Friday, September 29, 2017
ಕಥೆ: *ಆ ನೆನಪುಗಳು*
*ನನ್ನ ಮೊದಲ ಪ್ರಯತ್ನ ದಯವಿಟ್ಟು ತಿದ್ದಿ ತೀಡಿ ಆಶೀರ್ವದಿಸಿ*
"ಜೀವನ ಏರು ಪೇರಿನಾ ಗಾಯನ" ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಸುಶ್ರಾವ್ಯ ಗೀತೆಯನ್ನು ಕೇಳುತ್ತಾ ಹಾಗೆ ಮಲಗಿಕೊಂಡವನ ಭಾವಲಹರಿ ಅವನ ಕಾಲೇಜಿನ ದಿನಗಳತ್ತ ಹೊರಳಿತು. ನಿಜಕ್ಕೂ ಬದುಕಿನ ಅತ್ಯಂತ ಸಂಭ್ರಮದಿಂದ ಸಂತೋಷವನ್ನು ಆಸ್ವಾದಿಸುವ ವಯಸ್ಸು ಅದು.ಕಾಲೇಜಿನ ಗೆಳೆಯ ಗೆಳತಿಯರ ಒಡನಾಟದಲ್ಲಿ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಪರ್ವ ಕಾಲವದು.ಬಾಲ್ಯದ ಗೆಳೆಯರನ್ನೆಲ್ಲಾ ಮತ್ತೊಮ್ಮೆ ಕೂಡಿಕೊಳ್ಳುವ ಸದಾವಕಾಶ ಹಾಗೂ ಹೊಸ ಗೆಳೆಯ ಗೆಳತಿಯರೊಂದಿಗೆ ಹೊಸ ಬಂಧ ಹುಟ್ಟಿಕೊಳ್ಳುವ ಸುಸಮಯ.
ಅರುಣ್ ಮಧ್ಯಮವರ್ಗದ ಕುಟುಂಬದಿಂದ ಬಂದವನು. ಆದ್ದರಿಂದ ಅವನಲ್ಲಿ ಗರ್ವಕ್ಕಿಂತ ವಿನಯಕ್ಕೆ ಹೆಚ್ಚು ಆದ್ಯತೆ. ತನ್ನಲ್ಲಿ ವಿದ್ವತ್ ಇದ್ದರೂ ಅದನ್ನೆಂದೂ ಅಹಂಕಾರವಾಗಿ ಬಳಸಿಕೊಳ್ಳದ ಚತುರ.ತನ್ನ ಸ್ನೇಹಿತರನ್ನು ಜಾತಿ ಧರ್ಮಗಳಿಗೆ ಪ್ರೀತಿಸುವ ಮಾನವೀಯ ಗುಣಗಳು ಅವನಲ್ಲಿದ್ದವು.ಅದಕ್ಕಾಗಿಯೇ ಎಲ್ಲಾ ಸ್ನೇಹಿತರು ಅವನನ್ನು ಸೂಜಿಗಲ್ಲಿನಂತೆ ಅಂಟಿಕೊಂಡಿರುತ್ತಿದ್ದರು. ಅರುಣ್ ಬಡ ಕುಟುಂಬದಿಂದ ಬಂದುದಕ್ಕಾಗಿಯೇ ಏನೋ ದೂರದ ಊರಿನಲ್ಲಿದ್ದ ಕಾಲೇಜಿಗೆ ಸೇರಿಕೊಂಡನು. ಆದರೆ ಏಕೋ ಅವನಿಗೆ ಅಲ್ಲಿನ ವಾತಾವರಣ ಹಿಡಿಸಲಿಲ್ಲ.ತುಂಬಾ ಮಂಕಾಗುತ್ತಾ ಹೋದ. ಇದನ್ನು ಗಮನಿಸಿದ ಅವನ ಮಾವ ಮತ್ತೆ ತಾನು ಓದಿದ ಶಾಲೆಯಲ್ಲಿಯೇ ಇದ್ದ ಪ್ರಥಮ ಪಿಯುಸಿಗೆ ಸೇರಿಸಿದರು. ಅನಿವಾರ್ಯ ಕಾರಣಗಳಿಂದ ಮತ್ತೆ ತನ್ನ ಹುಟ್ಟೂರಿನ ಶಾಲೆಯಲ್ಲಿಯೇ ಓದುವ ಅವಕಾಶ ಒದಗಿಬಂತು. ಆಗ ಅರುಣ್ ಮತ್ತೆ ಮೊದಲಿನಂತೆ ಚುರುಕಾದ. ತನ್ನ ಗ್ರಾಮದ ಕಾಲೇಜಿನಲ್ಲಿ ಓದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಛಲ ತೊಟ್ಟು ಅದಕ್ಕಾಗಿ ಮೊದಲ ದಿನದಿಂದಲೇ ಕಾರ್ಯಪ್ರವೃತ್ತನಾದ.
ಅದು ಕಾಲೇಜಿಗೆ ಬಂದ ಹೊಸದರಲ್ಲಿ ಅದೇ ಶಾಲೆಯಲ್ಲಿ ಓದಿದ್ದರೂ ಎರಡು ಮೂರು ತಿಂಗಳ ನಂತರ ಬಂದಿದ್ದರಿಂದ ಹೊಸ ಜಾಗದಲ್ಲಿ ಹೊಸ ಸ್ನೇಹಿತರೊಂದಿಗೆ ಹೊಸತನವು ಚಿಗುರೊಡೆವ ಕಾಲ.ಬಾಲ್ಯದ ಕೆಲ ಸ್ನೇಹಿತರನ್ನು ಬಿಟ್ಟರೆ ಉಳಿದವರೆಲ್ಲ ಹೊಸಬರೇ ಆಗಿದ್ದರು.ಕಾಲೇಜಿಗೆ ಬಂದ ಮೊದಲ ದಿನ ಎಲ್ಲರ ಪರಿಚಯದ ಕಾರ್ಯಕ್ರಮವನ್ನು ಹಳೆಯ ಸ್ನೇಹಿತರು ನೆರವೇರಿಸಿದರು. ಹೀಗೆ ದಿನೇ ದಿನೇ ಕಾಲೇಜಿನ ವಿದ್ಯಾಭ್ಯಾಸ ಸಾಗುತ್ತಿತ್ತು.ಅರುಣ್ ಕೆಲವೇ ದಿನಗಳಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದ.ಯಾವೊಬ್ಬ ಸ್ನೇಹಿತನನ್ನು ನೋಯಿಸದೇ ಜನಾನುರಾಗಿಯಾದ.
ಅರುಣ್ ಓದಿನಲ್ಲಿ ಸದಾ ಮುಂದು. ಇವನ ಹಿಂದೆ ಅವನ ಗೆಳೆಯರ ದಂಡು. ಹೀಗಿದ್ದರೂ ಕಾಲೇಜಿನಲ್ಲಿ ಅವನೆಂದೂ ಗುಂಪುಗಾರಿಕೆ ಮಾಡಿದವನಲ್ಲ.ಬದಲಾಗಿ ತನ್ನ ಆಪ್ತರೊಂದಿಗೆ ಸೇರಿ ಅಂದಂದಿನ ಪಾಠಗಳ ಕುರಿತಾದ ಚರ್ಚೆಯಲ್ಲಿ ತೊಡಗಿಸಿಕೊಂಡು ತಾನೂ ಕಲಿಯುತ್ತ ಸ್ನೇಹಿತರನ್ನು ಕಲಿಕೆಯಲ್ಲಿ ಪಕ್ವಗೊಳಿಸುತ್ತಿದ್ದ ಪ್ರತಿಭಾನ್ವಿತ.
ಹೀಗೆ ಅರುಣ್ ತನ್ನ ಪಾಡಿಗೆ ತಾನು ಕಲಿಕೆಯಲ್ಲಿ ಪ್ರಗತಿ ಹೊಂದುತ್ತ ಉಪನ್ಯಾಸಕರು ಪ್ರಾಂಶುಪಾಲರು ಏಕೆ ಇಡೀ ಕಾಲೇಜಿನ ಜವಾನರಲ್ಲೂ ಮನೆಮಾತಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾಭ್ಯಾಸದ ವಿಷಯದಲ್ಲಿ ಅವನನ್ನು ಸರಿಗಟ್ಟುವವರಿದ್ದಿಲ್ಲ.ಬಡತನ ಎನ್ನುವುದು ಅವನಿಗಿಂತಹ ಸಂಸ್ಕಾರವನ್ನು ಕಲಿಸಿತ್ತು.ಹೀಗಿರುವಾಗ ಅದೇ ಕಾಲೇಜಿನಲ್ಲಿ ಇವನ ಪ್ರತಿಸ್ಪರ್ಧಿ ಎಂದರೆ ರಶ್ಮಿ ಎಂಬ ಸೌಂದರ್ಯವತಿ. ತನ್ನ ತಂದೆ ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು.ಆಕೆಗೆ ಯಾವುದಕ್ಕೂ ಕೊರತೆಬಾರದಂತೆ ಸಾಕಿದ್ದರು. ಅವಳು ಸಹ ಬುದ್ದಿವಂತೆ. ಆದರೆ ಅರುಣನನ್ನು ಸರಿಗಟ್ಟಲಾಗುತ್ತಿರಲಿಲ್ಲ. ಅವಳೊಮ್ಮೆ ಉಪಾಧ್ಯಾಯರಲ್ಲಿ ಹೇಳಿಕೊಳ್ಳುತ್ತಿದ್ದಳಂತೆ," ಸರ್ ನಾನು ಎಷ್ಟೇ ಓದಿದರೂ ಅವನನ್ನು ಸರಿಗಟ್ಟಲಾಗುತ್ತಿಲ್ಲ. " ಅಂತ ಆದರೆ ಅವನೇನು ಪುಸ್ತಕದ ಹುಳುವಾಗಿರಲಿಲ್ಲ. ಬದಲಾಗಿ ಕಷ್ಟಪಟ್ಟು ಓದುವ ಛಲ ಉಳ್ಳವನಾಗಿದ್ದ.
ಹೀಗೆ ಅವನ ಕಲ್ಪನಾ ಲಹರಿ ಸಾಗುತ್ತಿತ್ತು. ಅಷ್ಟರಲ್ಲಿ ಅವನ ರೂಮ್ ಮೇಟ್ 'ಅಪ್ಪ ಮಾರಾಯ ಕನಸು ಕಂಡಿದ್ದು ಸಾಕು, ಈಗ ಊಟಕ್ಕೆ ಸಮಯ ಆಗಿದೆ ಬಾರೋ ' ಎಂದಾಗಲೇ ಅವನಿಗೆ ಎಚ್ಚರ ಆಗಿದ್ದು. ' ಓಹ್ ! ಕ್ಷಮೆ ಇರಲಿ ಕಣೋ, ನನ್ನ ಬಾಲ್ಯದ ಗುಂಗಲ್ಲಿ ಮುಳುಗಿಹೋಗಿದ್ದೆ. ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡು' ಎನ್ನುತ್ತಾ ಬೇಗನೇ ಎದ್ದು ಫ್ರಶಪ್ ಆಗಿ ಊಟಕ್ಕೆ ಹೋಗಿ ಬಂದರು. ಮತ್ತೆ ಅವನ ಸ್ನೇಹಿತ ರಾತ್ರಿ ಪಾಳಿಯ ಕೆಲಸಕ್ಕೆ ಹೊರಟುಹೋದ ಮತ್ತೆ ಇವನ ತನ್ನ ಕಲ್ಪನೆಯಲಿ ಮುಳುಗಿದ.
*ಮುಂದುವರೆಯುವುದು*
Subscribe to:
Post Comments (Atom)
No comments:
Post a Comment