Saturday, June 22, 2019

ಒಲವಿನ ನಂದನ

ಮುಂದುವರಿದ ಭಾಗ,,,,,

" ಏನು ಯುವ ಪೀಳಿಗೆನೋ ಏನೋ. ಇವತ್ತು ಅದು ತನ್ನ  ನಿಜವಾದ ಅಸ್ತಿತ್ವ ಏನು,  ತನ್ನ ತನ ಎಂತಹದ್ದು ಎಂಬುದೇ ಗೊತ್ತಿಲ್ಲ. ಸ್ವಾಭಿಮಾನ ಎಂಬುದು ಅವರ ಪುಟದಲ್ಲೇ ಇಲ್ಲ", ಎನ್ನುತ್ತಾ" ಅಲ್ಲ ಕಣೋ ಇವತ್ತಿನ ಯುವಕರೇ ನಾಳಿನ  ರೂವಾರಿಗಳು. ಇವತ್ತೇ ಹೀಗೆಂದರೆ ಮುಂದೆ ಇನ್ನೂ ಹೇಗೋ ?! ಇಡೀ ವಿಶ್ವವೇ ಗೌರವಿಸುವ ಸಂಸ್ಕೃತಿ ನಮ್ಮದಾದರೂ ಇವತ್ತಿನ ನಮ್ಮ ಯುವಕರ ನಡವಳಿಕೆಯಿಂದ ಎಲ್ಲಿ ಆ ಗೌರವಕ್ಕೆ ತರುವುದು ಎಂಬುದೇ ನನ್ನ ಯೋಚನೆ ಕಣೋ" ಎಂದಾಗ ಉದಯ್ " ಅಯ್ಯೋ ಹುಚ್ಚಪ್ಪ ನೀನ್ಯಾಕೋ ದೇಶ ಸಂಸ್ಕೃತಿ ಅಂತ ಇಷ್ಟೊಂದು ಎಮೋಷನಲ್ ಆಗ್ತೀಯಾ? ಅದೆಲ್ಲ ಹಳೇಕಾಲ ಕಣೋ, ಇವತ್ತು ಜನ ಅದಕ್ಕೆಲ್ಲ ಕೊಡ್ತಾ ಇಲ್ಲ. ಫ್ಯಾಷನ್ ಜಗತ್ತಿನ ಆಕರ್ಷಣೆಗೊಳಗಾಗಿ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಅದು ಒಬ್ಬಿಬ್ಬರಿಂದ ಸರಿಮಾಡಲು ಸಾಧ್ಯವಿಲ್ಲ. ಸುಮ್ಮನೆ ತಲೆಕೆಡಿಸಿಕೊಳ್ತೀಯಾ ? ಬಾರೋ ಇಲ್ಲೇ ಸ್ವಲ್ಪ ಬಾಯಿ ಬಿಸಿಮಾಡಿಕೊಂಡು ಹೋಗೋಣ" ಎನ್ನುತ್ತಾ  ಅಲ್ಲೆ ರಸ್ತೆ ಬದಿಯಲ್ಲಿದ್ದ tea shop ನತರ ನಡೆದರು.

          ಆಗಲೇ ಸಂಜೆ ಐದರ ಆಸುಪಾಸು, ಅವರು ಚಹ ಹೀರುತ್ತಿರುವ ಅಂಗಡಿಯ ಪಕ್ಕದಲ್ಲೇ ಒಂದು ಕಾಲೇಜು ಇದ್ದು, ಅದೇ ಸಮಯದಲ್ಲಿ ಕಾಲೇಜಿಗೆ ಓದಲು ಹೋಗಿದ್ದ ಎಲ್ಲರೂ ಹಿಂತುರಿಗಿ ಮನೆಗೆ ಹೋಗುವ ಸಮಯ. ಮೊದಲೇ ಅದು ಹುಡುಗಿಯರ ಕಾಲೇಜು, ಮನೆಗೆ ಹೋಗುವ ಧಾವಂತದಲ್ಲಿ ಒಂದಷ್ಟು ಹುಡುಗಿಯರು  ಅವಸರದಿಂದ ನಡೆದುಹೋಗುತ್ತಿದ್ದರು. ಅವರನ್ನೇ ಗಮನಿಸುತ್ತಿದ್ದ ಆಕಾಶ ಮತ್ತೆ ಮನಸಿನಲ್ಲಿ ಅದೇ ಅಸಮಧಾನವನ್ನು ತೋಡಿಕೊಳ್ಳುತ್ತಾ ಕಾಫಿಯನ್ನು ಮುಗಿಸಿದನು. "ನನಗಂತೂ ಸಾಕಾಗಿ ಹೋಗಿದೆ ಈ ನಗರ ಜೀವನವೇ ಸಾಕು ಮತ್ತೆ ನಮ್ಮಲ್ಲಿ ಹಳ್ಳಿಗೆ ಹೋಗಿ ಹೋಗಿ ನೆಮ್ಮದಿಯಿಂದ ಇದ್ದುಬಿಡೋಣ ಅನಿಸುತ್ತದೆ" ಎಂದನು.

  " ಅಯ್ಯೋ ಹುಚ್ಚಪ್ಪಾ ನೀನು ಕೆಲ್ಸ ಬಿಟ್ಟು ಹೋದರೆ ಇಲ್ಯಾರ್ಗೂ ನಷ್ಟ ಇಲ್ಲ. ನೀನು ಕೆಲಸ ಬಿಟ್ಟರೆ ಇಲ್ಲಿ ಎಲ್ಲ ಸರಿಹೋಗಿಬಿಡುತ್ತೆ ಅಂತ ತಿಳ್ಕೊಂಡಿದ್ದಿಯಾ ? ಇದು ಜೀವನ ಕಣೋ, ಯಾರು ಹೇಗಾದರೂ ಬದುಕಲಿ ಅದರ ಚಿಂತೆ ನಮಗ್ಯಾಕೆ. ನಮ್ಮ ಬದುಕನ್ನು ನಾವು ನೋಡಬೇಕಷ್ಟೇ" ಎಂದು ಉದಯ್ ಆಕಾಶನನ್ನು ಕರೆದುಕೊಂಡು ರೂಮ್ ಕಡೆ ಹೊರಡಲು ಅಣಿಯಾದರು. ಅಯ್ಯೋ ಮಾರಾಯ ಇಷ್ಟೊತ್ತಿಗೆ ರೂಮಿಗೆ ಹೋಗಿ ಏನ್ ಮಾಡ್ತೀಯಾ ಬಾ ಇಲ್ಲಿ ಇಲ್ಲೇ ಇರುವ ಆಶ್ರಮದಲ್ಲಿ ಹೋಗಿ ಸ್ವಲ್ಪ ಹೊತ್ತು ಕೂತಿದ್ದು ಹೋಗೋಣ ಎಂದು ಆಕಾಶ್ ಕರೆಯಲು, ನಡಿಯಪ್ಪ ಬರಲ್ಲ ಅಂದ್ರೆ ನೀನು ಎಲ್ಲಿ ಬಿಡ್ತೀಯ ಎನ್ನುತ್ತಾ ಇಬ್ಬರೂ ಆಶ್ರಮದತ್ತ ಹೋದರು.

    ಆಗಲೇ ಮಸುಕು ಮಸುಕು ಕತ್ತಲು, ಆಶ್ರಮದ ಉದ್ಯಾನವನದ ಅಲ್ಲಲ್ಲಿ ಸಂಜೆ ದೀಪಗಳು ಉರಿಯುತ್ತಿದ್ದವು . ಆ ಬೆಳಕಿನಲ್ಲಿ ಉದ್ಯಾನವನವೆಲ್ಲಾ ಬಹಳ ಸುಂದರವಾಗಿ ಕಾಣುತ್ತಿತ್ತು. ಆಕಾಶ ಮತ್ತೆ ಮಾತಿಗೆಳೆದ " ನೋಡೋ ಈ ಪರಿಸರ ಎಷ್ಟೊಂದು ಆಹ್ಲಾದಕರವಾಗಿದೆ. ಇಂದಿನ ನಗರ ಪ್ರದೇಶಗಳಲ್ಲಿ ಇಂತಹ ವಾತಾವರಣ ಸಿಗುವುದೇ ದುರ್ಲಭವಾಗಿದೆ. ಇಲ್ಲಿ ಕುಳಿತರೆ ಎಂತಹ ಅರಸಿಕನೂ ಕೂಡ ರಸಿಕನಾಗಿ ಕವಿತೆ ಕಟ್ಟುವ ಮನಸ್ಥಿತಿ ಬರದೇ ಇರದು. ಇಂದಿನ ನಗರವಾಸಿಗಳು ಯಂತ್ರಗಳ ಗುಲಾಮರಾಗಿ ಸೋಮಾರಿಗಳಾಗಿ ಹೋಗಿದ್ದಾರೆ. ಅಲ್ಲದೆ ಸಂಕುಚಿತ ಮನೋಬಾವದವರಾಗಿ ಯಾರನ್ನೂ ನಂಬದೇ ಅಕ್ಷರಶಃ ಏಕಾಂಗಿಗಳಾಗಿ ಬದುಕುತ್ತಿದ್ದಾರೆ. ಇತ್ತೀಚೆಗೆ ನಗರಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕೂಡ ಈ ಮನುಷ್ಯರ ಸಂಕುಚಿತ ಭಾವನೆಗಳಿಂದಲೇ" ಎನ್ನುತ್ತಾ ಆಕಾಶ ಮಾತು ಮುಗಿಸುವುದರೊಳಗೆ ಉದಯ್ " ಹೌದು ಕಣೋ ಈ ಕಾರ್ಖಾನೆಯ ಯಂತ್ರಗಳು, ವಾಹನಗಳು ಬಿಡುವ ಹೊಗೆಯಿಂದ ವಾತಾವರಣದ ಓಝೋನ್  ರಕ್ಷಾಕವಚವೇ ತೂತಾಗಿ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆಲ್ಲ ಮುಕ್ತಿ ಎಂದೋ" ಎಂದು ದನಿಗೂಡಿಸಿದ ಉದಯ್.ಹೀಗೆ ಲೋಕಾಭಿರಾಮವಾಗಿ ಮಾತುಕತೆಯಲ್ಲಿ ತೊಡಗಿದವರಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಇಬ್ಬರು ತಾವು ನಿತ್ಯ ಊಟ ಮಾಡುತ್ತಿದ್ದ ಖಾನಾವಳಿಯಲ್ಲಿ ಊಟ ಮುಗಿಸಿಕೊಂಡು ತಮ್ಮ ರೂಮಿನತ್ತ ಹೆಜ್ಜೆ ಹಾಕಿದರು.

       ಆಕಾಶ್ ರೂಮಿನಲ್ಲಿ ಒಬ್ಬನೇ ಇದ್ದರೂ ಎಂದೂ ಅವನನ್ನು ಒಂಟಿತನ ಕಾಡುತ್ತಿರಲಿಲ್ಲ. ಅವನು ಮೊದಲಿನಿಂದಲೂ ಅಷ್ಟೇ ತಾನಾಯ್ತು ತನ್ನ ಕೆಲಸವಾಯ್ತು ಎಂಬ ಸೂತ್ರವನ್ನು ರೂಢಿಸಿಕೊಂಡಿದ್ದವನು. ಅವನು ಒಂಟಿತನವನ್ನು ಇಷ್ಟಪಡಲು ಕಾರಣವೂ ಇತ್ತು. ಅದೇನೆಂದರೆ ಆಕಾಶ್  ಹಳ್ಳಿಯಲ್ಲಿದ್ದಾಗ ಅವನ ಆತ್ಮೀಯ ಗೆಳೆಯ ಒಬ್ಬನಿದ್ದ. ಇವನು ಅವನ ಬಳಿ ಅವನು ಇವನ ಬಳಿ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಅದೇನಾಯ್ತೋ ಒಮ್ಮೆ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸ್ನೇಹವನ್ನೇ ಕಡಿದುಕೊಂಡರು. ಅಂದಿನಿಂದ ಆಕಾಶ್ ಅಕ್ಷರಶಃ ಒಬ್ಬಂಟಿಯಾಗಿ ಇರತೊಡಗಿದ. ಆಕಾಶ್ ರೂಂಗೆ ಬಂದು ಹಾಗೆ ಮಂಚದ ಮೇಲೆ ಮಲಗಿದ. ಅವನ ನೆನಪಿನ ಸುರುಳಿ ಬಿಚ್ಚಿಕೊಂಡಿತು, ಅಂದು ಆಕಾಶ್ ತುಂಬಾ ಬೇಜಾರಾಗಿದ್ದ. ಕಾರಣ ರೂಮಿನಲ್ಲಿ ಅವನು ಇಲ್ಲದ ಸಮಯದಲ್ಲಿ ಅವಿನಾಶ್ ತನ್ನ ನಾಲ್ಕೈದು ಜನ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿದ್ದಾರೆ ಎಂದು ಆಕಾಶ ನ ಆಪ್ತ ಗೆಳೆಯ ಹೇಳಿದ್ದು ಅವನಿಗೆ ತುಸು ಸಿಟ್ಟು ತರಿಸಿತ್ತು . ಮಾನಕ್ಕಾಗಿ ಪ್ರಾಣ ಕೊಡುವಂತಹ ಆಕಾಶ್ ಇದನ್ನು ಸಹಿಸದಾದ. ಆಗ ಅವಿನಾಶನನ್ನು ಕರೆದು " ನೋಡು ನಾನು ಇರದ ಸಮಯದಲ್ಲಿ ನನ್ನ ರೂಮನ್ನು ನೀನು ಬಳಸಬೇಡ. ನಾನು ನಿನ್ನಲ್ಲಿ ನಂಬಿಕೆ ಇಟ್ಟು ನನ್ನ ರೂಮಿನ ಕೀಯನ್ನು ಎನಗೆ ಕೊಟ್ಟರೆ ನೀನು ಮಾಡುತ್ತಿರುವುದಾದರೂ ಏನು. ನಂಬಿಕೆ ದ್ರೋಹಿ ನಮ್ಮ ಸ್ವಾತಂತ್ರ್ಯ ಮೂಗಿನ ಒಳಗೆ ಮಾತ್ರ ಇರಬೇಕು, ಮೂಗು ಮುಟ್ಟಲು ಬಿಡಬಾರದು ಇದು ನನ್ನ ಸಿದ್ಧಾಂತ" ಎಂದು ಬುದ್ಧಿ ಮಾತು ಹೇಳಿದ. ಅದಕ್ಕೆ ಅವಿನಾಶ್ "ಅಲ್ಲೋ ನಾನೇನು ಅಂತಹ ತಪ್ಪನ್ನು ಮಾಡಿದೆ" ಎಂದು ಕೇಳಲು, ಇನ್ನು ಅದನ್ನು ನಾನು ಬೇರೆ ಹೇಳಬೇಕೇನು? ನಿನ್ನ ಆತ್ಮವನ್ನೆ ಕೇಳಿಕೊ ಹೇಳುತ್ತದೆ" ಎಂದೂ ಖಾರವಾಗಿಯೇ ಧರಿಸಿದ ಆಕಾಶ್."ನೋಡು ಅವಿ ನಾನು ನೀನು ಸ್ನೇಹಿತರು ಅಂತ ತಿಳಿದಿದ್ದೆ಼. ಆದರೆ ನಿನಗೆ ನನ್ನ ಸ್ನೇಹ ಬೇಕಿಲ್ಲ. ನಿನಗೆ ಹುಡುಗಿ ಸಿಕ್ಕಿದ್ದಾಳೆ. ಅವಳಿಗೂ  ನಿನಗೂ ಪ್ರೀತಿ ಅಂಕುರವಾಗಲು ನನ್ನ ಸಹಾಯ ಬೇಕಿತ್ತು. ಈಗ ನನ್ನ ಅವಶ್ಯಕತೆ ಇಲ್ಲ ನೋಡು ಅದಕ್ಕಾಗಿ ಏನಾದರೂ ಮಾಡಿ ನನ್ನ ಹೆಸರನ್ನು ಕೆಡಿಸಿ ನನ್ನಿಂದ ದೂರಾಗಲು ನೀನು ಪ್ಲ್ಯಾನ್ ಮಾಡಿದ್ದೀಯ. ಇದೇನು ನನಗೆ ಗೊತ್ತಾಗೊಲ್ಲ ಅಂತ ತಿಳಿದಿದ್ದೀಯ?" ಇಂದು ನೋವಿನಿಂದ ಚೀರಿದನು. ಆಗ ಕಣ್ಣಲ್ಲಿ ಆಕ್ರೋಶ ಹೃದಯದಲ್ಲಿ ನೋವು ಕಟ್ಟೆಯೊಡೆದ ನದಿಯಂತಾಗಿತ್ತು.

    ಇಂಥ ಸ್ನೇಹಿತರಲ್ಲಿ ಒಡಕು ಬರುತ್ತದೆ ಅಂತ  ಅವರನ್ನು ತಿಳಿದಿದ್ದ ಯಾರಿಗೂ ಅನುಮಾನವೂ ಸಹ ಬಂದಿರಲಿಲ್ಲ. ಆದರೆ ಅವರಿಬ್ಬರೂ ಏಕೆ ಹೀಗಾದರು ಎಂಬುದೇ ಅವರಿಗೆ ಇನ್ನೂ ಅರ್ಥವಾಗಿಲ್ಲ. ಸ್ವಲ್ಪ ದಿನ ಕಳೆದ ಮೇಲೆ ಆಕಾಶನಿಗೆ ಒಂದು ವಿಷಯ ಕೇಳಿ ಸಿಡಿಲು ಹೊಡೆದಂತೆ ಆಯಿತು. ಅದೇನೆಂದರೆ ಅವಿನಾಶನು ಪ್ರೀತಿಸುತ್ತಿದ್ದ ಹುಡುಗಿಯ ಅಕ್ಕನನ್ನು ಆಕಾಶ ಪ್ರೀತಿಸುತ್ತಿದ್ದಾನೆ. ಇದನ್ನು ಕೇಳಿ ಆಕಾಶ್ " ಛೆ ಸಹಾಯ ಮಾಡಿದವರಿಗೆ ಈ  ಮನುಷ್ಯರು ಕೊಡುವ ಬಹುಮಾನ ಇದೇನಾ?" ಎಂದು ತುಂಬಾ ನೊಂದುಕೊಂಡನು. ನಾನು ನಂಬಿದ್ದ ಸ್ನೇಹಿತ ನನ್ನ ಮೇಲೆ ಇಂಥ ಆಪಾದನೆ ಮಾಡಿದ್ದಾನೆ ದ್ರೋಹಿ ಅವನು ಎನ್ನುತ್ತಾ ತನ್ನ ಸಿಟ್ಟನ್ನು ಕೊಠಡಿಯಲ್ಲಿದ್ದ ವಸ್ತುಗಳ ಮೇಲೆ ತೋರಿಸಿದ ಆಕಾಶ್. ಆಕಾಶನ ವರ್ತನೆಯನ್ನು ನೋಡಿದ ಗೆಳೆಯನೊಬ್ಬ ಅವಿನಾಶನ ಬಳಿಗೆ ಹೋಗಿ ನೀನು ಹೀಗೆ ಮಾಡಬಾರದಿತ್ತು. ಅದರಿಂದ ಆಕಾಶ್ ಎಷ್ಟೊಂದು ನೊಂದುಕೊಂಡಿದ್ದಾನೆ ನೋಡು ಹೋಗು ಎಂದು ಹೇಳಲು ಅವಿನಾಶ್ ಆಕಾಶನ ಬಳಿಗೆ ಬಂದು ಏಕೆ ಹೀಗೆ ಮಾಡ್ತೀಯಾ ಎಂದು ಹೇಳಲು ಆಕಾಶ್ "ಅಲ್ಲೋ ನಿನಗೆ ನಾನು ಏನು ಅನ್ಯಾಯ ಮಾಡಿದ್ದೆ ಅಂತ ಹೀಗೆ ಮಾಡಿದೆ ?" ಎಂದು ಕೇಳಲು. ಆಕಾಶ್ ಇದು ನನ್ನ ಮಾತಲ್ಲ ಯಾರೋ ನನಗೆ ಆಗದವರು ನಮ್ಮಿಬ್ಬರನ್ನು ದೂರಮಾಡಲೆಂದೇ ಈ ಆಪಾದನೆ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಸ್ವಲ್ಪ ಯೋಚಿಸು, ನಾನು ನಿನ್ನ ಮೇಲೆ ಅಂತಹ ಮಾತನಾಡಲು ಸಾಧ್ಯವೇ ಅಂತ." ಎಂದು ಅವನು ಮಾತು ನಿಲ್ಲಿಸುವ ಮೊದಲೇ "ಎಂದು ಮಾಡಿಲ್ಲಪ್ಪಾ! ಆದರೆ ಈಗ ಮಾಡಿದ್ದೀಯಲ್ಲ. ಈ ಊರಲ್ಲಿ ನನಗೆ ಸ್ವಲ್ಪ ಮರ್ಯಾದೆ ಇತ್ತು ಅದನ್ನು ನೀನು ಹಾಳುಮಾಡಿದೆ. ನಿನ್ನ ಸ್ನೇಹ ಮಾಡಿದ್ದಕ್ಕೆ ನನಗೆ ಒಳ್ಳೆಯ ಶಾಸ್ತಿಯಾಯಿತು!  ಇನ್ನು ನನಗೆ ನಿನ್ನ ಸ್ನೇಹದ ಅಗತ್ಯವಿಲ್ಲ. ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಗುಡ್ ಬೈ ಎಂದು ಹೇಳಿ ಅವಿನಾಶನನ್ನು ಅವನ ರೂಮಿನಿಂದ ಆಚೆ ಕಳಿಸಿದನು. ಅಂದಿನಿಂದ ಹೀಗೆ ಸ್ನೇಹಕ್ಕೆ ಮೋಸ ಮಾಡುವವರನ್ನು ಕಂಡರೆ ಆಕಾಶನಿಗೆ ಆಗುತ್ತಿರಲಿಲ್ಲ.ಅದಕ್ಕೆ ಅಂತಹ ಸ್ನೇಹಿತರೆ ಬೇಡ ಎಂದು ಅವನು ಒಂಟಿಯಾಗಿರ ತೊಡಗಿದ. ಆದರೆ ದೂರವಾದ ಅವಿನಾಶನನ್ನು ಮರೆಯಲು ಸಾಧ್ಯವೇ ಆಗಲಿಲ್ಲ‌. ಅವನ ಯೋಚನಾ ಲಹರಿ ಹೀಗೆ ಮುಂದುವರಿಯುತ್ತಾ ಹಾಗೆಯೇ ನಿದ್ರೆಗೆ ಜಾರಿದ್ದನು.

ಮುಂದುವರಿಯುವುದು...........

No comments:

Post a Comment