*ಯೋಧರ ಬದುಕು ಬವಣೆ*
*ಸಂಚಿಕೆ 3*
ನಮ್ಮ ಯೋಧ ನಮ್ಮ ಹೆಮ್ಮೆ. ಹೌದು ಈ ದೇಶದ ಗಡಿಗಳಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ನಮ್ಮ ಯೋಧರು ಶತ್ರುಗಳನ್ನು ಸಂಹಾರ ಮಾಡುವಾಗ ನಮ್ಮ ಪಾಲಿಗೆ ಹೀರೋಗಳಾಗಿ ಕಾಣಿಸುತ್ತಾರೆ. ಹೋರಾಟದ ಛಲಕ್ಕೆ ಇಡೀ ದೇಶವೇ ಬೆಂಬಲವಾಗಿ ನಿಂತಾಗ ಅವರಲ್ಲಿ ಇನ್ನಷ್ಟು ಹೋರಾಟದ ಕಿಚ್ಚು ಮೂಡುತ್ತದೆ. ಈ ದೇಶದ ನಾಗರೀಕರಾಗಿ ನಮ್ಮ ಯೋಧರ ಬಗ್ಗೆ ನಾವು ಅಭಿಮಾನ, ಗೌರವ ,ಹೆಮ್ಮೆಗಳಿಂದ ಅವರ ಸಾಧನೆಗಳನ್ನು ನೆನೆಯಬೇಕು. ಯಾವ ಯೋಧನು ತನ್ನ ಕರ್ತವ್ಯದಲ್ಲಿ ಒಂದಿಷ್ಟು ಲೋಪವೆಸಗಿದರೂ ಇಡೀ ದೇಶವೇ ಆತಂಕದಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ ನಮ್ಮ ಯೋಧರು ಖಂಡಿತವಾಗಿಯೂ ಅಪ್ರತಿಮ ದೇಶ ಭಕ್ತರು. ಅವರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುವ ಮನಸ್ಥಿತಿಯನ್ನು ಹೊಂದಿದ್ದಾರೆ. ಅದಕ್ಕೆ ಇತ್ತೀಚಿನ ಒಳ್ಳೆಯ ಉದಾಹರಣೆಯೆಂದರೆ ವೈರಿಗಳ ಕೈಗೆ ಸಿಕ್ಕು ದೇಶಾಭಿಮಾನದ ಪ್ರತೀಕವಾಗಿ ಖಂಡಿತ ಪ್ರದರ್ಶಿಸಿದ ಅಭಿನಂದನ್ ಅವರು ನಿತ್ಯ ಸ್ಮರಣೀಯರು. ಅನೇಕ ಸೈನಿಕರು ನಮ್ಮಲ್ಲಿ ಇದ್ದಾರೆ. ಅವರ ಆತ್ಮಬಲ ಹೆಚ್ಚಿಸುವಂತಹ ಕೆಲಸಗಳನ್ನು ನಾವು ಮಾಡಿದಾಗ ಅವರ ಹೋರಾಟ ಸಫಲವಾಗುತ್ತದೆ.
ನಮ್ಮ ಸಮಾಜದ ಕೆಲ ವರ್ಗದ ಜನ ನಿಜವಾದ ರಾಷ್ಟ್ರಭಕ್ತರ ಕಾರ್ಯಗಳನ್ನು ಶ್ಲಾಘಿಸುವ ಬದಲು ಅವರನ್ನು ನಾನಾ ರೀತಿಯಲ್ಲಿ ಪರೀಕ್ಷಿಸುವ, ಅನುಮಾನಿಸುವ, ಅವಮಾನಿಸುವ ಮೂಲಕ ಮಾನಸಿಕ ವಿಕೃತಿಯನ್ನು ಪ್ರದರ್ಶಿಸಿ ಖುಷಿ ಪಡುತ್ತದೆ. ಅದರಲ್ಲೂ ನಮ್ಮಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಆಡಳಿತ ನಡೆಸುವವರ ತೀರ್ಮಾನಗಳ ಆಧಾರದ ಮೇಲೆ ನಮ್ಮ ಯೋಧರು ಕಾರ್ಯನಿರ್ವಹಿಸುತ್ತಾರೆ. ಯೋಧರಿಗೆ ಬೇಕಾದ ಶಸ್ತ್ರಾಸ್ತ್ರಗಳು, ರಕ್ಷಾ ವ್ಯವಸ್ಥೆಗಳು, ಅವರು ಎಂಥದೇ ಸನ್ನಿವೇಶದಲ್ಲಿ ತಮ್ಮ ಕಾರ್ಯವನ್ನು ಯಶಸ್ವಿಗೊಳಿಸಲು ಸರ್ಕಾರಗಳ ಮಾರ್ಗದರ್ಶನ, ಪ್ರೋತ್ಸಾಹ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಯೋಧರ ಕಾರ್ಯಕ್ಷಮತೆ ನಿರ್ಧಾರವಾಗುತ್ತದೆ. ಆದರೆ ವಿರೋಧ ವ್ಯಕ್ತಪಡಿಸುವ ಸರ್ಕಾರದ ಇನ್ನೊಂದು ಅಂಗ ಇದನ್ನೆಲ್ಲಾ ತಮ್ಮ ರಾಜಕೀಯ ದ್ವೇಷಕ್ಕಾಗಿ ಬಳಸಿಕೊಂಡು ಅವರು ಮಾಡಿದ ಕೆಲಸಗಳಿಗೆ ದಾಖಲೆಗಳನ್ನು ಕೇಳುವ, ಯೋಧರ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ, ಆ ಮೂಲಕ ತಮ್ಮ ನಿಲುವೇ ಸರಿ ಎಂದು ವಾದಿಸುವ ರಾಜಕಾರಣಿಗಳಿಗೆ ಏನು ಕಮ್ಮಿ ಇಲ್ಲ. ಅವರಾರು ದೇಶದ ಗಡಿಯಲ್ಲಿ, ದುರ್ಗಮ ಹಾದಿಗಳಲ್ಲಿ, ಕಷ್ಟಕರ ಸನ್ನಿವೇಶಗಳಲ್ಲಿ, ಪ್ರಾಣಕ್ಕಿಂತ ದೇಶ ಮಿಗಿಲು ಎಂದು ಹೋರಾಡಿದವರಲ್ಲ. ಮೂರು ಹೊತ್ತು ಅವರಿವರ ಕಾಲೆಳೆದು, ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿ ವರ್ಷದಿಂದ ವರ್ಷಕ್ಕೆ ಸಂಪತ್ತನ್ನು ಹೆಚ್ಚಿಸಿಕೊಂಡು ಅಧಿಕಾರಕ್ಕಾಗಿ ಹಪಹಪಿಸುವ ಈ ಜನ ನಮ್ಮ ಯೋಧರು ಪಡುವ ಪಾಡು, ಅವರು ಎದುರಿಸುವ ಕಷ್ಟ ಕಾರ್ಪಣ್ಯಗಳ ಅರಿವಿಲ್ಲದೆ, ಕೇವಲ ಆಡಳಿತ ಸರ್ಕಾರವನ್ನು ಟೀಕಿಸುವ, ಆ ಮೂಲಕ ಅಧಿಕಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯೋಧರು ಮಾತ್ರ ಯಾವುದೇ ಸರ್ಕಾರದ ಪರವಾಗಿ ಕೆಲಸ ಮಾಡದೆ ದೇಶದ ರಕ್ಷಣೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ಕೇವಲ ಸಂಬಳಕ್ಕಾಗಿ ನಮ್ಮ ಯೋಧರು ಗಡಿಯಲ್ಲಿ ಕೆಲಸ ಮಾಡುವುದಿಲ್ಲ. ಅವರು ಕೂಡ ಸಾಮಾನ್ಯ ಮನುಷ್ಯರಾದರೂ, ಹೆತ್ತವರು ಬಂಧುಗಳು ಸಂಸಾರ ಎಲ್ಲವನ್ನು ತ್ಯಜಿಸಿ ದೂರದ ಗಡಿಗಳಲ್ಲಿ ದೇಶದ ರಕ್ಷಣೆಯ ಕಾಯಕ ಮಾಡುತ್ತಿರುತ್ತಾರೆ. ಅವನ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ದೇಶಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿರುತ್ತಾರೆ. ಸೇನೆಯ ಸಮವಸ್ತ್ರ ಧರಿಸಿದಾಗ ಅವನ ಮುಂದೆ ದೇಶ ರಕ್ಷಣೆಯ ಅಧಮ್ಯ ಶೌರ್ಯ ಅವನಲ್ಲಿ ಮೈದಳೆದು ಹೋರಾಟಕ್ಕಿಳಿಯುತ್ತಾನೆ. ಅವರ ಬೆಂಬಲಕ್ಕೆ ಇಡೀ ದೇಶ ನಿಂತಾಗ ಶತ್ರುವನ್ನು ಹಿಮ್ಮೆಟ್ಟಿಸಿ ಜಯದ ತ್ರಿವರ್ಣಧ್ವಜವನ್ನು ಹಾರಿಸುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ನಾವೆಲ್ಲಾ ಅವರನ್ನು ಬೆಂಬಲಿಸೋಣ.
*ಅಮು ಭಾವಜೀವಿ*
No comments:
Post a Comment