*#ಕರ್ಮಯೋಗಿ*
ವಸಂತನನು ಸಂತನಾಗಿಸದೆ
ಚೈತ್ರ ಚಿಗುರಿನ ಬಣ್ಣ ತಂದು
ಕೊಗಿಲೆಯ ದನಿಗೆ ಮನಸೋತು
ಮೂಡಿ ಬಂದ ರವಿರಾಯ
ಬಿರಿದ ಮೊಗ್ಗಿನ ಎದೆಯಿಂದ
ದುಂಬಿಗಾನದ ಮುದದಿಂದ
ಇಬ್ಬನಿಯ ಮೊಗವರೆಸಿ
ಹೊಂಗಿರಣ ಚೆಲ್ಲಿದ ನೇಸರ
ಮಲಗಿದ್ದ ಗಿರಿಯ ಮೈದಡವಿ
ಮರಗಿಡಗಳ ತಲೆ ಸವರಿ
ಸಾಗರದಲೆಗೆ ಹೊಂಬಣ್ಣ
ಬಳಿದು ಬೀಗಿದ ಭಾಸ್ಕರ
ನಿನ್ನೆಯನು ಹಿಂದೆ ಸರಿಸಿ
ಇಂದಿಗೆ ಹೊಸ ನಿರೀಕ್ಷೆ ಮೂಡಿಸಿ
ನಾಳೆಯ ಭರವಸೆಯಾಗಿ
ನಗುವ ಬಿತ್ತರಿಸಿದ ಸೂರ್ಯ
ದಿನದ ತುಂಬೆಲ್ಲ ಬೆಳಕು ಚೆಲ್ಲಿ
ಸಂಜೆ ತನಕ ಉರಿ ಬಿಸಿಲ ಸುರಿದು
ಮತ್ತದೇ ಮೌನದಲಿ ಧ್ಯಾನಸ್ಥನಾಗಿ
ದಿನ ಮುಗಿಸುವ ನಿಷ್ಠಾವಂತ ಕರ್ಮಯೋಗಿ
0653ಎಎಂ30032019
*ಅಮು ಭಾವಜೀವಿ ಮುಸ್ಟೂರು
ಈ ಪುಟ್ಟ ಹೃದಯದೊಳಗೆ ಏಕೆ
ಬರ ಮಾಡಿಕೊಳ್ಳದೆ ದೂರ ತಳ್ಳಿದೆ
ಮೂಕ ಮನಸು ನೊಂದು ಈಗ
ಕಂಬನಿಯ ಧಾರೆ ಹರಿಸುತ್ತಿದೆ
ಬೇಡವಾಯಿತೆ ಒಲವು ನಿನಗೆ
ಬದುಕ ಬಯಸಿದೆ ನಿನ್ನೊಂದಿಗೆ
ಕರೆಯದೆ ಬಂದೆ ನೀನಂದು
ಕರೆದರೂ ಕೇಳಿಸದೆ ನಿನಗಿಂದು
ಏಕೆ ಹೇಳು ಈ ಅಂತರ
ವಿರಹ ಬಾಧಿಸುತ್ತಿದೆ ನಿರಂತರ
ಪ್ರೀತಿಯ ಮಾತು ಕೇಳಿಸದೇಕೆ
ಹಗಲಿರುಳು ನಿನ್ನದೆ ಕನವರಿಕೆ
ದಾಂಪತ್ಯದ ಸುಖದ ನಿರೀಕ್ಷೆಗೆ
ಇದೆಂಥಾ ಪರೀಕ್ಷೆ ಒಡ್ಡಿದೆ
ದೂರ ದೂರ ಭಾವ ಭಾರ
ಸನಿಹ ಬಯಸಿದ ಹರೆಯ ಘೋರ
ಬರುವೆ ನೀನೆಂದು ಬಳಿಗೆ ನಲ್ಲ
ನಿನ್ನ ಹೊರತು ನನಗೇನು ಬೇಕಿಲ್ಲ
ದಂಪತಿಗಳು ನಾವಲ್ಲವೇ
ಒಂದಾಗಲು ಏಕೆ ಗೊಡವೆ
ಆಲಿಂಗನ ಬಯಸಿದೆ ಬಾ ಒಲವೇ
ಬದುಕಿನ ಜ್ಯೋತಿ ಸಂಗಾತಿ ನೀನಲ್ಲವೇ
1056ಪಿಎಂ30032022
*ಅಮುಭಾವಜೀವಿ ಮುಸ್ಟೂರು*
No comments:
Post a Comment