*ನಿಮಗೆ ಕನಿಕರವಿಲ್ಲ*
ಏಕೆ ಮೇಘವೇ ಮುನಿಸು
ನಿಮಗಿಲ್ಲವೇ ಮಳೆ ಸುರಿವ ಕನಸು
ರೈತನ ಹೊಲದ ಬೆಳೆ
ಅಲ್ಲೇ ಒಣಗುತಲಿದೆ
ಸಾಲದ ಶೂಲ ಅವನನು
ಆತ್ಮಹತ್ಯೆಗೆ ದೂಡುತಿದೆ
ಬಾಯಾರಿದ ಬದುಕಿಗೆ
ದಾಹ ಕತ್ತು ಹಿಸುಕಿ ಕೊಲ್ಲುತಿದೆ
ಬರಿದಾದ ಬೊಗಸೆಯಲ್ಲಿ
ಹನಿ ನೀರು ಆವಿಯಾಗುತಿದೆ
ಹಸಿರುಡಬೇಕಾದ ಭೂತಾಯಿ
ಭಣಗುಡುತಿಹಳು ಕಂಗಾಲಾಗಿ
ಒಡಲಿಗೆ ಹತ್ತಿದ ಬೆಂಕಿ
ಸುಡುತಲಿದೆ ಕಾಡ್ಗಿಚ್ಚಾಗಿ
ಹಸಿವಿನ ಆಕ್ರಂದನ
ಮುಗಿಲು ಮುಟ್ಟಿದೆ
ನೆಲೆಗಾಗಿ ನರಳುವ
ಬದುಕು ಸಾವನು ಬಯಸಿದೆ
ಮುನಿದ ನಿಮಗೆ ಕನಿಕರವಿಲ್ಲ
ದಣಿದ ಬದುಕೆಗೆ ತ್ರಾಣವಿಲ್ಲ
ಮುನಿಸು ಕರಗಿ ಧಾರೆ ಸುರಿಯಲಿ
ಭೂಮಿ ಮತ್ತೆ ಹಸಿರುಟ್ಟು ನಲಿಯಲಿ
1229ಪಿಎಂ28082018
ಅಮು ಭಾವಜೀವಿ
No comments:
Post a Comment