ಲೇಖನ

*ಯಾವ ತಪ್ಪಿಗಾಗಿ ನಮ್ಮ ಮಕ್ಕಳಿಗೆ ಈ ಶಿಕ್ಷೆ*

ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಬದುಕಿನ ಚಿತ್ರಣವನ್ನು ಬದಲಿಸುವ ಪ್ರಮುಖ ಅಸ್ತ್ರ. ನರನನ್ನು ನಾಗರಿಕನನ್ನಾಗಿಸುವ , ನಾಗರಿಕನನ್ನು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹುದೊಡ್ಡದಿದೆ. ಬೆಳೆಯುವ ಮಕ್ಕಳ ಭವಿಷ್ಯ ಶಿಕ್ಷಣ ಹಾಕುವ ತಳಪಾಯದ ಮೇಲೆ ನಿಂತಿದೆ. ಜ್ಞಾನಾರ್ಜನೆ ಶಿಕ್ಷಣದ ಮೂಲ ಮಂತ್ರ. ಕಲಿಯಬೇಕಾದದ್ದನ್ನು ಕಲಿಯುವ ವಯಸ್ಸಿನಲ್ಲಿ ಕಲಿಸುವ ಮತ್ತು ಅದನ್ನು ಎಷ್ಟರಮಟ್ಟಿಗೆ ಕಲಿತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪರೀಕ್ಷೆ ಒಂದು ಮಾನದಂಡ ಅಷ್ಟೇ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಶಕ್ತಿ ಸಾಮರ್ಥ್ಯಕ್ಕೆ ಅನುಸಾರವಾಗಿ ವರ್ಷ ಬಿಡಿ ಕಲಿತದ್ದನ್ನು ಕೇವಲ 3:00 ಗಂಟೆಯಲ್ಲಿ ಎಷ್ಟರಮಟ್ಟಿಗೆ ಅಕ್ಷರದ ರೂಪ ಕೇಳಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ಪರೀಕ್ಷೆಯು ನಿರ್ಧರಿಸುತ್ತದೆ. ಇಲ್ಲಿ ಅಂಕ ಗಳಿಕೆಯಂತೆ ಮೂಲ ಉದ್ದೇಶವಲ್ಲ. ವರ್ಷವಿಡಿ ಕಲಿತದ್ದನ್ನು ಮಗು ಎಷ್ಟು ಮಟ್ಟಿಗೆ ತನ್ನಲ್ಲಿ ಅನ್ವಯಗೊಳಿಸಿಕೊಂಡು ತನ್ನ ಸ್ವಜ್ಞಾನದಿಂದ ಪರಿಶ್ರಮದಿಂದ ತನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನೀಡಿದ ಪ್ರಶ್ನೆ ಪತ್ರಿಕೆಗೆ ಕಲಿತದ್ದನ್ನು ಜ್ಞಾಪಿಸಿಕೊಂಡು ಬರೆದಿಡುತ್ತಾನೆ, ಅದಕ್ಕೆ ನಿಗದಿ ಪಡಿಸಿದ ಅಂಕಗಳನ್ನು ಕಲಿಸಿದವರೇ ಮೌಲ್ಯಮಾಪನ ಮಾಡಿ ತನ್ನ ಶ್ರಮ ಮಕ್ಕಳಿಗೆ ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಒರೆಗಚ್ಚಿಕೊಳ್ಳಲು ಸಹಾಯಕವಾಗುತ್ತದೆ. ಇಷ್ಟಾಗಿದ್ದರೆ  ಪರೀಕ್ಷೆ ಎಂಬುದು ಇಷ್ಟೊಂದು ಪ್ರತಿಷ್ಠೆಯ ಅಂಶವಾಗಿರುತ್ತಿರಲಿಲ್ಲವೇನೋ. ಆದರೆ ಇತ್ತೀಚಿನ ದಿನಗಳಲ್ಲಿ ಅಂಕ ಗಳಿಕೆ ಪ್ರತಿಷ್ಠೆಯಾಗಿ ಮೌಲ್ಯಮಾಪನ ಬೇರೆ ಬೇರೆ ಆಯಾಮಗಳಲ್ಲಿ ನಡೆದು ವಿದ್ಯಾರ್ಥಿಯ ಭೌತಿಕ ಮಟ್ಟವನ್ನು ಅಳೆಯುವುದು ಒಂದು ಕಡೆಯಾದರೆ ವರ್ಷವಿಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಮಹದಾಯಿಸಿಯನ್ನು ಹೊಂದಿದ ಪೋಷಕರು ಹೆಚ್ಚು ಅಂಕ ಗಳಿಸುವುದು ತಮಗೆ ಸಿಗುವ ಮರ್ಯಾದೆ ಎಂದುಕೊಂಡು ಮಕ್ಕಳ ಮೇಲೆ ಒತ್ತಡ ಹೇರಿ ಅವರನ್ನು ಅಂಕ 
ಗಳಿಕೆಯ ಯಾಂತ್ರಗಳನ್ನಾಗಿ ಪರಿಗಣಿಸುತ್ತಿರುವುದು ವಿಷಾದನೀಯ.

     ಜಗತ್ತಿನ ಎಲ್ಲ ಬುದ್ಧಿಜೀವಿಗಳು ಹೇಳುವ ಮಾತು ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು ಎಂದು. ಅದು ಕಲಿಕೆಯ ಸಾಧ್ಯ ಸಾಧ್ಯತೆಗಳನ್ನು ತಿಳಿದುಕೊಳ್ಳುವ ಒಂದು ಸಾಧನೆಗೆ ಹೊರತು ಅಂಕ ಗಳಿಕೆಯ ಹಾಗೂ ಪ್ರತಿಷ್ಠೆಯ ಪರಮಾವಧಿಯನ್ನು ತಲುಪಿ ಮಕ್ಕಳು ಅಂಕ ಗಳಿಸುವುದು ಒಂದೇ ಗುರಿ ಎಂಬ ಕಣ್ ಪಟ್ಟಿಯನ್ನು ಕಟ್ಟಿ ಅವರನ್ನು ಈ ಅಂಕಗಳ ಅಂಕಣದಲ್ಲಿ ಓಡಲು ಬಿಟ್ಟು ಪೋಷಕರು ಶಿಕ್ಷಕರು ಶಿಕ್ಷಣ ಸಂಸ್ಥೆಗಳು ಸರ್ಕಾರ ಎಲ್ಲರೂ ನಿರೀಕ್ಷೆಗಳ ಹೊರೆಹೊರಿಸಿ ವಿದ್ಯಾರ್ಥಿಗಳಲ್ಲಿ ಅವ್ಯಕ್ತ ಭಯ ಮೊಳಕೆ ಹೊಡೆಯುವಂತೆ ಮಾಡುತ್ತದೆ. ಇದರ ಪರಿಣಾಮ ಅಂಕಣದಲ್ಲಿ ಓಡುವ ಮಗು ಉತ್ತಮ ಅಂಕ ಗಳಿಸದೆ ಹೋದರೆ ಎಲ್ಲಿ ಎಲ್ಲರೂ ತನ್ನಿಂದಾಗಿ ಅವಮಾನಕ್ಕೀಡಾಗುತ್ತಾರೆ, ತನ್ನ ಮೇಲೆ ಇಟ್ಟ ನಿರೀಕ್ಷೆಗಳನ್ನು ಹುಸಿಗೊಳಿಸಿದನೆಂದು ವಿಪರೀತವಾದ ಹೊರೆ ಏರಿದಾಗ ಸಹಜವಾಗಿಯೇ ಆತಂಕಗೊಂಡು ಪರೀಕ್ಷೆಯೆಂದರೆ ಭಯಗೊಂಡು ಕಲಿತದ್ದನ್ನು ಮರೆತು ಅದರಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕುವ ಹಂತವನ್ನು ತಲುಪಿಸಲು ಈ ವ್ಯವಸ್ಥೆ ಸದಾ ಸಜ್ಜಾಗಿ ನಿಂತಿದೆ.

        ಪರೀಕ್ಷೆ ಎಂಬುದು ಹಬ್ಬವಾಗಬೇಕು, ಸಂತಸದಿಂದ ಮಗು ತಾನು ಕಲಿತದ್ದನ್ನು ನಿಗದಿತ ಸಮಯದಲ್ಲಿ ಇಷ್ಟವಾಗಿ ಸ್ಪಷ್ಟವಾಗಿ ದಾಖಲಿಸುವ ಮೂಲಕ ಅದನ್ನು ಸಂಭ್ರಮದಿಂದ ಅನುಭವಿಸುವಂತಾಗಬೇಕು ಎಂದು ಎಲ್ಲರೂ ಹೇಳುತ್ತಾರಾದರೂ ಮಕ್ಕಳ ಮನಸ್ಸಿನಲ್ಲಿ ಅದನ್ನು ಬಿತ್ತುವಲ್ಲಿ ವಿಫಲರಾಗುತ್ತಿದ್ದೇವೆ. ಪರೀಕ್ಷೆ ಎಂಬುದು ಕಲಿಕೆಯ ಮಾನದಂಡವಾಗದೆ ಪ್ರತಿಷ್ಠೆಯಾಗಿ ಪರಾಕಾಷ್ಟೆಯನ್ನು ಮುಟ್ಟಿದಾಗ ಪರೀಕ್ಷೆಯ ಸಹಜತೆ ಹೊರಟು ಹೋಗಿ ಮಗುವಿನಲ್ಲಿ ಅದೊಂದು ಯುದ್ಧ ಸನ್ನದ್ಧತೆಯನ್ನು ಬಯಸಿ ಗೆಲುವುಗಳ ನಿರೀಕ್ಷೆಯಲ್ಲಿ ಬಳಲಿ ಬೆಂಡಾಗಿ ಹೋಗುತ್ತದೆ. ಇಲ್ಲಿ ಮಗು ತನ್ನ ಮನದ ಇಂಗಿತವನ್ನು ಹೇಳಿಕೊಳ್ಳಲು ಅವಕಾಶವಿಲ್ಲದಂತೆ ಇಂತಿಷ್ಟೇ ವಿಷಯಗಳಿಗೆ ಇಂಥದೇ ಪ್ರಶ್ನೆಗಳಿಗೆ ಇಷ್ಟೇ ಅಂಕಗಳನ್ನು ತೆಗೆದರೆ ಮಾತ್ರ ಕಲಿಕೆ ಯಶಸ್ವಿಯಾಗಿರುತ್ತದೆ ಇಂದು ನಿರ್ಧರಿಸುವ ಈ ವ್ಯವಸ್ಥೆ ಮಗುವಿನ ಅನ್ವಯಿತ ಅನುಭವದ ಅಂತ ಸತ್ವಕ್ಕೆ ಬೆಲೆ ಕೊಡದೆ ಅಂಕ ಗಳಿಕೆಯ ಬಹು ದೊಡ್ಡ ಹೊರೆಯನ್ನು ಮಗುವಿನ ಮಾನಸಿಕ ಸಾಮರ್ಥ್ಯಕ್ಕೂ ಮೀರಿ ಹೋರಿಸಿದಾಗ ಪರೀಕ್ಷೆ ಹಬ್ಬವಾಗುವುದಾದರೂ ಹೇಗೆ ?

     ಈ ಪರೀಕ್ಷೆಯ ಭಯವನ್ನು ಹೋಗಲಾಡಿಸಲೆಂದೇ ಸರ್ಕಾರ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೆ ತಂತಾದರೂ ಅದರ ಉದ್ದೇಶ ಸಾಧ್ಯವಾಗದೆ ಮತ್ತೆ ಅದೇ ಹಳೆಯ ಪದ್ಧತಿಯಂತೆ ವರ್ಷಕ್ಕೆ ಒಂದು ಎರಡು ಮುಖ್ಯ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಮಗುವಿನ ಪ್ರಗತಿಯನ್ನು ದಾಖಲಿಕರಣ ಮಾಡುವ ನಿಟ್ಟಿನಲ್ಲಿ ಪರೀಕ್ಷೆಯ ಒಳಸುಳಿಗಳಿಂದ ಮಗು ಹೊರಬರಲಾಗದ ಸ್ಥಿತಿಯನ್ನು ತಂದಿಟ್ಟಿದೆ ಈ ವ್ಯವಸ್ಥೆ. ಕಲಿಸುವವನ ಮತ್ತು ಕಲಿಯುವವರ ನಡುವೆ ನಡೆಯಬೇಕಾದ ಈ ಪ್ರಕ್ರಿಯೆ ಇಂದು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ಹಾವು ಏಣಿ ಆಟದಲ್ಲಿ ಮಕ್ಕಳನ್ನು ಬಲಿಪಶುಗಳನ್ನಾಗಿ , ಶಿಕ್ಷಕರನ್ನು ಕಟುಕರನ್ನಾಗಿ ಮಾಡುತ್ತಿದೆ. ಅದರಲ್ಲೂ ಶಿಕ್ಷಣ ಸರ್ಕಾರದ ಅಧೀನದಲ್ಲಿರದೆ ಖಾಸಗೀಕರಣದ ಕಪಿಮುಷ್ಟಿಯಲ್ಲಿ ಬಂಧಿಯಾಗಿ ಶಿಕ್ಷಣದ ವ್ಯಾಪಾರಿಕರಣದಲ್ಲಿ ಮುಂದಿನ ಜನಾಂಗದ ಮಕ್ಕಳ ಭವಿಷ್ಯವನ್ನು ಪರೀಕ್ಷೆಯ ಪ್ರತಿಷ್ಠೆಯ ಮರೀಚಿಕೆಯ ಮೇಲೆ ಕಟ್ಟಲು ಹೊರಟಿರುವುದು ಈ ವ್ಯವಸ್ಥೆಯ ಅದ ಪತನಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಮಾರ್ಗದರ್ಶನಗಳೆ ಬೇರೆ ಖಾಸಗಿ ಸಂಸ್ಥೆಗಳ ಧ್ಯೇಯೋದ್ದೇಶಗಳೇ ಬೇರೆಯಾಗಿರುವಾಗ ಮಕ್ಕಳ ಮನಸ್ಥಿತಿಯನ್ನು ಅರಿಯದೆ ಅವರನ್ನು ಬಂಡವಾಳ ವೃದ್ಧಿಸಿಕೊಳ್ಳುವ ದಾಳವಾಗಿ ಬಳಸಿಕೊಂಡಿರುವುದರಿಂದ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಸಾಮರಸ್ಯವಿಲ್ಲದೆ ಇಬ್ಬಗೆಯ ನೀತಿಗಳಿಂದಾಗಿ ಪ್ರಸ್ತುತ ನ್ಯಾಯಾಲಯದ ಕದ ತಟ್ಟಿ ಆಜ್ಞೆ ತಡೆಯಾಜ್ಞೆಗಳನ್ನು ತರುವ ಸಲುವಾಗಿ ಕೆಳಹಂತದ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಹೋರಾಡಿ ಜಯಿಸುವ ಹಂತ ತಲುಪಿದೆ. ಇಬ್ಬರು ಸಮಬಲ ಹೋರಾಟಗಾರರು ತಾವು ಗೆಲ್ಲಬೇಕೆಂಬ ಹುಚ್ಚು ಹಂಬಲದಲ್ಲಿ ಸಂಕಷ್ಟಕ್ಕೀಡಾಗುವ ಅಸಂಖ್ಯಾತ ಸೈನಿಕರ ಯೋಗಕ್ಷೇಮವನ್ನು ಕಡೆಗಣಿಸಿ ತಾನೇ ಗೆಲ್ಲಬೇಕೆಂಬ ಹಟತೊಟ್ಟು ಅಮಾಯಕರ ಭವಿಷ್ಯದ ಬದುಕಿನ ಜೊತೆ ಚೆಲ್ಲಾಟವಾಡುತ್ತಾ ಹೋದರೆ ತೊಂದರೆಯಾಗುವುದು ರಾಜನಿಗಲ್ಲ ಬದಲಾಗಿ ಹೋರಾಟದಲ್ಲಿ ಹತರಾಗುವ ಸೈನಿಕರು ಮತ್ತು ಅವರ ಸಂಸಾರಗಳು ದಾರಿ ಕಾಣದೆ ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕೂರುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ಯಾವ ಪುರುಷಾರ್ಥಕ್ಕಾಗಿ.

        ಸರ್ಕಾರ ಮತ್ತು ಖಾಸಗಿಯವರು ವರ್ಷದ ಪ್ರಾರಂಭದಲ್ಲಿ ಚರ್ಚಿಸಿ ಒಂದು ಸೂಕ್ತ ನಿರ್ಧಾರಕ್ಕೆ ಬರದೆ ನಾನೊಂದು ತೀರ ನೀನೊಂದು ತೀರ ಎಂಬಂತೆ ವರ್ಷವಿಡಿ ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆದು ಇನ್ನೇನು ಪರೀಕ್ಷೆಗಳು ಆರಂಭವಾಗುವ ಸಮಯದಲ್ಲಿ ನಿದ್ರೆಯಿಂದ ಎಚ್ಚೆತ್ತವನ ತಿಕ್ಕಲುತನ ತೋರುವ ರೀತಿಯಲ್ಲಿ ಗೊಂದಲಗಳ ಸೃಷ್ಟಿಸುತ್ತಾ ಕಲಿಯುವ ಮನಸ್ಸುಗಳ ಮೇಲೆ ಆತಂಕದ ಕರಿಛಾಯೆಯನ್ನು ನಿರ್ಮಿಸಿ ಭವಿಷ್ಯವನ್ನು ಕತ್ತಲಾಗಿಸುವ ಕಡೆ ಅಡಿ ಇಡುತ್ತಿದೆ. ಇಲ್ಲಿ ಯಾವುದೇ ತಪ್ಪು ಮಾಡದಿದ್ದರೂ ಮಕ್ಕಳು ಮಾತ್ರ ಶಿಕ್ಷೆ ಅನುಭವಿಸುವಂಥಾಗುತ್ತಿದೆ. ಮಗುವಿನ ಏಕಾಗ್ರತೆಯನ್ನು ನಾಶ ಮಾಡಿ ಕಲಿಸಿದವರ ಶ್ರಮ ಕಲಿಯುವವರ ಪರಿಶ್ರಮ ಎರಡನ್ನು ವ್ಯರ್ಥ ಮಾಡಿ ಗಡಿಬಿಡಿಯಲಿ ಎಡೆಬಿಡಂಗಿತನದ ನಿರ್ಧಾರ ಮಾಡಿ ನಡು ನೀರಲ್ಲಿ ಕೈ ಬಿಟ್ಟು ತೀರಗಳಲ್ಲಿ ಧೀರರಂತೆ ತಮ್ಮದೇ ಸರಿ ಎಂದು ವಾದಿಸುವವರು ಶಿಕ್ಷಣ ವ್ಯವಸ್ಥೆಯ ಪರೀಕ್ಷೆಯ ಪಾವಿತ್ರತೆಯನ್ನು ಹಾಳು ಮಾಡಿ ಮಕ್ಕಳ ಕಲಿಕೆಯ ಕನ್ನಡಿಯನ್ನು ಚೂರು ಚೂರು ಮಾಡಿ ಅದನ್ನು ಸರಿ ಮಾಡುವ ಮಹಾ ಪ್ರಯತ್ನವನ್ನು ಪ್ರದರ್ಶಿಸಲು ಹೊರಟಿರುವ ಮದ್ಯ ಕುಡಿದ ಅಶ್ವವನ್ನು ಕೈ ಬಿಟ್ಟು ಹಿಡಿಯಲು ಹೊರಟಿರುವುದು ಮೂರ್ಖತನವಾಗುತ್ತದೆ.

       ಪರೀಕ್ಷಾ ಸಮಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಅರ್ಧಂಬರ್ಧ  ಪರೀಕ್ಷೆ ನಡೆಸಿ ಹಾವು ಸಾಯದೆ ಕೋಲು ಮುರಿಯದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಕ್ಕಳ ಭವಿಷ್ಯವನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆದಿರುವುದು ಈ ದುಷ್ಟ ಭ್ರಷ್ಟ ದುರಾಸೆಯ ವ್ಯವಸ್ಥೆಗೆ ಛೀ ಮಾರಿ ಹಾಕಬೇಕು .ನಮ್ಮ ಮಕ್ಕಳ ಭವಿಷ್ಯ ರೂಪಿತವಾಗುವ ಶಾಲೆಗಳಲ್ಲಿ ಪರೀಕ್ಷೆಗಳು ಸಂತಸದ ಆಟಗಳಾಗಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪಾಠವಾಗಿ ಶಿಕ್ಷಣದ ಗುರಿ ಸಾಧ್ಯವಾಗಿ ಮಕ್ಕಳ ಭವಿಷ್ಯ  ಉಜ್ವಲವಾದಾಗ ಶಿಕ್ಷಣದ ಮಹತ್ವ ಅರ್ಥ ಪಡೆದುಕೊಳ್ಳುತ್ತದೆ. ಕಲಿತ ಕಲಿಕೆಯನ್ನು ಪಾರದರ್ಶಕವಾಗಿ ಸಮರ್ಪಕವಾಗಿ ಮೌಲ್ಯಮಾಪನ ಮಾಡಬೇಕಾಗಿರುವುದು ಕಲಿಸುವವರ ಜವಾಬ್ದಾರಿಯ ಹೊರತು ಸರ್ಕಾರ ಸಂಸ್ಥೆಗಳ ಅಜೆಂಡ ಹಾಕಬಾರದು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಪರಿಕಲ್ಪನೆ ಮುನ್ನೆಲೆಗೆ ಬಂದಾಗ ಮಾತ್ರ ಅಂಕಗಳ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿ ಮಗು ತನ್ನ ಸಾಮರ್ಥ್ಯವನ್ನು ತಾನೆ ಅರ್ಥ ಮಾಡಿಕೊಂಡು ಕಲಿಕೆಯನ್ನು ಸಾರ್ಥಕ ಪಡಿಸಿಕೊಳ್ಳಲು ಅನು ಮಾಡಿಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪರೀಕ್ಷಾ ಸಮಯದಲ್ಲಿ ವ್ಯಾಜ್ಯಗಳನ್ನು ಮಾಡಿಕೊಳ್ಳದೆ ಮಕ್ಕಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿ ಮಾಡದೆ ನಿರಂತರ ಮತ್ತು ವ್ಯಾಪಕ ಮೌಲ್ಯಂಕನದ ಮೂಲಕ ಮಗುವಿನ ಭವಿಷ್ಯಕ್ಕೆ ಅಡಿಪಾಯ ಹಾಕುವ ಕೆಲಸವನ್ನು ಮಾಡಬೇಕಾಗಿರುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಮಕ್ಕಳನ್ನು ಗೊಂದಲಕ್ಕೀಡು ಮಾಡದೆ ಕಲಿಸಿದವರನ್ನು ಅಡಕತ್ತರಿಯಲ್ಲಿ ಸಿಕ್ಕಿಸದೆ ಮಕ್ಕಳ ಭವಿಷ್ಯವನ್ನು ಕತ್ತಲ ಕೂಪಕ್ಕೆ ತಳ್ಳುವ ಇಂತಹ ಅಸಂಬದ್ಧ ವ್ಯವಸ್ಥೆಯನ್ನು ಶುದ್ಧಗೊಡಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಆ ಮೂಲಕ ಮೂಲಭೂತ ಹಕ್ಕನ್ನು ಮಕ್ಕಳಿಗೆ ಒದಗಿಸಿ ಕೊಡುವ ಹೊಣೆಗಾರಿಕೆಯನ್ನು ನಿಭಾಯಿಸಿದ ಸಾರ್ಥಕತೆ ಈ ವ್ಯವಸ್ಥೆಗೆ ಬರುತ್ತದೆ. ಅಂತಹ ಪರ್ವಕಾಲವನ್ನು ಎದುರು ನೋಡೋಣ

*ಅಮು ಭಾವಜೀವಿ ಮುಸ್ಟೂರು* 
ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ
ಫೋನ್ 8496819281