*ಜೀವನದ ಪಯಣದಲ್ಲಿ,,,,,,,,,,,*
ಬದುಕು ಎಲ್ಲವನ್ನೂ ಕಲಿಸುತ್ತದೆ. ಆದಷ್ಟು ಅದು ನಮ್ಮ ಆಸೆಗಳನ್ನು ಸೋಲಿಸಿ ನಿರಾಸೆ ಅನ್ನು ಬೆಂಬಲಿಸಿ ಎಟೀನ ಮೇಲೆ ಏಟು ನೀಡುತ್ತಾ ನಮಗೆ ಪಾಠವನ್ನು ಕಲಿಸುತ್ತದೆ. ನಡೆಯುವವನು ಎಡವದೇ ಕುಳಿತವನು ಎಡವಲಾರ ಎಂಬಂತೆ ಜೀವನ ಪಯಣದಲ್ಲಿ ಎಲ್ಲರೂ ಎಡವಿ ಬಿದ್ದವರೇ. ಆದರೆ ಕೊಡವಿ ಎದ್ದವರು ಕಡಿಮೆ. ಹಾಗೇ ಎದ್ದು ಮುನ್ನಡೆದವರು ಇಂದಿನ ಮಹಾ ಸಾಧಕರು. ಬಿದ್ದು ಅಲ್ಲೇ ಆಳುತ್ತಿರುವವರು, ಆದರೂ ಬಂದು ಮೇಲೆತ್ತಲಿ ಎಂದು ಕಾಯುವವರು ಇಂದಿಗೂ ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಾರರು.
ಮನುಷ್ಯನ ಜೀವಿತಾವಧಿಯಲ್ಲಿ ಒಂದೊಂದು ಅವಸ್ಥೆಯಲ್ಲಿ ಒಂದೊಂದು ತೆರನಾದ ಆಸೆ ನಿರಾಸೆಗಳಿರುತ್ತವೆ. ಬಾಲ್ಯದಲ್ಲಿ ತಂದೆ ತಾಯಿ ಕೇಳಿದ್ದು ಕೊಡಿಸಲಿಲ್ಲ ಎಂದು ರಚ್ಚೆ ಹಿಡಿಯುವ ಮಕ್ಕಳು ತನಗೆ ಬೇಕಾದ್ದನ್ನು ಪಡೆಯುವಲ್ಲಿ ಯಶಸ್ವಿಯಾಗಿರಬಹುದು, ಇಲ್ಲ ಹೆತ್ತವರ ಕೋಪಕ್ಕೆ ತುತ್ತಾಗಿ ಒದೆ ತಿಂದು ತನ್ನ ಆಸೆಯನ್ನು ಅಲ್ಲೇ ಕಮರಿಸಿಕೊಳ್ಳಬಹುದು. ಯೌವ್ವನದಲ್ಲಿ ಓದು , ಉದ್ಯೋಗ, ಪ್ರೀತಿ , ಸ್ನೇಹ, ಮದುವೆ ಇತ್ಯಾದಿ ವಿಷಯಗಳಲ್ಲಿ ಪ್ರತಿಯೊಬ್ಬರದೂ ಒಂದೊಂದು ಕಾಣಿಸುತ್ತವೆ. ಓದುವ ಸಮಯದಲ್ಲಿ ಆಸಕ್ತಿ ತೋರಿ ಉನ್ನತ ಹುದ್ದೆಗಳಲ್ಲಿ ಸೇರಿ ಸಾಕಷ್ಟು ಹಣ ಸಂಪಾದನೆ ಮಾಡಿ ಮನಸ್ಸಿಗೊಪ್ಪುವ ರನ್ನು ವಿವಾಹವಾಗಿ ಸುಖವಾಗಿದ್ದರೆ, ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಓದದೆ, ದುಡಿಯದೇ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕು ಅತ್ತ ಮದುವೆ ಇಲ್ಲದೆ ಇತ್ತ ಪ್ರೀತಿ ಇಲ್ಲದೆ ತ್ರಿಶಂಕುವಿನಲಿ ನಿಂತು ಬದುಕನ್ನು ಆಸೆಯ ಕೂಪವಾಗಿಸಿ ಹೆತ್ತವರಿಗೂ ನೋವನ್ನಿತ್ತು ಬದುಕನ್ನು ದುರಂತವಾಗಿಸಿಕೊಳ್ಳುತ್ತಾರೆ.
ಗೃಹಸ್ಥರಾದ ಮೇಲೆ ನೂರಾರು ಚಿಂತೆ. ಮನೆ , ಮಕ್ಕಳು, ಸಂಸಾರ, ಉದ್ಯೋಗ, ದುಡಿಮೆ, ನಂಬಿದವರನ್ನು ಸಾಕಬೇಕಾದ ಹೊಣೆಗಾರಿಕೆಯ ಅನಿವಾರ್ಯತೆಗಳಲ್ಲಿ ಸಿಲುಕಿ ಮನುಷ್ಯ ನಿಜಕ್ಕೂ ಹೈರಾಣ ಹೋಗುತ್ತಾನೆ. ಯೌವ್ವನದಲ್ಲಿ ಸ್ವಲ್ಪ ಉತ್ತಮ ನಿರ್ವಹಣೆ
ಇದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲವೆಂದರೆ ನಿಜಕ್ಕೂ ಸೋಲುತ್ತಾರೆ. ಸಂಸಾರದಲ್ಲಿ ಹೆಜ್ಜೆ ಹೆಜ್ಜೆಗೂ ನೂರಾರು ಸವಾಲುಗಳು ಎದುರಾಗಿ ಎತ್ತ ತಿರುಗಿದರೂ ಏಟಿನ ಮೇಲೆ ಏಟುಗಳನ್ನು ಕೊಡುತ್ತಿರುತ್ತವೆ. ಇದರಲ್ಲಿ ಯಶಸ್ಸು ಕಾಣುವುದು ಸಾಗರದ ಮಧ್ಯ ಸಿಲುಕಿ ದಡ ಸೇರಲು ಪಡುವ ಕಷ್ಟ ಕ್ಕಿಂತಲೂ ದುಸ್ಸಾಹಸವಾಗಿರುತ್ತದೆ. ಕೈ ಹಿಡಿದವರ ತೃಪ್ತಿಪಡಿಸಬೇಕು, ವಿದ್ಯಾಭ್ಯಾಸ , ಭವಿಷ್ಯ ರೂಪಿಸುವುದು, ಮದುವೆ ಅಂತೆಲ್ಲ ಇಡೀ ಬದುಕಿನ ಬಹುಪಾಲು ಅದಕ್ಕೆಂದೇ ಮೀಸಲಿಡಬೇಕು. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಮಟ್ಟಕ್ಕೆ ತಲುಪಿದರಂತೂ ಅವನ ಜೀವನ ಸಾರ್ಥಕ. ಅವರೇನಾದರೂ ಅಲ್ಲಿ ಸರಿಯಾಗಿ ಓದದೆ ಎಡವಿದರೆಂದರೆ ಜೀವನದಲ್ಲಿ ಮತ್ತೆ ಹೊರೆ ಎನಿಸಿದಾಗ ಹೆತ್ತವರ ನಿರಾಸೆ ಹತಾಶೆಗಳು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಜೀವನದಲ್ಲಿ ದುಡಿದು ದಣಿದು ಒಂದು ಮನೆ ಕಟ್ಟಬೇಕು ಎಂಬ ಹಂಬಲದಲ್ಲಿ ತನ್ನ ಬೇಕು ಬೇಡಗಳನ್ನು ಗಂಟುಮೂಟೆ ಕಟ್ಟಿ ಎಸೆದುಬಿಟ್ಟಿತ್ತಾರೆ. ಈ ಕಾಲಘಟ್ಟದಲ್ಲಿ ನಿಜಕ್ಕೂ ಇಲ್ಲಿ ಸಲ್ಲಿದವನು ಬದುಕನ್ನು ಗೆದ್ದವನು. ಇಲ್ಲಿ ಸೋತವನು ಸಾಯುವುದಕ್ಕೂ ಯೋಗ್ಯತೆಯಿಲ್ಲದೆ ನರಳಿ ನರಳಿ ಬಾಳುತ್ತಿರುವನು.
ಇನ್ನು ಜೀವನದ ಅಂತಿಮ ಘಟ್ಟ ಮುಪ್ಪು. ಇದೊಂದು ಅತ್ಯಂತ ಕಷ್ಟದ ಕಾಲ. ತಾನು ಏನೆಲ್ಲ ಕಷ್ಟಪಟ್ಟು ಕಟ್ಟಿದ ಜೀವನದ ಸೌಧದಲ್ಲಿ ತನಗೆ ಬದುಕಲು ಅರ್ಹತೆ ಇಲ್ಲದ ಯಾವುದೋ ಅನಾಥಾಶ್ರಮದ ಪಾಲಾದ ಬೇಕಾದ ದುರಂತ ಕಥೆ. ತನ್ನ ಕುಟುಂಬಕ್ಕಾಗಿ ಹಗಲು ಇರುಳು ಎನ್ನದೆ ದುಡಿದು ಹೈರಾಣಾದ ಜೀವ ತನ್ನ ಶ್ರಮದ ಫಲವನ್ನು ಅನುಭವಿಸುತ್ತಿರುವ ಮಕ್ಕಳಿಂದ ತಿರಸ್ಕೃತರಾಗಿ, ಅವರ ತಿರಸ್ಕಾರಕ್ಕೆ ತುತ್ತಾಗಿ ಜೀವನದ ಸಂಧ್ಯೆಯಲ್ಲಿ ಅಸಹಾಯಕರಾಗಿ ದಾರಿಕಾಣದೆ ನಿಂತಾಗ ಇಡೀ ಬದುಕಿನಲ್ಲಿ ಮೊದಲು ಗೆದ್ದಿದ್ದರು ಈಗ ಅಕ್ಷರಶಃ ಸೋತು ಸುಣ್ಣವಾಗಿರುತ್ತಾರೆ. ದುಡಿಯಲು ಶಕ್ತಿ ಇಲ್ಲ ಆದರೂ ತಾನೆ ದುಡಿದಿದ್ದು ಎಂಬ ಸ್ವಾಭಿಮಾನದ ಬದುಕು ದಕ್ಕದೇ ಇರುವಾಗ ನಿಶಕ್ತವಾಗಿ ಕೂರುವಂತೆ ಮಾಡಿಬಿಡುತ್ತದೆ. ಇಂಥ ಬದುಕಿಗಿಂತ ಸಾವೆ ಮೇಲು ಎಂಬಂತೆ ಈ ಪರಿತಪಿಸುತ್ತಿರುತ್ತಾರೆ.
ಒಟ್ಟಿನಲ್ಲಿ ಜೀವನದ ಪ್ರತಿ ಹಂತದಲ್ಲೂ ಸೋಲು-ಗೆಲುವುಗಳು ಆಸೆ-ನಿರಾಸೆ ಗಳು ಪುರಸ್ಕಾರ ತಿರಸ್ಕಾರಗಳು ಪ್ರತಿ ವ್ಯಕ್ತಿಯ ಬದುಕಿನ ಗತಿಯನ್ನು ನಿರ್ಧರಿಸಿ ಸಾರ್ಥಕ ನಿರರ್ಥಕದ ಮುಖ ದರ್ಶನ ಮಾಡಿಸುತ್ತದೆ. ಗೆದ್ದವನು ಸೋತ ಸೋತವನು ಸತ್ತ ಎನ್ನುವಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿದವನು ಮಾತ್ರವೇ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ. ಉಳಿದಂತೆ ಎಲ್ಲರೂ ತಮ್ಮ ತಮ್ಮ ಹಂತದಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಎಲ್ಲಿ ಬಿದ್ದಿದ್ದರೂ ಅಲ್ಲೇ ಇದ್ದು ಇನ್ನಿಲ್ಲದಂತೆ ನೋವುಗಳನ್ನು, ಅವಮಾನಗಳನ್ನು ಅನುಭವಿಸಿ ಬದುಕಿನ ಪುಟದೊಳಗೆ ಒಂದು ಸಣ್ಣ ಚುಕ್ಕಿಯು ಆಗದಂತೆ ಅಸ್ತಿತ್ವವೇ ಇಲ್ಲದಂತೆ ಅಳಿದು ಹೋಗುವರು. ಸಾಧನೆ ಮಾಡಿದವರು ನೂರಾರು ವರ್ಷ ಉಳಿಯುವ ಬದುಕನ್ನು ಕಟ್ಟಿಕೊಂಡು ಮಾದರಿಯಾ ಗುವರು. ಜೀವನದ ಪಯಣದಲ್ಲಿ ಸೋತವರು ಗೆದ್ದವರು ಎಲ್ಲರೂ ಮೈಲುಗಲ್ಲುಗಳಾಗಿ ಮುಂದಿನವರಿಗೆ ದಾರಿ ತೋರುವ ದೀವಿಗೆಗಳಾಗಿ ಉಳಿಯುವರು. ಬದುಕು ಎಲ್ಲರನ್ನೂ ಕೊನೆಗೆ ಸಾವು ಎಂಬ ದಡ ಮುಟ್ಟಿಸುವಷ್ಟರಲ್ಲಿ ಏಳು ಬೀಳುಗಳು ಅನುಭವದ ಪಾಠಗಳಾಗಿ ದಾಖಲಾಗುತ್ತವೆ. ಸಾಧಕ ಉಳಿಯುತ್ತಾನೆ, ಉಳಿದವರು ಹೆಸರಿಲ್ಲದಂತೆ ಅಳಿದು ಹೋಗುತ್ತಾರೆ. ಆದರೆ ಬದುಕು ಮಾತ್ರ ನಿದ್ದೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಮತ್ತೊಂದು ಹೊಸ ಅಧ್ಯಾಯವನ್ನು ಬೋಧಿಸಲು ಸಜ್ಜಾಗಿ ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಹೊಸ ಪರೀಕ್ಷೆಗಳನ್ನು ನೀಡಲು ತಯಾರಾಗಿರುತ್ತದೆ. ಆ ಕಾಲಘಟ್ಟದಲ್ಲಿ ವ್ಯಕ್ತಿ ಮತ್ತೆ ಅದನ್ನು ಗೆಲ್ಲುವ ಸೋಲುವ ಸಾಹಸ ಮಾಡಬೇಕಾಗುತ್ತದೆ. ಬದುಕಿನ ತಿರುಗಣಿ ಮಾತ್ರ ತಿರುಗುತ್ತಲೇ ಇರುತ್ತದೆ.
*ಅಮು ಭಾವಜೀವಿ*
ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ
No comments:
Post a Comment