Monday, March 4, 2019

ಯೋಧರ ಬದುಕು

*ಯೋಧರ ಬದುಕು*

ಎರಡು ವಿಕ್ಷಿಪ್ತ ಮನಸ್ಸುಗಳ ರಣೋತ್ಸಾಹವೇ ಯುದ್ಧ ಎಂತಹ ಭೀಬತ್ಸ ಸನ್ನಿವೇಶವನ್ನು ಯುದ್ಧ ತಂದೊಡ್ಡುತ್ತದೆ ಎಂದರೆ ನಾಯಕರಿಗಿಂತ ಅವರ ಆದೇಶ ಪಾಲನೆ ಮಾಡುವ ಸೇವಕರ ಬದುಕುಗಳು, ಅವರನ್ನು ನಂಬಿರುವ ಕುಟುಂಬ ಗಳು ಬೀದಿಗೆ ಬೀಳುವ ಸಂಭವವೇ ಹೆಚ್ಚು. ಈ ಯುದ್ಧ ಭೂಮಿ ಎಂಬುದು ನರಕ ಸದೃಶ್ಯವಾದದು. ಅಲ್ಲಿ ಜೀವಗಳಿಗೆ ಬೆಲೆ ಇಲ್ಲ. ಸಾವು ನೋವುಗಳಿಗೆ ಕೊನೆಯಿಲ್ಲ. ಯುದ್ಧದಲ್ಲಿ ಗೆಲ್ಲುವುದೊಂದೇ ಮಾನದಂಡ. ಆದರೆ ಗೆಲ್ಲುವ ಮಾರ್ಗದಲ್ಲಿ ಎದುರಾಳಿಯು ಯಾವ ಮಾರ್ಗವನ್ನು ಬೇಕಾದರೂ ಹಿಡಿಯಬಹುದು. ಇಲ್ಲಿ ಬಲಶಾಲಿಗಿಂತಲೂ ತಂತ್ರ ಪ್ರತಿತಂತ್ರಗಳೇ ಮುಖ್ಯವಾಗಿರುತ್ತವೆ.

ಒಂದು ದೇಶ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಅದಕ್ಕೆ ತನ್ನದೇ ಆದ ಬಲಿಷ್ಠ ಸೈನ್ಯವನ್ನು ಹೊಂದಿರಬೇಕು. ಅಂದರೆ ಸೈನ್ಯಕ್ಕೆ ನಮ್ಮದೇ ನೆಲದ ನಮ್ಮದೇ ಮನೆಯ ಯಾರೋ ಒಬ್ಬ, ಕಟ್ಟುಮಸ್ತಾದ ಯುವಕ ಯೋಧನಾಗಿ ಹೋಗಿರುತ್ತಾನೆ. ಅವನಿಗೆ ದೇಶಪ್ರೇಮಕ್ಕೂ ಮುಂಚೆ ತನ್ನ ಹಾಗೂ ತನ್ನ ಕುಟುಂಬಕ್ಕೆ ಆಧಾರವಾಗಿ ಸರ್ಕಾರದ ಕೆಲಸದ ಜೊತೆಗೆ ಸಿಗುವ ಸಂಬಳ ಅನಿವಾರ್ಯವಾಗಿರುತ್ತದೆ. ಆದರೆ ಒಮ್ಮೆ ಸೈನಿಕ ಎಂದು ಸೈನ್ಯದ ಸಮವಸ್ತ್ರ ಮೈ ಮೇಲೆ ಧರಿಸಿದ ನೆಂದರೆ ಅವನ ಧಮನಿ ಧಮನಿ ಕೂಡ ರಾಷ್ಟ್ರಪ್ರೇಮದ ಅಗಾಧ ದೇಶಭಕ್ತಿಯನ್ನು ತನ್ನೊಳಗೆ ಆವಿರ್ಭವಿಸಿ ಕೊಳ್ಳುತ್ತಾನೆ. ಆಗ ತನ್ನ ಕುಟುಂಬವನ್ನು ಮರೆತು ತ್ಯಾಗಕ್ಕೆ ಟೊಂಕ ಕಟ್ಟಿ ನಿಂತು ಎದುರಾಳಿಯೊಂದಿಗೆ ಹೋರಾಟಕ್ಕಿಳಿಯುತ್ತಾನೆ. ರಣಕಲಿ ಯಾಗಿ ಮುನ್ನುಗ್ಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಶತ್ರುವನ್ನು ಸದೆ ಬಡಿಯಲು ಹವಣಿಸುತ್ತಾನೆ.

ಯಾವ ತಾಯಿಯ ಹೆತ್ತ ಮಗನೋ, ಯಾವ ಸಂಸಾರದ ಆಶಾಜ್ಯೋತಿಯೋ, ಯಾವ ತಂಗಿಯ ಅಣ್ಣನೋ, ಯಾವ ಅಕ್ಕನ ತಮ್ಮನೋ , ಯಾವ ಮಡದಿಯ ಗಂಡನೋ, ಯಾವ ಮಕ್ಕಳ ತಂದೆಯೋ ಸೈನ್ಯಕ್ಕೆ ಕಳಿಸುವ ದಿನವೇ ಅವನು ನಮ್ಮವನಲ್ಲ, ದೇಶಸೇವೆಗಾಗಿ ಕಳಿಸಿಕೊಟ್ಟ ನಮ್ಮ ಮನೆಯ ಋಣ, ಅವನು ಹಿಂತಿರುಗಿ ಬಂದರೆ ನಿರಾಳ, ಹುತಾತ್ಮನಾದರೆ ಹೆಮ್ಮೆ ಎಂಬ ಭಾವದಿಂದಲೇ ಕಳುಹಿಸಿರುತ್ತಾರೆ. ಅವನ ಸಾವು ಸದಾ ಅವರ ಕಣ್ಣ ಮುಂದಿರುತ್ತದೆ. ಗಡಿಯಲ್ಲಿ ಅವನು ಮನೆಯಲ್ಲಿ ಇವರು ಅದೆಷ್ಟು ರಾತ್ರಿಗಳನ್ನು ನಿದ್ರೆ ಇಲ್ಲದೆ ಆತಂಕದಿಂದ ಕಳೆದಿರುತ್ತಾರೆ. ಆದರೂ ಅವನು ಮನೆಯಿಂದ ಹೊರಟಾಗ ವಿಜಯಶಾಲಿಯಾಗಿ ಹಿಂದಿರುಗಿ ಬಾ ಎಂದು ಹರಸುತ್ತಾರೆ. ಯುದ್ಧ ಎಂಬುದು ಶುರುವಾದಂತೂ ಯೋಧನ ಮನೆಯವರು ಯಾರೂ ನೆಮ್ಮದಿಯಿಂದ ಇರಲಾರರು. ಯಾವ ಕ್ಷಣದಲ್ಲಿ ಯಾವ ಕರೆ ಬರುತ್ತದೋ ಎಂದು ಪ್ರತಿಕ್ಷಣವೂ ಜೀವ ಹಿಡಿದುಕೊಂಡು ಕಾಲ ತಳ್ಳುತ್ತಿರುತ್ತಾರೆ. ಆದರೂ ಈ ಆತಂಕ ಯೋಧನಿಗೆ ದೊಡ್ಡದಂತೆ ಅವನನ್ನು ಹುರಿದುಂಬಿಸಿ ಕಳಿಸಿರುತ್ತಾರೆ. ರಣ ಕಣಕ್ಕೆ ಕಾಲಿಟ್ಟವನು ತನ್ನವರ ಸಂಪರ್ಕಕ್ಕೆ ಸಿಗುವುದೇ ಇಲ್ಲ . ಆಗ ಅವನ ಕಣ್ಣು ಮುಂದೆ ಕಾಣುವುದು ಬರೀ ದೇಶ ರಕ್ಷಣೆ ಒಂದೇ, ನನಗೆ ಏನಾದರೂ ಆದರೆ ನನ್ನ ಕುಟುಂಬದವರನ್ನು ನೋಡಿಕೊಳ್ಳಲು ಇಡೀ ದೇಶವೇ ಇರುತ್ತದೆ ಎಂಬ ನಂಬಿಕೆಯಿಂದ ಅವನು ದೇಶ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿರುತ್ತಾನೆ.

ಯುದ್ಧ ರಕ್ಕಸಿಗೆ ಕರುಣೆಯ ಮುಖವಿಲ್ಲ. ಅವಳಿಗೆ ರಣೋತ್ಸಾಹ ಗೊತ್ತು. ರಣ ಕಲಿಗಳ ಬಗ್ಗೆ ಆಕೆಗೆ ಚಿಂತೆ ಇಲ್ಲ. ಒಮ್ಮೆ ರಣಕಹಳೆ ಊದಿದ ಬಳಿಕ ಅದು ಏನಾದರೂ ಆಗಬಹುದು. ಬಲಶಾಲಿ ಯೆ ಗೆಲ್ಲುತ್ತಾನೆ ಎಂದು ಹೇಳಲಾಗದು. ಒಮ್ಮೊಮ್ಮೆ ಕುತಂತ್ರಿಗಳು ಗೆಲ್ಲುವ ಸಾಧ್ಯತೆ ಇರುತ್ತದೆ. ಅದೇನೇ ಆದರೂ ಎರಡು ಕಡೆಗಳಲ್ಲಿ ಅಸಂಖ್ಯ ರಣ ಕಲಿಗಳ  ಬಲಿ ಪಡೆದು ರಣ ಕೇಕೆ ಹಾಕಿ ನಗುತ್ತಾಳೆ. ಅಂತರಂಗದಲ್ಲಿ ಯಾರೋ ರಣಹೇಡಿಗಳಿರುವುದಿಲ್ಲ. ಅವರೆಲ್ಲರೂ ರಣಧೀರ ರಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುತ್ತಾರೆ. ಯುದ್ಧರಂಗದಲ್ಲಿ ಗೆಲುವೊಂದೇ ಮುಖ್ಯವಾಗಿ ಅಲ್ಲಿ ಸೆಣಸುವವರ ಜೀವಿಗಳಿಗೆ ಬೆಲೆ ಇಲ್ಲದಿದ್ದರೂ ಜೀವ ಕಳೆದುಕೊಂಡ ಯೋಧನ ಆತ್ಮಕ್ಕೆ ಅಮರತ್ವದ ಸಮಾಧಾನ ಮಡಿದ ದೇಹಕ್ಕೆ ಹುತಾತ್ಮ ಗೌರವ. ಇಡೀ ನಾಡಿಗೆ ನಾಡೇ ಅವನ ಬಗ್ಗೆ ಕಂಬನಿ ಮಿಡಿಯುತ್ತಿದೆ. ಆದರೆ ಆ ನೋವನ್ನು ನಿರಂತರವಾಗಿ ಅನುಭವಿಸುವುದು ಮಾತ್ರ ಯೋಧನನ್ನೇ ನಂಬಿ ಬದುಕುತ್ತಿದ್ದ ಅಸಹಾಯಕ ಕುಟುಂಬ. ದೇಶ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದನೆಂಬ ಹೆಮ್ಮೆ ಒಂದು ಕಡೆಯಾದರೆ, ಇನ್ನೆಂದು ಅವನು ನಮ್ಮೊಂದಿಗೆ ಇರಲಾರದೆಂಬ ನೋವು ರೀ ಬದುಕನ್ನೇ ನಶ್ವರವಾಗಿಸುತ್ತದೆ. ಸೈನ್ಯಕ್ಕೆ ಮತ್ತೊಬ್ಬ ಯೋಧ ಸಿಗುತ್ತಾನೆ. ಆದರೆ ತಾಯಿ ತಂದೆಯರಿಗೆ ಕಳೆದುಕೊಂಡ ಮಗ ಮತ್ತೆ ಸಿಗಲಾರ. ಹೆಂಡತಿ ಮಕ್ಕಳಿಗೆ ಇಲ್ಲದ ಬದುಕು ಒಂದು ಸಮರ.ಮಗ ಗಂಡನಿಲ್ಲದ ಬದುಕು ಊಹಿಸುವುದೂ ಅಸಾಧ್ಯ. ಆದರೆ ಆ ಕುಟುಂಬಗಳು ಅದನ್ನು ಸಹಿಸಿಕೊಂಡು ಬದುಕುವುದು ಅನಿವಾರ್ಯ.

ಒಟ್ಟಾರೆ ಯೋಧ ಇದ್ದಾಗ ದೇಶಕ್ಕಾಗಿ ಅವನ ಸೇವೆ ಇರಲಿ ಎಂದು ಬಯಸುವ ಕುಟುಂಬದವರು ಅವನು ಹುತಾತ್ಮನಾದ ಮೇಲೆ ಮುಂದಿನ ಬದುಕನ್ನು ನಡೆಸುವುದೇ ದುಸ್ತರವಾಗಿರುತ್ತದೆ. ಸರ್ಕಾರದ ನೆರವನ್ನು  ಎದುರು ನೋಡಿ ಅಲೆದು ಅಲೆದು ಹೈರಾಣಾಗಿ ಹೋಗುತ್ತಾರೆ. ಅವರು ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಾರೆ. ದೇಶದ ರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬವನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳಬಹುದಾದ ಜವಾಬ್ದಾರಿ ನಮ್ಮೆಲ್ಲರದು ಆಗಬೇಕು. ಆಗ ಮಾತ್ರ ನಾವು ಈ ದೇಶದಲ್ಲಿ ಇದ್ದು ಹುತಾತ್ಮನಾದ ಯೋಧನ ಋಣ ತೀರಿಸಿದಂತಾಗುತ್ತದೆ.

*ಅಮು ಭಾವಜೀವಿ*

No comments:

Post a Comment