*೧•ಅಮ್ಮ ಎಂಬುದೇ*
ಅಮ್ಮನ ಕೈತುತ್ತೇ ಸ್ವರ್ಗದ ಸಂಪತ್ತು
ಅಮ್ಮನ ಸವಿಮುತ್ತೇ ಗೆಲ್ಲುವ ತಾಕತ್ತು /ಪ/
ಒಡಲಲಿ ಜಾಗವ ಕೊಡುವಾಗ
ತಾಯಿಯ ಋಣದ ಆರಂಭ
ಅಮ್ಮನೊಲವಿನ ಆಳದಲಿ
ಮೀಯುವುದೇ ನಮಗೆ ಜಂಭ
ಜಗವೇ ಸೋತಿದೆ ಅವಳ ಪ್ರೀತಿಗೆ
ಮಗುವ ಮುಗ್ಧತೆಯಿದೆ ಅವಳ ಮಾತಿಗೆ /೧/
ನೋವಲೂ ನಲಿವಲೂ ಅಮ್ಮ
ಎಂದರೆ ಎಲ್ಲಾ ನೋವು ಮಾಯ
ಕನಸಲೂ ಮನಸಲೂ ಅಮ್ಮ
ಎನ್ನದೆ ಸರಿಯದು ನಮ್ಮ ಸಮಯ
ಅಮ್ಮ ಎಂಬುದೇ ಸಂಸ್ಕಾರ
ಅಮ್ಮ ತೋರಳು ಎಂದೂ ಅಧಿಕಾರ /೨/
ಹಸಿವಿಗೆ ಅಮ್ಮನ ಕೈತುತ್ತು
ದೂರ ತಳ್ಳುವುದೆಲ್ಲಾ ಆಪತ್ತು
ಅಮ್ಮನಿಗಾಗಿ ಮಿಡಿಯುವ ಜೀವ
ಕವಿತೆಯ ಹಡೆಯಿತು ಕವಿಭಾವ
ಅಮ್ಮ ಎಂದರೆ ಸೋಲಿಲ್ಲ
ಅಮ್ಮನ ಮರೆತರೆ ಬದುಕಿಲ್ಲ /೩/
೦೭೨೧ಎಎಂ೧೨೦೯೨೦೧೭
*ಅಮುಭಾವಜೀವಿ*
No comments:
Post a Comment