*೧ ಕವಲು*
ಹುಟ್ಟಿದಒಂದೇ
ಮೊಳಕೆಯು ಚಿಗುರಿ
ಕವಲಾಯಿತು
ಕವಲುಗಳ
ಚಾಚುತ್ತಾ ಮರವೀಗ
ಹೆಮ್ಮರವಾಯ್ತು
ಹರಡಿರುವ
ಕವಲು ನೆರಳಾಗಿ
ಹಿತ ತಂದಿತು
ಒಂದೊಂದರಲ್ಲೂ
ಸಹಸ್ರ ಹೂವುಕಾಯಿ
ತುಂಬಿ ನಿಂತಿತ್ತು
ಸವಿಗಾರನ
ಕಣ್ಣು ಹಣ್ಣ ಮೇಲ್ಬಿದ್ದು
ಕಲ್ಲು ಬೀರಿದ
ಹೊಡೆದವನ
ಬಾಯಿ ಸಿಹಿ ಮಾಡಿತು
ಮರದ ಪ್ರೀತಿ
ಬರವು ಬಂದು
ಕವಲೆಲ್ಲಾ ಒಣಗಿ
ಮರ ಸತ್ತಿತು
ಒಣ ಮರವ
ಕಂಡು ಕೊಡಲಿ ಬೀಸಿ
ತುಂಡರಿಸಿದ
ಮರದೊಡಲು
ಇದ್ದು ಹೋದರೂ ಬೆಲೆ
ಮಾನವಗಿಲ್ಲ
0205ಪಿಎಂ30032017
*ಅಮುಭಾವಜೀವಿ*
*#ಕರ್ಮಯೋಗಿ*
ವಸಂತನನು ಸಂತನಾಗಿಸದೆ
ಚೈತ್ರ ಚಿಗುರಿನ ಬಣ್ಣ ತಂದು
ಕೊಗಿಲೆಯ ದನಿಗೆ ಮನಸೋತು
ಮೂಡಿ ಬಂದ ರವಿರಾಯ
ಬಿರಿದ ಮೊಗ್ಗಿನ ಎದೆಯಿಂದ
ದುಂಬಿಗಾನದ ಮುದದಿಂದ
ಇಬ್ಬನಿಯ ಮೊಗವರೆಸಿ
ಹೊಂಗಿರಣ ಚೆಲ್ಲಿದ ನೇಸರ
ಮಲಗಿದ್ದ ಗಿರಿಯ ಮೈದಡವಿ
ಮರಗಿಡಗಳ ತಲೆ ಸವರಿ
ಸಾಗರದಲೆಗೆ ಹೊಂಬಣ್ಣ
ಬಳಿದು ಬೀಗಿದ ಭಾಸ್ಕರ
ನಿನ್ನೆಯನು ಹಿಂದೆ ಸರಿಸಿ
ಇಂದಿಗೆ ಹೊಸ ನಿರೀಕ್ಷೆ ಮೂಡಿಸಿ
ನಾಳೆಯ ಭರವಸೆಯಾಗಿ
ನಗುವ ಬಿತ್ತರಿಸಿದ ಸೂರ್ಯ
ದಿನದ ತುಂಬೆಲ್ಲ ಬೆಳಕು ಚೆಲ್ಲಿ
ಸಂಜೆ ತನಕ ಉರಿ ಬಿಸಿಲ ಸುರಿದು
ಮತ್ತದೇ ಮೌನದಲಿ ಧ್ಯಾನಸ್ಥನಾಗಿ
ದಿನ ಮುಗಿಸುವ ನಿಷ್ಠಾವಂತ ಕರ್ಮಯೋಗಿ
0653ಎಎಂ30032019
*ಅಮು ಭಾವಜೀವಿ ಮುಸ್ಟೂರು
ಶುಭೋದಯ ಶುಭದಿನ
No comments:
Post a Comment