🔖ಅಬ್ರಹಾಂ ಲಿಂಕನ್ ತನ್ನ ಮಗನನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ ಹೀಗಿತ್ತು
🔖ಆತ್ಮೀಯ ಶಿಕ್ಷಕ ಬಂಧುಗಳೇ,.
🔖ಇದು ನನ್ನೊಂದಿಗೆ ಹುಟ್ಟಿಕೊಂಡ ಕನಸುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ…..
🔖ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. 🔖“ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿ ನೀನು ಓದಲಿಕ್ಕೆ ಬಂದಿದ್ದೀಯ….” ಎಂದು ದಯವಿಟ್ಟು ಹೇಳಿಕೊಡಬೇಡಿ.
🔖ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖುಷಿಯಿಂದ, ಹೆಮ್ಮೆಯಿಂದ ನಿಷ್ಟೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ.
🔖ಅವನಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ, ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ.
🔖ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ.
🔖ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಯಿಂದ ಇರುವುದನ್ನು ಹೇಳಿಕೊಡಿ, ನೋವಿನಲ್ಲೂ ನಗುವುದನ್ನು ಕಲಿಸಿ.
🔖ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ.
🔖ಸಾಧ್ಯವಾದರೆ ಅವನಿಗೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ, ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಾಗಿ ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ. 🔖ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ.
ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ, ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ.
🔖ಅನ್ಯಾಯ ಮಾಡಿ ಗಳಿಸುವುದಕ್ಕಿಂತ, ಒಬ್ಬರಿಗೆ ನೋವು ಮಾಡಿ ಪಡೆಯುವುದಕ್ಕಿಂತ ಪ್ರಾಮಾಣಿಕತೆಯಿಂದ ಸಾಧಿಸಲು ತಿಳಿಸಿ.
🔖ಜೀವನ ತುಂಬಾ ಸುಂದರವಾಗಿದೆ ಎಂಬುದನ್ನು ಹೇಳಿಕೊಡಿ.
🔖ಪ್ರತಿ ಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ಅವನು ತಿಳಿಯಲಿ.
🔖ಹೆಣ್ಣನ್ನು ಗೌರವಿಸುವ, ದೀನ ದುರ್ಬಲರನ್ನು, ವಯೋ ವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿ, ಕಷ್ಟದಲ್ಲಿ, ನೋವಿನಲ್ಲಿರುವವರ ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ.
🔖ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ.
🔖ನಾನು ಅವನನ್ನು ಒಬ್ಬ ಡಾಕ್ಟರ್, ಎಂಜಿನಿಯರ್, ಉನ್ನತ ಅಧಿಕಾರಿಗಿಂತ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಾಣ ಬಯಸುತ್ತೇನೆ.
💐ಅವನಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ…
Sunday, June 23, 2019
ಅಬ್ರಹಾಂ ಲಿಂಕನ್ ಪತ್ರ
Saturday, June 22, 2019
ಸವಿನೆನಪುಗಳು ಬೇಕು ಸವೆಯಲು ಈ ಬದುಕು ಎನ್ನುವ ಮಾತಿನಂತೆ ಸವಿ ಕ್ಷಣಗಳನ್ನು, ಮಾಯದ ಗಾಯ ಮಾಡಿದ ಕ್ಷಣಗಳನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಸವಿ ಕ್ಷಣಗಳನ್ನು ಮೆಲುಕು ಹಾಕುವ ಅದೆಷ್ಟು ಹಾಡುಗಳು ನಮ್ಮ ಬದುಕನ್ನು ಸಮಸ್ಥಿತಿಗೆ ತರುತ್ತವೆ. ನಮ್ಮ ಖುಷಿ ಹಾಗೂ ನೋವಿನ ಸಂದರ್ಭದಲ್ಲಿ ಇನ್ನಿಲ್ಲದಂತೆ ಕಾಡುವ ಹಾಡುಗಳು ನಮ್ಮ ಬದುಕಿನ ಭಾರವನ್ನು ಕಡಿಮೆ ಮಾಡುತ್ತವೆ. ಅಂತಹ ಹಾಡುಗಳಲ್ಲಿ ನನ್ನ ಮನಸ್ಸಿಗೆ ಮುಟ್ಟಿದ ಹಾಡುಗಳು ಕೆಲವು ಇವೆ.
ಮೊದಲನೆಯದಾಗಿ ಬಂಗಾರದ ಮನುಷ್ಯ ಚಿತ್ರದ *ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ* ಈ ಗೀತೆ ನನಗೆ ತುಂಬಾ ಅಚ್ಚುಮೆಚ್ಚು. ಬದುಕಿನ ಏಳುಬೀಳುಗಳಲ್ಲಿ ಸೋಲನ್ನು ಕಾಣುವ ಕ್ಷಣದಲ್ಲಿ ಒಮ್ಮೆ ಈ ಹಾಡನ್ನು ನೆನಪಿಸಿಕೊಂಡರೆ ಮತ್ತೆ ಗೆಲ್ಲುವ ಆತ್ಮವಿಶ್ವಾಸ ಮೂಡುತ್ತದೆ. ಭರವಸೆ ಮೂಡಿಸುವ ಇಂತಹ ಗೀತೆ ನಮ್ಮ ಬದುಕಿನ ಸೋಲನ್ನು ಗೆಲುವಾಗಿ ಸಿಕೊಳ್ಳಲು ಎಂತಹ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಈ ಹಾಡಿನ ಸ್ಪೂರ್ತಿಯಿಂದ ನನ್ನ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಎದೆಗುಂದದೆ ತಾಳ್ಮೆಯಿಂದ ಎದುರಿಸಿ ಗೆದ್ದ ಉದಾಹರಣೆಗಳಿವೆ. ಎಲ್ಲದಕ್ಕೂ ಕಾಲದ ಉತ್ತರವಿದೆ ಆದರೆ ಅಲ್ಲಿಯವರೆಗೂ ಕೈಕಟ್ಟಿಕೂರದೇ ನಮ್ಮ ಪ್ರಯತ್ನ ಮಾಡುತ್ತ ಇದ್ದರೆ ಬದುಕು ಉತ್ತರ ಕೊಡುತ್ತದೆ.
ಎರಡನೆಯದಾಗಿ ನನಗಿಷ್ಟವಾದ ಹಾಡು ನಂಜುಂಡಿ ಕಲ್ಯಾಣ ಚಿತ್ರದ ಡಾಕ್ಟರ್ ರಾಜಕುಮಾರ್ ಹಾಡಿರುವ *ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ದ್ವೇಷ ಇರುವಾಗ* ಈ ಹಾಡು ನಮ್ಮ ಬಾಂಧವ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು, ಪರಸ್ಪರ ಸಂಬಂಧಗಳಲ್ಲಿ ಪ್ರೀತಿಯ ಕೊರತೆಯಿಂದ ಆಗುವ ಅನಾನುಕೂಲಗಳನ್ನು ತುಂಬಾ ಚೆನ್ನಾಗಿ ಉದಯ ಶಂಕರರು ಬರೆದಿದ್ದಾರೆ. ನಾನು ಸದಾ ಗುನುಗುವ ಗೀತೆಗಳಲ್ಲಿ ಇದು ಒಂದು. ನಮ್ಮ ಬದುಕಿನಲ್ಲಿ ಪ್ರತಿ ಮಜಲುಗಳಲ್ಲಿ ಅನೇಕ ಸಂಬಂಧಗಳು ಬಂದು ಹೋಗುತ್ತವೆ. ಆ ಸಂಬಂಧಗಳಲ್ಲಿ ಪ್ರೀತಿ , ಸ್ನೇಹ, ವಿಶ್ವಾಸ , ನಂಬಿಕೆಗಳನ್ನು ಉಳಿಸಿಕೊಂಡಾಗ ಬದುಕು ಸುಂದರವಾಗುತ್ತದೆ. ನನ್ನ ಜೀವನದಲ್ಲಿ ಬಂದ ಆದೆಷ್ಟೋ ಸಂಬಂಧಗಳನ್ನು ಅದೇ ಪ್ರೀತಿ ನಂಬಿಕೆ ವಿಶ್ವಾಸಗಳಿಂದ ಉಳಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿರುವೆ. ನನ್ನ ಜೀವನದಲ್ಲಿ ನನ್ನನ್ನು ದ್ವೇಷಿಸುವವರನ್ನು ಪ್ರೀತಿಸುವ ಮನಸ್ಥಿತಿಯನ್ನು ಕಾಪಾಡಿಕೊಂಡು ಬರಲು ಈ ಹಾಡು ನನ್ನನ್ನು ಪದೇ ಪದೇ ನೆನಪಿಸುತ್ತಿರುತ್ತದೆ.
ಮೂರನೇ ಗೀತೆ ಓ ಮಲ್ಲಿಗೆ ಚಿತ್ರದ *ಮಲಗು ಮಲಗು ಚಾರುಲತೆ* ನನಗೆ ಅತ್ಯಂತ ಇಷ್ಟವಾದ ಅರ್ಥಪೂರ್ಣ ಕವಿತೆ.
*ಎತ್ತಣ ಭೂಮಿಯ ಬಂಗಾರ*
*ಎತ್ತಣ ಮುತ್ತದು ಕಡಲೂರ*
*ಸೇರಿಸಿ ಪೋಣಿಸೋ ಮಣಿ ಹಾರ*
*ಸೃಷ್ಟಿಯ ಸುಂದರ ಸಂಸಾರ*
*ನೀನೆಲ್ಲೋ ನಾನೆಲ್ಲೋ ಇದ್ದವರು*
*ಈಗೊಂದು ಸೂರಡಿ ಸೇರಿದೆವು*
ಈ ಸಾಲುಗಳಲ್ಲಿ ಆದೆಂತ ಅಗಾಧ ಅರ್ಥ ಇದೆ. ಭೂಮಿಯ ಆಳದಲ್ಲಿರುವ ಬಂಗಾರ ಮತ್ತು ಸಾಗರದಾಳದಲ್ಲಿ ಇರುವ ಮುತ್ತು ಎರಡು ಸೇರಿದಾಗ ಒಂದು ಸುಂದರ ಹಾರ ಆಗುವಂತೆ ನನ್ನ ಜೀವನವನ್ನು ಒಮ್ಮೆ ತಿರುಗಿ ನೋಡಿದಾಗ ನನ್ನ ಬದುಕಿನಲ್ಲಿ ಬಂದ ಎಷ್ಟೋ ಜನ ಯಾರ್ಯಾರೋ ಎಲ್ಲೆಲ್ಲೋ ಇದ್ದವರು ಇಂದು ನಾವೆಲ್ಲಾ ಸ್ನೇಹಿತರಾಗಿ ಇರುವುದು , ಮುಖ ನೋಡದಿದ್ದರು ಒಬ್ಬರಿಗೊಬ್ಬರು ಆತ್ಮೀಯರಾಗಿ ವ್ಯವಹರಿಸುತ್ತಿರುವುದು ನಾವು ಎಲ್ಲೇ ಇದ್ದರೂ ಹೇಗೆ ಇದ್ದರೂ ಒಂದೇ ಮನೋಭಾವವನ್ನು ಹೊಂದಿರುವುದು ಬದುಕಿನ ಚೆಲುವನ್ನು ಹೆಚ್ಚಿಸಿದೆ. ಮುಂದುವರೆದಂತೆ
*ಬಾಳ ಪಯಣದ ಹಾದೀಲಿ*
*ಅಲ್ಲಲ್ಲಿ ನೂರಾರು ನಿಲ್ದಾಣ*
*ನೆನಪನ್ನು ಬಿಟ್ಟು ಹೋಗೋ ಪಯಣಿಗರ* *ಜೊತೆಯಲ್ಲಿ ಏನೆಲ್ಲ ಸಂಧಾನ*
ಎಂಥಹ ಅರ್ಥಪೂರ್ಣ ಸಾಲುಗಳಿವು. ಬದುಕಿನ ದಾರಿಯನ್ನು ಸವೆಸುವಾಗ ಈ ಪಯಣಕ್ಕೆ ಜೊತೆಯಾದವರು ಅದೆಷ್ಟೋ ಜನ ಹೀಗೆ ಬಂದು ಹಾಗೆ ಹೋಗುತ್ತಾರೆ ಮತ್ತೆ ಕೆಲವರು ನಮ್ಮ ಮನಸ್ಸಿನಾಳದಲ್ಲಿ ಉಳಿದಿರುತ್ತಾರೆ. ಅವರುಗಳ ಆ ನೆನಪುಗಳೇ ನಮ್ಮ ಬದುಕಿನ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಎನರ್ಜಿ ಬೂಸ್ಟರ್. ಜೊತೆಯಲ್ಲಿ ಬಂದವರು ನಿಲ್ದಾಣ ಬಂತೆಂದು ಇಳಿದುಹೋಗುತ್ತಾರೆ ಮತ್ತೆ ಹೊಸಬರು ಹತ್ತಿ ಕೋರುತ್ತಾರೆ. ಅವರೆಲ್ಲರೊಂದಿಗೆ ನಮ್ಮ ಬಾಂಧವ್ಯ ಬೆಳೆಸಿಕೊಂಡು ಬದುಕಿನ ಅಸಹಾಯಕತೆಯನ್ನು ಸ್ನೇಹದ ಸಹಾಯ ಹಸ್ತ ಚಾಚಿದಾಗ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಸ್ನೇಹ-ಬಾಂಧವ್ಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿರುತ್ತದೆ.
ಒಟ್ಟಿನಲ್ಲಿ ಇಂತಹ ಅನೇಕ ಹಾಡುಗಳು ನನ್ನ ಬದುಕಿನಲ್ಲಿ ನನ್ನನ್ನು ಸೋಲನ್ನು ಒಪ್ಪಿಕೊಳ್ಳದೆ ಸದಾ ಭರವಸೆಯ ಆತ್ಮವಿಶ್ವಾಸವನ್ನು ಮೂಡಿಸುತ್ತಾ ಬದುಕಿನ ಸವಿ ಕ್ಷಣಗಳನ್ನು ಆಸ್ವಾದಿಸುತ್ತಾ ನೆಮ್ಮದಿಯಿಂದ ಬದುಕಲು ಪ್ರೇರಣೆಯಾಗಿವೆ. ಅದೆಷ್ಟೋ ಸಂದರ್ಭಗಳಲ್ಲಿ ಬದುಕಿನ ದಾರಿಯನ್ನು ಬದಲಿಸಿ ಸರಿದಾರಿಗೆ ತಂದು ಗುರಿ ಮುಟ್ಟಿಸುವ ಮಹತ್ತರವಾದ ಕೆಲಸವನ್ನು ಎಷ್ಟು ಹಾಡುಗಳು ಮಾಡಿವೆ. ಅದೆಷ್ಟೋ ಹಾಡುಗಳು ನನ್ನ ಬದುಕನ್ನು ರೂಪಿಸಿವೆ. ಇಂದು ಇಡೀ ಬದುಕಿನ ಆ ಎಲ್ಲಾ ಸವಿ ಕ್ಷಣಗಳನ್ನು ಮೆಲಕು ಹಾಕಲು ಅನುವು ಮಾಡಿಕೊಟ್ಟ ನಮ್ಮೆಲ್ಲ ಪ್ರೀತಿಯ ಗಣೇಶ್ ಸರ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ
ಧನ್ಯವಾದಗಳು
*ಅಮು ಭಾವಜೀವಿ*
1. ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ.
2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು ಪಡೆಯುವುದು.
3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ),
4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. ನಂಬಿಕಸ್ಥ ಗೆಳೆಯ. ಆಪತ್ತಿನ ಸಮಯದಲ್ಲಿ ಜೊತೆಗಿರುವ ಜೊತೆಗಾರ.
5. ತಂದೆ ತನ್ನ ಆದಾಯ ಹೆಚ್ಚು ಹಣವನ್ನು ಖರ್ಚು ಮಾಡುವುದು ಮಗಳಿಗಾಗಿಯೇ…!
6. ಎಂತಹ ಸಂದರ್ಭದಲ್ಲೂ ತಂದೆಯೇ ಮಗಳಿಗೆ ರಕ್ಷಣೆ. ರಕ್ಷಣೆ ವಿಷಯದಲ್ಲಿ ತಾಯಿಗಿಂತ ತಂದೆ ಎಚ್ಚರವಹಿಸುತ್ತಾನೆ.
7. ಮಗನ ಮೇಲೆ ತೋರಿಸುವ ಕೋಪಕಿಂತ ಮಗಳ ಮೇಲೆ ಮಗಳ ಮೇಲೆ ತೋರಿಸುವ ಕೋಪ ತುಂಬಾ ಕಡಿಮೆ ಎಂದು ಹೇಳಬಹುದು.
8. ಗಂಡು ಮಕ್ಕಳ ಮೇಲೆ ಕೈ ಮಾಡಿರಬಹುದು. ಆದರೆ ಮಗಳ ಮೇಲೆ ಒಂದು ಏಟೂ ಹಾಕದ ತಂದೆಯರು ಇದ್ದಾರೆ.
9. ಮಗಳು ಏನಾದರೂ ಕೇಳಿದರೆ ಇಲ್ಲ ಎನ್ನದ ಒಂದೇ ಒಂದು ಜೀವಿ “ಅಪ್ಪ”
10. ಹೊರಗಡೆ ಹೋದಾಗ ತಡವಾದರೆ ಎಷ್ಟೊತ್ತಾದರೂ ತನಗಾಗಿ ಕಾಯುವವ ತಂದೆಯೊಬ್ಬನೇ.
11. ವಯಸ್ಸಿಗೆ ಬಂದಾಗ ಪ್ರೀತಿ ಎಂದರೇನು? ಆಕರ್ಷಣೆ ಅಂದರೆ ಏನು? ಎಂದು ನಿಧಾನವಾಗಿ ಅರ್ಥಮಾಡಿಸುವುದು ತಂದೆಯೊಬ್ಬನೇ
.12. ಮಗಳು ಎಂತಹದೇ ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದರೂ ಅದರಿಂದ ಹೊರತರುವುದು ತಂದೆ ಮಾತ್ರ.
13. ತಾಯಿ ಕೈತುತ್ತು ಕೊಟ್ಟು ಎಷ್ಟೇ ಚನ್ನಾಗಿ ನೋಡಿಕೊಂಡರೂ ಮಗಳಿಗೆ ಧೈರ್ಯ ತುಂಬುವುದು ತಂದೆನೇ.
14. ತಂದೆಗೆ ತನ್ನ ಮಗಳ ಜೀವನದ ಬಗ್ಗೆ ಸ್ವಲ್ಪ ಹೆಚ್ಚಿನ ಭಯವಿರುತ್ತದೆ. ಅದು ಭಯ ಅಲ್ಲ ಆಕೆಯ ಮೇಲೆ ತೋರಿಸುವ ಪ್ರೀತಿ, ಆಕ್ಕರೆ.
15. ಒಂದು ಹುಡುಗಿಯ ಜೀವನದಲ್ಲಿ ತಂದೆ ಎಂಬುವನು ಒಬ್ಬ ಸ್ನೇಹಿತ, ದಾರಿತೋರಿಸುವ ದೇವರು.
16. ಏನೇ ತಪ್ಪು ಮಾಡಿದರೂ ಎದೆಯಲ್ಲಿಟ್ಟುಕೊಂಡು ಕಾಪಾಡುವ ಕಾವಲುಗಾರ. ಒಬ್ಬ ಹೀರೋ, ಒಬ್ಬ ಆತ್ಮೀಯ.
“ಇಂತಹ ತಂದೆಯನ್ನು ಯಾವ ಮಗಳಾದರೂ ಇಷ್ಟಪಡುವುದರಲ್ಲಿ ಆಶ್ಚರ್ಯವಿಲ್ಲ”
ಸಂಗ್ರಹ ಮಾಹಿತಿ
*ಬಾಳು ಬೆಳಗಿತು*
ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿದೆ.. ಎದೆಯಲ್ಲಿ ನೋವು ಅಟ್ಟಹಾಸದಿಂದ ನಗುತಿದೆ. ಬದುಕು ಬೀದಿಗೆ ಬಂದು ಬಿದ್ದಿದೆ. ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಆಸರೆ ಎಂದು ತಿಳಿದ ಮರ ಅಪ್ಪಳಿಸಿ ಬದುಕನ್ನೇ ಭೀಕರವಾಗಿಸಿತು. ಅವಳ ಮೂಕ ಕ್ರೋಧನ ಯಾರಿಗೂ ಕಾಣುತ್ತಿಲ್ಲ . ಆದರೆ ಅವಳನ್ನು ಹತ್ತಿರದಿಂದ ಕಂಡವರು ಒಂದು ಕನಿಕರದ ಮಾತನಾಡಿ ಮುನ್ನಡೆಯುತ್ತಿದ್ದರು. ಯಾರು ಅವಳಿಗೆ ಆದ ಅನ್ಯಾಯಕ್ಕೆ ಪರಿಹಾರ ಕೊಡಿಸಲು ಶಕ್ತರಾಗಲಿಲ್ಲ.
ಸುಧಾ ಕಡು ಬಡತನದಲ್ಲಿ ಹುಟ್ಟಿದ ಅಂಗವಿಕಲತೆ ಹೊಂದಿದ ಪಾಪದ ಹುಡುಗಿ . ಬದುಕು ಎಷ್ಟೊಂದು ನಿಷ್ಕರುಣಿ ಆಗಿ ಅವಳನ್ನು ಭೂಮಿಯ ಮೇಲೆ ಬದುಕಿಸುತ್ತದೆ ಎಂದರೆ, ತಂದೆ-ತಾಯಿ ಇಬ್ಬರೂ ಏನೂ ಅರಿಯದ ಮುಗ್ಧರು. ಮೇಲಾಗಿ ಓದು-ಬರಹ ಗೊತ್ತಿರದ ಅನಕ್ಷರಸ್ಥರು. ಯಾರನ್ನಾದರೂ ಮಾಡಿಸಬೇಕು ಎಂದರೆ ದೂರ ನಿಂತು ದೇಹ ಬಾಗಿಸಿ ಕೈಕಟ್ಟಿಕೊಂಡು ನಿಲ್ಲುವಂಥ ಅಮಾಯಕರು. ಅಂದು ಕೂಲಿ ಹೋದರೆ ಮಾತ್ರ ಅವರಿಗೆ ಅವತ್ತಿನ ತುತ್ತಿನ ಚೀಲ ತುಂಬುತ್ತಿತ್ತು. ಇಲ್ಲವೆಂದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎನ್ನುವಷ್ಟು ಬಡತನ. ಹೀಗಿರುವಾಗ ಕಣ್ಣು ಕಾಣದ, ಮಾತು ಬಾರದ ಅಂಗವಿಕಲ ಮಗಳನ್ನು ಸಾಕುವುದು ಅವರಿಗೆ ಕಷ್ಟವಾದರೂ ಅವಳನ್ನು ಪ್ರೀತಿಯಿಂದ ಸಾಕುವ ಅವರ ಹೃದಯ ವೈಶಾಲ್ಯತೆಯನ್ನು ಮೆಚ್ಚಲೇಬೇಕು. ದುಡಿಯುವ ಅನಿವಾರ್ಯತೆಯಲ್ಲಿ ಮಗಳನ್ನು ಮನೆಯ ಮುಂದಿನ ಜಗುಲಿಯ ಮೇಲೆ ಬಿಟ್ಟು, ಅವಳಿಗೆ ಬೇಕಾದ ನೀರು ಊಟ ಹಾಸಿಗೆಗಳನ್ನು ಅವಳ ಗುರುತಿಗೆ ಇಟ್ಟು ಹೋಗುತ್ತಿದ್ದರು. ಹೀಗೆ ಬದುಕು ಸಾಗುತ್ತಿತ್ತು . ಯಾರಿಗೂ ತೊಂದರೆ ಬಯಸದ ಜೀವಗಳಿಗೆ ಆ ಒಂದು ಘಟನೆ ಭೂಮಿಯೇ ಬಾಯಿ ಬಿಟ್ಟಂತಾಗಿತ್ತು. ಬದುಕಿಗೆ ಬರಸಿಡಿಲು ಎರಗಿತ್ತು.
ಸುಧಾಳ ತಂದೆ-ತಾಯಿ ಇಬ್ಬರೂ ಶಿಕ್ಷಣದ ಗಂಧಗಾಳಿಯೂ ಗೊತ್ತಿಲ್ಲದ, ಹೊರಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಅರಿವಿಲ್ಲದ ಅಮಾಯಕರು. ಅವರಿಗೆ ಶಿಕ್ಷಣದ ಮಹತ್ವವೇ ಗೊತ್ತಿಲ್ಲ ಇನ್ನು ಅಂಗವಿಕಲೆಯಾದ ಮಗಳನ್ನು ಶಾಲೆಗೆ ಸೇರಿಸುವ, ಅವಳ ಬದುಕಿಗೆ ಶಿಕ್ಷಣದ ಶಕ್ತಿ ನೀಡುವ ಯೋಚನೆಯೂ ಅವರಿಗೆ ಬಂದಿರಲಿಲ್ಲ. ಏನೋ ತಮ್ಮದೇ ಊರಿನಲ್ಲಿದ್ದ ಚಿಕ್ಕ ಶಾಲೆಯಲ್ಲಿ ಕಾಟಾಚಾರಕ್ಕೆ ಮಗಳನ್ನು ಓದಿಸುತ್ತಿದ್ದರು." ಅಲ್ಲ ಕಣೋ ತಿಮ್ಮಯ್ಯ ನಿನ್ನ ಮಗಳಿಗೆ ಪಟ್ಟಣದಲ್ಲಿ ಅದಕ್ಕೆಂದೇ ಶಾಲೆಗಳಿವೆ. ಅಲ್ಲಿ ಇಂತಹ ಮಕ್ಕಳಿಗೆಂದೇ ಶಿಕ್ಷಣ ಊಟ ವಸತಿ ಎಲ್ಲವೂ ಇರುವ ವ್ಯವಸ್ಥೆಯ ಶಾಲೆಗಳಿವೆ. ನೀನೇಕೆ ಕರೆದುಕೊಂಡು ಹೋಗಿ ಅಲ್ಲಿ ಸೇರಿಸಬಾರದು" ಎಂದು ಅಲ್ಲಿನ ಶಾಲೆಯ ಗುರುಗಳು ಹೇಳಿದ್ದಕ್ಕೆ" ಅಯ್ಯೋ ಬುಡಿ ಬುದ್ಧಿ, ಅವಳು ಒಂದು
ಹೆಣ್ಣು ಮಗು. ಮೇಲಾಗಿ ಕಣ್ಣು ಕಾಣಲ್ಲ ಮಾತು ಬರಲ್ಲ. ಅವಳನ್ನು ದೂರದ ಕಾಣದ ಜಾಗಕ್ಕೆ ಕರೆದುಕೊಂಡು ಹೋಗಿ ಸೇರಿಸಿ ಬಂದರೆ ಹೆತ್ತ ಹೊಟ್ಟೆ ಸಮಾಧಾನದಿಂದ ಇರಲು ಸಾಧ್ಯವೇ,? ಅವಳು ಕಲಿತಷ್ಟು ಕಲಿಯಲಿ. ಇಲ್ಲೇ ಓದಿಸಿ ಬುದ್ಧಿ, ಎಂದು ವಿನಯದಿಂದಲೇ ತಿರಸ್ಕರಿಸಿದ್ದರು ಅವಳ ತಂದೆ. ಶಿಕ್ಷಕರು ಅವಳಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ಕೊಡಿಸಿ ಕೊಡುವ ಭರವಸೆಯನ್ನು ಕೊಟ್ಟರಾದರೂ ಈ ಭ್ರಷ್ಟ ವ್ಯವಸ್ಥೆಯಲ್ಲಿ ಅವರ ಅಮಾಯಕತೆಗೆ ಯಾವುದೇ ಪ್ರಯೋಜನ ಆಗಲಿಲ್ಲ.
ಸುಧಾ ಹೀಗೆ ಬೆಳೆದು ದೊಡ್ಡವಳಾದಳು. ದಿನನಿತ್ಯದ ಪ್ರಕ್ರಿಯೆ ನಡದೇ ಇತ್ತು. ಹಗಲೆಲ್ಲ ದುಡಿದು ಬರುತ್ತಿದ್ದ ಅವರು ಸುಧಾಳ ಯೋಗಕ್ಷೇಮದ ಕಡೆ ಚಿಂತಿತರಾದರು. ಮಗಳು ದೊಡ್ಡವಳಾಗುತ್ತಿದ್ದಾಳೆ, ನಮಗೋ ವಯಸ್ಸಾಗುತ್ತಾ ಬಂತು. ಇವಳನ್ನು ಮುಂದೆ ಯಾರು ನೋಡಿಕೊಳ್ಳುತ್ತಾರೆ ? ಎಂದು ಗಂಡ ಹೆಂಡತಿ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿದ ಸುಧಾ " ಅಪ್ಪ ಅಮ್ಮ ನೀವೇನು ಯೋಚನೆ ಮಾಡಬೇಡಿ ದೇವರು ತೋರಿಸಿದಂತೆ ಬದುಕು ನಡೆದುಕೊಂಡು ಹೋಗುತ್ತದೆ. ನೀವು ಕೊರಗಬೇಡಿ" ಎಂದು ಕೈ ಸಂಜ್ಞೆಯ ಮೂಲಕ ಹೇಳಿದಾಗ ಮಗಳ ಸಮಾಧಾನದ ಮಾತಿಗೆ ತಂದೆತಾಯಿಯರಲ್ಲಿ ದುಃಖ ಮಡುಗಟ್ಟಿದ್ದರೂ ದೇವರ ಮೇಲೆ ಭಾರ ಹಾಕಿ ಆ ದಣಿದ ಜೀವಗಳು ಬುಡ್ಡಿಯ ಬೆಳಕಿನಲ್ಲಿ ಅಳಿದುಳಿದ ಊಟವನ್ನು ಮಾಡಿ ಮಲಗಿದರು.
ತಿಮ್ಮಣ್ಣ ಕಡುಬಡವನಾಗಿದ್ದು ಪ್ರಾಣಿಗಳಿಗೂ ಯೋಗ್ಯವಲ್ಲದ ಮನೆಯಲ್ಲಿ ವಾಸಿಸುತ್ತಿದ್ದ. ಊರಿನಾಚೆಗಿದ್ದ ಒಂಟೆ ಮೈಯಲ್ಲಿ ಬಯಸಿ ಬಯಸಿ ಪಡೆದ ಮಗು ಹೀಗೆ ಬಹು ಅಂಗವಿಕಲೆ ಎಂದು ಗೊತ್ತಾದ ಕೂಡಲೇ ಕುಸಿದು ಹೋಗಿದ್ದ. ಆದರೆ ಮಕ್ಕಳಿಲ್ಲದವರಿಗೆ ಈ ಮಗುವೇ ದೇವರ ಪ್ರಸಾದದಂತೆ ಭಾವಿಸಿ ಎಷ್ಟೇ ಕಷ್ಟ ಬಂದರೂ ಅವಳನ್ನು ಸಲಹುವ ತೀರ್ಮಾನ ತೆಗೆದುಕೊಂಡರು. ಅವಳು ದೇವರ ಮಗಳು, ಅವಳನ್ನು ಸಲಹುವುದು ನಮ್ಮ ಪುಣ್ಯ ಎಂದು ಎಂದುಕೊಂಡು ಜೀವನ ಸಾಗಿಸುತ್ತಿದ್ದರು. ಈ ಮೂವರ ಮೇಲೂ ಊರಿನವರ ಕರುಣೆ ಅನುಕಂಪ ಇತ್ತಾದರೂ ಅದು ಬದುಕೆ ನಡೆಸುವುದಿಲ್ಲ. ಜೀವನ ನಿರ್ವಹಣೆಗಾಗಿ ಕೂಲಿನಾಲಿ ಮಾಡಲೇಬೇಕಾದ ಅನಿವಾರ್ಯತೆ ಅವರಿಗಿತ್ತು.
ಹೀಗಿರುವಾಗ ನಗರದಿಂದ ಬಂದಿದ್ದ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ನಡೆಸುತ್ತಿದ್ದ ಸೇವಕನೊಬ್ಬ ಅವರಿಗೆ ಸರ್ಕಾರದಿಂದ ಬರಬಹುದಾದ ಮಾಶಾಸನ , ಉಚಿತ ಬಸ್ ಪಾಸ್ ಇತ್ಯಾದಿ ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ಹೇಳಿಕೊಂಡು ಬಂದ. ಅದಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ನಿಮ್ಮ ಕಷ್ಟ ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ನೀವು ಕೈಲಾದಷ್ಟು ಕೊಡಿ, ನನಗೆ ಗೊತ್ತಿರುವ ಅಧಿಕಾರಿಯೊಬ್ಬರಿಗೆ ಹೇಳಿ ಸವಲತ್ತುಗಳನ್ನು ಮಾಡಿಸಿಕೊಂಡಿವೆ ಎಂದಾಗ ಅವರ ಮೊಗದಲ್ಲಿ ನಿರಾಳತೆ. ಅವಳಿಗೆ ಸಂಬಳ ಬಂದರೆ ಹೇಗೋ ಅವಳ ಬದುಕು ನಡೆಯುತ್ತದೆ ಎಂದುಕೊಂಡು" ಸ್ವಾಮ್ಯಾರಾ ಏನಾರಾ ಮಾಡಿ ಈ ಉಪಕಾರ ಮಾಡಿ ಬುದ್ಧಿ ನಿಮಗೆ ಪುಣ್ಯ ಬರುತ್ತೆ" ಎಂದು ಆ ವ್ಯಕ್ತಿಗೆ ಕೈಮುಗಿದು ಕೇಳಿಕೊಂಡರು. ಒಂದು ತಿಂಗಳೊಳಗೆ ಅವಳಿಗೆ ಸಿಗಬಹುದಾದ ಸವಲತ್ತುಗಳನ್ನು ಕೊಡಿಸಿ ಕೊಟ್ಟು ಅವರ ಪಾಲಿನ ಆಪದ್ಭಾಂಧವನಾದ.
ಹೇಗೋ ಬದುಕು ಸಾಗುತ್ತಿತ್ತು. ಅವಳಿಗೆ ಸಂಬಳ ಬರುತ್ತಿದ್ದುದರಿಂದ ಒಂದಷ್ಟು ನಿರಾಳತೆ ಇತ್ತು. ಆದರೂ ದುಡಿಮೆ ಬಿಡಲಾಗದ ಪರಿಸ್ಥಿತಿ ಪದೇಪದೇ ದುಡಿಯಲು ಹೋಗುವಂತೆ ಪ್ರೇರೇಪಿಸುತ್ತಿತ್ತು. ದಿನ ಮಗಳಿಗೆ ಊಟ ನೀರು ಇತ್ಯಾದಿಗಳನ್ನು ಇಟ್ಟು ತಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೊದಲೇ ಊರಾಚೆ ಇರುವ ಮನೆಯಾದ್ದರಿಂದ ಅಲ್ಲಿಗೆ ಯಾರು ಬರುತ್ತಿದ್ದಾರೆ ಹೋಗುತ್ತಿದ್ದಾರೆ ಎಂಬುದು ಗೊತ್ತಾಗುತ್ತಿರಲಿಲ್ಲ . ಇಲ್ಲಿಗೆ ಯಾರೂ ಬರುವುದಿಲ್ಲ ಬಿಡು ಎಂಬ ಭಂಡ ಧೈರ್ಯದಿಂದ ದಿನ ನೂಕುತ್ತಿದ್ದರು. ಜೀವನ ತನ್ನ ಪಾಡಿಗೆ ತಾನು ಸಾಗುತ್ತಿತ್ತು.
ಸುಧಾ ಆಗತಾನೇ ಮೈನೆರೆದಿದ್ದಳು. ಹರೆಯದ ಹೆಣ್ಣಿನ ಲಕ್ಷಣಗಳು ಅವಳಲ್ಲಿ ಮೂಡುತ್ತಿದ್ದವು. ಕಣ್ಣು ಕಂಡು ಮಾತನಾಡಲು ಬರುವಂತಿದ್ದಿದ್ದರೆ ಇಷ್ಟೊತ್ತಿಗೆ ಅವಳಿಗೆ ಮದುವೆಯಾಗಿ ಸಂಸಾರ ನಡೆಸುತ್ತಿರಬೇಕಾಗಿತ್ತು. ಅವಳ ಓರಗೆಯವರೆಲ್ಲಾ ಮದುವೆಯಾಗಿ ಮಕ್ಕಳನ್ನು ಎತ್ತಿಕೊಂಡು ಬರುತ್ತಿದ್ದರು. ಆದಾಗ ಸುಧಾಳನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು." ಯಾರು,,,,?! ಯಾರೂ,,,,?! ಯಾರು ನೀವು?!" ಎನ್ನುವಂತೆ ಸುತ್ತಮುತ್ತ ತಡಕಾಡಿದಳು. ಆಗ ಪಕ್ಕದಲ್ಲೇ ಅವಳಿಗೊಂದು ಗಂಡು ಧ್ವನಿ ಕೇಳಿಸಿತು. "ನಾನು ನಿನ್ನ ಹಿತೈಶಿ. ನೋಡು ನಿಮ್ಮ ಅಪ್ಪ-ಅಮ್ಮನ ನಿನ್ನ ಸ್ಥಿತಿ ಗೊತ್ತಿದ್ದು ಬಿಟ್ಟುಹೋಗಿದ್ದಾರೆ. ತಗೋ ಊಟ ಮಾಡು" ಎಂದು ಅಲ್ಲೇ ಇದ್ದ ಊಟವನ್ನು ತಟ್ಟೆಗೆ ಹಾಕಿ ಮುಂದೆ ಹಿಡಿದ." ಓ ಹೌದಾ, ಸುಮ್ಮನೆ ನಿಮಗೆ ಏಕೆ ತೊಂದರೆ. ನಾನು ಊಟ ಮಾಡುತ್ತೇನೆ ನಿಮ್ಮಸಹಾಯ ನನಗೆ ಏನೂ ಬೇಡ" ಎನ್ನುವಂತೆ ಸಂಜ್ಞೆ ಮೂಲಕ ಹೇಳಿದಳು. ಅದು ನಿನ್ನ ಸ್ವಾಭಿಮಾನ. ಆದರೆ ಮಾನವೀಯ ದೃಷ್ಟಿಯಿಂದ ನಿನಗೆ ಸಹಾಯ ಮಾಡುತ್ತಿದ್ದೇನೆ . ಮೊದಲು ಊಟ ಮಾಡು ಎಂದು ಒಳ್ಳೆಯವನಂತೆ ನಟನೆಯ ಮಾತುಗಳನ್ನಾಡಿದ. ಅವಳು ಅವನನ್ನು ನಂಬಿದಳು. ಹೀಗೆ ದಿನಾಲೂ ಇಲ್ಲದ ಸಮಯದಲ್ಲಿ ಬಂದು ಸಹಾಯ ಮಾಡುವ ನೆಪದಲ್ಲಿ ಆತ್ಮೀಯವಾಗಿ ಅವಳೊಂದಿಗೆ ನಡೆದುಕೊಳ್ಳ ತೊಡಗಿದ. ಇಬ್ಬರಲ್ಲೂ ಅನುರಾಗ ಬೆಳೆಯಿತು." ನನ್ನಂತಹ ಅಂಗವಿಕಲೆಯನ್ನು ಇಷ್ಟಪಡುವ ಈತ ಮಹಾಪುರುಷ ಇರಬೇಕು ಎಂದು ಮನಸ್ಸಲ್ಲೇ ಅಂದುಕೊಂಡು ಅವನೊಂದಿಗೆ ಸಲಿಗೆಯಿಂದ ನಡೆದುಕೊಳ್ಳಲು ತೊಡಗಿದಳು. ಇವರಿಬ್ಬರ ಪ್ರೀತಿಯ ವಿಷಯ ಮನೆಯವರಿಗೂ ಗೊತ್ತಾಯ್ತು. ಆ ಹುಡುಗ ಅವಳ ತಂದೆ ತಾಯಿಯರಿಗೂ ಸಮಾಧಾನ ಹೇಳಿ ಅವಳನ್ನು ಮದುವೆಯಾಗುವುದಾಗಿ ಹೇಳಿದ. ಅವರಿಗೂ ಸಮಾಧಾನವಾದಂತೆ ಆಯಿತು ಯಾರೋ ಒಬ್ಬ ಪುಣ್ಯಾತ್ಮ ಅವಳಿಗೊಂದು ಆದರೆ ಆಗುತ್ತಾನಲ್ಲ ಎಂದು ನಿಟ್ಟುಸಿರು ಬಿಟ್ಟರು.
ಪ್ರತಿದಿನ ಊಟದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದು ಅವಳನ್ನು ರಮಿಸಿ ಪ್ರೀತಿಯ ಮಾತನಾಡಿ ಸುತ್ತಿದ್ದ. ಅವಳ ಹರಿದ ಹಾಗೂ ಅಸ್ತವ್ಯಸ್ತವಾಗಿದ್ದ ಬಟ್ಟೆಯಲ್ಲಿ ಅವಳ ಮೈ ಕಾಣುತ್ತಿತ್ತು ಅವನಲ್ಲಿದ್ದ ಕಾಮುಕ ಜಾಗೃತನಾಗಿದ್ದ. ಅವಳನ್ನು ಮರುಳು ಮಾಡಿ ಅವಳೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ ಆದರೆ ಈ ವಿಷಯ ಹೆತ್ತವರಿಗೆ ಹೇಳದಿರುವಂತೆ ಹೆದರಿಸಿದ್ದ. ಹಾಗಾಗಿ ಅವಳಿಗೆ ವಿಷಯ ಹೇಳಲು ಭಯವಾಗಿತ್ತು. ದಿನಕಳೆದಂತೆ ಅವಳಲ್ಲಿ ಹೊಸ ಜೀವ ಅಂಕುರಿಸಿತು. ಮೊದಲೆಲ್ಲಾ ದಿನ ಬಂದು ನೋಡಿಕೊಂಡು ಮಾತನಾಡಿಸಿ ಹೋಗುತ್ತಿದ್ದವನು ಇತ್ತೀಚೆಗೆ ಇತ್ತ ಸುಳಿಯದಾದ. ಅವಳಿಗೆ ಅವನು ಯಾರು ಎಲ್ಲಿಯವನು ಯಾವುದೂ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಹೀಗೆ ಕಣ್ಮರೆಯಾದದ್ದು ಅವಳಿಗೆ ಆತಂಕ ಹೆಚ್ಚು ಮಾಡಿತು. ಆದರೆ ಅವಳು ಅವನ ಮೋಸಕ್ಕೆ ಬಲಿಯಾದುದರ ಕುರುಹು ಅವಳಲ್ಲಿ ದಿನೇ ದಿನೇ ಬೆಳೆಯುತ್ತಾ ಅವಳನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿತ್ತು. ಮುಚ್ಚಿಟ್ಟಿದ್ದ ಈ ಘಟನೆ ಬಹಳಷ್ಟು ದಿನ ಗೌಪ್ಯವಾಗಿಡಲು ಸಾಧ್ಯವಾಗಲಿಲ್ಲ. ಒಂದು ದಿನ ಅವಳು ಊಟ ಮಾಡುವಾಗ ವಾಂತಿ ಆಯಿತು. ಯಾಕೋ ಮಗಳು ವಾಂತಿ ಮಾಡ್ತಿದ್ದಾಳೆ ಹುಷಾರಾಗಿ ಇದ್ದಳೋ ಇಲ್ಲವೋ ಎಂದು ತೋರಿಸಲು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅವಳನ್ನು ಪರೀಕ್ಷಿಸಿದ ವೈದ್ಯರು ಅವಳು ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದರು. ಆಗ ಸುಧಾಳ ಹೆತ್ತವರಿಗೆ ನಿಂತ ನೆಲವೇ ಕುಸಿದಂತಾಯಿತು . ಏನು ಮಾಡಬೇಕೆಂದು ತಿಳಿಯದೆ ವೈದ್ಯರಿಗೆ "ಬುದ್ದೇರಾ ಆಕೆಗಿನ್ನೂ ಮದುವೆ ಆಗಿಲ್ಲ. ವಸಿ ಕ್ಲೀನಾಗಿ ನೋಡಿ ಸ್ವಾಮಿ " ಎಂದು ಕೇಳಿಕೊಳ್ಳಲು, ವೈದ್ಯರಿಗೆ ನಡೆದಿರುವ ಘಟನೆಯ ಅರಿವಾಯಿತು. ನಾನು ಹೇಳುತ್ತಿರುವುದು ನಿಜ ಇದಕ್ಕೆ ಕಾರಣನಾದವನು ಯಾರು ಎಂಬುದನ್ನು ಪತ್ತೆಹಚ್ಚಿ ಬೇಗ ಮದುವೆ ಮಾಡಿ ಎಂದು ಸಲಹೆ ಕೊಟ್ಟರು. ಅಲ್ಲದೆ ಅವಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಿ ಎಂದು ಹೇಳಿ ಔಷಧಿಗಳನ್ನು ಕೊಟ್ಟು ಕಳುಹಿಸಿದರು.
ಭಾರವಾದ ಮನಸ್ಸಿನಿಂದ ಊರು ತಲುಪಿದರು. ವಿಷಯ ಹೀಗೆ ಎಂದು ಊರ ತುಂಬ ಸುದ್ದಿ ಆಗತೊಡಗಿತು . ಏನು ಮಾಡಬೇಕು ಎಂಬುದೇ ತೋಚದಾಯಿತು. ಸುಧಾಳನ್ನು ನಂಬಿಸಿ ಮೋಸ ಮಾಡಿದ ಆತನನ್ನು ಹುಡುಕಲು ಪ್ರಯತ್ನಿಸಿದರು . ಅದು ಸಾಧ್ಯವಾಗಲಿಲ್ಲ ಏಕೆಂದರೆ ಅವನು ಈ ಊರಿನವನಲ್ಲ. ಅವನು ಈ ಊರಿಗೆ ಏಕೆ ಬಂದಿದ್ದನು ಗೊತ್ತಿಲ್ಲ. ಹುಡುಗ ಚೆನ್ನಾಗಿದ್ದು ಅವಳಿಗೆ ಬಾಳು ಕೊಡುತ್ತೇನೆ ಎಂದಿದ್ದಕ್ಕೆ ಸ್ವಲ್ಪ ಹೆಚ್ಚೇ ಸಲಿಗೆ ನೀಡಿದ್ದರು. ಆದರೆ ಅವನು ಈ ರೀತಿ ಮಾಡಿ ಓಡಿ ಹೋಗುತ್ತಾನೆ ಎಂದು ತಿಳಿದಿರಲಿಲ್ಲ. ಆಗ ಊರಿನ ಕೆಲವರು ಹೇಗಾದರೂ ಮಾಡಿ ಆ ಪಿಂಡವನ್ನು ತೆಗೆಸಿಬಿಡಿ ಎಂದು ಸಲಹೆ ನೀಡಿದರು.
ಹಾಸಿ ಹೊದ್ದು ಮಲಗಿರುವ ಬಡತನ, ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವಿರದ ಮುಗ್ದತನ, ಯಾರೋ ಹೇಳಿದರು ಎಂದು ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಅವಳಿಗೆ ಆಗಿರುವ ಅನ್ಯಾಯದ ಬಗ್ಗೆ ವೈದ್ಯರಿಗೆ ಹೇಳಿ ಹೇಗಾದರೂ ಮಾಡಿ ಅವಳ ಹೊಟ್ಟೆಯಲ್ಲಿರುವ ಮಗುವನ್ನು ತೆಗೆದು ಬಿಡಿ ಎಂದು ವೈದ್ಯರ ಕೈ ಕಾಲು ಹಿಡಿದು ಬೇಡಿಕೊಂಡರು. ಆದರೆ ವೈದ್ಯರು ಗರ್ಭಪಾತ ಮಾಡುವುದು ಅಪರಾಧವಾಗುತ್ತದೆ. ಅಲ್ಲದೆ ಗರ್ಭಪಾತ ಮಾಡಿದರೆ ಅವಳ ಆರೋಗ್ಯಕ್ಕೂ ತೊಂದರೆಯಾಗುತ್ತದೆ ಎಂದು ಹೇಳಿ ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬಂದು ಸುಧಾಳ ಹೆತ್ತವರನ್ನು ವಿಚಾರಣೆ ಮಾಡಿದರು. ಈ ಕೃತ್ಯ ಮಾಡಿದವನು ಯಾರು ಅವನ ಸುಳಿವು ನೀಡಿ ಸಾಕು ನಾವು ಎಲ್ಲಿದ್ದರೂ ಹುಡುಕಿ ತರುತ್ತೇವೆ ಎಂದು ಇನ್ಸ್ಪೆಕ್ಟರ್ ಕೇಳಿದಾಗ, ನಮಗೆ ಅವನ ಬಗ್ಗೆ ಏನು ಗೊತ್ತಿಲ್ಲ ಸ್ವಾಮಿ. ಮಗಳನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದರು.
ಸಮಸ್ಯೆಯ ಆಳವನ್ನು ಅರಿತ ಇನ್ಸ್ಪೆಕ್ಟರ್ ಸ್ವಲ್ಪ ದಿನ ಇರಿ, ನಾವು ಅವನು ಎಲ್ಲಿದ್ದರೂ ಹುಡುಕಿ ತರುತ್ತೇವೆ ಆನಂತರ ಮುಂದಿನದನ್ನು ಯೋಚಿಸೋಣ ಎಂದು ಧೈರ್ಯ ಹೇಳಿ ಊರಿಗೆ ಕಳಿಸಿಕೊಟ್ಟರು. ತಮ್ಮ ಮಗಳ ಅಸಹಾಯಕ ಸ್ಥಿತಿಯನ್ನು ಕಂಡು ತೀರಾ ಅಂದರೆ ತೀರಾ ಕುಸಿದು ಹೋದರು. ಬದುಕಲೇ ಬಾರದು ಎಂದು ತೀರ್ಮಾನ ಮಾಡಿದರು. ಆದರೆ ಅವರಿಗೆ ಸಾಯುವ ಧೈರ್ಯವಿರಲಿಲ್ಲ. ಹಾಗಾಗಿ ದಿನಾ ಚಿಂತೆಯಲ್ಲಿ ಕಾಲದಲ್ಲಿದರು. ಪೊಲೀಸರು ಅವರು ಹೇಳಿದ ಚಹರೆಯ ಆಧಾರದ ಮೇಲೆ ಮೋಸ ಮಾಡಿದ ಅವನನ್ನು ಪತ್ತೆ ಹಚ್ಚಿದರು. ವಿಚಾರಣೆಗೆಂದು ಕರೆದುಕೊಂಡು ಬಂದ ಅವನಿಗೆ ಗ್ರಾಮದ ಹೆಂಗಳೆಯರು ಹಿರಿಯರು ಹಿಡಿಶಾಪ ಹಾಕಿದರು. ಯುವಕರು ಅವನ ಮೇಲೆ ಕೈ ಮಾಡಲು ಮುಂದಾದರು. ಪೊಲೀಸರ ಮದ್ಯಸ್ಥಿಕೆಯಿಂದ ಅದು ಸಾಧ್ಯವಾಗಲಿಲ್ಲ. ವಿಚಾರಣೆ ನಡೆದ ಮೇಲೆ ಅವನು ತನ್ನ ತಪ್ಪನ್ನು ಒಪ್ಪಿಕೊಂಡನು. ಆದರೆ ಎಷ್ಟು ಬೇಕಾದರೂ ಹಣ ಕೊಡುವೆ ನಾನು ಮಾತ್ರ ಅವಳನ್ನು ಮದುವೆ ಆಗುವುದಿಲ್ಲ ಎಂದು ಹೇಳಿದಾಗ ನೆರೆದಿದ್ದ ಜನರೆಲ್ಲಾ ಪ್ರತಿಭಟನೆ ನಡೆಸಿದಾಗ ಪೊಲೀಸರು ಅವನಿಗೆ ಮದುವೆಯಾಗು ಇಲ್ಲಜೈಲಿನ ಶಿಕ್ಷೆ ನೀಡುವುದಾಗಿ ಹೆದರಿಸಿದರು. ಒತ್ತಡಕ್ಕೆ ಮಣಿದ ಅವನು ಸುಧಾಳನ್ನು ಮದುವೆಯಾಗಲು ಒಪ್ಪಿಕೊಂಡನು. ಅಲ್ಲದೆ ಅವಳಿಗೆ ಯಾವುದೇ ರೀತಿಯ ತೊಂದರೆ ಕೊಡಕೂಡದು ಎಂದು ಮುಚ್ಚಳಿಕೆ ಬರೆಸಿಕೊಂಡು ಅವರಿಬ್ಬರಿಗೂ ಅಲ್ಲಿಯೇ ಮದುವೆ ಮಾಡಿ ಅದನ್ನು ರಿಜಿಸ್ಟ್ರೇಷನ್ ಮಾಡಿಸಿದರು.
ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಅವಳನ್ನು ಮದುವೆಯಾದ ಆ ಹುಡುಗ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಂಡನು. ತನ್ನ ಪರಿಸ್ಥಿತಿ ಗೊತ್ತಿದ್ದೂ ತನ್ನ ಕೈ ಹಿಡಿದ ಅವನ ಮೇಲೆ ಸುಧಾಳಿಗೂ ಕೃತಜ್ಞತೆ ಇತ್ತು. ಕೆಲವು ದಿನಗಳ ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಆ ಮಗುವಿನ ಮುಖ ನೋಡುವ ಭಾಗ್ಯವಿಲ್ಲದಿದ್ದರೂ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಳು. ಅದಕ್ಕೆ ಅವಳ ಗಂಡ ಸಂಪೂರ್ಣ ಸಹಕಾರ ನೀಡುತ್ತಾ ಅವಳ ಖುಷಿಗೆ ಭಂಗ ಬರದಂತೆ ತುಂಬಾ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಅವನು ತನ್ನ ತಪ್ಪನ್ನು ಅರಿತು ಒಬ್ಬ ಅಂಗವಿಕಲೆಗೆ ಬಾಳು ಕೊಡುವುದಲ್ಲದೆ ನೆಮ್ಮದಿಯ ಸಂಸಾರ ಸಾಗಿಸುತ್ತಾ ಸಮಾಜಕ್ಕೆ ಮಾದರಿಯಾದರು. ಆಗಾಗ ಊರಿಗೆ ಬಂದು ಅಪ್ಪ-ಅಮ್ಮನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು . ಅವರಿಗೂ ತಮ್ಮ ಮಗಳಿಗೆ ಒಂದು ನೆಲೆ ಸಿಕ್ಕಿತಲ್ಲ ಎಂಬ ಸಮಾಧಾನ. ಮೊಮ್ಮಗಳೊಂದಿಗೆ ಖುಷಿಯಾಗಿ ಇದ್ದರು. ಕಾರಣರಾದ ವೈದ್ಯರು ಹಾಗೂ ಪೊಲೀಸರಿಗೂ ಮನದಲ್ಲೇ ಕೃತಜ್ಞತೆ ಅರ್ಪಿಸಿದರು.
ದಿನಗಳೆದಂತೆ ಸುಧಾಳ ಮಗಳು ದೊಡ್ಡವಳಾಗಿ ಸುಧಾಳ ಗಂಡ-ಮಗಳು ಇಬ್ಬರು ತುಂಬ ಪ್ರೀತಿಯಿಂದ ಕೊಡಲು ಅವಳನ್ನು ನೋಡಿಕೊಂಡರು. ಬಡತನದ ಬೇಗೆಯೊಳಗೆ ಬೆಂದ ಸುಧಾ ತನ್ನ ಅಂಗವೈಕಲ್ಯವನ್ನು ಮರೆತು ಗಂಡ ಮಗಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಳು.ಯಾವುದೋ ಕೆಟ್ಟ ಗಳಿಗೆಯಲ್ಲಿ ಅತ್ಯಾಚಾರ ಮಾಡಿದ ಪ್ರತಿಯೊಬ್ಬ ಗಂಡಸು ತನ್ನವನಂತೆ ಅರ್ಥಮಾಡಿಕೊಂಡು ಆ ಸಂತ್ರಸ್ತೆಯ ಕೈ ಹಿಡಿದು ನಡೆಸಿದರೆ ಅವಳ ಬಾಳು ನರಕವಾಗಿದೆ ಸ್ವರ್ಗಸುಖವನ್ನು ಅನುಭವಿಸುವಂತಾಗುತ್ತದೆ ಎಂದು ಮನಸ್ಸಿನಲ್ಲಿಯೇ ತನ್ನ ಈಗಿನ ಸ್ಥಿತಿಯ ಬಗ್ಗೆ ಪಡುತ್ತಾ ಸುಧಾ ತುಂಬಾ ಸುಖವಾಗಿ ನೆಮ್ಮದಿಯಿಂದ ಬಾಳ ಪಯಣವನ್ನು ತನ್ನ ಗಂಡ-ಮಗಳೇ ಕಣ್ಣುಗಳೆಂದು ಭಾವಿಸಿ ಆ ಮೂಲಕ ಜಗದ ಸುಖವನ್ನು ಆಸ್ವಾದಿಸುತ್ತಾ ಜೀವನವನ್ನು ಸಾಗಿಸುತ್ತಿದ್ದಾಳೆ.
*ಅಮುಭಾವಜೀವಿ*
ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ
ಪಿನ್ 577528
ಫೋನ್ ಮಾಡಿ 8496819281