*ನಾನೇಕೆ ಬರೆಯುತ್ತೇನೆ ಎಂದರೆ*
ಬದುಕಿನ ಅನುಭವಗಳನ್ನು ಕವಿತೆ ಕಟ್ಟುವ ಮಟ್ಟಿಗೆ ನನ್ನಲ್ಲಿ ಬರವಣಿಗೆ ಇದೆ ಎಂದು ಗೊತ್ತಾಗುವಷ್ಟರಲ್ಲಿ ನೂರಾರು ಕವಿತೆಗಳಲ್ಲಿ ಆಗಲೇ ಅದು ಅನಾವರಣಗೊಂಡಾಗಿತ್ತು.
ಶಾಲಾ ಕಾಲೇಜು ದಿನಗಳಲ್ಲಿ ದಾರ್ಶನಿಕರ ಉಕ್ತಿಗಳಂತೆಯೇ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆಯುತ್ತಿದ್ದೆ. ಅದನ್ನು ಗಮನಿಸಿದ ಗುರುಗಳು ಬೆನ್ತಟ್ಟಿದ್ದರು. ಮುಂದೆ ಶಿಕ್ಷಕರ ತರಬೇತಿ ಪಡೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬರೆಯುವ ಹಂಬಲ ಚಿಗುರೊಡೆಯಿತು. ಅಂದು ಆ ಹಂಬಲ ನನ್ನಲ್ಲಿ ಬರದಿದ್ದರೆ ಇಂದು *ಸಾವಿರ ಕವಿತೆಗಳ ಸರದಾರನಾಗಿ* ಗಣೇಶ್ ಸರ್ ಅವರಿಂದ ಪ್ರಶಂಶಿಸಲ್ಪಡುತ್ತಿರಲಿಲ್ಲವೇನೋ. ಅಂದು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನ್ನ ಕೆಲವು ಸ್ನೇಹಿತರು ಬರೆಯುತ್ತಿದ್ದ ಕವಿತೆ ಚುಟುಕುಗಳನ್ನು ಗಮನಿಸುತ್ತಿದ್ದವನಿಗೆ *ನಾನೇಕೆ ಬರೆಯಬಾರದು* ಅನ್ನಿಸಿತು. ಅಲ್ಲದೆ ಹಾಸ್ಟೆಲ್ನಲ್ಲಿದ್ದ ಕಾರಣ ವಾರದಲ್ಲಿ ಒಂದೆರಡು ಸಿನಿಮಾಗಳನ್ನು ನೋಡುತ್ತಿದೆ. ಅಲ್ಲಿ ನನಗೆ ಮೂಡಿದ ಭಾವನೆಗಳಿಗೆ ಅಕ್ಷರ ರೂಪ ಕೊಡುತ್ತಾ ಬಂದೆ. ಮತ್ತೆ ಅದನ್ನು ನಾನು ಓದಿದಾಗ ಇನ್ನೊಂದು ಭಾವ ಮೂಡುತ್ತಿತ್ತು, ಹೀಗೆ ನನ್ನ ಬರವಣಿಗೆಬರವಣಿಗೆಯ ಪಯಣ ಸಾಗಿತ್ತು.ಎರಡು ವರ್ಷದ ತರಬೇತಿ ಮುಗಿಯುವುದರೊಳಗೆ ನೂರಾರು ಕವಿತೆಗಳು ಜನ್ಮತಾಳಿದ್ದವು.
ನಾನು ಕಂಡ ನನ್ನ ಸುತ್ತ ಮುತ್ತಲಿನ ಜನರ ಬದುಕು ಬವಣೆಗಳಿಗೆ ನನ್ನದೇ ಧಾಟಿಯಲ್ಲಿ ಭಾವನೆಗಳನ್ನು ಹರಿಯಬಿಡುತ್ತಿದ್ದೆ. ಅಲ್ಲಿದೆ ಆಗಿನ ವಯೋಸಹಜ ಪ್ರೀತಿ ಪ್ರೇಮದ ಕುರಿತು ಬರೆಯುವಾಗ ನೀನು ಯಾರನ್ನಾದರೂ ಪ್ರೀತಿಸುತ್ತಿರಬೇಕು ಅದಕ್ಕೆ ಹೀಗೆಲ್ಲ ಬರೆದಿದ್ದೀಯಾ ಎಂದು ಜನ ಆಡಿಕೊಂಡರು. ಆದರೆ ನಾನು ಅದಕ್ಕೆ ತಲೆಕೆಡಿಸಿಕೊಳ್ಳದೆ ಆ ಸಂದರ್ಭಕ್ಕೆ ಆ ಕ್ಷಣದಲ್ಲಿ ಮೂಡಿದ ಭಾಗಗಳನ್ನು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿಯಾದವನು ಸಕಲರನ್ನು ಪ್ರೀತಿಸುವ, ಜಗತ್ತಿನ ಚರಾಚರಗಳಲ್ಲಿ ಪ್ರೀತಿಯುಂಟು ಎಂಬುದನ್ನು ಅರಿತವನಾದ್ದರಿಂದಲೇ ಕವಿಭಾವ ಕೂಡ ಹದವಾಗಿ ಮೃದುವಾಗಿ ಓದುಗರಿಗೆ ಹತ್ತಿರವಾಗುವಂತೆ ಚಿತ್ರಿಸುವ ಶಕ್ತಿಯುಳ್ಳವನಾಗಿರುತ್ತಾನೆಂಬುದು ನನ್ನ ನಂಬಿಕೆ.
ಹೀಗೆ ಬರೆಯುತ್ತಿದ್ದ ನನಗೆ ಯಾವ ವೇದಿಕೆಯೂ ಸಿಗದೆ ಕೊರಗುತ್ತಲೇ ಬಂದ ಭಾವನೆಗಳಿಗೆ ಎಂದಾದರೊಂದು ದಿನ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ಬರೆಯುತ್ತಾ ಬಂದೆ. *ನಾನೇಕೆ ಬರೆಯುತ್ತೇನೆ* ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಆದರೆ ಬಂದ ಭಾವನೆಗಳು ಹಾಗೆ ಸಾಯಬಾರದು ಎಂದು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿತೆಗಳಲ್ಲಿ ಜೀವನ ಪ್ರೀತಿ, ಬದುಕಿನ ರೀತಿ, ಬವಣೆಗಳು ತಂದೊಡ್ಡುವ ಫಜೀತಿ ಹೀಗೆ ಎಲ್ಲವನ್ನೂ ನನ್ನ ಅಲ್ಪಜ್ಞಾನದ ಅಚ್ಚಿನಲ್ಲಿ ಹಾಕಿ ರೂಪ ಕೊಡುತ್ತಾ ಬಂದೆ. ಓದುಗರಿಗೆ ಅದು ಎಲ್ಲೋ ತಮ್ಮದೇ ಬದುಕಿನ ಘಟನೆ ಅನಿಸಿ ಅದರಿಂದ ಹೊರಬರುವ ದಾರಿ ನನ್ನ ಕವಿತೆಗಳಲ್ಲಿ ಕಂಡು ಕೊಳ್ಳಲು ಪ್ರಯತ್ನ ಪಡುತ್ತಿದ್ದರು.
ನನ್ನ ಕವಿತೆಗಳಲ್ಲಿ ಸತ್ವವಿದೆ, ಬರೆಯುವ ನನಗೆ ಆ ಬದ್ದತೆಯಿದೆ ಎಂಬುದು ಗೊತ್ತಾದದ್ದು ಇತ್ತೀಚಿನ ದಿನಗಳಲ್ಲಿ. ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಪ್ರತಿಕ್ರಿಯೆಗಳು ಬರೆಯುವ ನನಗೂ ಒಂದು ಬಹುದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿತು. ನನ್ನ ಕವಿತೆಗಳು ನೂರಾರು ಜನರನ್ನು ತಲುಪಿ ಅವು ಅಲ್ಲಿ ಪಡೆದ ಪ್ರಶಂಸೆಗಳು ನಾನು ಈ ಸಮಾಜಕ್ಕೆ ಈ ರೀತಿಯಾಗಿ ಸೇವೆ ಸಲ್ಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡೆ. ನನ್ನ ಬರಹ ನೊಂದ ಶೋಷಿತ ಜನರ ಕೂಗಾಗಬೇಕು ಎಂದು ಆ ನಿಟ್ಟಿನಲ್ಲಿ ಆ ಸಂದರ್ಭದಲ್ಲಿ ಸಮಾಜದ ಘಟನೆಗಳನ್ನು ಕವಿತೆಗಳಲ್ಲಿ ಬರೆಯುತ್ತಿದ್ದೇನೆ.
ಕೊನೆಯದಾಗಿ ನಾನು ಈ ಸಮಾಜದ ಕೂಸು. ಅದು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ನೋವು ಅಸಮಾಧಾನ ಅಮಾನವೀಯ ಕೃತ್ಯಗಳನ್ನು ನನ್ನಿಂದ ಸಾಧ್ಯವಾದಷ್ಟು ಜಗತ್ತಿನ ಮುಂದೆ ತೆರೆದಿಟ್ಟುಕೊಂಡಿದೆ. ನನ್ನ ಬದ್ದತೆ ಏನಿದ್ದರೂ ಬದುಕನ್ನು ಪ್ರೀತಿಸುವ, ಅದು ಒಡ್ಡುವ ಬವಣೆಗಳನ್ನು ಸಮರ್ಥವಾಗಿ ಎದುರಿಸಲು ಮನಸುಗಳನ್ನು ಸಿದ್ದಗೊಳಿಸುವುದು ನನ್ನ ಬರವಣಿಗೆಯ ಉದ್ದೇಶವಾಗಿದೆ.
*ಅಮುಭಾವಜೀವಿ*
0453ಎಎಂ13112017