ಸಾಕು ಬದುಕಿನ ಜಂಜಡ
ದಣಿದು ನಡೆಯಲಾರೆ ಕಾಲದ ಸಂಗಡ
ಬರೇ ನೋವುಗಳೇ ಇಲ್ಲಿನ ಸಾಧನೆ
ಭ್ರಮೆಯ ಬದುಕಿದು ಬರೀ ಶೋಧನೆ
ಆದರ್ಶಗಳಿಗೆ ಇಲ್ಲಿ ಬೆಲೆಯಿಲ್ಲ
ಆಶಯಗಳಿಗೆ ಇಲ್ಲಿ ನೆಲೆ ಇಲ್ಲ
ಎಲ್ಲಾ ಸ್ವಾರ್ಥದ ಆಡುಂಬೊಲ
ನಂಬಿಕೆಗೆ ಇಲ್ಲಿಲ್ಲ ಬೆಂಬಲ
ಮೂಗಿನ ನೇರಕ್ಕೆ ಎಲ್ಲವೂ ಸತ್ಯ
ವ್ಯಕ್ತಿಯ ಭಾವಗಳೆಲ್ಲ ಮಿಥ್ಯ
ಉಳ್ಳವನಿಗಿಲ್ಲಿ ಎಲ್ಲದಕ್ಕೂ ದಕ್ಕುವುದು
ಇಲ್ಲದವರ ಗೋಳು ಯಾರಿಗೂ ಕೇಳದು
ಶ್ರಮಕ್ಕೆ ತಕ್ಕ ಫಲವಿಲ್ಲ
ಗುರಿಮುಟ್ಟಿಸುವ ಛಲವಿಲ್ಲ
ಸೋತು ಕೂತ ಮನಸ್ಸಿನಾಗೆ
ಸತ್ಯದರ್ಶನ ಪಾಠವಾಯಿತು
೦೫೪೫ಪಿಎಂ ೧೮೦೨೧೨೦೨೧
ಏನೆಲ್ಲಾ ಆಗುವ ಹಂಬಲದಲ್ಲಿ
ನಾನು ನಾನಾಗಲಾಗಲಿಲ್ಲ
ಸಾಹಿತ್ಯದ ಸೂರಿನಲ್ಲಿ ಮೊಳೆತು
ಹೆಮ್ಮರದ ಮೇರುವಾಗಲಾಗಲಿಲ್ಲ
ಕೃಷಿಯ ಆಳಕ್ಕೆ ಇಳಿದು ಬೆಳೆದು
ಬದುಕಿನ ಬೇರು ಭದ್ರ ಗೊಳ್ಳಲಿಲ್ಲ
ವೃತ್ತಿಯಲ್ಲಿ ಮಹತ್ವಾಕಾಂಕ್ಷೆಯ
ಆದರ್ಶಗಳು ಹಾದಿ ನೆರಳಾಗಲಿಲ್ಲ
ಪ್ರವೃತ್ತಿಯ ಮಜಲುಗಳೆಂದಿಗೂ
ಉನ್ನತಿಯ ಉತ್ತುಂಗಕ್ಕೆ ಕರೆದೊಯ್ಯಲಿಲ್ಲ
ಬರೆದದ್ದು ಬರಿ ಆತ್ಮತೃಪ್ತಿಗೆ
ಭಾಜನನಾಗಿಲ್ಲ ಯಾವ ಪ್ರಶಸ್ತಿಗೆ
ನಡೆವ ಹಾದಿ ಧನಾತ್ಮಕವಾಗಿದ್ದರೂ ಕೂಡ
ಗುರಿ ತಲುಪಿಸುವಲ್ಲಿ ಆಯಿತು ವಿಫಲ
ನಿತ್ಯದಿ ಹಿಂಡಿಕೊಂಡೆ ಗಾಣದೆತ್ತಿನಂತೆ
ದುರಂತ ಕಬ್ಬಿನ ಸಿಹಿ ಸವಿಯಲಾಗಲಿಲ್ಲ ಎಂದಿಗೂ
ಎಂಥ ವಿಪರ್ಯಾಸವಿದು ಜೀವನದಿ
ಶ್ರಮಕ್ಕೆ ತಕ್ಕ ಫಲ ಸಿಗುವುದೇ ಇಲ್ಲ ಎಂದೆಂದಿಗೂ
೧೦೩೨ಪಿಎಂ ೦೩೦೨೨೨೧
ಅಮುಬಾವಜೀವಿ ಮುಷ್ಟೂರು
ನೋಯುವೆ ಏಕೆ
ಒಲವಿನ ಜೀವವೇ
ಸದಾ ನಗುತ್ತಲಿರು
ಜೊತೆಯಲ್ಲಿ ನಾನಿಲ್ಲವೇ
ಪ್ರೀತಿಯ ನಂಬಿ ಬದುಕುವ ನಾವು
ಎಡವಿ ಬಿದ್ದರೆ ದುಪ್ಪಟ್ಟು ನೋವು
ತಪ್ಪೆಸಗಿದೆ ಒಪ್ಪವಾಗಿ ಜೀವಿಸಿ
ಬಾಳ ಪಯಣದಿ ಗುರಿ ತಲುಪೋಣ
ಆದುದಕ್ಕೆಲ್ಲಾ ಹೊಣೆಯನ್ನು ಮಾಡದೆ
ಆರೋಪ ಪ್ರತ್ಯಾರೋಪದಲ್ಲಿ ಕಾಲ ತಳ್ಳದೆ
ಪರಸ್ಪರ ಅನ್ಯೋನ್ಯತೆಯಲ್ಲಿ ಬಾಳುತ
ಅನುಗಾಲವು ಸುಖವಾಗಿರೋಣ
ಆಡುವವರ ಮಾತಿಗೆ ಕಿವಿಗೊಡದೆ
ಅಂದುಕೊಂಡಂತೆ ಸಾಧಿಸುವ ಬಿಡದೆ
ಅವಹೇಳನಗಳ ಮೆಟ್ಟಿಲು ಏರಿ
ಅಭಿಮಾನದ ಶಿಖರದಿ ರಾರಾಜಿಸೋಣ
ಬಿಡು ಈ ಮೌನ
ಬೇಡ ನಮ್ಮಲ್ಲಿ ಬಿಗುಮಾನ
ಜೊತೆ ಜೊತೆಯಲಿ ನಡೆಯುತ
ಸಾಧಿಸೋಣ ಬಾಳಿನ ಹಿತ
೨೪೧ಪಿಎಂ ೧೫೦೨೨೦೨೧
ಅಪ್ಪಾಜಿ ಎ ಮುಷ್ಟೂರು
ದೂರುವೆ ಏಕೆ ನನ್ನನ್ನೇ
ಭಾರವಾದ ಹೃದಯದಿಂದ ಸುಮ್ಮನೆ
ಹೇಳಿಬಿಡು ಕಾರಣವೇನು
ಬಾಳ ಯಾನದ ಇಕ್ಕೆಲದಿ
ನೋವು ನಲಿವುಗಳ ಸಾಲು ನೆರಳಲಿ
ದಣಿವಾರಿಸಿಕೊಳ್ಳೋಣ ಒಲವ ಹಾಸಿ
ಕಷ್ಟವೇ ಪಾಠ ನಮಗಿಲ್ಲಿ
ದುಷ್ಟತನಕ್ಕೆ ಜಾಗವಿಲ್ಲ ನಮ್ಮಲಿ
ಸಾಗುವ ನಾವು ಜೊತೆ ಜೊತೆಯಲಿ
ನಿನ್ನೆಗಳು ಕಲಿಸಿದ ಪಾಠ
ನಾಳೆಗಳ ಗೆಲ್ಲುವ ಹಠ
ಹಿಂದಿನ ದಿನ ನಿತ್ಯ ಪ್ರೇರಣೆ
ನೋಯದಿರು ನನ್ನೊಂದಿಗೆ
ಖುಷಿಯ ಸವಿಯೋಣ ಜೊತೆಜೊತೆಗೆ
ನೆಮ್ಮದಿಯ ಬದುಕಿರಲಿ ನಾಳೆಗೆ
ಚೇತನವಾಗು ನನ್ನೆಲ್ಲ ಹೋರಾಟಕ್ಕೆ
ಬೆಂಬಲವಾಗಿರುವೆನು ಒತ್ತಾಸೆಗಳಿಗೆ
ಸರಸಸಲ್ಲಾಪದಿ ಜತೆಯಾಗೋಣ
೦೫೧ಪಿಎಂ ೧೫೦೨೨೦೨೧
ಅಪ್ಪಾಜಿ ಎ ಮುಷ್ಟೂರು