ನನ್ನೆದೆಯ ಕೋಗಿಲೆಯ
ದನಿಯಲಿ ಬೆರೆತವಳೆ
ಹಾಡು ಒಲವಿನ ಕವಿತೆ
ಪ್ರೀತಿಯ ಅಪ್ಪುಗೆಯಲಿ
ಅಕ್ಕರೆಯ ನೆರಳಿನಲ್ಲಿ
ಬೆಚ್ಚನೆ ಭಾವದಿ ನೀ ಬೆರೆತೆ
ಹುಚ್ಚು ಹರೆಯದ ಮನದಿ
ಹಚ್ಚ ಹಸಿರಾಗಿ ತುಂಬಿದೆ
ಬರಿದಾದ ಈ ಬಾಳಲಿ
ಮೆಚ್ಟಿಗೆಯ ಮಾತಿಗೂ ಮುಜುಗರ
ಹಚ್ಚಿಕೊಂಡು ಕಳೆದು ಹೋಗಿಹೆ
ನಿನ್ನದೇ ಆ ಗುಂಗಲಿ
ಆವರಿಸು ನನ್ನೊಳಗೆ ನೀನು
ಹಾಲಲ್ಲಿ ಬೆರೆತಂತೆ ಜೇನು
ಮರೆಯದೆ ನನ್ನನೇ ಮರೆತು ಹೋದೆ
ಬೇಸಿಗೆಯಲೂ ತಣ್ಣನೆಯ ಅನುಭವ
ತಂತು ನಿನ್ನ ಮಡಿಲ ತಾಯೊಲವು
ಜನ್ಮಾಂತರದ ನೆನಪಲಿ ಕಳೆದುಹೋದೆ
0832ಪಿಎಂ02102021
ಇಬ್ಬನಿ ಮೆತ್ತಿದ ಪ್ರಕೃತಿಯಲ್ಲಿ
ಮೂಡಿದೆ ಚಂದದ ಸೂರ್ಯೋದಯ
ಮರಗಿಡಗಳ ತಲೆ ನೇವರಿಸಿ
ಹೇಳಿವೆ ಕಿರಣಗಳು ಬೆಳಗಿನ ಶುಭಾಶಯ
ಬಿರಿದ ಮೊಗ್ಗಿಗೆ ಅರಳುವ ಸಂಭ್ರಮ
ಉಲಿವ ಹಕ್ಕಿಗಳ ಗಾನ ಅನುಪಮಾ
ಇರುಳ ಸರಿಸಿ ಬೆಳಕ ಹರಿಸಿ
ಜಗಕೆ ನೀಡಿದೆ ನವಚೇತನ
ಹಸಿರು ಉಸಿರಿಗೆ ನೀಡಿ ಹೊಸತನ
ನಿಸರ್ಗದ ಮನೆಯಾಯಿತು ಚೆಲುವ ತಾಣ
ಬದುಕಿನ ಹೊಸಪಾಠಗಳ ಅನುಭವವಿತ್ತು
ಮುಂಜಾನೆ ಇದು ಬಲು ಮೋಹಕವೆನಿಸಿತು
ಖಗ ಮೃಗಗಳ ಲವಲವಿಕೆಗೆ
ಎಣೆ ಇಲ್ಲವೋ ಈಗ
ನೆರಳು-ಬೆಳಕಿನ ಆಟದಲ್ಲಿ
ಬಾಳು ನಡೆಸುವ ಸುಯೋಗ
ಕವಿ ಭಾವಕೆ ನೀಡಿತು ಪ್ರೇರಣೆ
ಪ್ರಕೃತಿಯ ಈ ಬದಲಾವಣೆ
ಮನುಜನಾಸೆಯ ಗೌಣವಾಗಿಸಿ
ಬೆಳಗಾಯಿತು ಬದುಕ ರಮ್ಯವಾಗಿಸಿ
0633ಎಎಂ04102021
*ಅಪ್ಪಾಜಿಸುಧ ಮುಸ್ಟೂರು
*ಅಸುಮು*
ಹೀಗೆ ಆಗಬಾರದಿತ್ತು
ಅಂದುಕೊಂಡದ್ದೇ ಒಂದು
ನಡೆಯುವುದೇ ಇನ್ನೊಂದು
ಬೆಳ್ಳಗೆ ಇರುವುದೆಲ್ಲ ಹಾಲಲ್ಲ
ಸುಣ್ಣದ ನೀರೂ ಹಾಲಾಹಲವೂ
ಬಿಳಿಯಾಗಿರುವುದು ತಿಳಿಯಿರೆಲ್ಲ
ನಂಬಿಕೆಗೆ ಅರ್ಹರಾರಿಲ್ಲ ಇಲ್ಲಿ
ನಂಬಿದ ಯಾರೂ ಒಳ್ಳೆಯವರಲ್ಲ
ಹರಕೆಗೆ ಸಿಂಗರಿಸಿ ತಂದ ಕುರಿಯಂತೆ
ಕತ್ತು ಕತ್ತರಿಸುವರು ಮೋಸದವರು
ಎಚ್ಚರಿಕೆಯಿಂದ ಮುನ್ನಡೆಯಬೇಕು
ಯಾಮಾರಿದರೆ ಅಸ್ತಿತ್ವ ಇಲ್ಲದಂತಾಗಿಸುವರು
ನಿಯತ್ತಿಲ್ಲದ ನರರಿಗಿಂತ
ಕ್ರೂರ ಪ್ರಾಣಿಗಳೇ ಗುಣದಲಿ ಮೇಲು
0755ಪಿಎಂ04102021
*ಅಪ್ಪಾಜಿ ಸುಧಾ ಮುಸ್ಟೂರು*
ಇರುವುದೊಂದೇ ಬದುಕು
ಆತುರವು ಬೇಡ
ಅಡಿಯಿಡುವ ಮೊದಲು
ಅರಿತು ಹೆಜ್ಜೆ ಇಡಬೇಕು
ಎಡವಿ ಬೀಳಿಸುವ ಕಾತುರ ಬದುಕಿಗೆ
ಎದ್ದು ಬೀಗುವ ಛಲವಿರಲಿ ನಿನಗೆ
ನಡೆವ ಕಾಲಿಗೆ ಅಡ್ಡಗಾಲಗುವ ಜನರುಂಟು
ಎಚ್ಚರಿಕೆಯಿಂದ ಬಚಾವಾಗಬೇಕು
ಸೋತು ಗೆಲ್ಲಬೇಕು ಜೀವನದಿ
ಎಂದೂ ಗೆದ್ದು ಸೋಲಬಾರದು
ಪ್ರತಿ ಕ್ಷಣದ ಆಸ್ವಾದನೆಯಲಿ
ಆಹ್ಲಾದಕತೆ ತುಂಬಿರಲಿ
ನಾಳೆಯ ಭರವಸೆಯೊಂದಿಗೆ
0904ಪಿಎಂ06102021
*ಅಪ್ಪಾಜಿ ಸುಧಾ ಮುಸ್ಟೂರು*
ಗುಲಗಂಜಿಯಂತೆ ಈ ಜನ
ತನ್ನ ಕಪ್ಪನು ಮರೆತು
ಇನ್ನೊಬ್ಬರ ತಪ್ಪನು ಎತ್ತಿ ತೋರುವರು
ಹಾವಿನಂತೆ ಈ ಜನ
ಅಮೃತವ ಕೊಟ್ಟರೂ
ವಿಷವ ಕಾರಿ ಕೊಲ್ಲುವರು
ಬೆಂಕಿಯಂತೆ ಈ ಜನ
ಜ್ಯೋತಿಯಾಗಿ ಬೆಳಗಿದರೂ
ಕಿಡಿಯೆಬ್ಬಿಸಿ ಎಲ್ಲಾ ಸುಡ ವರು
ಮರುಭೂಮಿಯಂತೆ ಈ ಜನ
ಭಾವದ ಮಳೆ ಸುರಿಸಿದರೂ
ಸುಡುವ ಮರಳಲಿ ಸಮಾದಿಗೈವರು
ಶ್ವಾಸದಂತೆ ಈ ಜನ
ನಿಯತ್ತಿನಿಂದ ಬದುಕಿದರೂ
ಬೊಗಳುವ ಚಾಳಿಯುಳ್ಳವರು
ಕಪ್ಪಿಯಂತೆ ಈ ಜನ
ಎತ್ತಿ ಗುರಿಮುಟ್ಟಿಸರವರು
ಕಾಲೆಳೆದು ಕುಪ್ಪಳಿಸಿ ಕೆಡವುವರು
ಬದುಕಲೇ ಬೇಕು ಇಂಥವರ ಜೊತೆ
ಮರೆಯಬೇಕವರು ನೀಡಿದ ವ್ಯಥೆ
ವ್ಯಕ್ತಿತ್ವ ಅರಳಲು ಕಾಯುವುದು ನಿನ್ನ ನಿಯತ್ತೇ
0426ಎಎಂ07102021
*ಅಪ್ಪಾಜಿಸುಧಾ ಮುಸ್ಟೂರು*
ತೀರದ ಬಸಿರ ಹೊತ್ತು
ಪ್ರಸವವಾಗದ ವೇದನೆಯಲಿ
ಪರಿತಪಿಸುತಲಿರುವೆ
ಒಲವಿನ ಅಭಿಷೇಕಕೆ ಕಾದು
'ಬರ'ದ ಬೇಗೆಯಲಿ ನೊಂದು
ವಿರಹದಲಿ ಬೇಯುತಲಿರುವೆ
ಹರೆಯದ ಕರೆಗೆ ಬಾರದ ನಲ್ಲ
ಪ್ರೇಮದ ದಾಹವ ನೀಗಿಸಲಿಲ್ಲ
ಕಾಮಜ್ಯೋತಿ ಹಚ್ಚುವನಾರು
ಪ್ರೀತಿಯ ಹಂತದಲ್ಲಿ ಸೋತಿರಲು
ಖಾತ್ರಿಯಿಲ್ಲ ಅದನು ಪಡೆಯಲು
ಹೆಣ್ಣಣೆಗೆ ಭರವಸೆಯ ಮುತ್ತಿಕ್ಕುವನಾರು
ಕತ್ತಲು ಕಾಯುತ್ತಿದೆ ಬಯಕೆ ಹೆಚ್ಚುತಿದೆ
ನಲ್ಲನ ಆಲಿಂಗನ ಮರೀಚಿಕೆಯಾಗಿದೆ
ಒಲವಿನ ತವಕಕೆ ತಣ್ಣೀರೆರೆಚಿರುವೆ
ಒಲ್ಲದ ಬದುಕಿನಲಿ ಇಲ್ಲದ ನೆಮ್ಮದಿಯ
ಅರಸಿ ತಲ್ಲಣಗೊಂಡಿರುವೆ
ನಿರೀಕ್ಷೆಗಳಿಗೆ ತರ್ಪಣವಿಟ್ಟು
0930ಎಎಂ09102021
*ಅಪ್ಪಾಜಿ ಸುಧಾ ಮುಸ್ಟೂರು
#ಅಮುಭಾವದೂಟ 138
ಶಾಂತ ಕೊಳದೊಳಗೆ
ಕಲ್ಲೆಸೆದು ಖುಷಿಪಡುವರು
ಇತರರ ಬಾಳೊಳಗೆ ಬಂದು
ನೆಮ್ಮದಿ ಕೆಡಿಸೋ ಮನೆಮುರುಕರು
ಅಣ್ಣ ತಮ್ಮಂದಿರ ನಡುವೆ
ತಂದಿಕ್ಕಿ ಏನೂ ಆಗದಂತಿರುವರು
ಅಕ್ಕ ತಂಗಿಯರ ಎತ್ತಿಕಟ್ಟಿ
ನಡೆವ ಜಗಳ ನೋಡಿ ಆನಂದಿಸುವರು
ನೆರೆಹೊರೆಯ ನಡುವೆಯಿರುವ
ಸಾಮರಸ್ಯ ಕದಡಿ ಹೋಗುವರು
ಊರಿಗೂರೆ ಹೊತ್ತಿ ಉರಿಯುವಾಗ
ಚಳಿಗಾಲ ಕಾಯಿಸಿಕೊಳ್ಳುವ ಸಮಯ ಸಾಧಕರು
ಎಲ್ಲೆಲ್ಲೂ ಅಶಾಂತಿ ತುಂಬುವ
ಬೆಣ್ಣೆಯೊಳಗೆ ಸೇರಿದ ಕೂದಲಿವರು
ಏನೇ ಆದರೂ ಏನೇ ಹೋದರು
ಸಂಕಷ್ಟಕ್ಕೆ ಸಿಲುಕಿದ ಕಿರಾತಕರು
ಪ್ರೀತಿಯ ಬದಲು ದ್ವೇಷ ಬಿತ್ತುವ
ಸ್ನೇಹದ ಬದಲು ದ್ರೋಹ ಬಗೆಯುವ
ಸಂಬಂಧಗಳ ಬಿರುಕಿಗೆ ಕಾರಣವಾಗುವ
ಇಂಥ ದುರುಳರ ದೂರತಳ್ಳಿ ನೆಮ್ಮದಿಯಿಂದ ಬಾಳಿ
0657ಎಎಂ10102021
*ಅಪ್ಪಾಜಿ ಸುಧಾ ಮುಸ್ಟೂರು*
Read my thoughts
ಅಸ್ತಿತ್ವಕ್ಕಾಗಿ ಹೋರಾಡಲೇ ಬೇಕು
ಸ್ವಾಭಿಮಾನಿಯಾಗಿಯೇ ಬದುಕಬೇಕು
ವಿರೋಧಿಸುವ ವಿಶ್ವದಲ್ಲಿ ಪಕ್ವವಾಗಬೇಕು
ಅವಮಾನದ ಅಡಕೊತ್ತಿಗೆ ಸಿಲುಕಿಯೂ
ನಮ್ಮ ತನವನುಳಿಸಿಕೊಂಡು ಬೆಳೆಯಬೇಕು
ತುಳಿಯುವ ನೂರು ಕಾಲಡಿ ಸಿಕ್ಕರೂ
ಗರಿಕೆಯಂತೆ ಮತ್ತೆ ಚಿಗುರಿ ಹಸಿರಾಗಬೇಕು
ಪ್ರತ್ಯಕ್ಷ ಕಾಣದೆಯೂ ಪ್ರಮಾಣಿಸಿ ನೋಡದ
ಜಗದೆದುರು ಪ್ರಾಮಾಣಿಕವಾಗಿ ಬಾಳಬೇಕು
ಮುಳ್ಳಿನಂತಹ ಜನರ ಚುಚ್ಚುಮಾತಿಗಂಜದೆ
ಹೂವಾಗಿ ಅರಳಿ ಸುತ್ತೆಲ್ಲ ಕಂಪು ಬೀರಬೇಕು
ಆಪಾದನೆಯ ಅಪಸ್ವರಗಳು ಬಂದಾಗಲೂ
ಅದಮ್ಯ ಆತ್ಮವಿಶ್ವಾಸದಿ ಎದುರಿಸಿ ನಿಲ್ಲಬೇಕು
ಗುರುತಿಸದ ಜನರೆದುರು ಎಲೆಮರೆಯ ಕಾಯಾಗಿಯೂ
ಸವಿ ಫಲವಾಗಿ ಜಗದ ಬಾಯ್ತಣಿಸಬೇಕು
ಏನಾದರೂ ಆಗಲಿ ಯಾರೇನೇ ಅನ್ನಲಿ
ನಮ್ಮಂತೆ ನಾವಿದ್ದು ಗೆದ್ದು ಬೀಗಬೇಕು
0920ಎಎಂ10102021
*ಅಪ್ಪಾಜಿ ಸುಧಾ ಮುಸ್ಟೂರು*
ನೀ ಬಿಟ್ಟು ಹೋದ
ದಾರಿಯತ್ತ ದೃಷ್ಟಿ ನೆಟ್ಟು
ಕಾದಿಹೆನು ಮತ್ತೆ ಬರುವೆ ಎಂದು
ನೋಡುವ ಕಣ್ಣೊಳಗೆ
ಧೂಳು ಸೇರಿ ಕಂಬನಿಯು
ಹೇಳಿತು ನೀ ಮತ್ತೆ ಬರಲಾರೆ ಎಂದು
ಬೇಡವಾಗಿದ್ದ ಬದುಕಿನೊಳಗೆ
ಆಗಂತುಕನಾಗಿ ಬಂದು ಹೀಗೆ
ಆಕಸ್ಮಿಕವಾಗಿ ಹೊರಟು ಹೋದೆ
ಬೇಕೆನಿಸಿದಾಗ ಕೈಗೆಟುಕದೆ
ಬರಿ ನೋವಿನ ಪ್ರವಾಹವನ್ನೇ
ಬಾಳಿಗುಡುಗೊರೆಯಾಗಿ ನೀಡಿದೆ
ಹೃದಯ ವೇದನೆಗೆ ಔಷಧವಿಲ್ಲ
ಮನದ ನೋವಿಗುಪಶಮನವಿಲ್ಲ
ಸಹಿಸಲೇ ಬೇಕು ಇರುವವರಿಗೆ