುಭಾವಜೀವಿ ಮುಸ್ಟೂರು
ಬೆಳಕಿನಿಂದ ಹೂವು ಬಾಡಿತ್ತು
ಕ್ರೂರ ಬೆಳಕು ಮಾತ್ರ ಮೆರೆಯುತ್ತಿದೆ
ಇಂಥ ದುಷ್ಟತನಕ್ಕೆ ಬಲಿಯಾಗುವ
ಅಮಾಯಕರಿಗೆ ಪಾಠವಾಗಬೇಕಿದೆ
ಹೊಸತನದ ಹುಮ್ಮಸ್ಸಿನಲ್ಲಿ ಏನನ್ನೋ ಸಾಧಿಸಿ ಬಿಡಬೇಕೆಂಬ ಹುಚ್ಚು ಹಂಬಲದಲ್ಲಿ ಹೋಗುತ್ತಿರುವ ದಾರಿ ಸರಿಯಾದದ್ದೋ ಸುರಕ್ಷಿತವಾದದ್ದೋ ಎಂಬುದನ್ನು ಕೂಡ ಅರಿಯದಷ್ಟು ಉತ್ಕಟತೆಯಲ್ಲಿ ನಮಗೆ ಮೋಸ ಮಾಡಲೆಂದೇ ಕಾದಿರುವ ಗೋಮುಖ ವ್ಯಾಘ್ರಗಳ ಕಪಿಮುಷ್ಠಿಗೆ ಸಿಲುಕಿ ಪಡಬಾರದ ಪಾಡು ಅನುಭವಿಸಿ ನೊಂದು ಬೆಂದು ಬಸವಳಿದು ಈ ಜೀವ ಜೀವನ ಎರಡು ಬೇಡವೆಂದು ನಿರ್ಧರಿಸುವ ಹಂತಕ್ಕೆ ತಲುಪಿ ಹೋಗಿದೆ ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶಗಳನ್ನು ನೀಡುವ ನೆಪದಲ್ಲಿ ಅವಕಾಶವಾದಿಗಳು ನಮ್ಮನ್ನು ಬಳಸಿಕೊಂಡು ಹಿಂಡಿ ಹಿಪ್ಪೆ ಮಾಡಿ ಬೀದಿಗೆಸೆದು ಬಿಡುವರು. ಈಗಿನ ಯುವ ಸಮುದಾಯಕ್ಕೆ ತಾಳ್ಮೆಯ ಕೊರತೆ ಎದ್ದು ಕಾಣುತ್ತದೆ. ನಾಲ್ಕು ಸಾಲು ಗೀಚಿದ್ದೆ ತಡ ತಾನ ದೊಡ್ಡ ಬರಹಗಾರನೇ ಎಂದು ತೋರಿಸಿಕೊಳ್ಳುವ ಇರಾದೆಗೆ ಬಿದ್ದು ಹೋಗುವ ದಾರಿಯನ್ನೇ ದಿಕ್ಕು ತಪ್ಪಿಸಿ ಪ್ರಶಸ್ತಿ-ಪುರಸ್ಕಾರಗಳ ಅಮಲೇರಿಸಿ ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡು ಪ್ರತಿಭೆಯನ್ನು ತುಳಿದು ಬೆಳೆದು ನಿಲ್ಲುವ ಭಂಡರ ಮೋಡಿಯ ಮಾತುಗಳಿಗೆ ಬಲಿಯಾಗಿ ಸರ್ವಸ್ವವನ್ನೇ ಕಳೆದುಕೊಂಡು ಸಮಾಜದೆದುರು ಅದನ್ನು ಒಪ್ಪಿಕೊಳ್ಳಲಾಗದೆ ಅನಾಹುತ ಮಾಡಿಕೊಳ್ಳುವ ಅಮಾಯಕ ಯುವಮನಸ್ಸುಗಳಿಗೆ ಹಾಲು ಯಾವುದು ಸುಣ್ಣದ ನೀರು ಯಾವುದು ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿದೆ.
ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರಚಲಿತದಲ್ಲಿರುವ ಮುಖ ಒಂದಾದರೆ, ಮರೆಯಲ್ಲಿ ಅವಿತು ಮರಳು ಮಾಡಿ ಪ್ರಪಾತಕ್ಕೆ ತಳ್ಳುವ ಖೂಳರ ಸಮೂಹವೇ ತುಂಬಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅನನುಭವಿ ಯುವಕ/ ಯುವತಿಯರು ಬಹುಬೇಗ ಅಂತಹವರನ್ನು ನಂಬಿ ಮೋಸ ಹೋಗಿರುವುದೇ ಹೆಚ್ಚು. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲದ ಅಪರಿಚಿತರ ಜೊತೆ ವ್ಯವಹಾರ ನಡೆಸುವಾಗ ತುಂಬಾ ಜಾಗರೂಕತೆಯಿಂದ ಮುಂದುವರಿಯಬೇಕಾಗುತ್ತದೆ. ನಮ್ಮ ಪ್ರತಿಭೆ ನಮ್ಮ ಬೆಳವಣಿಗೆಗೆ ಪೂರಕವಾಗಿರಬೇಕು. ಕಾಯುವ ಮನಸ್ಥಿತಿ ಗಾಢವಾಗಿ ಇರಬೇಕು. ಮೋಡಿಗಾರನ ಮಾಯಾಜಾಲದಂತೆ ಯಾವುದು ಅಂದುಕೊಂಡಂತೆ ತಕ್ಷಣಕ್ಕೆ ಆಗುವುದಿಲ್ಲ. ಅದಕ್ಕೆಲ್ಲ ತುಂಬಾ ಸಮಯ ಬೇಕಾಗುತ್ತದೆ. ಈ ಮಧ್ಯೆ ನಮ್ಮ ಪ್ರತಿಭೆಯನ್ನು ಗುರುತಿಸುವ ನೆಪದಲ್ಲಿ ನಮ್ಮ ಮುಗ್ಧತೆಯನ್ನು ಕೈವಶ ಮಾಡಿಕೊಂಡು ತಾವು ಹೇಳಿದಂತೆ ಕೇಳುವ ಸೂತ್ರದ ಗೊಂಬೆಗಳನ್ನಾಗಿಸಿಕೊಂಡು ಮೆರೆಯುವವರ ಮುಂದೆ ನಾವು ಕುರಿಗಳಂತೆ ತಲೆತಗ್ಗಿಸಿ ನಿಲ್ಲಬಾರದು. ನಮ್ಮೊಳಗಿನ ಕ್ರಿಯಾಶೀಲತೆ ಪ್ರಾಮಾಣಿಕವಾಗಿದ್ದೂ ಕನಸು ಕಲ್ಪನೆಗಳಿಗೆ ಜೀವ ತುಂಬುವಂತೆ ಇದ್ದರೆ ವರುಷಗಳ ಲೆಕ್ಕದಲ್ಲಿ ಅದನ್ನು ಕಾಪಿಟ್ಟುಕೊಂಡು ನಮ್ಮ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಸಂದರ್ಭದಲ್ಲಿ ಕೆಲವರು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಪ್ರತಿನಿಮಿಷವೂ ಎಚ್ಚರಿಕೆಯಿಂದ ಮುಂದೆ ಸಾಗಿದಾಗ ಮಾತ್ರ ನಮ್ಮ ಗುರಿ ತಲುಪುತ್ತೇವೆ. ಯಾವುದೇ ಹಿರಿಮೆ ಗರಿಮೆ ಕಡೆಗೆ ಮನಸ್ಸು ಕೊಡದೆ ನಮ್ಮೊಳಗಿನ ಉತ್ಕಟೇಚ್ಛೆಯು ನಮ್ಮ ಉನ್ನತಿಗೆ ಮೆಟ್ಟಿಲಾಗುವಂತೆ ಮಾರ್ಪಡಿಸಿಕೊಂಡು ನಾವಿಲ್ಲಿ ಬೆಳೆಯಬೇಕೆ ವಿನಹ ಗೊತ್ತುಗುರಿಯಿಲ್ಲದೆ ಯಾವುದೇ ವ್ಯಕ್ತಿ ಸಂಘಟನೆಯವರು ಮೂಗಿನ ತುದಿಗೆ ತುಪ್ಪ ಸವರುವ ಕೆಲಸ ಮಾಡುವಾಗ ಅಂಥವರಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಸಾಧನೆಯ ಗಮ್ಯದೆಡೆಗೆ ದೃಷ್ಟಿನೆಟ್ಟು ಸಾಗಬೇಕು. ಅದರಲ್ಲೂ ಹೊಸಪೀಳಿಗೆಯ ಯುವಕ-ಯುವತಿಯರು ಅನುಭವದ ಕೊರತೆಯಿಂದಲೂ ಅತಿಯಾದ ಆತ್ಮವಿಶ್ವಾಸದಿಂದಲೋ ಯಾರು ಗುರುತಿಸಿ ಬೆಳೆಸುತ್ತಾರೆ ಎಂಬ ಅಂಧಶ್ರದ್ಧೆಯಿಂದ ಮುಂದೆ ಹೋದರೆ ಅವರು ನಮ್ಮ ಕಣ್ಣಿಗೆ ಪಟ್ಟಿ ಕಟ್ಟಿ ನಮ್ಮ ಜುಟ್ಟು ಹಿಡಿದು ಅವರಿಗೆ ಬೇಕಾದಂತೆ ನಡೆಸಿಕೊಂಡು ಎಲ್ಲ ಬರಿದಾಗಿಸಿ ನಡು ನೀರಲ್ಲಿ ಕೈ ಬಿಟ್ಟು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ತೀವ್ರತರ ಖಿನ್ನತೆಗೆ ಒಳಗಾಗಿ ಅನ್ಯಾಯ ಎಸಗಿದವರ ವಿರುದ್ಧ ಸೆಟೆದು ನಿಲ್ಲಲಾಗದೆ, ಮೋಸ ಹೋದದ್ದನ್ನು ಅರಗಿಸಿಕೊಳ್ಳಲಾಗದೆ, ಸಮಾಜದೆದುರು ಮುಖ ತೋರಿಸಲಾಗದೆ ಸುಂದರವಾದ ಬದುಕಿಗೆ ಇತಿಶ್ರೀ ಹಾಡುವುದು ವೀರರ ಲಕ್ಷಣವಲ್ಲ. ತೊಂದರೆ ಕೊಟ್ಟವನನ್ನು ಬಯಲಿಗೆಳೆದು ಜಗದೆದುರು ಅವನ ಕಪಟತನ ಜಗಜ್ಜಾಹೀರು ಮಾಡಿ ಮುಂದೆ ಯಾರು ಅಂತವನ ಆಮಿಷಗಳಿಗೆ ಬಲಿಯಾಗದಂತೆ ಕಾಯುವ ಕಟ್ಟಾಳುಗಳಾಗಿ ನಿಂತು ಸಮಸ್ಯೆಯನ್ನು ಎದುರಿಸಬೇಕು.
ನಮ್ಮ ಕಣ್ಣೆದುರೇ ನಡೆಯುವ ಇಂತಹ ದುಷ್ಕೃತ್ಯಗಳಿಗೆ ಸಾಮೂಹಿಕವಾಗಿ ನ್ಯಾಯಸಮ್ಮತವಾಗಿ ಕಾನೂನಾತ್ಮಕವಾದ ಹೋರಾಟದಿಂದ ಅಪರಾಧಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಅದನ್ನು ಬಿಟ್ಟು ಆಗಿ ಹೋದದ್ದರ ಬಗ್ಗೆ ಮರುಕಪಟ್ಟು ಅನುಕಂಪದ ನಾಲ್ಕು ಮಾತುಗಳನ್ನಾಡಿದರೆ ತಪ್ಪಿತಸ್ಥನಾದವನು ಅದನ್ನೇ ನಮ್ಮ ಅಸಹಾಯಕತೆ ಎಂದು ತಿಳಿದು ಮತ್ತೆ ಮತ್ತೆ ಅಂಥದೇ ಕೃತ್ಯಗಳನ್ನೆಸಗುತ್ತಾ ಸಮಾಜದಲ್ಲಿ ದೊಡ್ಡ ವ್ಯಕ್ತಿಯಂತೆ ಬಿಂಬಿತನಾಗುತ್ತಾನೆ. ಯಾರು ನನಗೆ ಏನೂ ಮಾಡಲಾರರು ಎಂದು ಮೆರೆಯುತ್ತಿರುತ್ತಾನೆ. ಅಂತದಕ್ಕೆಲ್ಲ ಆಸ್ಪದ ನೀಡದೆ ನಾವು ನಡೆಯುವ ಹಾದಿಯಲ್ಲಿ ಮೈಯೆಲ್ಲ ಕಣ್ಣಾಗಿ ನಮ್ಮನ್ನು ನಾವು ಕಾಪಾಡಿಕೊಂಡು ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಇಲ್ಲಿ ಬೆಳೆಸುವ ಕೈಗಳ ಪ್ರಾಮಾಣಿಕತೆ ಮೇಲ್ನೋಟಕ್ಕೆ ಕಾಣುವುದೇ ಇಲ್ಲ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ನಾವು ಹಾದಿ ತಪ್ಪುವ ಅವಕಾಶವೇ ಇಲ್ಲದಂತೆ ಕಟ್ಟೆಚ್ಚರದಿಂದ ನಮ್ಮ ಕನಸು ಭಾವನೆಗಳ ಜೊತೆಗೆ ಗುರಿ ತಲುಪುವ ವೇದಿಕೆಯನ್ನು ನಾವೇ ಮಾಡಿಕೊಂಡು ಬೆಳೆಯಬೇಕೆ ವಿನಹ ಯಾರದೋ ಮರ್ಜಿಗೆ ಒಳಗಾಗಿ ಅವನ ಸಿಗುವ ಭಿಕ್ಷೆಗೆ ಬಾಯಿತೆರೆದು ಕೂರದೆ ನಮ್ಮತನ ನಮ್ಮ ಘನತೆಯನ್ನು ಕಾಯ್ದುಕೊಂಡು ಸಮಾಜದಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಬೇಕು.
1143ಪಿಎಂ16032022
ಅಮುಭಾವಜೀವಿ ಮುಸ್ಟೂರ