Tuesday, April 6, 2021

*ನಮ್ಮೂರ ಜಾತ್ರೆ*

ಜಾತ್ರೆಗೆ ಹೋಗೋಣ ಬನ್ನಿ 
ನಮ್ಮೂರ ತೇರ ಎಳೆಯೋಣ ಬನ್ನಿ 

ಮಾಘ ಮಾಸದಲ್ಲಿ ಬರುವ 
ಮುಸ್ಟೂರ ಜಾತ್ರೋತ್ಸವ 
ಲಿಂಗೇಶನ ದರುಶನವ ಪಡೆದು
ನಾವೆಲ್ಲಾ ಪುನೀತರಾಗೋಣ ಬನ್ನಿ 

ಪಂಜು ಪಂಜಿನ ಬೆಳಕಲ್ಲಿ 
ಬಲಿ ಅನ್ನವ ಹೊತ್ತು ತಂದು 
ತೇರಿಗೆ ಪ್ರದಕ್ಷಿಣೆ ಹಾಕಿ 
ಕಾಯಿ ಹಣ್ಣು ತೂರುವ ಬನ್ನಿ 

ಪಲ್ಲಕ್ಕಿಯಲ್ಲಿ ಹೊತ್ತು 
ಓಡೋಡಿ ಬಂದು ತೇರಿನ 
ಮೇಲೆ ದೇವರ ಕೂರಿಸಿ 
ಮಿಣಿಯ ಹಿಡಿದು ಎಳೆಯೋಣ ಬನ್ನಿ 

ನವ ಜೋಡಿಗೆ ತೇರಿನ 
ಹೊನ್ನ ಕಳಸ ತೋರಿಸಿ 
ಸಂಭ್ರಮದಿ ನಲಿವ 
ಅವರ ಹರಸೋಣ ಬನ್ನಿ 

ಖೇಣೇರ ಅಂಗಡೀಲಿ 
ಬಳೆ ಸರಗಳಿತ್ಯಾದಿ ಕೊಂಡು
ರಾಟೇಲಿ ತಿರುಗಿ ಜೋಕಾಲಿ
ಜೀಕುತ್ತ ನಲಿಯೋಣ ಬನ್ನಿ 

ಬಗೆ ಬಗೆಯ ತಿಂಡಿ ತಿನಿಸು 
ತಂದು ಮನೆಮಂದಿಯಲ್ಲ ಕೂತು
ಪ್ರಸಾದವ ಸವಿಯುತ್ತಾ 
ದೇವರ ಕೃಪೆಗೆ ಪಾತ್ರರಾಗೋಣ ಬನ್ನಿ 

0918ಪಿಎಂ09122019

ಅಮು ಭಾವಜೀವಿ ಮುಸ್ಟೂರು 

No comments:

Post a Comment