ಸಾಂಗತ್ಯ*
ನಮ್ಮಿಬ್ಬರ ಸಾಂಗತ್ಯಕೆ
ಸಾಕ್ಷಿ ಈ ಒಲವು
ನಮ್ಮ ಸಾಮರ್ಥ್ಯಕೆ
ದಕ್ಕಿತು ಈ ಗೆಲುವು
ಸೂರ್ಯನೊಂದಿಗೆ ಸುಮ ಸಾಂಗತ್ಯ
ಚೆಲುವಿನನಾವರಣದ ಅಧಿಪತ್ಯ
ಸಾಗರ ಶಶಿಯ ಸಾಂಗತ್ಯ
ಉಕ್ಕುವ ತೆರೆಗಳ ಲಾಲಿತ್ಯ
ಹೂ ದುಂಬಿ ಪ್ರಣಯಕಾಂಕ್ಷಿಗೆ
ಮಕರಂದದರಶಿನದ ಪೌರತ್ಯ
ನದಿಸಾಗರ ಮಿಲನೋತ್ಸವಕೆ
ಪ್ರೇರಣೆಯೇ ಈ ಸಾಂಗತ್ಯ
ಮೋಡ ಮಿಂಚುಗಳು ಬೆರೆಯೆ
ಭುವಿಗೆ ಮಳೆಯ ಸಾಂಗತ್ಯ
ಮಳೆಗೆ ಇಳೆ ನೆನೆಯೆ
ಮೆರೆವುದು ಹಸಿರ ಸಾಮ್ರಾಜ್ಯ
ಗಂಡು ಹೆಣ್ಣಿನ ಆಕರ್ಷಣೆಗೆ
ಹರೆಯದ ವಾಂಛೆಯ ಸಾಂಗತ್ಯ
ಅದನ್ನೆಲ್ಲ ವರ್ಣಿಸಲು ಜಗದಿ
ರೂಪುಗೊಂಡಿತು ಅಗಾಧ ಸಾಹಿತ್ಯ
ಸಾಂಗತ್ಯ ತಂದ ಈ ಸಂತೃಪ್ತಿ
ಜಗದೊಳಗೆ ನೆಮ್ಮದಿಯ ಪ್ರಾಪ್ತಿ
ನೋಟಗಳು ಬೆರೆತಾಗಲೇ ಪ್ರೀತಿ
ಭಾವಗಳೊಂದಾದಾಗಲೇ ಶಾಂತಿ
0646ಎಎಂ190117
*ಅಮು ಭಾವಜೀವಿ*
👆🏻ಉತ್ತಮ ಕವನ.
ಸೃಷ್ಟಿ ಯಲಿ ಅಡಗಿರುವ ಸಾಂಗತ್ಯ,ಸಾಮರಸ್ಯವ ಅಧ್ಭುತವಾಗಿ ಹಾಡಾಗಿಸಿದ್ದಾರೆ
[
*ಮಹಾ ಮಾನವತಾವಾದಿ*
ನಡೆಯುವುದ ನಿಲ್ಲಿಸಿದ
ನಡೆದಾಡುವ ದೇವರು
ಶಾಶ್ವತ ನಿದ್ರೆಗೆ ಜಾರಿತು
ಶ್ವಾಸ ನಿಲ್ಲಿಸಿ ನಡೆದರು
ತ್ರಿವಿಧ ದಾಸೋಹದ
ಜ್ಯೋತಿ ಬೆಳಗಿದ
ಮಾನವ ಧರ್ಮ ಮೀರಿದ
ಮಹಾ ಮಾನವತಾವಾದಿ
ಬಡವರ ಪಾಲಿನ ಬೆಳಕು
ತೊಳೆದರು ಜ್ಞಾನದಿ ಕೊಳಕು
ಧರ್ಮಕೆ ಅಂಟಿಕೊಳ್ಳದ ಸಂತ
ಮನುಕುಲ ಉದ್ದರಿಸಿದ ಧೀಮಂತ
ಹೇಳುವ ಮಾತುಗಳೆಲ್ಲ ಚಿಕ್ಕವು
ಅದಕಿಂತ ಎತ್ತರದ ವ್ಯಕ್ತಿತ್ವವು
ಭಕ್ತರ ಪಾಲಿನ ನಿಜದೈವವು
ಸಿದ್ದಗಂಗೆಯ ಶುದ್ಧ ಪುರುಷರು
ಕಂಬನಿಯ ಈ ವಿದಾಯ
ಮುಗಿಯಿತು ನಮ್ಮ ಪಾಲಿನ ಅಧ್ಯಾಯ
ನೀವು ತೋರಿದ ಹಾದಿಯೇ ದಾರಿದೀಪ
ಭಾರ ಮನದಿಂದರ್ಪಿಸುವೆ ಸಂತಾಪ
0957ಪಿಎಂ21012019
*ಅಮು ಭಾವಜೀವಿ*
*ಕಂಬನಿಯ ವಿದಾಯ*😭😭
[
ನೇತಾಜಿಗೆ ನಮನ*
ಕೆಚ್ಚೆದೆಯ ಕಲಿಯು
ಅಪ್ರತಿಮ ದೇಶಪ್ರೇಮಿಯು
ಕ್ರಾಂತಿಯ ಹೋರಾಟಗಾರ
ನೇತಾಜಿ ನಿಮಗೆ ನಮನ
ನಮ್ಮ ನೆಲದ ಸ್ವಾತಂತ್ರ್ಯಕಾಗಿ
ಬ್ರಿಟಿಷರ ವಿರುದ್ಧ ಹೋರಾಡಲು
ಸೈನ್ಯ ಕಟ್ಟಿ ವೀರಸೇನಾನಿ ಎನಿಸಿದ
ನೇತಾಜಿ ನಿಮಗೆ ನಮನ
ನನಗೆ ರಕ್ತ ಕೊಡಿ
ಸ್ವಾತಂತ್ರ್ಯ ಕೊಡುವೆ
ಎಂದು ಯುವಕರ ಉತ್ತೇಜಿಸಿದ
ನೇತಾಜಿ ನಿಮಗೆ ನಮನ
ಶಾಂತಿಪ್ರಿಯರೆದುರು
ಕ್ರಾಂತಿಯ ಕಹಳೆಯೂದಿ
ಅವರ ನಿರ್ಲಕ್ಷ್ಯಕ್ಕೊಳಗಾದ
ನೇತಾಜಿ ನಿಮಗೆ ನಮನ
ಸ್ವಾಭಿಮಾನದ ಕಿಡಿ ಹೊತ್ತಿಸಿ
ಅಭಿಮಾನದ ನುಡಿಗೆ ಪಾತ್ರರಾದ
ನತದೃಷ್ಟ ವೀರ ನೇತಾರ
ನೇತಾಜಿ ನಿಮಗೆ ನಮನ
0844ಎಎಂ23012019
*ಅಮು ಭಾವಜೀವಿ*
[
೧•ಬಾಳ ಘನತೆ*
ಜೀವನದ ಯಾನದಲ್ಲಿ
ನೀ ಕೊರಗದಿರು ಗೆಳತಿ
ನಿನಗೆ ನೆರಳಾಗಿ ನಿನ್ನ ಕೊರಳಾಗಿ
ಬಳಿಯಿದ್ದು ಕೊಡುವೆ ಪ್ರೀತಿ
ಬಾಳಲ್ಲಿ ಏನಿಲ್ಲ ಕೊರತೆ
ನಾವಾಗಿ ಬಾಳೋಣ ಅದರ ಘನತೆ
ಸೂರ್ಯ ಚಂದ್ರರ ಹಾಗೆ ನಾವು
ಬಾಳೋಣ ಬರಲೇನೆಲ್ಲ ನೋವು
ಬದುಕಲ್ಲಿ ಒಲವೊಂದು ಹಣತೆ
ಬೇಕದಕೆ ನಿನ್ನೊಲವ ಮಮತೆ
ನೀ ಬೆರಳು ತೋರಿದೆಡೆ ನಾ ನಡೆವೆ
ಅಭಿಪ್ರಾಯ ಭಿನ್ನವಾಗದಿರಲಿ ನಮ್ಮ ನಡುವೆ
ಬಿಡು ಚಿಂತೆ ಚಿಮ್ಮು ಕಾರಂಜಿಯಂತೆ
ಬದುಕಲ್ಲಿ ಇನ್ನಿರದು ಕೊರತೆ
ನಾನು ನಿನಗಾಗಿ ನೀನು ನನಗಾಗಿ
ಬದುಕುವುದೆ ನಮ್ಮ ಸಾಧನೆಯಂತೆ
1051ಪಿಎಂ27092017
*ಅಮುಭಾವಜೀವಿ*
**ನಾವು ಬಡವರು*
ಬಡವರು ನಾವು ಬಡವರು
ಬಡಿವಾರವೇ ಗೊತ್ತಿಲ್ಲದವರು
ಹಸಿವನ್ನು ಸಹಿಸಿಕೊಂಡು
ದಬ್ಬಾಳಿಕೆಯ ನುಂಗಿಕೊಂಡು
ಬದುಕುವವರು ನಾವು ಬಡವರು
ನಾಳೆಗಳ ಕನಸು ಇಲ್ಲದವರು
ನಿನ್ನೆಗಳನೇ ಹಾಸಿ ಹೊದ್ದವರು
ಇಂದೇ ಸುರಿಸಿ ಎಲ್ಲ ಬೆವರು
ದಣಿವೆಂದು ನೆಲ ರಾವಿದವರು
ಮತ್ತೆ ಬೆಳಗೆದ್ದು ಅಣಿಯಾದವರು
ಅಕ್ಷರದ ಬೆಳಕು ಕಾಣದವರು
ಅನ್ನಕಾಗಿ ಕೈಚಾಚಿ ನಿಂತವರು
ಇನ್ನೇನು ಎಂದು ತಿಳಿಯದವರು
ಗಟ್ಟಿ ಮಾತಿನ ಶಕ್ತಿ ಇಲ್ಲದವರು
ಹುಲಿ ಕಂಡ ಹುಲ್ಲೇ ಎಂತಾ ದವರು
ಆ ದೇವರ ಶಾಪಕ್ಕೆ ತುತ್ತಾದ ಅವರು
ಧಣಿಗಳ ಕೋಪಕ್ಕೆ ಸ್ವತ್ತಾದವರು
ಮಣಭಾರ ಹೊತ್ತು ಹೆಣಗುತ್ತಿರುವವರು
ಹೆಣವಾದರು ಸಾಲದ ಋಣ ತಿರಿಸದವರು
ಪಾಪಕ್ಕೆಂದೇ ಈ ಭೂಮಿಗೆ ಬಿದ್ದವರು
ನೆರಳಿಗಾಗಿ ಹಂಬಲಿಸುವವರು
ಮೇಲೆತ್ತುವ ಬೆರಳ ನಂಬಿದವರು
ಮಕ್ಕಳು ಮರಿಗೆ ಹಸಿವಿತ್ತವರು
ಉಳ್ಳವರ ಕಾಲ ಎಕ್ಕಡವಾದವರು
ಇಲ್ಲವಾದವರು ನಾವು ಬಡವರು
05 02 ಪಿಎಂ 15 12019
*ಅಮುಭಾವಜೀವಿ*
ಓ ನನ್ನ ದೇಶದ ಯುವಕರೇ
ಬನ್ನಿರೈ ಸೇರಿರೈ ಕಟ್ಟೋಣ
ನವ ಆಶಯದ ನಾಡೊಂದ
ಭ್ರಷ್ಟಾಚಾರದ ಕೂಪದಲಿ
ನಲುಗಿದೆ ಬಡವರ ಕುಲ
ಅಟ್ಟಹಾಸ ಮೆರೆದಿದೆ
ಲಂಚಾವತಾರಿಗಳ ಸಂಕುಲ
ಬೇರು ಸಹಿತ ಕೀಳುವ ಬನ್ನಿ
ದೇಶವ ಉದ್ದರಿಸೋಣ ಬನ್ನಿ
ಹಾದಿ ತಪ್ಪಿದ ಯುವಕರೇ
ದೇಶದ ಬಗ್ಗೆ ಯೋಚಿಸಿರಿ,
ದುಷ್ಕೃತ್ಯವೆಸಗುವ ಬದಲು
ದೇಶದುನ್ನತಿಗೆ ದುಡಿಯೋಣ ಮೊದಲು
ನಮ್ಮವರೇಳ್ಗೆಗೆ ಶ್ರಮಿಸೋಣ
ಎಲ್ಲಾ ಧರ್ಮಗಳ ಪ್ರೀತಿಸೋಣ,,,,,,,
,0806ಎಎಂ240116
*ಅಮು ಭಾವಜೀವಿ*
ಅಮರತ್ವ*
ಪಾಮರ ನಾನು
ಅಮರನಾಗೆನು
ಬರೀ ಭೋಗಲಾಲಸೆಗೆ
ನನ್ನ ನಿತ್ಯದ ಹೋರಾಟ
ನಾನು ನಾನಾಗಿರಲಿಲ್ಲಿ
ಬದುಕೆಲ್ಲಾ ಪರದಾಟ
ನಾನು ನನ್ನವರಿಗಾಗಿ
ನಾ ಹೆಣಗಲೇಬೇಕು
ನನ್ನ ಆಸೆಗಳನೆಲ್ಲಾ
ಬದಿಗೊತ್ತಿ ನಾ ಹೆಣವಾದೆ
ನನ್ನ ಸಂಸಾರದ ಚೌಕಟ್ಟಿನಾಚೆ
ನಾನೊಂದಡಿ ಇಡಲಾಗಲಿಲ್ಲ
ಅದಕ್ಕೆ ನಾನೆಂದೂ
ಅಮರನಾಗುವ ಕನಸು ಕಾಣಲಿಲ್ಲ
ಬದುಕು ಸಾಧನೆಗಳಾಗರವಾಗಿ
ವ್ಯಕ್ತಿತ್ವ ವಿಕಸನಗೊಂಡು
ನಡೆನುಡಿ ಬೆಲೆಬಾಳಿದಾಗ
ಅಮರತ್ವದ ಸಾಕ್ಷಾತ್ಕಾರವು
0456ಪಿಎಂ24012017
*ಅಮುಭಾವಜೀವಿ*
*ಅಪೂರ್ವ ಅಧ್ಯಾಯ*
ಅಪ್ಪನೆಂಬ ಅದ್ಭುತವ
ಏನೆಂದು ಹಾಡಲಿ
ಅದು ಎಂದೂ ಮರೆಯದ
ಪಾತ್ರ ನನ್ನ ಬಾಳಲಿ
ಅಮ್ಮನ ಕರುಳ ಬಂಧ
ಅಪ್ಪನ ನೆರಳ ಅನುಬಂಧ
ಆ ಎರಡು ತೀರದ ನಡುವೆ
ನಾ ಹರಿವ ನೀರ ನಿನಾದ
ಅಪ್ಪ ಎನ್ನಲು ಏನೋ ಬಲ
ಅಪ್ಪನಿಂದಲೇ ಬದುಕೋ ಛಲ
ಅಪ್ಪ ಎಂಬ ನಂಬಿಕೆಯ ಸೂರು
ಅಪ್ಪನಿರಲು ನನ್ನ ಮುಟ್ಟುವರಾರು
ಅಪ್ಪ ನನ್ನ ಬದುಕ ಚೌಕಟ್ಟು
ಅಪ್ಪ ಇರಲು ತಲೆದೋರದು ಬಿಕ್ಕಟ್ಟು
ಅಪ್ಪ ಎಂಬ ನಿಷ್ಠುರವಾದಿ
ಕಳೆವರು ನನ್ನ ಮನದ ಬೇಗುದಿ
ಈ ಬದುಕಿನ ಆಧಾರ
ನೀಡಿದರು ಬಾಳ ಸಂಸ್ಕಾರ
ಅಪ್ಪನ ಬೆರಳ ಹಿಡಿದು ನಡೆದು
ಅಪ್ಪನಾಗಿಹೆ ಅವರಂತೆ ನಾನಿಂದು
ಅಪ್ಪ ಇಲ್ಲ ಎಂಬ ನೋವು
ಯಾವ ಮದ್ದಿಂದಲೂ ಮಾಯದು
ಅಪ್ಪ ನನ್ನ ಬಾಳಿನ ಬೆಂಬಲ
ಅವರು ಬದುಕಿನ ಅಪೂರ್ವ ಅಧ್ಯಾಯ
0634ಎಎಂ25012017
*ಅಮುಭಾವಜೀವಿ*
*ಅಪ್ಪನ ನೆನಪಾಗಿ ಎರಡು ವರ್ಷದ ಹಿಂದೆ ಬರೆದ ಕವನ*
*ಒಂದಾದ ಉತ್ಸವ*
ಬಂತು ಬಂತು ರಾಜ್ಯೋತ್ಸವ
ಪ್ರಜಾಪ್ರಭುತ್ವವ ಒಪ್ಪಿದುತ್ಸವ
ಸಂವಿಧಾನದ ಕರಡು ರಚಿಸಿ
ಸಮಭಾವದಿ ಎಲ್ಲರ ಒಗ್ಗೂಡಿಸಿ
ಹರಿದು ಹಂಚಿ ಹೋಗಿದ್ದ
ರಾಜ್ಯಗಳೊಂದಾದ ಉತ್ಸವ
ಪ್ರಜೆಗಳಿಂದ ಪ್ರಜೆಗಳಾಗಿ
ಪ್ರಜೆಗಳಿಗೋಸ್ಕರ ತತ್ವದಡಿ
ಪ್ರಜಾ ಸರ್ಕಾರದ ರಚನೆಗೆ
ನಾಂದಿ ಹಾಡಿದ ಸಂಭ್ರಮೋತ್ಸವ
ಭಾಷಾವಾರು ಪ್ರಾಂತ್ಯಗಳ
ಒಕ್ಕೂಟ ವ್ಯವಸ್ಥೆಯಲ್ಲಿ ತಂದು
ಹಕ್ಕು ಮತ್ತು ಕರ್ತವ್ಯಗಳನ್ನು
ಪ್ರಜೆಗಳೆ ಪ್ರಭುಗಳಾಗಿ ಪಡೆದ ಉತ್ಸವ
ಸಿಕ್ಕ ಸ್ವಾತಂತ್ರ್ಯವನ್ನು ಅನುಭವಿಸಲು
ಪೌರತ್ವದ ಅಧಿಕಾವನು ಕೊಟ್ಟು
ಭಾವೈಕ್ಯತೆಯ ಭವ್ಯ ಭಾರತ ಕಟ್ಟುವ
ಮಹತ್ವಾಕಾಂಕ್ಷೆಯ ಪ್ರಜಾರಾಜ್ಯೋತ್ಸವ
0346ಪಿಎಂ25012019
*ಅಮು ಭಾವಜೀವಿ*
*70ನೇ ಗಣರಾಜ್ಯೋತ್ಸವದ ಶುಭಾಶಯಗಳು* 🇮🇳🇮🇳🇮🇳🇮🇳🇮🇳
[
*ಮಹಾಸಂಪುಟ*
ಸರ್ವತಂತ್ರ ಸ್ವತಂತ್ರ
ಪ್ರಜಾಪ್ರಭುತ್ವದ ಭಾರತ
ಸರ್ವಸಮಾನತೆಯ ಸಾರಿದೆ
ಮೂರುವರ್ಣದ ತಿರಂಗಾ ಬಾವುಟ
ಜಾತ್ಯಾತೀತ ಧರ್ಮಾತೀತ
ನೆಲೆಗಟ್ಟಿನ ಆಡಳಿತ
ಗಣರಾಜ್ಯದ ಪರಿಕಲ್ಪನೆಯೇ
ಈ ಒಕ್ಕೂಟ ವ್ಯವಸ್ಥೆಯ ಸಿದ್ಧಾಂತ
ಹಿಮಶಿಖರ ಭೂಷಿತೆ
ಸಾಗರ ಸ್ಪರ್ಶ ಪುನೀತೆ
ಸರ್ವಜನಾಂಗದ ಶಾಂತಿಯ ತೋಟ
ಭಾರತೀಯತೆಯ ಮಹಾಸಂಪುಟ
ಪ್ರಜೆಗಳಿಂದ ಪ್ರಜೆಗಳಿಗಾಗಿ
ಪ್ರಜೆಗಳ ಪ್ರಭುತ್ವದ ಸರ್ಕಾರ
ಸಂವಿಧಾನದ ಮೂಲ ಆಶಯ
ಪ್ರಜೆಗಳ ಕೈಗಿತ್ತಿದೆ ಅಧಿಕಾರ
ಜೈ ಎನ್ನೋಣ ಭಾರತಾಂಬೆಗೆ
ಹೆಮ್ಮೆ ಪಡೋಣ ಭಾರತಿಯತೆಗೆ
ನಮಿಸೋಣ ದೇಶಪ್ರೇಮಿಗಳಿಗೆ
ಸಾಗೋಣ ಭಾವೈಕ್ಯತೆಯೆಡೆಗೆ
0614ಎಎಂ26012017
*ಅಮುಭಾವಜೀವಿ*
ಗಣತಂತ್ರದಿನದ ಶುಭಾಶಯಗಳು 🇮🇳🇮🇳🇮🇳🇮🇳
*ಪ್ರೀತಿಯ (ಅ)ಭಾವ*
ತರಗೆಲೆಗೆ ಕಿಡಿ ಸೋಕಿದಂತೆ
ಅವಳಿಲ್ಲದ ಈ ಪಯಣ
ಬರೀ ಬೇಸರದ ತಲ್ಲಣ
ಮಾತು ಮರೆತ ಕೋಗಿಲೆ
ನಾಟ್ಯ ತೊರೆದ ನವಿಲಂತೆ
ಈ ಒಲವ ದಿಬ್ಬಣ
ಇಳಿಸಂಜೆಯ ಗೋಳು
ಈ ಒಂಟಿ ಬಾಳು
ಆ ಕತ್ತಲಲ್ಲಿ ಜಾರುವಾಗ
ಅಮಾವಾಸ್ಯೆಯದು ಬಂದು
ಸಾಗರದೆದೆ ನೊಂದಿರಲು
ಅಕ್ಕರೆಗೆ ಇನ್ನೆಲ್ಲಿ ಜಾಗ
ಮೂಡುವ ಸೂರ್ಯನೊಳಗೆ
ವಿರಹದ ಉರಿ ಕೆನ್ನಾಲಿಗೆ
ಕರಗಿದೆ ಮಂಜಿನ ಸ್ವಭಾವ
ನಲುಗಿದಾ ನಲುಮೆಗೆ
ಸಾಂತ್ವನದ ಮಾತಿಲ್ಲ
ಎಲ್ಲೆಲ್ಲೂ ಪ್ರೀತಿಯ ಅಭಾವ
ಒಮ್ಮೆಯಾದರೂ ಕಾಣಿಸಿಕೊ
ಗ್ರಹಣ ಬಿಟ್ಟ ಕ್ಷಣದಂತೆ
ಮರೆವೆನಾಗ ನೂರು ಚಿಂತೆ
ಹೇಗಿದ್ದರೂ ಒಮ್ಮೆ ನಕ್ಕು ಬಿಡು
ಕುಣಿವೆ ದಣಿವಿರದಂತೆ
ತಣಿವೆ ರಚ್ಚೆ ಹಿಡಿದ ಮಗುವಿನಂತೆ
05.55 ಪಿಎಂ 26 01 2019
*ಅಮು ಭಾವಜೀವಿ*
*ಗುರುತಿಸುವ ಖಯಾಲಿ*
ಎಲ್ಲಾ ಸೋಲುಗಳಿಗೂ
ಏನೇನೋ ಕಾರಣ
ಮತ್ತಿನ್ನೇನೋ ಪ್ರೇರಣ
ಎಲ್ಲಾ ನೋವುಗಳಿಗೂ
ಇನ್ನಿಲ್ಲದ ಬೇಸರದಲ್ಲಿ
ದೂಡಬೇಕು ಬದುಕನು
ಪ್ರತಿ ಹೆಜ್ಜೆಯೂ ಕೂಡ
ಅದೇ ಗೊಂದಲ
ಮತ್ತದೇ ಹಂಬಲ
ಗೆಲುವುಗಳಿಲ್ಲದ ಜೀವನ ಕೂಡ
ಚೆಲುವಿಲ್ಲದೆ ನರಳಿದೆ
ಇನ್ನಿಲ್ಲಿ ಸಿಗದು ಬೆಂಬಲ
ಜಯದ ಬೆನ್ನು ಹತ್ತಿ
ಓಡಿದೆ ಪ್ರತಿ ಕ್ಷಣ
ಆದರೂ ಅದು ಮರೀಚಿಕೆಯೇ
ಏಳುಬೀಳುಗಳನ್ನು ಸಹಿಸಿ
ಬಿಡದೆ ಪ್ರಯತ್ನಿಸಿದರೂ
ಇದ್ದೇ ಇದೆ ಆ ಅಂಜಿಕೆ
ಗೆಲ್ಲುವ ತನಕ ನಿಲ್ಲದೆ
ಮರಳಿ ಯತ್ನ ಮಾಡಿದೆ
ಹೋರಾಟದ ಹಾದಿಯಲಿ
ಗೆದ್ದ ಮೇಲೆಯೇ ಇಲ್ಲಿ
ಗುರುತಿಸುವ ಖಯಾಲಿ
ಸೋಲೊಪ್ಪಿ ಸಾಯಲಾರೆ
1027ಎಎಂ27012019
*ಅಮು ಭಾವಜೀವಿ*
*ಮುನ್ನುಡಿಯನೋದದೆ*
ಕಣ್ಣ ಪಾಪೆಯೊಳಗೆ
ಮೂಡುವ ಬಿಂಬಗಳಿಗೆ
ಎಷ್ಟೊಂದು ಹೋಲಿಕೆ
ಬುರುಡೆಯೊಳಗೆಲ್ಲ ನಡೆವ
ರೂಪ ಕುರೂಪಗಳ ಒಡಂಬಡಿಕೆ
ತೊಗಲ ಈ ಹೊದಿಕೆಯೊಳಗೆ
ಗಂಡುಹೆಣ್ಣಲ್ಲದ ಮೂಳೆ ತಡಿಕೆ
ಹೊರಗಿನ ಬಣ್ಣಕೆ ಮರುಳಾಗಿ
ಒಳಗಿನ ಸತ್ಯ ಮರೆಮಾಚಿ ಬೀಗಿ
ಬಡಬಡಿಸುವ ನಾವ್ ಹುಲುಮಾನವರು
ಬಣ್ಣಬಣ್ಣಗಳ ಬಳಿದ ಮಾತ್ರಕೆ
ಗುಣವೆಂದೂ ಬದಲಾಗದು
ಜೀವ ಹೋದಮೇಲೆ ಎಲ್ಲ
ಮಣ್ಣೊಳಗೆ ಬರಿದೆ ಮೂಳೆ
ಕಳೆದುಕೊಳ್ಳುವುದೆಲ್ಲಾ ಕಳೆ
ಬಿಂಬ ಪ್ರತಿಬಿಂಬಗಳ
ವ್ಯತ್ಯಾಸ ಅರಿಯದೇ
ಕನ್ನಡಿ ಮುಂದೆ ದಾಂಗುಡಿಯಿತ್ತು
ಬದುಕ ಮನ್ನುಡಿಯನೋದದೆ
ಮಕಾಡೆ ಮಲಗಿದೆ ಮೂಢಜನ
0140ಪಿಎಂ28012017
ಅಮುಭಾವಜೀವಿ
[
ಕನಸ ಬಿತ್ತುವ ನೆಲವು*
ಎಂಥಾ ನಯನಗಳಿವು
ಚೆಲುವಿನ ಹೊಳಪಿನವು
ಮುಂಜಾನೆಯ ರವಿಯಂತೆ
ಮುಸ್ಸಂಜೆಯ ರಂಗಂತೆ
ಸದಾ ಸ್ಪೂರ್ತಿಯ ಬೆಳಕು
ಇರುಳ ತಾರೆಗಳಂತೆ
ಹುಣ್ಣಿಮೆ ಶಶಿಯಂತೆ
ಶಾಂತ ಪ್ರಶಾಂತ ನಯನಗಳು
ಜಿಂಕೆಯಂತೆ ಚಂಚಲ
ನವಿಲಗರಿಯಂತೆ ಕೋಮಲ
ಸುಮ ದಳದ ಮೃದು ಕಂಗಳು
ಸಾಗರದ ತೆರೆಗಳಂತೆ ನೆಗೆವ
ಸಿಂಹದಂತೆ ಗುರಿಯಿಡುವ
ನಿಸರ್ಗದ ಹಸಿರಂತಹ ನಯನಗಳು
ಒಲವ ಧಾರೆ ಸುರಿವ
ನದಿಯಂತೆ ಓಡುವ
ಸದಾ ಚಲನಶೀಲವು
ನೋಡಿತಿರೆ ಮತ್ತೆ ಮತ್ತೆ ನೋಡುವ
ಕಂಡಂತೆ ಬಿಡದೆ ಕಾಡುವ
ಕನಸ ಬಿತ್ತುವ ನೆಲವು
ಕರುಣೆ ತೋರಿ ಪ್ರೇರಣೆ ನೀಡಿ
ಕಂಬನಿಯೊಳು ಮಾಡಿ ಮೋಡಿ
ಸೌಂದರ್ಯದ ಗುಟ್ಟು ತೆರೆದಿಟ್ಟಿವೆ
ಜಗದ ಎಲ್ಲಾ ಚೆಲುವ ತೋರಿ
ಮೊಗದ ಭೂಷಣವೇ ತಾನಾಗಿ
ಕವಿಮನಕೆ ಕಾಡುವ ಭಾವವಾಗಿವೆ
0442ಪಿಎಂ29012019
*ಅಮು ಭಾವಜೀವಿ*
[
*#ಕಪ್ಪು*
*^^^^^*
ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು
ನಿಮಗದಾಗಿದೆ ಒಪ್ಪು
ಮೈಬಣ್ಣಕೇಕೆ ಹಿಯ್ಯಾಳಿಕೆ
ಇರುಳು ಕಪ್ಪಾದರೂ
ಹೊಳೆವ ತಾರೆಗಳಲ್ಲಿಲ್ಲವೆ
ಕಣ್ಣು ಕಪ್ಪಾದರೂ
ನೋಟದಲ್ಲಿ ಬಣ್ಣಗಳಿಲ್ಲವೆ
ಕಪ್ಪು ಎಲ್ಲವನ್ನೂ
ತನ್ನೊಳಗೆ ನುಂಗಿಕೊಳ್ಳುವುದು
ನ್ಯಾಯದೇವತೆಯ ಕಣ್ಣಿಗೆ
ಇದೇ ಕಪ್ಪು ಕಟ್ಟಿರುವುದು
ಕಪ್ಪಿದ್ದರೇನೇ ಬಿಳುಪಿನ ಬೆಲೆ
ಕರಿನೆಲವೇ ಕನ್ನಡದ ನೆಲೆ
ಕಣ್ಣು ಮುಚ್ಚಲು ಕಾಣುವುದು ಕಪ್ಪು
ಕಪ್ಪು ಆಗದು ಎಂದೂ ತಪ್ಪು
0628ಎಎಂ301216
*ಅಮುಭಾವಜೀವಿ*
ಅನುಭವದ ಪಾಠ*
ಬದುಕೊಂದು ಹೋರಾಟ
ಕಲಿಸುವುದದು ಹತ್ತಾರು ಪಾಠ
ಅನುಭವವೇ ಇಲ್ಲಿ ಗುರು
ನಾವೆಲ್ಲ ಕಲಿವ ಶಿಷ್ಯರು
ಹಸಿವಿರುವಾಗ ಅನ್ನವಿಲ್ಲ
ಹಣವಿಲ್ಲದಾಗ ಆರೋಗ್ಯವಿಲ್ಲ
ಹೇಗೋ ಹೆಣಗುವಾಗ
ಬಾಳ ಆಧಾರವೇ ಮುರಿವುದಾಗ
ಛಲವೊಂದೇ ನಮ್ಮ ಬಲವಾಗಿ
ಎದ್ದು ನಿಲ್ಲಲೇಬೇಕು ಅಸ್ತಿತ್ವಕ್ಕಾಗಿ
ಕಷ್ಟಗಳೇ ಮಾರ್ಗದರ್ಶಕರಾಗಿ
ಕೈ ಹಿಡಿವುದು ನಮ್ಮೇಳ್ಗೆಗಾಗಿ
ಆಗ ಮುಟ್ಟಿದ್ದೆಲ್ಲಾ ಚಿನ್ನ
ನೋಡಲು ಬದುಕೇ ಚೆನ್ನ
ಮರೆಯಬಾರದು ಹಸಿವಿಗೆ ಸಿಕ್ಕ ಅನ್ನ
ಸಾಧಕನಿಗೇ ದಕ್ಕುವುದು ಕೀರ್ತಿ ಸನ್ಮಾನ
ಬದುಕ ಈ ಶಾಲೆಯಲಿ
ಬಂದು ಹೋಗುವುದು ಬರಿಗೈಲಿ
ಕಲಿಯುವುದೊಂದೇ ಅನುಭವ
ನಮಗೆ ಕಲಿಸುವುದನದು ಪರಾಭವ
1125ಪಿಎಂ30012016
**ಅಮುಭಾವಜೀವಿ**
[
*ಯಾರವನು*
ಯಾರವನಮ್ಮ ಹೇಗವನಮ್ಮ
ನಿನ್ನ ಹೃದಯದ ಚೋರನು
ಎಲ್ಲಿಹನಮ್ಮ ಏನಾಗಿಹನಮ್ಮ
ಆ ಮುದ್ದು ಪೋರನು
ಏತಕೆ ಕದ್ದನು ಮನಸನ್ನ
ಪ್ರೀತಿಯ ಕೊಡುವನೇನಮ್ಮ
ನಂಬಿಕೆಗೆ ಅರ್ಹನೇ ಅವನು
ನರಳದಂತೆ ಕಾಯ್ವನೇ ನಿನ್ನನು
ಒಲವಿನ ಗೆಳೆಯನೇನು
ಅವನು ಒಲಿದು ಬಂದವನೇನು
ಹೇಳು ಹೇಳು ಯಾರವನು
ನಿನ್ನ ಮನಕೊಪ್ಪಿದ ಮಾಧವನು
ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯಾಗುವನೇನು
ಬದುಕಿನ ಬಂಡಿಯಲಿ
ಜೊತೆ ನೊಗ ಹೊರುವನೇನು
ಸುಖವೂ ನಿನಗೆ ಧಾರೆಯೆರೆವ
ಆ ಸಖನವನಾರು ತೋರುವೆಯಾ
ತಿಳಿಯದು ನಿನ್ನ ಅವನ ಸಂಬಂಧ
ಬೆಸೆಯಿತು ಹೇಗೆ ಈ ಅನುಬಂಧ
ನಗುತಿರು ಅವನ ಒಲವಿಂದ
ಅದುವೇ ಬದುಕಿನ ಸೌಗಂಧ
ಮರೆ ನಿನ್ನ ನೂರು ಚಿಂತೆ
ನೀವಿರಿ ಕೃಷ್ಣ ರುಕ್ಮಿಣಿಯರಂತೆ
0751ಎಎಂ30012019
ಅಮು ಭಾವಜೀವಿ
[
*ಸಾಹಿತ್ಯ ತಿಲಕ*
ಸಾಧನ ಕೇರಿಯ ಸಾಧಕ
ನಾಕುತಂತಿಯ ಮೀಟಿದ ವೈಣಿಕ
ಕನ್ನಡ ಸಾಹಿತ್ಯದ ತಿಲಕ
ಬೇಂದ್ರೆ ಅಜ್ಜನೆಂಬ ಹಿರಿಕ
ನೀ ಹೀಂಗ ನೋಡಬೇಡ
ಎಂದು ಹೇಳಿದ ಈ ಅಜ್ಜ
ಸರಸ ವಿರಸ ಸಮರಸದ
ಬಡವ ಬಡವಿಯ ಸಿರಿವಂತ
ನಾದಲೀಲೆಯ ಸೊಗಡಿನ
ಧಾರವಾಡದ ಈ ಗಾರುಡಿಗ
ಜ್ಞಾನಪೀಠದ ಮುಕುಟ ಧರಿಸಿದ
ಕರುನಾಡಿನ ಮಾಣಿಕ್ಯ
ಅಂಬಿಕೆಯ ಸುತನಾಗಿ
ಅಂಬಿಕಾತನಯದತ್ತನಾಗಿ
ಅಂಬಿಗನಂತೆ ದಡ ಸೇರಿಸಿದ
ಕರುನಾಡ ಸಿರಿಯ ಆಸ್ತಿ
ನಿಮ್ಮ ಜನುಮದಿನವಿಂದು ಅಜ್ಜ
ನಿಮ್ಮ ಸಾಹಿತ್ಯವೆಮಗೆ ಸಗ್ಗ
ನೆನೆಯುವೆ ದಿನಾ ದಿನ
ನೀವೇ ನಮಗೆ ಪ್ರೇರಣ
1100ಎಎಂ31012019
*ಅಮು ಭಾವಜೀವಿ*
*ಬೇಂದ್ರೆ ಅಜ್ಜನ ಜನ್ಮದಿನದ ಶುಭಾಶಯಗಳೊಂದಿಗೆ*
[
ಅಮಾನವೀಯ ನಡವಳಿಕೆ*
ಇಲ್ಲದವರಿಂದ ಕಿತ್ತು ತಿನ್ನುವ
ದಾಹ ಈ ಲಂಚಕೋರನಿಗೆ
ಕೊಡಲಾಗದೆ ಕಳೆದುಕೊಳ್ಳುವ
ಅನಿವಾರ್ಯ ಅಮಾಯಕರಿಗೆ
ದುಡಿಮೆಗೆ ತಕ್ಕ ವೇತನ ಪಡೆದೂ
ಇನ್ನೂ ಬೇಕೆಂಬ ಅತಿಯಾಸೆ ಇವರಿಗೇಕೆ
ಕೊಡುವವನ ನೋವನ್ನೂ ಅರಿಯಲಾಗದ
ಅಮಾನವೀಯ ನಡವಳಿಕೆ
ಉಳ್ಳವರಿಗೆ ಸಲಾಮು ಹೊಡೆದು
ಕೂತಲ್ಲಿಗೆ ಬರುವುದು ಸೌಲಭ್ಯ
ಇಲ್ಲದವರ ಇನ್ನಿಲ್ಲದಂತೆ ಅಲೆಸಿ
ಆಗುವರು ಅವನಿಗೆ ನಿತ್ಯ ಅಲಭ್ಯ
ದೇವರ ವರವನ್ನು ಮಾರಿಕೊಳ್ಳುವ
ವ್ಯಭಿಚಾರಿಗಳಿವರು ಅನಾಗರಿಕರು
ಇಲ್ಲದವರ ಪಾಲಿಗೆ ದುಸ್ವಪ್ನ
ಲಂಚಬಾಕ ಈ ದಾನವರು
ಎಂದಿಗಿದು ಕೊನೆಯಾಗುವುದೋ
ಅರ್ಹರಿಗೆಂದು ಅನುಕೂಲ ಸಿಗುವುದೋ
ಧನದಾಹಿಗಳ ಈ ದೌರ್ಜನ್ಯ ನಿಲ್ಲುವ ತನಕ
ಅಮಾಯಕರ ಬದುಕು ಹಸನಾಗದು
0749ಎಎಂ01022019
*ಅಮು ಭಾವಜೀವಿ*
#ನೀನು #ಇರುವ #ರಕ್ಷೆಯೊಂದೇ*
ದೀಪವಿರದ ದಾರಿಯಲ್ಲಿ
ನಿನ್ನ ನೆನಪೇ ದೀಪ ನನಗೆ
ಸೋತು ಕೂತ ಆಸೆಗಳಲಿ
ನಿನ್ನ ಭರವಸೆಯೊಂದೇ ಬೆಳಕು ನನಗೆ
ನಡೆವ ಹಂಬಲದ ಮನಸಿಗಿಲ್ಲಿ
ಗಿಲ್ಲಿ ನೋಯಿಸಿದವರೇ ಎಲ್ಲಾ
ಬಾಗಿ ನಡೆದರೂ ಬೀಗುವೆನೆಂದು
ಇಲ್ಲಿ ಕೂಡಿ ಬಡಿದವರೇ ಎಲ್ಲಾ
ಈ ನೋವ ನಿನಗಲ್ಲದೆ ನಾನು
ಯಾರಲಿ ಹೇಳಿ ಉಳಿಯಲಿ
ನಿನ್ನ ಹೊರತು ನನಗೆ ಇಲ್ಲಿ
ಯಾರೂ ಇಲ್ಲ ನನ್ನವರು
ನೀನು ತೊರೆದು ಹೋದೆಯೆಂದು
ಆಳಿಗೊಂದು ಕಲ್ಲನೆಸೆಯುತಿಹರು
ಆದ ಗಾಯ ನೋಯದಲ್ಲ
ನೀನು ಬರುವ ಆಸೆಯಿನ್ನು ಹುಸಿಯಾಗಿಲ್ಲ
ನೀನು ಇರುವ ರಕ್ಷೆಯೊಂದೇ
ನನ್ನ ಬಾಳ ನಿರೀಕ್ಷೆಯು
#ಖುಷಿಖುಷಿಯಲಿ ಬಾಳಲೆನಗೆ
ನಿನ್ನ ಈ ಪ್ರೀತಿಯೇ ಸಾಕ್ಷಿಯು
0623ಪಿಎಂ02022018
*ಅಮುಭಾವಜೀವಿ*
ಒಡಲಿಗತ್ತಿದ ಕಿಚ್ಚು*
ಎದೆಗೊದ್ದು ಬದುಕುವ ಹಂಬಲದಲ್ಲಿ
ಗದ್ದೆ ತೋಟ ಕಟ್ಟುವ ಹುಮ್ಮಸ್ಸಿನಲ್ಲಿ
ಸಾಲದ ಬಾಗಿಲ ತಟ್ಟುವರು
ಮತ್ತೆ ಕಟ್ಟಲಾಗದೆ ಜೀವ ತೆತ್ತರು
ಬಿಸಿಲ ಧಗೆಗೆ ಮೈಯನೊಡ್ಡಿ
ಹಸಿವು ದಣಿವ ಲೆಕ್ಕಿಸದೆ
ಹಗಲಿರುಳೆನ್ನದೆ ದುಡಿದು
ಲಾಭವಿರದೆ ಹೈರಾಣಾಗಿ ಹೋದ
ಮಕ್ಕಳ ಓದಿಸುವ ಕನಸು
ಆಗಲೇ ಇಲ್ಲ ಅದು ಯಶಸ್ಸು
ಮನೆಮಂದಿಯೆಲ್ಲ ಬೆವರ ಹರಿಸಿದರೂ
ಬೆಳೆಯದು ಬೆಳೆಯಲೇ ಇಲ್ಲ
ಆದರೂ ಕರುಣೆಯಿಲ್ಲ ಸಾಲದ ಶೂಲಕೆ
ನಂಬಿದುದನೆಲ್ಲ ಆಪೋಷನಗೈದಿತು
ಕ್ಷಣ ಕ್ಷಣಕ್ಕೂ ತಿವಿಯುತ
ಬಾಳಿನ ಸುಖವನೇ ಕಸಿದುಕೊಂಡಿತು
ಕೊಂಡ ಸಾಲವದು ಹೆಮ್ಮರವಾಗಿ
ಬಡ್ಡಿಯನೂ ತೀರಿಸಲಾಗದೆ ಕೃಶವಾಗಿ
ಮರ್ಯಾದೆಗಂಜಿ ಮನದೊಳು ಮರುಗಿ
ಗೋಣಿಗೆ ನೇಣುಬಿಗಿದು ಸಾವಿಗೆ ತಲೆಬಾಗಿದ
ಇನ್ಯಾರು ಗತಿ ಈ ಕುಟುಂಬಕೆ
ದುಡಿವವನೇ ಹೋದ ಮಸಣಕ್ಕೆ
ಚಿತೆಗಚ್ಚಿದ ಬೆಂಕಿ ಜ್ಯೋತಿಯಾಗದು
ಒಡಲಿಗತ್ತಿದ ಕಿಚ್ಚು ಎಂದಿಗೂ ನಂದದು
0502ಪಿಎಂ02022019
*ಅಮು ಭಾವಜೀವಿ* (ಹರಿಹರ)
*ಸಾಧಿಸಿದುದಾದರೂ ಏನು?*
ಸಾಧಿಸಿದುದಾದರು ಏನು ನೀವು
ನಿಮ್ಮಿಂದ ಅಮಾಯಕ ಜೀವಗಳ ಸಾವು
ಬಾಯ್ಚಪಲಕೆ ನಿಮ್ಮ ಕೈಯಲ್ಲಿ
ಅರಿಯದ ಪ್ರಾಣಿಗಳ ಬಲಿ
<><><><><><><<<><><><><
ದೇವರ ಹೆಸರಲಿ ಜೀವ ಕೊಂದು
ಸಂಭ್ರಮಿಸುವರು ಅದನೇ ತಿಂದು
ಊರಿಗೆ ಹಿತ ಬಯಸೋ ಇವರು
ಸಾವನು ಕೈಯಲಿಡಿದ ಯಮಧೂತರು
<><><<><><><><)<)<(<><<<
ಜೀವ ಕೊಡಲು ಶಕ್ತರಲ್ಲದವರು
ಜೀವ ತೆಗೆದು ಹರ್ಷಿಸುವರು
ತನ್ನವರ ಸಾವಿಗೆ ನೋಯುವವರು
ಆ ಪ್ರಾಣಿಗಳ ಸಾವಿಗೆ ಸಂಭ್ರಮಿಸುವರು
<><><><><><><><><><<><<<)
ಮಾನವೀಯತೆಯ ಕೊಂದಿರಿ ನಿಮ್ಮಲ್ಲೇಕೆ
ದಯೆಯೇ ಇಲ್ಲದ ಕ್ರೂರಿಗಳಾದಿರೇಕೆ
ನಿಮಗೆ ಬುದ್ದಿಯ ನೀಡಿದ್ದು ಇದಕೇನಾ
ಆ ಜೀವಿಯ ನಂಬಿಕೆ ಕೊಂದಿರಿ ಸರಿಯೇನಾ?
<><><><>><><<<><><<><
ಬೇಟೆಯಾಡಲು ಶಕ್ತರಲ್ಲದ ನೀವು
ಬಲಿಯ ನೀಡುವುದು ಸರಿಯೇನು
ನಿಮ್ಮವರ ಹಸಿವ ತಣಿಸಲು
ಅವುಗಳ ಬಲಿಯಾಗಬೇಕೇನು?
<><><><><>><><<><>><><>>>
ಯೋಚಿಸಿ ಓ ನಾಗರಿಕ ಬಂಧುಗಳೇ
ಈ ಬಲಿ ನ್ಯಾಯ ಸಮ್ಮತವೇ?
ನಿಲ್ಲಿಸಿ ಈ ಮಾರಣಹೋಮ
ಗೆಲ್ಲಲಿ ನಿಮ್ಮನು ಆ ಪ್ರೇಮ,,
<><><><><><><><><<><><<>
(0507ಎಎಂ*03022016)
**ಅಮು ಭಾವಜೀವಿ**
[
*ಹಸಿವು*
ತುತ್ತು ಅನ್ನಕೂ ಇಷ್ಟು
ಹಸಿದ ಹೊಟ್ಟೆಗಳಿರಲು
ಕೊಡುವ ಕೈಗಳಿಲ್ಲವೇಕೆ
ಪ್ರತಿಷ್ಠೆಯ ವಿಷಯವಾಗಿ
ಹಸಿವಿಲ್ಲದಿದ್ದರೂ ಕೈಯಿಟ್ಟು
ತೊಟ್ಟಿಗೆಸೆಯುವುದೇಕೆ?
ಅನ್ನವೆಂದೂ ಶ್ರೀಮಂತಿಕೆಯ
ಆಡಂಬರದ ವಸ್ತುವಲ್ಲ
ಅದು ಹಸಿದವರ ಸ್ವತ್ತು
ಕೈತುತ್ತನಿಕ್ಕಲಾಗದಿದ್ದರೂ
ಕರೆದು ಪ್ರೀತಿಯ ಮಾತಾಡಿ
ತಟ್ಟೆಗೆ ಹಾಕಿದರೆ ಸಾಕಲ್ಲ
ಅನ್ನ ದೇವರ ಸಮಾನ
ಹಸಿದವರ ಪಾಲಿಗೆ
ಎಸೆಯಬೇಡಿ ಅದನು ತೊಟ್ಟಿಗೆ
ತುತ್ತಿಗಾಗಿ ಕಾದ ಅದೆಷ್ಟೋ
ಹಸಿದೊಟ್ಟೆಗಳಿವೆ ಇಲ್ಲಿ
ಕೊಟ್ಟು ಬಿಡಿ ತಿನ್ನುವರವರು ಒಟ್ಟಿಗೆ
ಬೀದಿ ಬದಿಯಲಿ ಇಂದಿಗೂ
ಹಸುಳೆಯಿಂದ ವೃದ್ದರವರೆಗೂ
ಹಸಿದ ಜೀವಗಳು ಕಾದಿವೆ
ರೈತ ಬೆಳೆದ ಶ್ರಮದ ಧಾನ್ಯ
ಹಸಿವ ನೀಗಿದರಷ್ಟೇ ಮಾನ್ಯ
ಕರೆದು ನೀಡಿ ಗೌರವದಿಂದ
0545ಎಎಂ02022019
*ಅಮು ಭಾವಜೀವಿ*
*ಗಜಲ್*
ವಿರಹಿಯ ಮನ ಅಳುತಿದೆ
ನೀನಿಲ್ಲದೆ ದಿನ ಅಳುತಿದೆ
ಮಧುರಸದ ಅಮಲಿನಲೂ
ಈ ಒಂಟಿತನ ಅಳುತಿದೆ
ಮಧುವಿನ ಸವಿ ಕಾಣದ
ಮೋಹಿತ ಮನ ಅಳುತಿದೆ
ಗುರಿಯಿಲ್ಲದ ನಿರ್ಜೀವ ಬದುಕು
ಖಬರಸ್ಥಾನದಿ ದಿನ ಅಳುತಿದೆ
ಬತ್ತಿದ ಕಂಗಳಲಿ ಮತ್ತೆ ಸುಂದರ
ಕನಸುಗಳು ಬಾರದ ದಿನ ಅಳುತಿದೆ
ಅರ್ಥವಿಲ್ಲದ ವ್ಯರ್ಥ ಪ್ರಯತ್ನ
ಮಾಡಿ ಸೋತ ಯೌವನ ಅಳುತಿದೆ
ಅಮು ಎಷ್ಟೇ ಬರೆದರೂ
ನೀನಿರದ ಒಂಟಿತನ ಅಳುತಿದೆ
1119ಪಿಎಂ03022019
ಅಮು ಭಾವಜೀವಿ
ಬಡವ*
ನೀ ಬಯಸಿದ ಹಾಗೆಲ್ಲ
ನಾ ಬದುಕಿಸಲಾಗಲಿಲ್ಲ
ಬಡವ ನಾನು
ಪ್ರೀತಿಯಲಿ ಕೈತುತ್ತನಿತ್ತು
ಭೂತಾಯ ಮೇಲ್ಮಲಗಿಸಿ
ಜೋಗುಳ ಹಾಡುವೆನು,
ನನ್ನ ತೋಳ ಬಂಧಿಯೇ
ಆಭರಣ
ಸವಿ ಮಾತೆ ಸಿಹಿಯೂರಣ
ಈ ಗುಡಿಸಲೇ ಅರಮನೆ
ಆದರೆ ಇಲ್ಲಿ ಒಲವಿನದೇ
ಆರಾಧನೆ.
ಗೆಳತಿ ಬಡವ ನಾನು
ಪ್ರೀತಿಯಲ್ಲಿ ಧನಿಕನು
*ಅಮು ಭಾವಜೀವಿ*
.834am080215
[
ಮೌನ*
ಈ ಮುಸ್ಸಂಜೆಯೊಳಗೂ
ನೀರವ ಮೌನ
ಆ ಬೆಳದಿಂಗಳಲೂ
ಕಾಣದು ಧ್ಯಾನ
ಈ ಸುಮದೊಳಗೂ
ತಳಮಳ
ಅದಕೇ ಬೀರುತಿಲ್ಲ
ಪರಿಮಳ.
ಆ ಇಬ್ಬನಿಯಲೂ
ಹೊಳಪಿಲ್ಲಾ
ಕಾರಣ ನನ್ನವಳು
ನನ್ನೊಂದಿಗಿಲ್ಲ.
*ಅಮು*
*ಗಜಲ್*
ಯೌವ್ವನವಿದು ಕಾದಿದೆ ನೀ ಬರಲೇ ಇಲ್ಲ
ಜೀವನವು ಬರಿದಾಗುತಿದೆ ನೀ ಬರಲೇ ಇಲ್ಲ
ಆಗಸದಿ ಚಂದ್ರ ಬಂದು ಮಿಂದು ಹೋದ
ಈ ಜಿಂದಗಿಯೊಳಗೇಕೆ ನೀ ಬರಲೇ ಇಲ್ಲ
ಕಡಲ ಕಿನಾರೆಯಲಿ ಅಲೆ ಮುತ್ತಿಡುತಿರಲು
ಮಧು ತುಂಬಿದಧರ ಕಾದಿವೆ ನೀ ಬರಲೇ ಇಲ್ಲ
ಇರುಳು ನಶೆಯೇರಿ ಮಲಗಿರುವಾಗ
ಸಂಜೆ ಹೆಣ್ಣಿನಾಸೆ ತೀರಿಸಲೇಕೆ ನೀ ಬರಲೇ ಇಲ್ಲ
ಅಮಲೇರಿದ ಯೌವನದೊಳಗೆ
ಅಮು ಕೂಗಿ ಕರೆದೆ ನೀ ಬರಲೇ ಇಲ್ಲ
0552ಪಿಎಂ08022019
*ಅಮು ಭಾವಜೀವಿ*
#ನನ್ನನುಳಿಸಿಕೊಳ್ಳದೆ*
ತುಂಬಾ ನೋವಿದೆ
ಈ ಮಣ್ಣಿನೊಳಗೆ
ರೈತನ ನೇಗಿಲಿಗೆ ಎದೆಯೊಡ್ಡಿ
ಒಡಲ ಕೊಯ್ದ ಕೆಂಪು ಮಣ್ಣು ನನ್ನದು
ಅವನಿತ್ತ ಬೀಜಗಳ ಮೊಳೆಸಿ
ಒಂದನು ಹತ್ತಾಗಿಸಿ ಮತ್ತೆ
ಹಿಂತಿರುಗಿಸೊ ಹೊಣೆ ನನ್ನದು
ಮಳೆಯ ರಭಸಕ್ಕೆ ಮೈಚೆಲ್ಲಿ
ನನ್ನೊಡಲನೆಲ್ಲ ಅಲ್ಲಿ ಹರಿಸಬೇಕು
ಚೂರುಪಾರು ಉಳಿದ ಕೊರಕಲಿನಲ್ಲಿ
ಇದ್ದ ಬೀಜಗಳಿಂದ ಹಸಿರ ಚಿಗುರಿಸಬೇಕು
ಗಾಳಿಯಲಿ ಧೂಳಾಗಿ ಹೋಗಿ
ಆಶ್ರಯವಿಲ್ಲದ ಅನಾಥವಾಗಿ
ಬಿಸಿಲ ಬೇಗೆಯ ಬರಗಾಲಕೆ
ಬರಿಗೈಯ ತಾಯಾಗಿ ಕೊರಗಬೇಕು
ಬಿಸಿಲು ಮಳೆ ಗಾಳಿಗಳ ದಾಳಿಯಿಂದ
ಭರವಸೆ ಕಳೆದುಕೊಳ್ಳದೆ ಉಳಿಯಬೇಕು
ಮಾನವನ ಬೃಹತ್ ಯಂತ್ರಗಳ
ಅತ್ಯಾಚಾರಕೆ ನಿತ್ಯ ಬಲಿಯಾಗಬೇಕು
ಎಂದಿಗೆ ಇದು ಕೊನೆ
ನಾವಿದ್ದರೆ ತಾನೆ ಬೆಳೆಗೆ ತೆನೆ
ನನ್ನನುಳಿಸಿಕೊಳ್ಳದೆ ಹೋದರೆ ನಿಮಗೆ
ಖಂಡಿತ ನಿತ್ಯ ನರಕದ ಬೇಗೆ
1026ಪಿಎಂ26022014
*ಅಮುಭಾವಜೀವಿ*
ನಾನು ಅಂತಹವಳಲ್ಲ*
ನಾನು ಅಂತಹವಳಲ್ಲ
ಆದರೂಅನಿವಾರ್ಯವಿದು
ಸಾಕುವ ಹೊಣೆ ಹೊತ್ತವನು
ಕುಡಿತದ ದಾಸನಾಗಿರಲು ಏನು ಮಾಡಲಿ
ರೂಪವಿದೆ ಅದಕೆ ಪಾಪಕೂಪ
ಕೈಹಿಡಿದು ಕರೆದುಕೊಂಡು ಬಂತಿಲ್ಲಿಗೆ
ನನ್ನ ಸುಖಕಲ್ಲ ಈ ಕೆಲಸ
ಸಂಸಾರದ ಜವಾಬ್ದಾರಿ ಹೊತ್ತುದಕಾಗಿ
ಅತ್ತೆ ಹಿಡಿದು ಒದೆಯುವಳು
ಗಂಡ ಎಲ್ಲಿ ಬಿದ್ದಿರುವನೋ
ಮಗಳ ಭವಿಷ್ಯಕಾಗಿ ಇಷ್ಟವಿರದ
ಈ ಕೊಚ್ಚೆಯಲಿ ಬಿದ್ದಿರುವೆ
ವೇಶ್ಯೆ ಈ ದೇಹದಕಷ್ಟೇ
ಮನಸು ಮಲಿನವಾಗಿಲ್ಲ
ನನ್ನವರಾರೂ ಇರದ ಈ ಊರಲ್ಲಿ
ಬಿಡಿಗಾಸಿಗಾಗಿ ಸೆರಗ ಹಾಸಿಹೆನಲ್ಲ
ನನಗೂ ಬೇಕಿಲ್ಲ ಈ ಬದುಕು
ಹೊರಗಿನ ನೋಟದಲಿದೆ ಕೆಡುಕು
ತಿಂದು ತೇಗುವ ಯಾವ ದೇಹಕೂ
ನನ್ನ ಮನವ ಸಂತೈಸಲೂ ಆಗಲಿಲ್ಲ
ಬೇಕೋ ಬೇಡವೋ ಹೀಗಿದೆ ಜೀವನ
ಪಾಪವೋ ಪುಣ್ಯವೋ ಬಿದ್ದಿರುವೆ ನಾ
ಏಳುವ ಮನಸಿದೆ ಮೇಲೆತ್ತುವವರಿಲ್ಲ
ಗಿರಾಕಿಯ ಹುಡುಕದೆ ಬದುಕಿಲ್ಲ
*ಅಮು ಭಾವಜೀವಿ*
*ಏಕೆ ಕೊರಗು*
ಬಾಳಲಿ ಏಕೆ ಈ ಕೊರಗು
ಅದರಿಂದ ಇರದು ಮೆರಗು
ಹರೆಯದಲಿ ಹೀಗೇಕೆ ಹತಾಶೆ
ಸೋಲುಗಳು ಮಾಡುತಿವೆ ತಮಾಷೆ
ಹೆಜ್ಜೆ ಹೆಜ್ಜೆಗೂ ಒಂದೊಂದು ರೀತಿ
ಗೆದ್ದು ಬೀಗಲಾರದಷ್ಟು ಫಜೀತಿ
ಇಟ್ಟ ಗುರಿಗಳೆಲ್ಲ ಉದುರಿ ಹೋಗಿ
ಸ್ಪೂರ್ತಿಯ ಒರತೆ ಬತ್ತಿದಂತಾಗಿ
ನಡೆಯೆಲ್ಲ ಎಡವಿ ಬಿದ್ದಿರಲು
ಎತ್ತಿ ಹಿಡಿಯುವ ಪ್ರಯತ್ನ ಏಕಿಲ್ಲ
ದೂರ ಯಾನವಿದು ನಿತ್ರಾಣಗೊಂಡು
ಕಂಡ ಕಂಡಲ್ಲಿ ಕಾರಣ ಹುಡುಕಿಕೊಂಡು
ಸೊರಗಿದವು ಭರವಸೆಗಳೆಲ್ಲವು
ಮರೀಚಿಯಾಯ್ತು ಆ ಗೆಲುವು
ಬಂದದ್ದು ಏಕೋ ಗೊತ್ತಿಲ್ಲ
ಹೋಗುವಾಗ ಏನನ್ನೂ ಉಳಿಸಿಲ್ಲ
ಹೀಗೆ ಬಂದು ಹಾಗೆ ಹೊರಟ
ಬದುಕಿದು ಖಾಲಿ ಕರಟ
ಶೂನ್ಯ ಸಂಪಾದನೆ ಮಾಡಿ
ಬಂದಂತೆ ಓಡಿ ಓಡಿ ಸುಸ್ತಾಗಿ
ರೆಕ್ಕೆ ಮುರಿದ ಹಕ್ಕಿ ಹಾಗೆ
ಅರ್ಧ ದಾರಿಯಲ್ಲೇ ಅಡ್ಡ ಬಿತ್ತು ಬದುಕು
0432ಪಿಎಂ12022019
*ಅಮು ಭಾವಜೀವಿ*
ತಾಯ ಋಣ ತೀರಿಸಲು*
ತಾಯ ಒಡಲೊಳಗಿಂದ
ಮಡಿಲೊಳಾಡೊ ಕಂದ
ಅಮ್ಮ ಎಂಬೊಂದು ಮಾತಿಂದ
ತಾಯಿಗೆ ಜಗದಾನಂದ
ಹಡೆದ ನೋವೆಲ್ಲಾ
ಕಂದನ ನಗುವಿಂದ ಮಾಯ
ಮಗುವ ಮುಖ ನೋಡುತಲೆ
ಕಳೆವಳಮ್ಮ ತನ್ನೆಲ್ಲಾ ಸಮಯ
ಅಳುವ ಕಂದನ ಕೂಗಿಗೆ
ಎದೆಯಾಲುಕ್ಕುವುದು ಆ ಘಳಿಗೆ
ಹಾಲ ಕುಡಿದು ಮಲಗೊ ಕಂದ
ನೋಡಿ ಸವಿಯಬೇಕು ಆ ಆನಂದ
ಜಗದ ಈ ಸೃಷ್ಟಿಯ ಹಿಂದೆ
ಎಂಥ ಉದ್ದೇಶವಿದೆಯೋ ಮುಂದೆ
ತಾಯಿ ಮಗುವ ಈ ಸಂಬಂಧ
ಜನುಮಾಂತರದ ಅನುಬಂಧ
ತಾಯೊಲವು ಪಡೆದ ಜಗವು
ನಿಜವಾಗಲೂ ಧನ್ಯ
ಜಗಕಾ ಸುಖವಿತ್ತ
ತಾಯೇ ನೀ ಲೋಕಮಾನ್ಯ
ಹೆಣ್ಣೇ ನಿನ್ನೀ ತ್ಯಾಗದ ಮುಂದೆ
ಆ ದೇವರೂ ಕೂಡ ಸಣ್ಣವನು
ಒಂದೇ ಒಂದು ಜನ್ಮ ಸಾಲದು
ತೀರಿಸಲು ನಿನ್ನೀ ಋಣವನು.
*ಅಮು ಭಾವಜೀವಿ*
ಪ್ರೀತಿ ಅನುಭವಿಸುವಂತದ್ದು, ಆಚರಿಸುವಂತದ್ದಲ್ಲ.*
ಅಮು ಭಾವಜೀವಿ
[
*೧ ಅಮರ ಪ್ರೇಮಿಗಳು*
ಅವಳೀಗ ದೇವರ ಮಗಳು
ನನಗಿತ್ತು ಹೋದಳು
ಬರಿಯ ನೋವುಗಳು
ನನಗೀಗ ಆಸರೆ ಅವಳ ನೆನಪುಗಳು
ಮಾತಿರದ ಕಥೆಯಿರದ
ನಮ್ಮ ನೋಟಗಳು
ಮೌನದಲ್ಲಿ ಧ್ಯಾನಿಸುವ
ಪ್ರೀತಿಯ ಸಂಪುಟಗಳು
ನಗುವಿನಲೆಯಲಿ ತೇಲುತ್ತ
ಒಲವನರಸುತ್ತ ಸಾಗಿದೆವು
ಕೋಪ ಮುನಿಸುಗಳ ಕಾಣದ
ಅಮರ ಪ್ರೇಮಿಗಳು ನಾವು
ನಾವು ನಲ್ಮೆಯಾಗಸದಲ್ಲಿ
ಇಬ್ಬರು ಚುಕ್ಕಿಗಳ ತೆರದಲ್ಲಿ
ಹೊಳೆಯುತ್ತಿದ್ದೆವು ಬೆಳೆಯುತ್ತಿದ್ದೆವು
ಪ್ರಣಯಪಕ್ಷಿಗಳಾಗಿ
ಯಾರ ಕಣ್ಣು ಬಿದ್ದಿತೋ
ಯಾರ ಶಾಪ ತಟ್ಟಿತೋ
ಸಾವು ಅವಳ ಹೊತ್ತೊಯ್ಯಿತು
ನೋವು ನನ್ನೊಳಗೆ ಉಳಿಯಿತು
ಈಗವಳು ದೇವರ ಮಗಳು
ನೋವನ್ನು ಬಿಟ್ಟು ಹೋದಳು
ಅವಳಿಗಾಗಿ ಮುಡಿಪು ಬಾಳು
ನಾವಿಬ್ಬರೂ ಅಮರ ಪ್ರೇಮಿಗಳು
*ಅಮು ಭಾವಜೀವಿ*
*ವ್ಯಾಲೆಂಟೈನ್ಸ್ ದಿನದ ಶುಭಾಶಯಗಳು*❤💛💚💙💜💜💘
*ಬಲಿದಾನಕೆ*
ಹೃದಯ ರೋಧಿಸುತಿದೆ
ಕಣ್ಣು ರಕ್ತಗಂಬನಿ ಹರಿಸಿದೆ
ಮನವು ನೊಂದು ಮಿಡಿದಿದೆ
ವೀರಯೋಧರ ಬಲಿದಾನಕೆ
ದಯೆಯನೇ ತೋರದೆ
ಹಾದಿಯಲಿ ಅಡ್ಡ ಬಂದು
ಅಮಾನವೀಯವಾಗಿ ಕೊಂದ
ಉಗ್ರರ ಕ್ರೌರ್ಯಕೆ ರಕ್ತ ಕುದಿಯುತಿದೆ
ಎದುರು ನಿಂತು ಹೋರಾಡಲಾಗದೆ
ಆವಂತಿಯಲಿ ಆಸ್ಪೋಟಿಸಿಕೊಂಡು
ಶಾಂತಿ ಕದಡಿದವನ ಕ್ರೂರ ಮನಸ್ಥಿತಿಯ
ದೂರ್ತರ ಸದೆಬಡಿಯಬೇಕಿದೆ
ರಕ್ತ ಚೆಲ್ಲಿದವರ ರಕ್ತ ಹೀರಿ
ಶಾಂತಿ ಕದಡಿದವನ ಶಕ್ತಿ ಕುಂದಿಸಿ
ಹಿಂಸೆಗೈದವನ ಹೃದಯ ಬಗೆದು
ತರ್ಪಣ ನೀಡಬೇಕು ಯೋಧರ ಬಲಿದಾನಕೆ
ಇನ್ನು ಸಹಿಸಲಾಗದು ಇಂಥ ಕೃತ್ಯ
ಹೇಡಿಗಳ ಎಡೆಮುರಿ ಕಟ್ಟಿ
ಭಾರತಮಾತೆಯ ವೀರಸುತರ
ವೀರ ಮರಣಕೆ ರಕ್ತಾಭಿಷೇಕವಾಗಬೇಕು
0500ಪಿಎಂ15022019
*ಅಮು ಭಾವಜೀವಿ*
*ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ*🌺🌺😭😭😭
ಕಂದ ನಿನ್ನ ಅಂದಕೆ*
ಕಂದ ನಿನ್ನ ಅಂದ ಚಂದಕೆ
ಆ ದೇವನೂ ಮೂಕವಿಸ್ಮಿತ
ಕಂದ ನೀ ನೀಡೋ ಆನಂದ
ಬದುಕಲಿ ಅದೆಂದೆಂದೂ ಶಾಶ್ವತ.
ಅಮ್ಮ ಎಂದ ಕೂಡಲೇ
ಅದೇನೋ ಸೆಳೆತ
ನಿನ್ನ ಅಪ್ಪಿ ಮುತ್ತಿಕ್ಕಲು
ನಾನಾಗುವೆ ಪುಳಕಿತ
ಹೆಣ್ಣಾದ ನನ್ನಲಿ ತಾಯ್ತನ
ತಂದೆ ಕಂದ ನೀನು
ಹಣ್ಣಾದ ಹೆಣ್ಣು ಮಣ್ಣಾದರೂ
ಮಮತೆಯಲಿ ಅವಳು ಅಜರಾಮರ
ನವಮಾಸ ಹೊತ್ತ ನೋವು
ಬಯಕೆ ಪಡೆದಿದ್ದ ಕಾವು
ಕಂದ ನಿನ್ನ ಹಂಬಲಿಕೆಯ ಹಸಿವು
ಎಲ್ಲದಕೂ ಉತ್ತರವಾಯ್ತು ನಿನ್ನೀ ನಗುವು
ಸಾರ್ಥಕವಿನ್ನು ನನ್ನ ಬದುಕು
ನಿನ್ನ ಬೆಳೆಸೋ ಕಾಯಕದಿಂದ
ಜನುಮ ಜನುಮದನುಬಂಧ ತಂದ
ತಾಯಿ ಮಗುವೆಂಬ ಸಂಬಂಧ
*ಅಮು ಭಾವಜೀವಿ*
[
ಆ ವಿಧಿಗೂ ಮಾನವೀಯತೆಯಿತ್ತು
ಮಾನವರಿಂದ ಅದು ಸತ್ತುಹೋಯ್ತು
ಅಪಘಾತದ ಕಾರಣದಿ
ನಿನ್ನ ದೇಹ ತುಂಡಾಯ್ತು
ಕರುಣೆ ತೋರದವರ ಮುಂದೆ
ದೇಹ ವಿಲವಿಲ ಒದ್ದಾಡಿತು
ಚಿತ್ರ ತೆಗೆಯುವಾಗಿನ ಕಾಳಜಿ
ಚಿಕಿತ್ಸೆ ಕೊಡಿಸುವಲ್ಲಿ ವಿಫಲವಾಯ್ತು
ನಡು ರಸ್ತೆಯಲೇ ನರಳಾಡಿ
ಜೀವ ತಾ ಹಾರಿಹೋಯ್ತು
ನಿನ್ನದಲ್ಲದ ತಪ್ಪಿಗೆ
ಇಷ್ಟೊಂದು ಕ್ರೂರವೇ ಶಿಕ್ಷೆ
ತಂತ್ರಜ್ಞಾನದ ತುದಿ ಮುಟ್ಟಿದ್ದರೂ
ನಿನಗಿಲ್ಲವಾಯ್ತೇ ರಕ್ಷೆ
ಸಾವಿನಲ್ಲೂ ಹಿರಿತನ ಮೆರೆದೆ
ನೇತ್ರದಾನದಿ ನೀ ಮಾದರಿಯಾದೆ
ಕರುಣಾಮಯಿ ನಿನ್ನನ್ನು
ಸಾವು ದಾರುಣವಾಗಿ ಕೊಂದಿತೆ
ಹೋಗು ಮಗುವೆ ನಿನ್ನ
ಋಣ ತೀರಿತು ಭುವಿಯಲಿ
ಚಿರನಿದ್ರೆಯಲಿ ವಿರಮಿಸು
ದಾನಗೈದ ಆ ಧನ್ಯತೆಯಲಿ,,,,
943ಪಿಎಂ170216
**ಅಮು ಭಾವಜೀವಿ**
(ನೆಲಮಂಗಲ ಸಮೀಪ ಅಪಘಾತಕ್ಕೊಳಗಾಗಿ ಹಸುನೀಗಿದ ಹರೀಶ್‌ನ ಕುರಿತು ಬರೆದದ್ದು)