ಅವಳೆಂದರೆ
ಬದುಕಿನ ನಾಲೆಯಲ್ಲಿ
ಹರಿಯುವ ನೀರು
ಗಡಿಗೆಗೋ ಗದ್ದೆಗೆಗೋ
ಹರಿದು ಸೇರುವಳು
ಅವಳೆಂದರೆ
ನನ್ನೊಳಗಿನ ಶ್ವಾಸ
ಒಳಗೆಳೆದರೆ ಚೈತನ್ಯ
ಹೊರ ಬಿಟ್ಟರೆ ನಿರಾಳ
ಮತ್ತೆ ಮತ್ತೆ ಬೇಕೆನಿಸುವವಳು
ಅವಳೆಂದರೆ
ಉರಿಯುವ ಹಣತೆ
ಬೆಳಕಿನಂತೆ ಮಮತೆ
ಅವಳಿರಲು ಇಲ್ಲ ಚಿಂತೆ
ಕಾಡದು ಕತ್ತಲ ಅಂಜಿಕೆ.
ಅವಳೆಂದರೆ
ದಟ್ಟ ಕಾರ್ಮುಗಿಲು
ಮಳೆಯಾಗಿ ಸುರಿಯುತ್ತಾಳೆ
ನೆರಳಾಗಿ ಇರುತ್ತಾಳೆ
ಬಾಳಿಗೆ ಹೆಸರಾಗುತ್ತಾಳೆ
ಅವಳೆಂದರೆ
ನೋವು ನುಂಗಿ ನಗಿಸುತ್ತಾಳೆ
ದ್ವೇಷ ಮರೆತು ಪ್ರೀತಿಸುತ್ತಾಳೆ
ಹಸಿವ ನೀಗಿ ಕಸುವಾಗುತ್ತಾಳೆ
ಅವಳೆಂದರೆ
ಬಾಳಪಯಣದ ನಾಯಕಿ
ಬದುಕಿನ ನಿಸ್ವಾರ್ಥ ಸೇವಕಿ
ಬವಣೆಗಳನ್ನೆಲ್ಲ ಸಹಿಸಿ
ಬೆಳೆಸುವ ಭೂ ಮಾತೆ
ಅವಳಿಲ್ಲದೆ ಬದುಕಿಲ್ಲ
ಅವಳಿಲ್ಲದೆ ನಾನಿಲ್ಲ
ಅವಳು ಅವಳಿಗಾಗಿ ಅಲ್ಲ
ಅವಳಂತಹವಳು ಯಾರಿಲ್ಲ
0214ಪಿಎಂ21092018
ಅಮುಭಾವಜೀವಿ
ಚಿತ್ರದುರ್ಗ
No comments:
Post a Comment