Thursday, March 14, 2019

ಸೈನಿಕರ ಬದುಕು ಬವಣೆ

ಒಂದು ದೇಶಕ್ಕೆ  ರೈತ ಎಷ್ಟು ಮುಖ್ಯವೋ, ಅದಕ್ಕಿಂತಲೂ ಹೆಚ್ಚು ಆ ದೇಶಕ್ಕೆ ಅಗತ್ಯವಾಗಿರುವುದು ಸೈನಿಕ . ರೈತ ಬೆಳೆ ಬೆಳೆಯದಿದ್ದರೆ ಬೇರೆಡೆಯಿಂದ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳಬಹುದು. ಆದರೆ ಸೈನಿಕರನ್ನು ಬೇರೆಡೆಯಿಂದ ತರಿಸಿಕೊಳ್ಳಲು ಸಾಧ್ಯವಿಲ್ಲ. ಅದು ಭದ್ರತೆಯ ದೃಷ್ಟಿಯಿಂದಲೂ, ದೇಶಾಭಿಮಾನದ ಕೊರತೆಯಿಂದ ನಾಡಿನ ರಕ್ಷಣೆ ಅಸಾಧ್ಯವಾಗುತ್ತದೆ. ಒಂದು ದೇಶದಲ್ಲಿ ಇರುವ ಸೈನಿಕ ವ್ಯವಸ್ಥೆ ಕೇವಲ ಹಣ , ವಸ್ತು, ಅಧಿಕಾರ, ಸವಲತ್ತುಗಳಿಂದ ಬಲಿಷ್ಠ ವಾಗದು. ಅದಕ್ಕೆ ಬೇಕಾಗಿರುವುದು ಸದೃಢ, ಆರೋಗ್ಯಕರ, ನಮ್ಮದೇ ನೆಲದ, ದೇಶಾಬಿಮಾನದ ಕಿಚ್ಚನ್ನು ತನ್ನೆದೆಯೊಳಗೆ ತುಂಬಿಕೊಂಡು ಕೆಚ್ಚೆದೆಯಿಂದ ಹೋರಾಡಬಲ್ಲ ಉತ್ಸಾಹಿ ಯುವ ಪಡೆಯಾಗಿರಬೇಕು.  ದೇಶ ಕಾಯುವ ಸೈನಿಕರಿಗೆ ವ್ಯವಸ್ಥೆ ಕೊಡುವ ಸವಲತ್ತಿಗಿಂತಲೂ ತಮ್ಮ ನಾಡಿನ ರಕ್ಷಣೆ ಮುಖ್ಯವಾಗಿರುತ್ತದೆ.

          ಒಂದು ದೇಶ ಸುಭದ್ರವಾಗಿರಬೇಕಾದರೆ ಅಲ್ಲಿರುವ ಸಮರ್ಪಣಾ ಭಾವದ ಸೈನಿಕರಿಂದ ಮಾತ್ರ ಸಾಧ್ಯ. ಅವರಿಗೆ ಬೆಂಬಲವಾಗಿ ಬೆಂಗಾವಲಾಗಿ ಆಳುವ ಸರ್ಕಾರಗಳು ನಿಂತಾಗ ಮಾತ್ರ ಕೆಚ್ಚೆದೆಯ ಕಲಿಯಾಗಿ ಎಂಥದೇ ಸಂದರ್ಭ ಬಂದಾಗಲೂ ನಾಡಿಗಾಗಿ ತನ್ನ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ಅಪ್ರತಿಮ ಸಾಹಸಿಗಳನ್ನು  ರಕ್ಷಣಾ ವ್ಯವಸ್ಥೆಯು ಒಳಗೊಂಡಿರುತ್ತದೆ. ಸೈನಿಕರೆಂದರೆ ಅವರು ಕೂಡ ಸಾಮಾನ್ಯ ಜನರಂತೆಯೇ. ಅವರಿಗೂ ನೋವಿದೆ ನಲಿವಿದೆ, ತನ್ನ ಸಂಸಾರಗಳನ್ನು ನಡೆಸಿಕೊಂಡು ಹೋಗುವ ಹೊಣೆಗಾರಿಕೆ ಇದೆ. ಆದರೆ ದೇಶದ ರಕ್ಷಣೆಯ ವಿಷಯದಲ್ಲಿ ಇಡೀ ತನ್ನ ಕುಟುಂಬವನ್ನು ಮರೆತು ತನ್ನನ್ನು ತಾನು ದೇಶಕ್ಕಾಗಿ ಸಮರ್ಥಿಸಿಕೊಳ್ಳುತ್ತಾನೆ. ಅವನ ತ್ಯಾಗ ಬಲಿದಾನಗಳನ್ನು ಈ ದೇಶದ ಜನರು ಕ್ಷಣ ಹೊತ್ತು ನೆನೆದು ಮರೆತುಬಿಡಬಹುದು, ಆದರೆ ಇಡೀ ತಮ್ಮ ಜೀವಿತಾವಧಿಯ ಉದ್ದಕ್ಕೂ ಸೈನಿಕನನ್ನು ನಾಡಿಗೆ ಅರ್ಪಿಸಿದ ಹೆಮ್ಮೆ ಒಂದು ಕಡೆಯಾದರೆ, ನಿರೀಕ್ಷಿತವಲ್ಲದ ಅನಿರೀಕ್ಷಿತ ಸಂದರ್ಭಗಳಲ್ಲಿ ಅವನನ್ನು ಕಳೆದುಕೊಂಡಾಗ ಆ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯಬೇಕಾಗುತ್ತದೆ. ವೈರಿಯ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಸೇನಾನಿಗೆ ವ್ಯವಸ್ಥೆ ಹುತಾತ್ಮ ಎಂಬ ಪಟ್ಟ ಕಟ್ಟಿ, ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರ ಧ್ವಜವನ್ನು ಹೊದಿಸಿ ಸರ್ಕಾರಿ ಗೌರವವನ್ನು ಸಮರ್ಪಿಸುತ್ತದೆ. ಇದು ಜಗತ್ತಿನ ಕಣ್ಣಿಗೆ ಕಾಣಿಸುತ್ತದೆ. ಆದರೆ ತದನಂತರದಲ್ಲಿ ಸೈನಿಕರ ಕುಟುಂಬಗಳು ಸಿಗಬೇಕಾದ ಸೌಲಭ್ಯಗಳಿಗಾಗಿ ಕಚೇರಿಗಳನ್ನು ಅಲೆದು ಅಲೆದು ಹೈರಾಣಾಗಿ ಹೋಗುತ್ತವೆ. ಈ ನಾಡಿನ ರಕ್ಷಣೆಗಾಗಿ , ನಮ್ಮೆಲ್ಲರ ನೆಮ್ಮದಿಯ ಬದುಕಿಗಾಗಿ ಆ ಕುಟುಂಬದ ಸದಸ್ಯನೊಬ್ಬ ಬಲಿಯಾಗಿದ್ದಾನೆಂಬುದನ್ನು ಮರೆತು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಘಟನೆಗಳನ್ನು ನಾವು ಕಂಡಿದ್ದೇವೆ.ಇದೇನಾ ಈ ನಾಡಿನ ರಕ್ಷಣೆಗಾಗಿ ಹೋರಾಡಿದವರ ಬದುಕು ಬವಣೆಗಳನ್ನು ನೀಗಿಸಲಾರದ ವ್ಯವಸ್ಥೆ. ಇಂತಹ ಸಂದರ್ಭದಲ್ಲಿ ಯಾವುದೇ ಅಧಿಕಾರಶಾಹಿ ವರ್ಗ ಸಹಾಯ ಕೇಳಿಕೊಂಡು ಆ ಕುಟುಂಬಗಳು ಬಂದಾಗ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ಎಂಥದ್ದೇ ಸಂದರ್ಭದಲ್ಲೂ ಸೈನಿಕನ ಕುಟುಂಬಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದದ್ದು ವ್ಯವಸ್ಥೆಯ ಜವಾಬ್ದಾರಿ. ಆದರೆ ಅವರನ್ನು ನಡೆಸಿಕೊಳ್ಳುವ ರೀತಿಯನ್ನು ಗಮನಿಸಿದರೆ ಇಷ್ಟು ಬೇಗ ಹುತಾತ್ಮನ ಸೇವೆಯನ್ನು ನಮ್ಮ ಈ ವ್ಯವಸ್ಥೆ ಮರೆತುಬಿಟ್ಟಿದೆ ಎನಿಸುತ್ತದೆ.

        ಈ ನಾಡಿನ ರಕ್ಷಣೆಗೆ ಎಂದು ತಮ್ಮ ಕುಟುಂಬದ ಸದಸ್ಯನನ್ನು ಕಳಿಸಿದ ಯಾವ ಕುಟುಂಬಗಳು ಅಂತಹ ಸ್ಥಿತಿವಂತರೇನೂ  ಆಗಿರುವುದಿಲ್ಲ. ಸೈನಿಕನ ಹೆತ್ತವರು ಬಂಧುಗಳು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಕೆಲವರಿಗಂತೂ ಸೈನಿಕರ ಕುಟುಂಬಗಳಿಗೆ ಸಿಗಬಹುದಾದ ಸವಲತ್ತುಗಳನ್ನು ಹೇಗೆ ಪಡೆದುಕೊಳ್ಳಬೇಕೆಂದು ಸಹ ಗೊತ್ತಿರುವುದಿಲ್ಲ. ಅಲ್ಲದೇ ಸೈನಿಕರ ಕುಟುಂಬಗಳು ಹೆಚ್ಚಾಗಿ ಕುಗ್ರಾಮಗಳಲ್ಲಿರುವ ಕಾರಣ ಅವರಿಗೆ ಈ ಸವಲತ್ತುಗಳೆಲ್ಲ ಸಿಗುವುದೇ ಇಲ್ಲ. ಜೀವನ ನಿರ್ವಹಣೆಗೆ ಬೇಕಾದ  ಅಗತ್ಯ ಪಡಿತರ, ಆರೋಗ್ಯ, ಶಿಕ್ಷಣ ಮುಂತಾದವುಗಳು ಅವರ ಮನೆ ಬಾಗಿಲಿಗೇ ತಲುಪುವಂತಹ ವ್ಯವಸ್ಥೆಯನ್ನು ಸರ್ಕಾರಗಳು ಮಾಡಬೇಕಾಗುತ್ತದೆ. ಈ ನಾಡಿಗೆ ಒಬ್ಬ ಸೈನಿಕನನ್ನು ಕೊಟ್ಟ ಕುಟುಂಬ ಎಂಬ ಗೌರವವನ್ನು ವ್ಯವಸ್ಥೆ ತೋರಬೇಕಿದೆ. ಆದರೆ ಲಂಚಬಾಕತನ, ಅಧಿಕಾರದ ಮದ ಇರುವ ವ್ಯಕ್ತಿ ಆ ಕಡು ಬಡತನದಲ್ಲಿರುವ ಕುಟುಂಬಗಳ ಸಂಕಷ್ಟವನ್ನು ಅರಿತುಕೊಳ್ಳಲಾಗದ ಸ್ಥಿತಿ ಇದ್ದಾಗ ಆ ಕುಟುಂಬ ಪರದಾಡುವ ಪರಿ ಮನ ಕಲಕುತ್ತದೆ. ಅಲ್ಲದೆ ಸೈನಿಕನಾಗಿ ಪ್ರಾಣ ತ್ಯಾಗ ಮಾಡುವಾಗ ಇಲ್ಲದ ಜಾತಿ ಧರ್ಮ ಮತ ಪಂಥಗಳು ನಂತರ ನುಸುಳಿ ಬಂದು ಆ ಕುಟುಂಬಗಳಲ್ಲಿ ಇನ್ನಿಲ್ಲದಂತೆ ನರಳಿಸಿ ಬಿಡುತ್ತವೆ. ದೇಶ ರಕ್ಷಣೆ ಗಾಗಿ ತನ್ನ ಸಂಸಾರದ ರಕ್ಷಣೆಯನ್ನು ಮರೆತು ಹೋದ ಸೈನಿಕನ ಮನೆಯವರು ಪ್ರತಿಕ್ಷಣ ಆತಂಕದಲ್ಲಿ ಕಾಲ ಕಳೆದಿರುತ್ತಾರೆ. ಯಾವಾಗ ಕರ್ಣಕಠೋರ ಸುದ್ದಿ ಬಂದು ತಿವಿಯುತ್ತದೋ ಎಂದು ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಾ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ  ಈ  ನಾಡಿನಲ್ಲಿ ಬದುಕುವ ಪ್ರತಿಯೊಬ್ಬನು ಆ ಸೈನಿಕನ ಋಣ ತೀರಿಸಬೇಕು. ಅದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ದೇಶಸೇವೆಗಾಗಿ ದುಡಿದವರ ಕುಟುಂಬಗಳು ನೆಮ್ಮದಿಯಿಂದ ಬದುಕುವಂತಾಗಬೇಕು..

0635ಎಎಂ14032018

No comments:

Post a Comment