Wednesday, April 7, 2021

*ನಾವೇಕೆ ಅದಕರ್ಹರಲ್ಲ*

ನಿತ್ಯ ರಸ್ತೆಯ ಮೇಲೆ 
ನಮ್ಮ ಹೋರಾಟ
ಹಗಲು ಇರುಳೆನ್ನದೆ
ದುಡಿದ ನಮ್ಮ ಮೇಲೇಕೆ ಹಟ

ವಾಹನ ಮಾತ್ರ ಸರ್ಕಾರಿ
ನೌಕರರೇಕೆ ಸರ್ಕಾರದವರಲ್ಲ
ಮನೆ ಮಠ ಬಿಟ್ಟು ಬಂದು
ದುಡಿವ ನಾವೇಕೆ ಅದಕರ್ಹರಲ್ಲ

ಚಾಲಕ ಚಕ್ರ ತಿರುಗಿಸಿದರೇನೇ
ನಿರ್ವಾಹಕ ಹಣ ಸಂಗ್ರಹಿಸಿದರೇನೇ
ಇಲಾಖೆಗೆ ಆರ್ಥಿಕ ಬಲ ತುಂಬುವುದು
ಅಧಿಕಾರಿ ವರ್ಗ ಐಷಾರಾಮಿಯಗಿರುವುದು

ಎಂಥ ಸಂದಿಗ್ಧತೆಯಲ್ಲಿಯೂ 
ದುರ್ಗಮ ಹಾದಿಯಲ್ಲಿಯೂ
ಜನರ ಸುರಕ್ಷತೆಗೆ ಶ್ರಮಿಸುವ
ನಮಗೇಕಿಲ್ಲ ಸರ್ಕಾರಿ ರಕ್ಷಣೆ 

ದುಡಿಸಿಕೊಳ್ಳುವಿರಿ ಗಾಣದೆತ್ತಿನಂತೆ
ನಮ್ಮನೇಕೆ ಕಾಣಲಾರಿರಿ ಸರ್ಕಾರಿ ನೌಕರರಂತೆ
ಸಾರಿಗೆಯ ಸವಾಲು ಜಯಿಸುವ 
ನಮ್ಮನೇಕೆ ಕಾಣುವಿರಿ ಜಾನುವಾರುಗಳಂತೆ

ಓಡುವ ಬಸ್ಸಿನ ಚಕ್ರಗಳು ನಾವು
ನಾವು ಸವೆದರೇನೇ ನಿಮ್ಮ ಉಳಿವು
ನಮ್ಮನ್ನು ನೌಕರರೆಂದು ಪರಿಗಣಿಸಿ 
ನಮ್ಮ ಬೆಂಬಲಕೆ ಎಲ್ಲರೂ ಕೈ ಜೋಡಿಸಿ 

0910ಪಿಎಂ13122020
*ಅಪ್ಪಾಜಿ ಎ ಮುಸ್ಟೂರು*
*ಪ್ರೀತಿ*

ಸಾಕೆನ್ನುವಷ್ಟು ಪ್ರೀತಿ ಸಿಕ್ಕಿತು
ನನ್ನವಳ ಮಡಿಲೊಳಗಿಂದ
ಬಂದ ನೋವುಗಳೆಲ್ಲ ಮಾಯವಾದವು
ಅವಳ ನಿರ್ಮಲ ಒಲವಿನಿಂದ
ಎಲ್ಲಾ ಅವಮಾನಗಳ ಸಹಿಸಿ
ಗೆಲ್ಲುವ ಛಲ ತುಂಬಿತು ಈ ಬಂಧ 
ಉಸಿರಿರುವವರೆಗೆ ಋಣಿ ನಾನು 
ಅವಳ ನಿಸ್ವಾರ್ಥ ಪ್ರೀತಿಗೆ

1021ಪಿಎಂ14122020
*ಅಪ್ಪಾಜಿ ಎ ಮುಸ್ಟೂರು*

ಎಲ್ಲರೂ ನಮ್ಮವರೇ 
ನಾವೆಲ್ಲ ಕುಲಬಾಂಧವರು 
ವೈಯಕ್ತಿಕ ಭಿನ್ನತೆಗಳ ದೂರವಿರಿಸಿ 
ಸಾಮೂಹಿಕ ಯಶಸ್ಸಿನತ್ತ ಧಾವಿಸಿ 
ಇಟ್ಟ ನಂಬಿಕೆಗಳಿಗೆ 
ದಿಟ್ಟ ಉತ್ತರ ಕೊಟ್ಟು 
ಸ್ಪಂದಿಸುವ ಮನವಿರಲಿ ಮೊದಲು 
ಗೆಲುವು ಬೀಗುವುದಕ್ಕಲ್ಲ 
ಹೊಣೆಗಾರಿಕೆಯ ಭಾರ ಹೊತ್ತು 
ಹೆಣಗಾಡುವ ಎದೆಗಾರಿಕೆಯು
ಪರ ವಿರೋಧಗಳಿಗಿಂತ
ಪರಸ್ಪರ ಹೊಂದಾಣಿಕೆಯಿಂದ 
ಕೊಟ್ಟ ಭರವಸೆಗಳ ಮರೆಯದೆ 
ನೊಂದವರ ಅಶಕ್ತರ ಶಕ್ತಿಯಾಗಿ 
ಲಾಬಿಗಳಿಗೆ ಮಣಿಯದೆ 
ಲೋಭಗಳಲ್ಲಿ ಮೈಮರೆಯದೆ 
ಲಾಭ ನಷ್ಟಗಳ ಲೆಕ್ಕ ಹಾಕದೆ 
ಲವಲವಿಕೆಯ ಸಮೂಹಶಕ್ತಿ 
ಮುನ್ನಡೆಸಲಿ ಸರ್ವರನು 

೦೫೧೫ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 

*ಆಸೆ* 

ನಿನ್ನ ಕಣ್ಣ ರೆಪ್ಪೆಯೊಳಗೆ 
ಸಣ್ಣದೊಂದು ಬಿಂಬವಾಗುವಾಸೆ 
ನಿನ್ನ ಚೆಂದ ಕೈ ಬ(ಳೆ)ಲೆಯೊಳಗೆ 
ಇಂಪಾದ ಶಬ್ದವಾಗುವಾಸೆ 
ನಿನ್ನ ಅಧರಗಳೊಳಗೆ 
ಮಧುರ ನಗುವಾಗುವಾಸೆ 
ನಿನ್ನ ನೀಳ ಕೇಶದೊಳಗೆ 
ನಲಿವ ಸುಮವಾಗುವಾಸೆ 
ನಿನ್ನೊಡಲ ಮಡಿಲೊಳಗೆ 
ಮಗುವಾಗಿ ಮಲಗುವಾಸೆ 
ಚಂದಿರವದನೆ ನಿನ್ನೊಲವಿಗೆ 
ಸಾಗರವಾಗಿ ಉಕ್ಕಿಬರುವೆ ಬಳಿಗೆ 

೦೫೫೮ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 


ಚಿಂತಕರ ಚಾವಡಿ 
ಆಗಿಹೋಯಿತು ರಾಡಿ 
ಗದ್ದುಗೆಯ ಜಿದ್ದಿಗೆ ಬಿದ್ದು 
ತಾವಿರುವ ಸ್ಥಾನವ ಮರೆತು 
ಕಚ್ಚಾಡುವ ಇವರೆಲ್ಲ 
ನಾವು ಆರಿಸಿ ಕಳಿಸಿದ ನಾಯಕರೇ ???
ಜನರ ಬಗ್ಗೆ ಕಾಳಜಿ ಇಲ್ಲದ 
ಗಲೀಜು ರಾಜಕೀಯದ ರೂವಾರಿಗಳು !!!!
ಹಿಂದಿನವರು ಗಳಿಸಿಟ್ಟ ಮಾನ ಸನ್ಮಾನಗಳ
ಕಿತ್ತಾಟ ಕಚ್ಚಾಟ ಎಳೆದಾಟ ರಂಪಾಟ ಮಾಡಿ 
ಕನ್ನಡಿಗರು ತಲೆ ತಗ್ಗಿಸುವಂತಾಯಿತು 
ಎಲ್ಲರೂ ಅವರೇ ಎಲ್ಲವೂ ಅದಕ್ಕೆ 
ತತ್ತ್ವ ಸಿದ್ಧಾಂತಗಳ ಹೊಸಕಿ ಹಾಕಿ 
ಹಣಬಲ ತೋಳ್ಬಲ ಅಧಿಕಾರ ಬಲದಿಂದ 
ಗಬ್ಬು ನಾರುವ ಕೊಚ್ಚಿಯೊಳಗೆ ಬಿದ್ದು 
ಕನ್ನಡಮ್ಮನಿಗೆ ಅವಮಾನ ಗೈಯ್ಯುತಿಹರು 
ನಾಚಿಕೆಯಾಗಬೇಕು ನಾಯಕರೇ ನಿಮಗೆ 
ಶಾಂತಿ ಅಹಿಂಸೆಗಳಿಂದ ಸ್ವಾತಂತ್ರ್ಯ ತಂದ 
ಗಾಂಧೀಜಿಯ ಹೋರಾಟವೇ ನಿಮ್ಮದು ?
ವಿಧಾನಸೌಧದೊಳಗೆ ಕಚ್ಚಾಡುವ 
ನಿಮ್ಮ ತುಚ್ಛ ವರ್ತನೆಗೆ ಧಿಕ್ಕಾರ 
ತಲೆತಗ್ಗಿಸುವಂತೆ ಮಾಡಿದಿರಿ ಮತದಾರ 
ರೈತರ ಬಡವರ ಅಶಕ್ತರ ಪರವಿಲ್ಲದ 
ನಿಮ್ಮ ಅಧಿಕಾರದ ದಾಹಕ್ಕೆ 
ಹಿಡಿಶಾಪ ಹಾಕುವುದು ಒಂದೇ ದಾರಿ 

೦೬೨೨ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 

ಈ ನೋಟ ನೂರು 
ಕಥೆ ಹೇಳುತಿದೆ ಗೆಳತಿ 
ನೋವು ತುಂಬಿದ ಕಂಗಳಲೂ
ನಗುವ ನಿರೀಕ್ಷೆ ಹೆಚ್ಚಿದೆ
ಭರವಸೆ ನೀಡುವೆ ನಿನಗೆ 
ಉಸಿರಿರುವವರೆಗೆ 
ಜೊತೆ ಜೊತೆಗೆ ಸಾಗುವೆ
ನೋವು ನಲಿವಾಗಿಸಿ 
ಸಂಭ್ರಮದಿ ಬಾಳೋಣ

0824ಪಿಎಂ17122020
*ಅಪ್ಪಾಜಿ ಎ ಮುಸ್ಟೂರು*

*ದೂರುವ ಮುಂಚೆ*

ಇನ್ನೊಬ್ಬರನ್ನು ದೂರುವ ಮುಂಚೆ 
ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ 
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ 
ನೋಡುವುದು ಮುಖ್ಯ 
ಒಂದು ಕೈಯಲ್ಲಿ ಚಪ್ಪಾಳೆ ಅಸಾಧ್ಯ 
ಎರಡೂ ಕೈ ಕೂಡಿದರೇನೇ ಸದ್ದಾಗುವುದು
ದೂರುವ ಮೊದಲು ದೂರುವವನ 
ಪ್ರಾಮಾಣಿಕತೆಯೂ ಪರೀಕ್ಷಿತವು
ತಾನೇ ತನ್ನ ಬೆನ್ನ ಚಪ್ಪರಿಸುವ ಬದಲು
ಬೇರೆಯವರ ವ್ಯಕ್ತಿತ್ವಕೂ ಬೆಲೆ ಕೊಡಬೇಕು 

0837ಪಿಎಂ18122020
*ಅಪ್ಪಾಜಿ ಎ ಮುಸ್ಟೂರು*

ಒಂದು ಬಾಗಿಲು ಮುಚ್ಚಿದರೇನಂತೆ
ಮತ್ತೊಂದು ಕಡೆ ತೆರೆದೇ ಇರುತ್ತೆ
ಇಣುಕಿ ನೋಡುವ ಮಿಣುಕು ಹುಳು
ಕಾಮಾಲೆ ಕಣ್ಣಿನಲಿ ಜಗ ನೋಡುತಲಿ
ಭ್ರಮೆಯಲೇ ಬದುಕುತಿವೆ  ನಿತ್ಯವೂ 
ಅಭಿಮಾನಿಸದೆ ಅನುಮಾನಿಸುತ
ಅವಹೇಳನದಿ ಜಗದನುಕಂಪ ಗಿಟ್ಟಿಸಿ
ಬೀಗುವರು ಬಾಗಲೊಲ್ಲದವರು

0729ಎಎಂ19122920
ಅಪ್ಪಾಜಿ ಎ ಮುಸ್ಟೂರು 
*ಕಾವ್ಯಕನ್ನಿಕೆ ೧೦*

ವರುಷಗಳೇ ಕಳೆದಂತಾಗಿದೆ
ನಿನ್ನ ಕ್ಷಣ ನೋಡದೆ
ಪ್ರೀತಿಯ ಸೌಧದಲಿ 
ನೆನಪುಗಳ ಸರಪಳಿ 
ತುಂಡಾಗುತಿಲ್ಲ ಇಂದಿಗೂ 
ಅದೆಷ್ಟು ಕಾಡುತಿರುವೆ 
ಓ ನನ್ನ ಕಾವ್ಯಕನ್ನಿಕೆ 

1111ಎಎಂ19122020
*ಅಪ್ಪಾಜಿ ಎ ಮುಸ್ಟೂರು*

ಪ್ರೀತಿಯ ಹೃದಯವ 
ನೋಯಿಸಿ ಹೋದೆಯೇಕೆ 
ತಾಯೊಲವಲೂ ದೋಷ ಕಂಡು 
ದೂಷಿಸಿ ಹೊರಟುಹೋದೆ ಏಕೆ ?

ಕಣ್ಣಲ್ಲಿ ಕಣ್ಣಿಟ್ಟು ಕನವರಿಸಿದ ಪ್ರೀತಿಗೆ 
ಕಂಬನಿಯ ವಿದಾಯ ಹೇಳಿದೆ ಏಕೆ 
ದಯೆ ತೋರದೆ ದೂರ ಮಾಡಿದೆ 
ನಡುನೀರಲ್ಲಿ ಕೈಬಿಟ್ಟು ಹೋದೆಯೇಕೆ ?

ಈ ಮೊರೆಯು ಕೇಳದೆ ನಿನಗೆ 
ಹಿಂತಿರುಗಿ ನೋಡದೆ ನಡೆದೆ 
ವೇದನೆಯ ಹೃದಯ ರೋಧನೆಯ 
ಕೇಳದಷ್ಟು ಕಿವುಡಾಯಿತೇ ನಿನ್ನ ಹೃದಯ 

ನಿನ್ನ ಅರಿಯದೆ ನೊಂದೆ ನಾನು 
ಮೋಹದ ಬಲೆಯಲ್ಲಿ ಸಿಲುಕಿ ಮಡಿದೆನು 
ಸುಖವನ್ನರಸಿ ನೀ ನಡೆದೆ 
ನಿನ್ನ ಬಯಸಿ ನಾ ನೊಂದೆ 

ನಮ್ಮಿಬ್ಬರ ನಂಟಿಗೆ ಇನ್ನೂ 
ಯಾವ ಅಂಟು ಬೆಸೆಯದಿನ್ನೂ 
ನಿನ್ನ ನೆನಪುಗಳ ನೋವನ್ನುಂಡು
ನಿನ್ನದೇ ಗುಂಗಿನಲ್ಲಿ ನುಂಗಿ ಬಾಳುವೆನೆಲ್ಲ ಸಂಕಷ್ಟವನ್ನು 

ಕಾರಣವನ್ನೇ ಹೇಳದೆ ಹೋದೆ 
ಅಪವಾದವನಷ್ಟೇ ನನ್ನ ಮೇಲೆ ಹೊರಿಸಿದೆ
ಹಾಯಾಗಿ ನೀನಿರು ನೀ ಬಯಸಿದಂತೆ 
ನಡುಬೀದಿಯಲ್ಲಿ ಸಾಯುವೇ ನಿನಗೆ ಬೇಡ ಚಿಂತೆ

೧೦೩೪ಪಿಎಂ ೧೯೧೨೨೦೨೦
ಅಪ್ಪಾಜಿ ಎ ಮುಷ್ಟೂರು 

*ನಾನೇಕೆ ಬರೆಯುತ್ತೇನೆ*

ನಾನು ಬರೆಯುತ್ತಿದ್ದೇನೆ 
ನನ್ನೊಳಗಿನ ಖಾಲಿಯಾಗದ 
ಭಾವಗಳಿಗೆ ಅಕ್ಷರ ರೂಪ ಕೊಡುತ್ತಾ
ನನ್ನ ಈ ಭಾವಗಳು 
ಇನ್ಯಾರದೋ ನೋವುಗಳು 
ಮತ್ಯಾರದೋ ಕಲ್ಪನೆಗಳು 
ನೊಂದವರು ನಿರಾಳಗೊಂಡು 
ಪ್ರೀತಿಸುವವರು ಪುಳಕಿತಗೊಂಡು 
ಆಸ್ವಾದಿಸುವ ಅಭಿಮಾನಿಸುವ 
ಭಾವ ಹಡೆವ ಬಂಧು ನಾನು 
ಬೇಸರಿಸದೆ ಬೆನ್ತಟ್ಟಿ ಇನ್ನೂ 
ಬರೆದು ಬರೆದು ನೀಡುವೆ ನಿಮಗಾಗಿ 
ನಿಮ್ಮ ಭಾವದ ಹಸಿವ ತಣಿಸುವುದಕ್ಕಾಗಿ 
ಕುಲುಮೆಯಂತೆ ಕುದಿಯುವೆ
ಚಿಲುಮೆಯಂತೆ ಚಿಮ್ಮಿವೆ
ಒಲುಮೆಯಿಂದಲಿ ಎತ್ತಿಕೊಳ್ಳಿರಿ ಎಲ್ಲಾ 

೦೫೫೬ಪಿಎಂ ೨೦೧೨೨೦೨೦
*ಅಪ್ಪಾಜಿ ಎ ಮುಸ್ಟೂರು*
    *ಸೋಲೊಂದು ಪಾಠ*

ಸೋಲೊಂದು ಪಾಠ
ಗೆಲ್ಲಲೊಂದು ಹಠ
ಬಿದ್ದ ಹೊಡೆತಗಳೆಲ್ಲಾ 
ಎದ್ದು ನಿಲ್ಲಲು ಆಸರೆಗಳು
ಅನುಭವದ ಸಂಪುಟ
ನೀಗುವುದು ಸಂಕಷ್ಟ 
ಸೋತಷ್ಟು ಸಂಯಮದಿಂದ 
ಗೆಲುವಿನ ಅಂತರವ ಕ್ರಮಿಸುತ
ಬಾಳ ಹಾದಿಯಲಿ ನೆಮ್ಮದಿ 
ಪಡೆಯುವುದೇ ಸಾಧನೆ 

0634ಪಿಎಂ22122020
*ಅಪ್ಪಾಜಿ ಎ ಮುಸ್ಟೂರು*




No comments:

Post a Comment