Tuesday, May 24, 2022

ಕವನ

ಎಲ್ಲೆಲ್ಲೋ ಅಲೆದು
ನಾ ಬಸವಳಿದು ಬಂದು
ಒಮ್ಮೆ ಹಿಂತಿರುಗಿ ನೋಡಿದೆ
ನಾ ಅರ್ಥವಿಲ್ಲದೇ ವ್ಯರ್ಥ ನಡೆದಿದ್ದೆ

ಇಲ್ಲಿರುವ ಎಲ್ಲವನ್ನು ಬಿಟ್ಟು
ಇಲ್ಲದಿರುವುದಕೆ ಆಸೆಪಟ್ಟು
ಎಲ್ಲೂ ಸಲ್ಲದೆ ಎಲ್ಲಾ ಕಳಕೊಂಡೆ
ನಾನೆಂಬ ಅಹಮಿನ ಕತ್ತಲೆಯೊಳಗೆ

ಸಂಬಂಧದ ಬಂಧವ ಕಳಚಿ
ಅವರಲ್ಲೆಲ್ಲಾ ನೋವಂದನುಳಿಸಿ
ದೂರ ದಿಗಂತವ ಪಡೆವ ಭ್ರಮೆಯಲಿ
ಇಲ್ಲಿರುವ ನಂದನವನವ ಬಾಡಿಸಿದೆ

ಹೂವಿಂದ ನಗುವ ಕಲಿಯದೇ
ಹಣ್ಣಿಂದ ಸವಿಯ ಪಡೆಯದೆ
ಹಸಿರಿಂದ ಆನಂದ ಹೊಂದದೆ
ಹಳಸಿದಾಸೆಯ ಹಿಂದೆ ನಡೆದೆ

'ನಾನು' ಹೋಗದೆ ಗುಡಿ ಸುತ್ತಿದರೇನು
ನಾನು ಬಿಡದೇ ಮೋಕ್ಷ ದೊರೆವುದೇನು
ನಾನೇನನೂ ತರದೆ ನನ್ನದೆಂದು ಬೀಗಿದೆ
ತೊಟ್ಟು ಕಳಚಿದ ಹಣ್ಣಾಗಿ ಬಿದ್ದು ಮಣ್ಣಾದೆ

ಬೆಳಗಲಿ ಪ್ರೀತಿಜ್ಯೋತಿ
ಅಂಧಕಾರದ ತಮವ ಕಳೆದು
ಉಕ್ಕಲಿ ಆ ನಗುವು
ಮಳೆಗಾಲದ ಮಿಂಚಂತೆ ಹೊಳೆದು.

ಅಮು
1048ಎಎಂ240515

No comments:

Post a Comment