Wednesday, April 7, 2021


*ಗಜಲ್*

ಎದೆಯ ನೋವುಗಳು ನೂರಿರಲಿ ಕೇಳು ಮನವೆ 
ಆಗುವುದೆಲ್ಲಾ ಒಳ್ಳೆಯದಕ್ಕೆ ಇಲ್ಲಿ ಕೇಳು ಮನವೆ 

ಹೆಜ್ಜೆ ಹೆಜ್ಜೆಗೂ ಅಡೆತಡೆಗಳನ್ನುಂಟು ಬದುಕಲ್ಲಿ 
ಎಲ್ಲ ಕಷ್ಟಗಳ ಗೆಲ್ಲಬೇಕು ಇಲ್ಲಿ ಕೇಳು ಮನವೆ 

ಬೆನ್ನಿಗೆ ಚೂರಿ ಹಾಕುವವರೇ ಹೆಚ್ಚು ಜಗದಲ್ಲಿ 
ಬೇರುಬಿಟ್ಟು ನೆರಳು ನೀಡಬೇಕಿಲ್ಲಿ ಕೇಳು ಮನವೆ 

ದುಷ್ಟಕೂಟದ ಕೆಟ್ಟ ಕಲ್ಪನೆಗಳಿಗೆ ಎಂದಿಗೂ  ಅಂತ್ಯವಿಲ್ಲ 
ನಾಯಿಬಾಲ ನೆಟ್ಟಗಾಗುವುದಿಲ್ಲ ಇಲ್ಲಿ ಕೇಳು ಮನವೆ 

ಅಮುವಿನ ಅನುಭವದ ಮಾತುಗಳು  ಸುಳ್ಳಾಗುವುದಿಲ್ಲ
ಸತ್ಯದ ಹಾದಿಯನೆಂದು ಬಿಡಬಾರದು ಇಲ್ಲಿ ಕೇಳು ಮನವೆ 

೦೫೨೮ಪಿಎಂ೦೨೦೧೨೦೨೧
*ಅಪ್ಪಾಜಿ ಎ ಮುಸ್ಟೂರು* 


ಪ್ರೀತಿಯ ಸೆಳೆತದ 
ಮೋಹಕ್ಕೆ ಸಿಲುಕಿ 
ಪರಿಪರಿಯಾಗಿ ನೊಂದೆ 
ಆತುರದಿ ದುಡುಕಿ 

ಕಾಡ್ಗಿಚ್ಚಿಗೆ ಸಿಕ್ಕ ತರಗೆಲೆಯಂತೆ 
ಉರಿದು ಕರಕಲಾಯಿತು ಬದುಕು 
ಪ್ರವಾಹಕ್ಕೆ ಸಿಕ್ಕ ಹಾಯಿದೋಣಿಯಂತೆ     
ಕಂಗೆಡಿಸಿದೆ ನನಗೊದಗಿದ ಕೆಡುಕು 

ದೂರದ ಬೆಟ್ಟದ ನುಣುಪಿಗೆ ಸೋತು 
ಗಿರಿ ಕಣಿವೆಗೆ ಬಿದ್ದಿರುವೆ ಎತ್ತುವವರಿಲ್ಲ 
ಚಂದದ ಸುಮದ ಚೆಲುವಿಗೆ ಮರುಳಾದೆ 
ಬಳಿಯಲ್ಲೇ ಮುಳ್ಳಿರುವುದು ಅರಿವಿಗೆ ಬರಲಿಲ್ಲ 

ಬಲ್ಲವರ ಮಾತು ರುಚಿಸದು ಇದರ ಪರಿಣಾಮ 
ವಿಷ ನುಂಗಿ ವಿಲವಿಲ ಒದ್ದಾಡುತ್ತಿರುವೆ
ಇಲ್ಲಸಲ್ಲದ ಆಪಾದನೆಗಳಿಗೆ ತುತ್ತಾಗಿ 
ಮುತ್ತಿನಂತ ಬದುಕನ್ನೆ ಹೊಡೆದು ಹಾಕಿರುವೆ 

ಮಾಯಾಲೋಕದ ಯಕ್ಷಿಣಿ ಈ ಪ್ರೀತಿ 
ಅರಿಯದೆ ಮರುಳಾದರೆ ತಪ್ಪದು ಪಜೀತಿ 
ಸಹಿಸಲೇಬೇಕಿದೆ ಎದೆಗಿರಿದ ಮೊನಚಿನ ಗಾಯ 
ಮಾಯಲು ಬೇಕಿದೆ ಜನುಮಾಂತರದ ಸಮಯ 

೦೫೫೨ಪಿಎಂ ೦೨೦೧೨೦೨೧
ಅಪ್ಪಾಜಿ ಎ ಮುಷ್ಟೂರು 

ನಿನ್ನ 
ಭಾವದೊಳಗಿನ
ಕಲ್ಪನಾ ವಿಹಾರಿಯು
ನಾನಲ್ಲವೇ 
ಸಖಿ

0846ಪಿಎಂ02012020

No comments:

Post a Comment