*ನೆನಪುಗಳ ರಾಯಭಾರಿ*
ಚಿತ್ತ ಮಳೆಯು ಸುತ್ತಿ ಬಂತು
ನಿನ್ನ ನೆನಪುಗಳ ರಾಯಭಾರಿಯಾಗಿ
ಮರೆತ ಎಲ್ಲ ಕ್ಷಣದ ನೆನಪುಗಳ ತಂತು
ಸುರಿದು ದಂಡಿ ದಂಡಿಯಾಗಿ
ಬತ್ತಿದೆದೆಯಲಿ ಮತ್ತೆ ಭಾವದೊರತೆ
ಮೈದುಂಬಿ ಹರಿಯುತಲಿದೆ
ಸವಿ ಭಾವದ ಕವಿ ಕಲ್ಪನೆಗೆ
ಮರುಜೀವವ ತಂದಿದೆ
ಕನಸಿನ ಲತೆಯಲ್ಲಿ ನಿತ್ಯ
ನೂರು ಸುಮವರಳುತಲಿವೆ
ಮನಸಿನ ಹದ ನೆಲದೊಳಗೆ
ನವಭಾವವು ಮೊಳೆಯುತಿದೆ
ಬೇಸರದ ಬಂರವಂತೂ ದೂರವಾಯ್ತು
ನೇಸರನ ಹೊನ್ನಕಾಂತಿಗೆ ಮಂಜು ನೀರಾಯ್ತು
ಕವಿ ಹೃದಯಕೆ ಮತ್ತೆ ಮತ್ತೆ
ಹೊಸ ಸ್ಪೂರ್ತಿಯ ಧಾರೆಯೆರೆಯಿತು
ಇನ್ನು ಬದುಕಿನಲ್ಲಿ ಎಲ್ಲ ಹೊಸತನ
ಮಳೆಯು ಬೆಳೆಯ ಈ ಗೆಳೆತನ
ಮೂಡುತಿವೆ ಕವಿಮನದಲಿ ಕವನ
ಹಿಂಗಾರಿನ ಅಭಿಷೇಕದಿ ಮಿಂದಿದೆ ಮನ
0534ಪಿಎಂ11102017
*ಅಮುಭಾವಜೀವಿ*
No comments:
Post a Comment