ತೆರೆಯುತ್ತಿದೆ ಹಗಲು ಕಣ್ಣ
ಬಳಿಯುತ್ತಾ ಲೋಕಕೆ ಬಣ್ಣ
ಹೇಮಂತನ ಸಾಮಂತನಾಗಿ
ಮಂಜು ಮುಸುಕಿದೆ ಇಬ್ಬನಿಯಾಗಿ
ಹಕ್ಕಿಗಳ ಗಾನ ಮಾಧುರ್ಯ
ಬಿರಿದ ಮೊಗ್ಗರಳುವ ಸೌಂದರ್ಯ
ಬಿಚ್ಚಿಟ್ಟಿತು ದಿನದ ಆಂತರ್ಯ
ರವಿ ಶುರುವಿಡಲು ತನ್ನ ಕೈಂಕರ್ಯ
ಹೊಸ ಭರವಸೆಗಳ ಹೊತ್ತು
ಅನಾವರಣಗೊಳ್ಳುತಿದೆ ಪ್ರಕೃತಿ
ಹತ್ತಾರು ನಿರೀಕ್ಷೆಗಳ ಸುತ್ತ
ತಿರುಗುತ್ತಿದೆ ಬಾಳ ಸದ್ಗತಿ
ಇರುಳು ಕಳೆದು ಬೆಳಕು ಹರಿದು
ನವ ಚೈತನ್ಯವ ತಂದಿದೆ ಹುರುಪು
ಮಾನವ ನಾನು ಸೋಮಾರಿಯೆನಿಸಿತು
ನೋಡುತ ನಿಸರ್ಗದ ವೈಯಾರ ಒನಪು
ಸ್ವರ್ಗವ ತಂದಿತು ಬಳಿಗೆ
ಈ ಸುದಿನದ ಸುಂದರ ಘಳಿಗೆ
ಆಸ್ವಾದಿಸಿದರದೇ ಹೋಳಿಗೆ
ಆಪ್ಯಾಯಮಾನವದು ಬಾಳಿಗೆ
*****ಅಮು ಭಾವಜೀವಿ*****
No comments:
Post a Comment