Saturday, November 4, 2017
ಕಥೆ
ಮುಂದುವರೆದ ಭಾಗ3 (ಅರಳುವ ತಾವರೆ)
ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು.
'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು.
ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು.
ಕೆಲಸ ಮಾಡುತ್ತಾ ಸವಿತಾ ದಿನೇ ದಿನೇ ಎಲ್ಲರ ಮೆಚ್ಚುಗೆ ಗಳಿಸತೊಡಗಿದಳು. ಯಾವುದೇ ಕೆಲಸ ಕೊಟ್ಟರು ಬೇಜಾರಿಲ್ಲದೆ ಪ್ರಾಮಾಣಿಕ ಪ್ರಯತ್ನದಿಂದ ಮಾಡಿ ಮುಗಿಸುತ್ತಿದ್ದಳು. ಅವಳ ಕಾರ್ಯ ವೈಖರಿಯನ್ನು ಗಮನಿಸಿದ ಎಂಡಿ ಅವರು ಅವಳಿಗೆ ಮೂರೇ ತಿಂಗಳಿಗೆ ಪ್ರಮೋಷನ್ ನೀಡಿ ತನ್ನ ಸಹಾಯಕಿಯಾಗಿ ನೇಮಿಸಿಕೊಂಡರು. ದೀಪಾವಳಿ ಹಬ್ಬದ ಅಂಗವಾಗಿ ಅವಳಿಗೆ ಸಿಕ್ಕ ಈ ಹುದ್ದೆಯಿಂದ ಮನೆಯಲ್ಲೂ ಎಲ್ಲರಿಗೂ ಖುಷಿ ತಂದಿತು. ಆಗ ಜಾನಕಮ್ಮ ಸವಿತಾಳನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು " ನೋಡಿದೆಯಾ ಸವಿತಾ ನೀನು ಸುಮ್ಮನೆ ಬೇಜಾರು ಮಾಡಿಕೊಂಡು ಸಾಯುವ ನಿರ್ಧಾರ ಮಾಡಿದ್ದೆ. ಆದರೆ ಈಗ ನೀನು ನಿನ್ನ ಕೆಲಸದಲ್ಲಿ ತೋರಿಸುವ ಪ್ರೀತಿ ಅದು ನೀಡುವ ತೃಪ್ತಿಯ ಮುಂದೆ ನಿನ್ನ ನೋವನೆಲ್ಲ ಮರೆತಿರುವೆ. ಹೀಗೆ ಉನ್ನತ ಮಟ್ಟದ ಬದುಕು ನಿನ್ನದಾಗಲಿ "ಎಂದು ಮನಸಾರೆ ಹಾರೈಸಿದರು. ಅದನ್ನು ಕೇಳಿ ಸವಿತಾ ಕಣ್ಣಲ್ಲಿ ಆನಂದ ಭಾಷ್ಪ ಹರಿಯತೊಡಗಿತು.ಅದನ್ನು ಗಮನಿಸಿದ ರಾಮಣ್ಣ 'ಸರಿಸರಿ ಆ ಖುಷಿಯಲ್ಲಿ ಹೀಗೆ ಮೈಮರೆಯಿತೀರೋ ಅಥವಾ ಹೊಟ್ಟೆಗೆ ಏನಾದರೂ ಹಾಕ್ತೀರೋ?' ಎಂದಾಗ ವಾಸ್ತವಕ್ಕೆ ಮರಳಿದ ಇಬ್ಬರು 'ಇವತ್ತು ಹಬ್ಬದೂಟ ಮಾಡ್ತೇವೆ ಸ್ವಲ್ಪ ಕಾಯಿರಿ' ಎನ್ನುತ್ತಾ ಅಡುಗೆ ಮನೆ ಕಡೆ ನಡೆದರು.
ಇತ್ತ ಸವಿತಾ ಮನೆಯಲ್ಲಿ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಮಗಳಿಗಾಗಿ ಎಲ್ಲ ಕಡೆ ಹುಡುಕಿ ಸುಸ್ತಾದ ಅವಳ ಅಪ್ಪ ಅಮ್ಮ ಅವಳು ಎಲ್ಲಾದರೂ ಇರಲಿ ಜೀವಂತವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರು.ಅವಳ ಸ್ನೇಹಿತರಲ್ಲಿ ನೆಂಟರಿಷ್ಟರ ಮಲೆಗಳಲ್ಲಿ ಎಲ್ಲಾ ಕಡೆಯೂ ಹುಡುಕಿದರೂ ಅವಳು ಇರುವಿಕೆಯ ವಿಷಯ ಮಾತ್ರ ತಿಳಿಯಲಿಲ್ಲ. ಇದ್ದ ಒಬ್ಬಳೇ ಮಗಳು ಹೀಗೆ ಹೋಗಿದ್ದು ಆ ಜೀವಿಗಳಿಗೆ ಅತೀವ ದುಃಖ ತಂದಿತ್ತು. ಪ್ರೀತಿಸಿದವನು ಮೋಸ ಮಾಡಿದ ವಿಚಾರ ತಿಳಿದ ಮೇಲಂತೂ ಅವಳು ಬದುಕಿರುವ ಸಾಧ್ಯತೆಯೇ ಇಲ್ಲ ಎಂದು ಎಲ್ಲರೂ ಹೇಳುವಾಗ ಅವರ ಹೆತ್ತ ಕರುಳು ಅವಳು ಎಲ್ಲೋ ಒಂದು ಕಡೆ ಇದ್ದಾಳೆ ಎಂಬ ಆಶಾಭಾವವೇ ಅವರನ್ನು ಸಮಾಧಾನಿಸುತ್ತಿತ್ತು.
ಎಲ್ಲರೂ ಊಟ ಮುಗಿಸಿ ಮಲಗುವ ಕೋಣೆಗೆ ಹೋದರು.ಸವಿತ ಮಾತ್ರ ನಿದ್ರೆ ಬರದೆ ಹಾಗೆ ರೂಮಿನಲ್ಲಿ ಅವಳ ಇಂದಿನ ಸಾಧನೆಗೆ ತನಗೆ ಆಶ್ರಯ ಕೊಟ್ಟ ರಾಮಣ್ಣ ಜಾನಕಮ್ಮ ಅವರನ್ನು ಮನದಲ್ಲೆ ಸ್ಮರಿಸಿದಳು. ಇದೇ ಸಮಯದಲ್ಲಿ ಅವಳಿಗೆ ತನ್ನ ಹೆತ್ತವರ ನೆನಪಾಯಿತು. ತನ್ನ ಮಗಳ ಸಾಧನೆಯನ್ನು ಕೇಳಿದರೆ ಅವರೆಷ್ಟು ಖುಷಿ ಪಡಬಹುದು ಎಂದು ಮನೆಯಲ್ಲೇ ನೆನಪಿಸಿಕೊಳ್ಳಲು ಕಣ್ಣೀರ ಧಾರೆ ಹರಿಯುತ್ತಿತ್ತು. ಕೆನ್ನೆ ಮೇಲಿನ ಕಂಬನಿಯನ್ನು ಒರೆಸಿಕೊಳ್ಳುತ್ತಾ ಇದೇ ಮೊದಲ ಬಾರಿಗೆ ತನ್ನ ಹೆತ್ತವರಿಗೆ ಫೋನಾಯಿಸಿದಳು.ಆ ಕಡೆಯಿಂದ ನೊಂದ ದನಿಯಲ್ಲಿ ಅಮ್ಮ ಮಾತನಾಡಲು ಸವಿತಾಳಿಗೆ ಮಾತೇ ಹೊರಡದೇ ದುಃಖ ಉಮ್ಮಳಿಸಿಬಂತು. ಆ ಕಡೆಯಿಂದ 'ಯಾರು ಏನಾಗಬೇಕಿತ್ತು. ಇಷ್ಟೊತ್ತಿನಲ್ಲಿ ಫೋನ್ ಮಾಡಿರುವ ನೀವಾರು' ಎಂದು ಕೇಳಲು ಧೈರ್ಯ ಮಾಡಿ ಸವಿತಾ 'ಅಮ್ಮಾ' ಎಂದ ದನಿ ಕೇಳಿ ಹೋಗಿದ್ದ ಜೀವ ಬಂದಂತಾಗಿ 'ಮಗಳೇ ಹೇಗಿದ್ದಿಯಾ ? ಎಲ್ಲಿದ್ದೀಯ ? ಯಾಕಿಂತ ಕೆಲಸ ಮಾಡಿದೆ ನೀನು ಎಂದು ಒಂದೇ ಉಸಿರಿಗೆ ಪ್ರಶ್ನಿಸಿದರು ಅಮ್ಮ.
Subscribe to:
Post Comments (Atom)
No comments:
Post a Comment