*ಕತ್ತಲಲ್ಲಿ ಕರಗಿ*
ಬಡತನದ ಬೇಗೆಯಲ್ಲಿ
ಬೆಂದ ಬದುಕು
ಬರಿ ನೋವನ್ನೇ ಉಂಡಿತ್ತು
ಜೀವನದುದ್ದಕ್ಕೂ
ಹರಕು ಮುರುಕು ಜೋಪಡಿ
ಉಂಟು ಅದಕ್ಕೆ ನೂರು ಕಿಂಡಿ
ಮೈಯ ಮೇಲೆ ಹರಿದ ಬಟ್ಟೆ
ಕಾಮುಕರ ಕಣ್ಣಿಗೆ ಹರೆಯ ಬಣ್ಣದ ಚಿಟ್ಟೆ
ಕಿತ್ತು ತಿನ್ನುವ ಕಡುಬಡತನ
ಅದರ ಮೇಲೊಂದಿಷ್ಟು ಜಾತಿಯ ಹಗೆತನ
ಉಳ್ಳವರ ದಳ್ಳುರಿಯ ಮುಂದೆ
ನನ್ನ ಗುಡಿಸಲು ಸುಟ್ಟು ಕರಕಲು
ಬೀದಿಗೆ ಬಿದ್ದಿತು ಬದುಕು
ಆಗಲೇ ಎದುರಾಯಿತು ಕೆಡುಕು
ಹಾದಿ ಬೀದಿಯ ಕಣ್ಣು ನನ್ನ ಮೇಲೆ
ಕನಿಕರಕ್ಕಿಂತಲೂ ಕಾಮಾಂಧತೆಯ ಲೀಲೆ
ಹಸಿವನಿಲ್ಲಿ ಯಾರೂ ಕೇಳಲಿಲ್ಲ
ತೀಟೆ ತೀರಿಸಿಕೊಂಡು ಪೇಟೆಗಟ್ಟಿದರಲ್ಲ
ಅಲ್ಲಿ ಮತ್ತೊಂದು ನರಕ
ಕೆಂಪು ದೀಪದ ಕೆಳಗೆ ಕುದಿವ ಬದುಕು
ಹರೆಯದ ಮೈಯ ಕಿತ್ತು ತಿಂದವು
ಲಜ್ಜೆಗೆಟ್ಟ, ಕಾಮಾಂಧ ಹದ್ದುಗಳು
ಆ ಕತ್ತಲಲ್ಲಿ ಕರಗಿ ಹೋದವು
ನನ್ನ ಸ್ವಂತಿಕೆಯ ನಿರೀಕ್ಷೆಗಳು
ಹಗಲು ಇರುಳು ಬಿಡುವಿಲ್ಲದ ಕೆಲಸ
ಮೈಹಾಸಿ ಪಡೆದದ್ದು ಬಿಡಿಗಾಸ
ಮೈ ಉಂಡವರಾರೂ ಮನಸ ಕಂಡು ಕೇಳಲಿಲ್ಲ
ಹಿಂಡಿ ಹಿಪ್ಪೆಮಾಡಿ ದಂಡಿಸಿದ ಅವರಾರು ಶತ್ರುಗಳಲ್ಲ
ಹರೆಯ ಮೆಲ್ಲ ದೂರ ಸರಿಯಲು
ಹೊಲಸು ನಾರುತಿತ್ತು ಕಾಮನೆ
ತನುವಿನೊಳಗೆ ಏನೇನೋ ಯಾತನೆ
ಯಾರಿಗೂ ಈಗ ತಟ್ಟಲಿಲ್ಲ ಕಾಮದ ವಾಸನೆ
ಬಾಣಲೆಯಿಂದ ಬೆಂಕಿಗೆ ಬಿದ್ದೆ
ಮೈಯ ವ್ರಣಕ್ಕೆ ನರಳುತ್ತಲಿದ್ದೆ
ಲುಚ್ಛಾ ಜನರ ಚಪಲಕ್ಕೆ ಬಲಿಯಾಗಿ
ಕೊಚ್ಚೆಯಲ್ಲಿ ಹೊರಳಾಡಿ ಪ್ರಾಣ ಬಿಟ್ಟೆ
೦೫೩೮ಪಿಎಂ೨೮೧೧೨೦೨೦
ಅಪ್ಪಾಜಿಗೆ ಎ ಮುಷ್ಟೂರು
ಕವನ ಸ್ಪರ್ಧೆಗಾಗಿ:
ವಿಷಯ : ಮನೆ ಮಡದಿ ಮಕ್ಕಳು
ಶೀರ್ಷಿಕೆ : *ಬಾಳ ಬಾಂಧವ್ಯ*
ಕಲ್ಲು ಮಣ್ಣಿನ ಕೂಡಿಕೆಯ
ಕಬ್ಬಿಣ ಸಿಮೆಂಟು ಛಾವಣಿಯ
ನಡುವೆ ಬದುಕುವ ಜೀವಗಳ
ನೆಲೆ ನೆಮ್ಮದಿಯ ತಾಣ ಮನೆಯು
ಪುರುಷನೆಂಬ ಕುದುರೆಯ ಕಟ್ಟಿ
ಸಂಸಾರದ ಯಾಗ ಭೋಗಕೆ
ತಾಳಿಯ ಬಂಧದಿ ಬೆಸೆದ ಸಂಗಾತಿ
ಅವಳೇ ಮಡದಿಯೆಂಬ ಗೆಳತಿ
ಕಾಮ ಪ್ರೇಮದ ಕುರುಹಾಗಿ
ವಂಶವೃಕ್ಷದ ಬಿಳಲಾಗಿ
ಕಂಡ ಕನಸಗಳ ಸಾಕಾರಕಾಗಿ
ಮಕ್ಕಳಿರಬೇಕು ಮನೆ ತುಂಬಾ
0824ಪಿಎಂ28112020
*ಅಪ್ಪಾಜಿ ಎ ಮುಸ್ಟೂರು*
*ರುಬಾಯಿ ಸ್ಪರ್ಧೆಗಾಗಿ*
ನನಗೆ ಅವಳದೇ ಕನವರಿಕೆ
ಅವಳೇ ನನ್ನ ಕಾವ್ಯ ಕನ್ನಿಕೆ
ಭಾವಪರವಶತೆಗೆ ಪ್ರೇರಣ
ಅವಳೇ ಆ ಶಿಲಾಬಾಲಿಕೆ
0507ಪಿಎಂ29112020
*ಅಪ್ಪಾಜಿ ಎ ಮುಸ್ಟೂರು*
*ಕಾರಣ ಏನಿರಬಹುದು*
ಕ್ಷಮಿಸೆಂದು ಅಂಗಲಾಚಿದರೂ
ಅದಕಿನ್ನು ಸಮಯ ಬೇಕೆಂದು
ನುಣಿಚಿಕೊಳ್ಳುತಾಳೆ ಅವಳು
ಏನಿರಬಹುದು ಅವಳ ಉದ್ದೇಶ
ಸತಾಯಿಸುವ ಹಿಂದಿನ ಸಂದೇಶ
ಆಟ ಆಡಿಸುತ್ತಿರಬಹುದೇ ಅವಳು
0420ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*
*ಹೇಗೆ ಬರಲಿ*
ವಿಳಾಸ ಮರೆತು ಹೋಯಿತು
ನಿನ್ನ ಪ್ರೀತಿಯರಮನೆಗೆ
ನಾ ಬರಲಿ ಹೇಗೆ ಚೆಲುವೆ
ನಿನ್ನ ನೆನಪುಗಳ ಬೆಳಕಲ್ಲಿ
ಆ ಒನಪಿನ ಬಳುಕು ಹಾದಿಯಲಿ
ನಿರೀಕ್ಷೆಯ ಹೊತ್ತು ನಡೆದು ಬಂದೆ
ಆದರೆ ನೀನನ್ನ ತಿರಸ್ಕರಿಸಿ
ದಣಿದ ಜೀವವ ಮತ್ತಷ್ಟು ಮಣಿಸಿ
ನೋವಿನ ಪ್ರವಾಹದಲಿ ಕೊಚ್ಚಿಹೋದೆ
ಕನಿಕರಿಸದ ನಿನ್ನ ಹೇಗೆ ಒಪ್ಪಿಸಲಿ
0430ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*
*ಬೇಡವಾಗಿದೆ ಬಂಧ*
ತೊರೆದು ಹೋಗು ನನ್ನಿಂದ
ಬೇಡವಾಗಿದೆ ಈ ಬಂಧ
ಹತ್ತಿರ ಬಂದ ನನ್ನ ದೂರ ತಳ್ಳಿ
ಹೃದಯ ಗಾಯ ಮಾಡಿದೆ
ಸ್ನೇಹವ ದೂಷಿಸಿ
ಪ್ರೀತಿಯ ಅನುಮಾನಿಸಿ
ಬಾಳ ನೆಮ್ಮದಿಯ ಕಳೆದೆ
ಮತ್ತೆಂದೂ ನೋಯಿಸದೆ
ನನ್ನಿಂದ ದೂರ ಉಳಿದುಬಿಡು
0739ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*
*ಅಂದು*
ಸ್ನೇಹದ ಸವಿಯಲ್ಲಿ
ಸಲಿಗೆಯ ಬಯಸಿ
ಸನಿಹ ಬಂದಳು
*ಇಂದು*
ಸ್ನೇಹ ಹಳಸಿರಲು
ಗೌರವವ ಬಯಸಿ
ದೂರವಾದಳು
1016ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*
ಹಾಯ್ಕು
ನಿನ್ನ ಸೇರಲು
ಎಲ್ಲಾ ತೊರೆದು ಬಂದೆ
ಈ ಪ್ರೀತಿಗಾಗಿ
1025ಪಿಎಂ3011202
ಅಪ್ಪಾಜಿ ಎ ಮುಸ್ಟೂರು
ಹಾಯ್ಕು
ಭಕ್ತಿ ಗಾಯನ
ಮುಕ್ತಿ ಸಾಧನ ಇಲ್ಲಿ
ಆಸ್ತಿಕನಾದ್ರೆ
1028ಪಿಎಂ30112020
ಅಪ್ಪಾಜಿ ಎ ಮುಸ್ಟೂರು
No comments:
Post a Comment